ಬರದ ಕರಿನೆರಳಿನಲ್ಲಿ ನಲುಗಿದ ಚಳ್ಳಕೆರೆ…!!!

ಚಳ್ಳಕೆರೆ

       ತಾಲ್ಲೂಕಿನಾದ್ಯಂತ ಸುಮಾರು 46ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಎದುರಾಗಿದ್ದು, ಇದನ್ನು ಅಧಿಕಾರಿಗಳು ಸಮರ್ಥವಾಗಿ ನಿಬಾಯಿಸಬೇಕು. ನಿರಂತರ ಬರಗಾಲದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಗಳಲ್ಲಿ ಕೆಲಸವಿಲ್ಲದೆ ಹಸಿದ ಹೊಟ್ಟೆಗಳಿಗೆ ಕೂಲಿ ಕಾಳು ಒದಗಿಸುವ ಉದ್ಯೋಗ ಖಾತರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಇಂತಹ ಸಮಯದಲ್ಲಿ ಸಾರ್ವಜನಿಕರ ಆಕ್ರೋಶ ಮತ್ತು ಅಸಮದಾನವನ್ನು ಸಮದಾನದಿಂದ ಎದುರಿಸುವಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಸೂಚಿಸಿದರು.

         ಅವರು, ಸೋಮವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಈಗಾಗಲೇ ಎಲ್ಲಾ ಅಧಿಕಾರಿಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಜಾಗೃತೆವಹಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.

      ಬೇಸಿಗೆಯ ಬಿಸಿಲು ಹೆಚ್ಚಿದ್ದು, ಜನರು ನೀರಿಲ್ಲದೆ ತೊಳಲಾಡುವ ಸ್ಥಿತಿ ಉಂಟಾಗಿದೆ. ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಹೆಚ್ಚುವರಿಯಾಗಿ ಬೋರ್ ಹಾಕಿ ನೀರು ಕೊಡಬೇಕು. ಸಾಧ್ಯವಾಗದೇ ಇದ್ದಲ್ಲಿ ನೀರಿನ ಟ್ಯಾಂಕ್ ಮೂಲಕವಾದರೂ ನೀರು ಪೂರೈಸಬೇಕು, ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರಬೇಕು, ಜನಪ್ರತಿನಿಧಿಗಳು, ಸಾರ್ವಜನಿಕರು ತಮ್ಮ ಸಮಸ್ಯೆಗಳ ಬಗ್ಗೆ ದೂರವಾಣಿ ಕರೆ ಮಾಡಿದಾಗ ತಪ್ಪದೆ ಸ್ವೀಕರಿಸಬೇಕು, ಹಲವು ಸಂದರ್ಭಗಳಲ್ಲಿ ಅಧಿಕಾರಿಗಳು ಕರೆ ಸ್ವೀಕರಿಸುವು ದಿಲ್ಲವೆಂಬ ಆರೋಪವಿದೆ. ಆದರೆ, ಮುಂದಿನ ದಿನಗಳಲ್ಲಿ ಇಂತಹ ಆರೋಪಗಳು ಮತ್ತೆ ಉದ್ಭವಿಸಬಾರದು. ಕಾರಣ ಜನರ ಸೇವೆಯ ಬಗ್ಗೆ ಎಲ್ಲಾ ಅಧಿಕಾರಿಗಳೂ ನೈಜ ಕಾಳಜಿ ಇರಬೇಕು ಎಂದರು.

         ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ಸಹಾಯಕ ಕಾರ್ಯಪಾಲಕ ಅಭಿಯಂತರ ಬಸವರಾಜು, ತಾಲ್ಲೂಕು ಪಂಚಾಯಿತಿ ಸದಸ್ಯ ಈ.ರಾಮರೆಡ್ಡಿ ಅವರ ಕಚೇರಿಗೆ ತೆರಳಿದಾಗ ಅಗೌರವ ಉಂಟು ಮಾಡಿದರು ಎಂದು ಆರೋಪಿಸಲಾಗಿದ್ದು, ಇವರ ಆರೋಪಕ್ಕೆ ಹಲವಾರು ತಾಲ್ಲೂಕು ಪಂಚಾಯಿತಿ ಸದಸ್ಯ ಧ್ವನಿಗೂಡಿಸಿದರು. ಶಾಸಕರೂ ಸಹ ಇಂತಹ ವರ್ತನೆ ಸರಿಯಲ್ಲವೆಂದು ತಿಳಿಸಿದಾಗ ಅಧಿಕಾರಿ ಕ್ಷಮಾಪಣೆ ಕೇಳಿದ ಘಟನೆ ನಡೆಯಿತು.

        ಕೃಷಿ ಅಧಿಕಾರಿ ಎನ್.ಮಾರುತಿ ಮಾಹಿತಿ ನೀಡಿ, ಪ್ರಸ್ತುತ ಮುಂಗಾರು ಋತುವಿಗೆ 45 ಸಾವಿರ ಜನ ರೈತರು ಬೆಳೆ ವಿಮೆ ಮಾಡಿಸಿದ್ದು, 56.50 ಕೋಟಿ ಬೆಳೆ ವಿಮೆ ನಿರೀಕ್ಷಿಸಲಾಗಿದೆ. ತಾಲ್ಲೂಕಿನ 35 ಸಾವಿರ ಸಣ್ಣ ರೈತರ ಪೈಕಿ 10 ಸಾವಿರ ಸಣ್ಣ ರೈತರು ಈಗಾಗಲೇ ಪರಿಹಾರವನ್ನು ಪಡೆದಿದ್ದಾರೆ. ಬೆಳೆ ವಿಮೆ ಕುರಿತಂತೆ 2600 ರೈತರು ಹೆಸರು ನೊಂದಾಯಿಸಿದ್ದು, 1600 ರೈತರು ಪರಿಹಾರ ಪಡೆಯಬೇಕಿದೆ.

       ಫೆ.27ರಂದು ಪುನಃ ಕೇಂದ್ರ ಬರ ಅಧ್ಯಯನ ತಂಡ ಆಗಮಿಸಿ ಮತ್ತೊಮ್ಮೆ ಸಮೀಕ್ಷೆ ನಡೆಸಲಿದೆ ಎಂದರು. ಗ್ರಾಮೀಣ ಭಾಗಗಳಲ್ಲಿ ಕಳೆದ ಹಲವಾರು ತಿಂಗಳುಗಳಿಂದ ದುರಸ್ಥಿಯಾಗದೇ ಇರುವ ಶುದ್ದ ಕುಡಿಯುವ ನೀರಿನ ಘಟಕಗಳ ದುರಸ್ಥಿ ಕೂಡಲೇ ಮಾಡುವಂತೆ ಶಾಸಕರು ಸೂಚನೆ ನೀಡಿದರು. ಘಟಕಗಳ ದುರಸ್ಥಿತಿಗೆ ಸಂಬಂಧಪಟ್ಟಂತೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ತಕ್ಷಣವೇ ಮಾಹಿತಿ ನೀಡಬೇಕಿದೆ. ಈ ನಿಟ್ಟಿನಲ್ಲಿ ಪ್ರತಿ 15 ದಿನಗಳಿಗೊಮ್ಮೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕುಡಿಯುವ ನೀರು ಸರಬರಾಜು ಅಧಿಕಾರಿಗಳ ಸಭೆಯನ್ನು ನಡೆಸುವಂತೆ ಸೂಚಿಸಿದರು.

       ಗ್ರಾಮೀಣ ಭಾಗಗಳ ಮೂಲಭೂತ ಸಮಸ್ಯೆಗಳ ಬಗ್ಗೆ ಯಾವ ಅಧಿಕಾರಿಯೂ ನಿರ್ಲಕ್ಷ ವಹಿಸದಂತೆ ಸೂಚಿಸಿದ ಶಾಸಕರು ವಾಸ್ತವ ಸ್ಥಿತಿಯನ್ನು ಅರಿತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿ ವರ್ಗಕ್ಕೆ ಕಿವಿ ಮಾತು ಹೇಳಿದರು. ಯಾವುದೇ ಸಂದರ್ಭದಲ್ಲಾಗಲಿ ಸಾರ್ವಜನಿಕರೊಡನೆ ಯಾವ ಅಧಿಕಾರಿಯೂ ಮನಬಂದಂತೆ ಮಾತನಾಡಬಾರದು ಎಂದರು.

        ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕವಿತಾರಾಮಣ್ಣ ಮಾತನಾಡಿ, ಪ್ರತಿಬಾರಿ ಸಭೆಯಲ್ಲೂ ಸಹ ಹಲವಾರು ಮಹತ್ವದ ವಿಚಾರಗಳ ಬಗ್ಗೆ ತಾಲ್ಲೂಕು ಪಂಚಾಯಿತಿ ಸದಸ್ಯರು ಶಾಸಕರ ಮೂಲಕ ಸಮಸ್ಯೆಯ ಪರಿಹಾರಕ್ಕೆ ಮೌಖಿಕ ಸೂಚನೆ ನೀಡಿದರೂ ಅಧಿಕಾರಿಗಳು ಹೆಚ್ಚು ಸ್ಪಂದಿಸುತ್ತಿಲ್ಲವೆಂಬ ಆರೋಪ ಕೇಳಿ ಬರುತ್ತಿದೆ. ಪ್ರತಿಯೊಬ್ಬ ಅಧಿಕಾರಿಗಳು ಯಾವುದೇ ಕಾಮಗಾರಿಗಳನ್ನು ಕೈಗೊಳ್ಳುವಾಗ ವಿವಿಧ ಇಲಾಖೆಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಾಗ ಸಂಬಂಧಪಟ್ಟ ತಾಲ್ಲೂಕು ಪಂಚಾಯಿತಿ ಸದಸ್ಯರಿಗೆ ಮಾಹಿತಿ ನೀಡಬೇಕೆಂದರು. ತಾಲ್ಲೂಕು ಪಂಚಾಯಿತಿ ಕಾರ್ಯಾನಿರ್ವಹಣಾಧಿಕಾರಿ ಬಿ.ಎಲ್.ಈಶ್ವರಪ್ರಸಾದ್ ಎಲ್ಲಾ ಅಧಿಕಾರಿಗಳು ಸಭೆಯ ನಿರ್ಣಯಗಳಿಗೆ ಬದ್ದವಾಗಿರಬೇಕೆಂದರು.

         ಸಭೆಯಲ್ಲಿ ಉಪಾಧ್ಯಕ್ಷೆ ತಿಪ್ಪಮ್ಮಲಿಂಗಾರೆಡ್ಡಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸಣ್ಣ ಸೂರಯ್ಯ, ಗದ್ದಿಗೆ ತಿಪ್ಪೇಸ್ವಾಮಿ, ಎಚ್.ಸಮರ್ಥರಾಯ, ತಿಮ್ಮಾರೆಡ್ಡಿ, ಕಾಲುವೇಹಳ್ಳಿ ಶ್ರೀನಿವಾಸ್, ಎಸ್.ಒ.ತಿಪ್ಪೇಸ್ವಾಮಿ, ಎಚ್.ಆಂಜನೇಯ, ಜಿ.ತಿಪ್ಪೇಸ್ವಾಮಿ, ಗಂಗೀಬಾಯಿ, ಹನುಮಕ್ಕ, ರಂಜಿತಾ, ತಿಪ್ಪಕ್ಕ, ಉಮಾ, ಸುನಂದಮ್ಮ, ರತ್ನಮ್ಮ, ಜಿ.ವೀರೇಶ್, ಮಲ್ಲಮ್ಮ, ಸಾಕಮ್ಮ, ಕರಡಪ್ಪ ಮುಂತಾದವರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link