ಕೂಡ್ಲಿಗಿ:
ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿಗಳಿಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸ್ವೀಪ್ ಸಮಿತಿಯಿಂದ ಶನಿವಾರ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.ಈ ಸಂದರ್ಭದಲ್ಲಿ ಸ್ವೀಪ್ ಸಮಿತಿ ಅಧ್ಯಕ್ಷರಾಗಿರುವ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಜಿ.ಎಂ.ಬಸಣ್ಣ ಮಾತನಾಡಿ, ಚುನಾವಣೆ ನಿಮಿತ್ತ ವಿವಿಧ ಹಂತದ ಎಲ್ಲಾ ಅಧಿಕಾರಿಗಳು ಈಗಾಗಲೆ ತಮಗೆ ನೀಡಿರುವ ಜವಬ್ದಾರಿಯನ್ನು ಲೋಪವಾಗದಂತೆ ಎಚ್ಚರದಿಂದ ನಿರ್ವಹಿಸಬೇಕು. ಅದರಲ್ಲೂ ಬೂತ್ ಮಟ್ಟದ ಅಧಿಕಾರಿಗಳು ಸಾರ್ವಜನಿಕರೊಂದಿಗೆ ನೇರವಾಗಿ ಸಂಪರ್ಕ ಹೊಂದಿರುವುದರಿಂದ ಹೆಚ್ಚಿನ ಜವಬ್ದಾರಿಯಿಂದ ತಮ್ಮ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು.
ಮಾಸ್ಟರ್ ತರಬೇತಿದಾರರಾದ ಸಮಾಜ ಕಲ್ಯಾಣ ಇಲಾಖೆಯ ಸಹಯಕ ನಿರ್ದೇಶಕ ಸಿ.ಪಿ. ಮಾಣಿಕ್ಯಾಚಾರ್, ಅನೇಕ ಸಂದರ್ಭಗಳಲ್ಲಿ ಮತದಾರರ ಪೋಟೊಗಳು ಮತದಾರರ ಪಟ್ಟಿಯಲ್ಲಿ ಅದಲು-ಬದಲು ಆಗಿರುತ್ತವೆ. ಈ ಬಗ್ಗೆ ಬಿಎಲ್‍ಒಗಳು ಗಮನಿಸಬೇಕು ಮತ್ತು ಬಹುತೇಕ ಮತದಾರರ ಹೆಸರುಗಳು ಒಂದೇ ಇರುತ್ತವೆ ಅಂಥವರನ್ನು ಗುರುತಿಸಲು ಫೋಟೊ ಮತ್ತು ವಿಳಾಸ ಸ್ಪಷ್ಟವಾಗಿ ಇರಬೇಕು ಇಂಥವುಗಳನ್ನು ಮೊದಲೆ ಗುರುತಿಸಿದ್ದರೆ ಅನುಕೂಲವಾಗುತ್ತದೆ ಎಂದು ತಿಳಿಸಿದರು
ಸ್ವೀಪ್ ನೋಡಲ್ ಅಧಿಕಾರಿ ಎಸ್. ನಾಗರಾಜ, ಎಪಿಕ್ ಕಾರ್ಡ್‍ಗಳು ಹಾಗೂ ಬಿಎಲ್‍ಒ ಸ್ಲಿಪ್‍ಗಳ ಬಗ್ಗೆ ಮಾಹಿತಿ ನೀಡಿದರು
ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಪ್ರಕೃದ್ಧೀನ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎನ್.ವಿ. ಪ್ರಕಾಶ್ ರೇಷ್ಮೆ ಇಲಾಖೆ ವಿಸ್ತರಣಾಧಿಕಾರಿ ಪಿ. ಭೀಮಪ್ಪ, ಟಿ.ಎಲ್.ಎಂ.ಟಿ. ಜಗದೀಶ್ ಇದ್ದರು. ತಾಲ್ಲೂಕಿನ ಬೂತ್ ಮಟ್ಟದ ಅಧಿಕಾರಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು.