ಕೊರೋನಾ ಸಮಯದಲ್ಲಿ ವಕೀಲರಿಗೆ ಸಿಹಿ ಸುದ್ದಿ..!

ಬೆಂಗಳೂರು:

     ಕೊರೋನಾ ಸೋಂಕು ನಿಯಂತ್ರಣದ ಜತೆಗೆ ಸಕಾರಾತ್ಮಕ ರೀತಿಯಲ್ಲಿ ಆತ್ಮ ಸ್ಥೈರ್ಯ ತುಂಬುವ ಉದ್ದೇಶದಿಂದ ಮುಂದಡಿ ಇಟ್ಟಿರುವ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಕೋವಿಡ್ ಸೊಂಕಿಗೆ ಒಳಗಾಗಿರುವ ವಕೀಲರಿಗೆ 50 ಸಾವಿರ ರೂ ಆರ್ಥಿಕ ನೆರವು ನೀಡಲು ತೀರ್ಮಾನಿಸಿದೆ. 

    ಪರಿಷತ್ತಿನಲ್ಲಿ ನೋಂದಣಿಯಾಗಿರುವ ವಕೀಲ ಸಮುದಾಯಕ್ಕೆ ಧೈರ್ಯ ತುಂಬುವ ಪ್ರಯತ್ನದ ಭಾಗವಾಗಿ ಆರ್ಥಿಕ ನೆರವು ಘೋಷಿಸಲಾಗಿದೆ. ಜತೆಗೆ ನೋಂದಣಿಯಾಗಿರುವ ಪ್ರತಿಯೊಬ್ಬ ವಕೀಲರಿಗೂ ಒಂದು ಲಕ್ಷ ರೂಪಾಯಿ ವಿಮಾ ಸೌಲಭ್ಯ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ವಕೀಲರ ಪರಿಷತ್ತಿನ ಅಧ್ಯಕ್ಷ ಅನಿಲ್ ಕುಮಾರ್ ಜೆ.ಎಂ ತಿಳಿಸಿದ್ದಾರೆ. 

    ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಪರಿಷತ್ತಿನ ಅಧ್ಯಕ್ಷ ಅನಿಲ್ ಕುಮಾರ್, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ನಿಧಿಯಿಂದ ಆರ್ಥಿಕ ನೆರವು ಮತ್ತು ವಿಮಾ ಸೌಲಭ್ಯ ಕಲ್ಪಿಸಲಾಗುವುದು. ಇದರಿಂದ ವಕೀಲರು ಉತ್ತಮ ಚಿಕಿತ್ಸೆ ಪಡೆಯಲು ಸಹಕಾರಿಯಾಗಲಿದೆ. ಯಾವುದೇ ವಕೀಲರು ಕೊರೋನಾ ಸೋಂಕಿಗೆ ಎದೆಗುಂದುವ ಅಗತ್ಯವಿಲ್ಲ. ವಕೀಲ ಸಮುದಾಯದ ಹಿತ ರಕ್ಷಣೆಗೆ ಪರಿಷತ್ತು ಸದಾ ಬದ್ಧವಾಗಿದೆ. ಸಂಕಷ್ಟದ ಸಂದರ್ಭದಲ್ಲಿ ವಕೀಲರ ಹಿತ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ ಮತ್ತು ಕರ್ತವ್ಯ ಎಂದರು. 

     ಕೇಂದ್ರ ಮತ್ತು ರಾಜ್ಯ ಸರ್ಕಾರ ಲಾಕಡೌನ್ ೩.೦ ಅನ್ನು ಸಡಿಲಗೊಳಿಸಿದೆ. ಆದರೆ ಈಗಾಗಲೇ ೪ ತಿಂಗಳಿಂದ ನ್ಯಾಯಾಲಯ ಕಲಾಪಗಳು ಸ್ಥಗಿತಗೊಂಡಿವೆ. ಇಂತಹ ಸಂದರ್ಭದಲ್ಲಿ ಕೊರೋನಾ ಸೋಂಕು ವಕೀಲ ಸಮುದಾಯವನ್ನು ಬಾಧಿಸಿದರೆ ಮತ್ತಷ್ಟು ಸಮಸ್ಯೆಗಳು ಎದುರಾಗಲಿದೆ. ಹೀಗಾಗಿ ವಕೀಲರಲ್ಲಿ ಆತ್ಮ ವಿಶ್ವಾಸ ತುಂಬಿ ನೆರವು ನೀಡಲಾಗುವುದು ಎಂದು ಹೇಳಿದರು. 

     ಲಾಕ್ ಡೌನ್ ತೆರವುಗೊಂಡಿರುವುದರಿಂದ ಕೂಡಲೆ ರಾಜ್ಯದ ಎಲ್ಲಾ ನ್ಯಾಯಾಲಯಗಳ ಕಾರ್ಯಕಲಾಪಗಳನ್ನು ಪುನರಾಂಭಿಸಲು ಕ್ರಮ ತೆಗೆದುಕೊಳ್ಳಬೇಕು. ಮೊದಲಿನಂತೆ ಭೌತಿಕ ವಿಚಾರಣೆ ನಡೆಸುವಂತೆ ಉಚ್ಛನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಈಗಾಗಲೇ ಮನವಿ ನೀಡಿ ಒತ್ತಾಯಿಸಲಾಗಿದೆ ಎಂದರು. 

      ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಮನವಿಯನ್ನು ಪರಿಗಣಿಸಿ ಇಂತಹ ಆರ್ಥಿಕ ಸಂಧಿಗ್ಧ ಪರಿಸ್ಥಿತಿಯಲ್ಲಿಯೂ ರಾಜ್ಯ ಸರ್ಕಾರ ಜುಲೈ 30 ರಂದು ವಕೀಲ ಸಮುದಾಯಕ್ಕೆ 5 ಕೋಟಿ ರೂ ಆರ್ಥಿಕ ನೆರವು ಮಂಜೂರು ಮಾಡಿದೆ. ನೆರವು ಕಲ್ಪಿಸಿದ ಮುಖ್ಯಮಂತ್ರಿ ಬಿ. ಎಸ್. ಯಡ್ಡಿಯೂರಪ್ಪ, ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಮತ್ತಿತರಿಗೆ ವಕೀಲರ ಪರಿಷತ್ತು ಅಭಾರಿಯಾಗಿದೆ ಎಂದಿದ್ದಾರೆ. 

     ಐದು ಕೋಟಿ ರೂ ನೆರವನ್ನು ಸಂಕಷ್ಟದಲ್ಲಿರುವ ವಕೀಲ ಸಮುದಾಯಕ್ಕೆ ಪಾರದರ್ಶಕವಾಗಿ ವಿತರಿಸಲು ಇಂದು ನಡೆದ ಪರಿಷತ್ತಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೋವಿಡ್ ಸಂಕಷ್ಟದಲ್ಲಿ ನ್ಯಾಯವಾದಿಗಳ ಹಿತರಕ್ಷಣೆಗೆ ಪರಿಷತ್ತು ಸದಾ ಬದ್ಧವಾಗಿದೆ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link