ಸರ್ಕಾರಿ ಆಸ್ಪತ್ರೆ ನರ್ಸಗಳ ಬೇಜವಬ್ದಾರಿತನ, ಅಧಿಕಾರಿಗಳ ಗೈರು ಹಾಜರಿ ವಿರುದ್ದ ತಾ.ಪಂ.ಸದಸ್ಯರ ಆಕ್ರೋಶ

ಚಿಕ್ಕನಾಯಕನಹಳ್ಳಿ:
 
    ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ಗಳು ರೋಗಿಗಳೊಂದಿಗೆ ಬೇಜವಬ್ದಾರಿಯಿಂದ ವರ್ತಿಸುತ್ತಾರೆ, ಎಕ್ಸರೇ ತೆಗೆಯಲು ಅಧಿಕ ಹಣ ವಸೂಲಿ ಮಾಡುತ್ತಾರೆ, ಜಿ.ಪಂ. ಇಂಜಿನಿಯರಿಂಗ್ ಕಚೇರಿಯ ಸಿಬ್ಬಂದಿಯೊಬ್ಬರು ವರ್ಷದಿಂದ ಕೆಲಸಕ್ಕೆ ಬಂದಿಲ್ಲ ಆದರೆ ಹಾಜರಾತಿ ಪುಸ್ತಕದಲ್ಲಿ  ಮಾತ್ರ ಸಹಿ ಇರುತ್ತದೆ ಇದು ಹೇಗೆ ಸಾಧ್ಯ, ತಾ.ಪಂ. ಸಾಮಾನ್ಯ ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಬರದೆ ಕೆಳ ಹಂತದ ಅಧಿಕಾರಿಗಳನ್ನು ಕಳುಹಿಸುವುದನ್ನು ಇ.ಓ.ರವರು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂಬ ಆರೋಪಗಳು ಗುರುತರವಾಗಿ ಕೇಳಿ ಬಂದವು.
    ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಷಯಗಳು ಗಂಭೀರ ಆಪಾದನೆಗಳನ್ನು ಸದಸ್ಯರು ಸಭೆಯಲ್ಲಿ ಮಂಡಿಸಿದರು.  ಜಿ.ಪಂ. ಇಂಜಿನಿಯರಿಂಗ್ ಕಚೇರಿಯಲ್ಲಿ  ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಚನ್ನಪ್ಪ ಎಂಬುವವರು ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ, ಕಳೆದ ಒಂದು ವರ್ಷದಿಂದಲೂ ಕಛೇರಿಗೆ ಸರಿಯಾಗಿ ಬರುತ್ತಿಲ್ಲ, ಆದರೆ ಹಾಜರಾತಿ ಪುಸ್ತಕದಲ್ಲಿ  ಎಲ್ಲಾ ದಿನದ ಸಹಿ ಹಾಕಲಾಗಿರುತ್ತದೆ ಇದು ಹೇಗೆ ಸಾಧ್ಯ ಎಂದು ತಾ.ಪಂ.ಅಧ್ಯಕ್ಷೆ ಚೇತನಗಂಗಾಧರ್ ಪ್ರಶ್ನೆಸಿದರು.
    ಅಧಿಕಾರಿ ವಾರಕ್ಕೊಮ್ಮೆಯೋ ಅಥವಾ ಹದಿನೈದು ದಿನಕ್ಕೊಮ್ಮೆಯೋ ಕಛೇರಿಗೆ ಆಗಮಿಸಿ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕುತ್ತಿದ್ದಾರೆ, ಇದಕ್ಕೆ ರಾಜಕೀಯದವರ ಸಹಕಾರವಿದೆಯೋ, ಅಧಿಕಾರಿಗಳ ಸಹಕಾರವೋ ತಿಳಿಯುತ್ತಿಲ್ಲ, ಅಧಿಕಾರಿಯ ಬಗ್ಗೆ ಪರಿಶೀಲಿಸಲೆಂದೇ ಒಂದು ತಿಂಗಳಿನಿಂದಲೂ ಗಮನಿಸುತ್ತಿದ್ದೇನೆ ಆದರೂ ಯಾವ ಸುಳಿವು ದೊರೆಯುತ್ತಿಲ್ಲ, ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದರು.
      ತಾ.ಪಂ.ಸದಸ್ಯ ಸಿಂಗದಹಳ್ಳಿ ರಾಜ್ಕುಮಾರ್ ಮಾತನಾಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಯಾವ ಪ್ರೋಗ್ರೆಸ್ ಸಹ ಆಗುತ್ತಿಲ್ಲ, ಕಳೆದ ಸಭೆಯಲ್ಲಿ ಅಲೆಮಾರಿಗಳಿಗೆ ನಿವೇಶನ ನೀಡುವ ಬಗ್ಗೆ ಪ್ರಸ್ತಾಪಿಸಿದ್ದೆ ಆದರೆ ಈ ವಿಷಯದ ಬಗ್ಗೆ ಸರಿಯಾಗಿ ಉತ್ತರ ಇದುವರೆವಿಗೂ ದೊರೆತಿಲ್ಲ, ಅಧಿಕಾರಿಯೂ ಸರಿಯಾಗಿ ಕರ್ತವ್ಯ ನಿರ್ವಹಿಸಿಲ್ಲ ಎಂದ ದೂರಿದ ಅವರು, ದೇವರಾಜುಅರಸ್ ರವರ ಹೆಸರು ಇರುವ ಈ ಇಲಾಖೆಯಲ್ಲಿ ಹಿಂದುಳಿದವರಿಗೇ ಕೆಲಸ ಆಗುತ್ತಿಲ್ಲವೆಂದರೆ ಹೇಗೆ?, ಅಧಿಕಾರಿಗಳಾದ ನೀವುಗಳು ಮನಃಪೂರ್ವಕವಾಗಿ ಒಂದು ದಿನ ಸರಿಯಾಗಿ ಕೆಲಸ ಮಾಡಿದರೆ ಸಾವಿರಾರು ಬಡವರಿಗೆ ಸೌಲಭ್ಯ ಸಿಗುತ್ತದೆ ಈ ಬಗ್ಗೆ ಯೋಚಿಸಿ ಎಂದರು.
 
      ತಾ.ಪಂ.ಸದಸ್ಯೆ ಶೈಲಾಶಶಿಧರ್ ಮಾತನಾಡಿ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನರ್ಸಗಳು ಬರುವ ರೋಗಿಗಳಿಗೆ, ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ಗೌರವವಾಗಿ ನಡೆದುಕೊಳ್ಳುತ್ತಿಲ್ಲ ಇಂತಹ ಘಟನೆ ನನ್ನ ಕಣ್ಮುಂದೆಯೇ ನಡೆದಿದೆ, ಈ ಬಗ್ಗೆ ನರ್ಸ ಬಳಿ ವಿಚಾರಿಸಿದರೆ ನನಗೆ ಸಂಬಳ ನೀಡುವುದು ಬರೆಯುವುದಕ್ಕೆ ಮಾತ್ರ ಎಲ್ಲರಿಗೂ ಉತ್ತರ ಕೊಡಲು ಅಲ್ಲ ಎಂದು ವಾದಿಸಿದರು, ಈ ವಿಚಾರವಾಗಿ ಬೇರೆಯವರೊಂದಿಗೆ ನಮ್ಮನ್ನೇ ಟೀಕಿಸುತ್ತಾರೆ, ಕೆಲವು ನರ್ಸ್ ಗಳು ಈ ರೀತಿ ವರ್ತಿಸುವುದರಿಂದ ತಾಲ್ಲೂಕಿನ ಆಸ್ಪತ್ರೆಗೆ, ಅಧಿಕಾರಿಗಳಿಗೆ, ವೈದ್ಯರಿಗೆ ಕೆಟ್ಟ ಹೆಸರು ಬರುತ್ತದೆ ಹಾಗಾಗಿ ಆಸ್ಪತ್ರೆಯಲ್ಲಿ ವೈದ್ಯರು ಸಿಬ್ಬಂದಿಗಳ ಸಭೆ ಕರೆದು ಸಾರ್ವಜನಿಕರೊಂದಿಗೆ ಸೌಜನ್ಯವಾಗಿ ಹಾಗೂ ಗೌರವಯುತವಾಗಿ ನಡೆದುಕೊಳ್ಳಲು ತಿಳಿಸುವಂತೆ ಹೇಳಿದರು.
    ಸದಸ್ಯ ಸಿಂಗದಹಳ್ಳಿರಾಜ್ಕುಮಾರ್ ಮಾತನಾಡಿ, ಆಸ್ಪತ್ರೆಯಲ್ಲಿ ಎಕ್ಸ್ ರೇ ತೆಗೆಯುವವರು ಬಡವರಿಂದ ಹೆಚ್ಚಿನ ಹಣ ಪಡೆಯುತ್ತಿದ್ದಾರೆ ಎಂಬ ದೂರುಗಳು ಬಂದಿವೆ, ಈ ಬಗ್ಗೆ ಮದನಮಡು ನರಸಿಂಹಮೂರ್ತಿ ಎಂಬ ರೋಗಿ ಹೆಚ್ಚಿನ ಹಣ ಕೇಳುತ್ತಿರುವ ಬಗ್ಗೆ ನನಗೆ ದೂರವಾಣಿ ಮೂಲಕ ತಿಳಿಸಿದ್ದಾರೆ, ಆಡಳಿತ ವೈದ್ಯರು ಆಸ್ಪತ್ರೆಯ ಈ ಸಮಸ್ಯೆಗಳ ಬಗ್ಗೆ ಗಮನ ಹರಿಸುವಂತೆ ತಿಳಿಸಿದರು.
    ತಾ.ಪಂ.ಸದಸ್ಯ ಪ್ರಸನ್ನಕುಮಾರ್ ಮಾತನಾಡಿ, ಪ್ರತಿ ಬಾರಿ ಸಭೆಗೆ ಆಗಮಿಸಿದಾಗಲೂ ಕೆಲ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಗೆ ಬಂದಿರುವುದೇ ಇಲ್ಲ, ನಾವು ಯಾರನ್ನು ಪ್ರಶ್ನಿಸಬೇಕು, ತಾ.ಪಂ.ಕಾರ್ಯನಿರ್ವಹಣಾಧಿಕಾರಿಗಳು ಈ ಬಗ್ಗೆ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು, ನಮಗೂ ಬೇರೆ ಕೆಲಸಗಳು ಇರುತ್ತವೆ, ಎಲ್ಲಾ ಕೆಲಸಗಳನ್ನು ಬಿಟ್ಟು, ನಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚಿಸಲು  ಸಭೆಗೆ ಬಂದಿದ್ದೇವೆ, ಇನ್ನುಮುಂದೆ ಅಧಿಕಾರಿಗಳು ಬರುವುದಾದರೆ ಮಾತ್ರ ಸಭೆಯನ್ನು ಕರೆಯಿರಿ ಎಂದು ಆಗ್ರಹಿಸಿದರು. ಸಭೆಯಲ್ಲಿ ತಾ.ಪಂ. ಉಪಾಧ್ಯಕ್ಷ ಯಳನಡು ಯತೀಶ್, ಸದಸ್ಯರುಗಳಾದ ಇಂದಿರಾಕುಮಾರಿ, ಆಲದಕಟ್ಟೆತಿಮ್ಮಯ್ಯ, ಹೊನ್ನಮ್ಮ, ಹುಳಿಯಾರ್ ಕುಮಾರ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ ಹಾಗೂ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link