ಸುಧಾಕರ್ ವಿರುದ್ಧ ಕ್ರಮಕ್ಕೆ ಡಿಕೆಶಿ ಆಗ್ರಹ

ಬೆಂಗಳೂರು

    ಕೊರೊನಾ ಲಾಕ್ ಡೌನ್ ಉಲ್ಲಂಘಿಸಿ ಜವಾಬ್ದಾರಿ ಮರೆತು ಮಕ್ಕಳೊಂದಿಗೆ ಈಜುಕೊಳದಲ್ಲಿ ಮೋಜು ಮಾಡುತ್ತಿರುವ ವೈದ್ಯಕೀಯ ಸಚಿವ ಸುಧಾಕರ್ ಅವರು ರಾಜೀನಾಮೆ ನೀಡಬೇಕು, ಇಲ್ಲವೇ ಮುಖ್ಯಮಂತ್ರಿ ಯಡಿಯೂರಪ್ಪ ಅವರೆ ಸುಧಾಕರ್ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಆಗ್ರಹಿಸಿದರು.

     ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿರುವ ಸುಧಾಕರ್ ಅವರು ತಮ್ಮ ಜವಾಬ್ದಾರಿಯನ್ನು ಮರೆತು ಈಜುಕೊಳದಲ್ಲಿ ಈಜುತ್ತಿದ್ದಾರೆ. ಇದು ನೈತಿಕತೆ ಮತ್ತು ಸೈದ್ಧಾಂತಿಕ ಶ್ರೇಷ್ಠತೆಯ ವಿಚಾರ. ಕೂಡಲೇ ಸಚಿವ ಸುಧಾಕರ್ ಅವರು ರಾಜೀನಾಮೆ ನೀಡಬೇಕು, ಇಲ್ಲವೇ ಮುಖ್ಯಮಂತ್ರಿ ಯಡಿಯೂರಪ್ಪ ಅವರೆ ಸುಧಾಕರ್ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದ್ದಾರೆ.

      ಕೊರೊನಾ ಸೋಂಕು ಆರಂಭವಾದ ಆರಂಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ತಮ್ಮ ಮಗಳ ಮದುವೆಯ ಕೆಲಸದಲ್ಲಿ ತೊಡಗಿಸಿಕೊಡಿದ್ದರು. ಹಾಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೊರೊನಾ ಕುರಿತು ಜವಾಬ್ದಾರಿಗಳನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರಿಗೆ ವಹಿಸಿದ್ದರು. ಶ್ರೀರಾಮುಲು ವಾಪಾಸ್ ಬಂದ ಬಳಿಕ ಇಬ್ಬರ ನಡುವೆ ಸಂಘರ್ಷ ಉಂಟಾಗಿತ್ತು.

     ಕೊನೆಗೆ ಬೆಂಗಳೂರಿನ ಉಸ್ತುವಾರಿಯನ್ನು ಸುಧಾಕರ್ ಗೆ ವಹಿಸಿ, ರಾಜ್ಯದ ಜವಾಬ್ದಾರಿಯನ್ನು ಶ್ರೀರಾಮುಲುಗೆ ಒಪ್ಪಿಸಲಾಯಿತು. ಶ್ರೀರಾಮುಲು ಅವರು ಬೆಂಗಳೂರು ಬಿಟ್ಟು ರಾಜ್ಯದ ಇತರ ಜಿಲ್ಲೆಗಳಲ್ಲಿ ಪ್ರವಾಸದಲ್ಲಿ ತೊಡಗಿಸಿಕೊಂಡಿದ್ದರು. ಆದಾಗ್ಯೂ ಹೊಂದಾಣಿಕೆ ಸರಿಯಾಗದ ಕಾರಣ, ಕೊರೊನಾ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡುವ ಜವಾಬ್ದಾರಿಯನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಒಪ್ಪಿಸಲಾಗಿದೆ.

    ಇದರಿಂದ ಬೇಸರಗೊಂಡಿರುವ ಸುಧಾಕರ್ ತಮ್ಮ ಮನೆಯಲ್ಲಿ ಹೆಚ್ಚಾಗಿ ಕಾಲ ಕಳೆಯಲಾರಂಬಿಸಿದ್ದಾರೆ. ನಿನ್ನೆ ಭಾನುವಾರದ ರಜಾ ದಿನವಾಗಿದ್ದರಿಂದ ತಮ್ಮ ಮಕ್ಕಳ ಜೊತೆ ಮನೆಯಲ್ಲಿನ ಈಜುಕೊಳದಲ್ಲಿ ಈಜಾಡುವ ಫೋಟೋವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿ ಬಹಳ ದಿನಗಳ ನಂತರ ಮಕ್ಕಳ ಜೊತೆ ಸಮಯ ಕಳೆದಿದ್ದೇನೆ. ಈಜುಕೊಳದಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿದೆ ಎಂದು ಬರೆದುಕೊಂಡಿದ್ದರು.

    ಇದು ಕೆಲವೇ ಕ್ಷಣಗಳಲ್ಲಿ ನೆಟ್ಟಿಗರ ಸಿಟ್ಟಿಗೆ ಕಾರಣವಾಗಿತ್ತು. ಕೂಡಲೇ ಸುಧಾಕರ್ ತಮ್ಮ ಪೋಸ್ಟನ್ನು ಡಿಲಿಟ್ ಮಾಡಿದ್ದರು. ಆದರೆ ಅದರ ಸ್ಕ್ರೀನ್ ಶಾಟ್ ಜೊತೆ ಇಂದು ಟ್ವಿಟರ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಡಿ.ಕೆ.ಶಿವಕುಮಾರ್ ಅವರು ಸುಧಾಕರ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

    ಇಡೀ ವಿಶ್ವವೇ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ಗೌರವಾನ್ವಿತ ಸಚಿವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಫೋಟೋ ಹಾಗೂ ವಿಡಿಯೋಗಳನ್ನು ನೋಡಿ ಅಚ್ಚರಿಯಾಗಿದೆ. ಕೊರೋನಾ ವಿರುದ್ಧ ಹೋರಾಡಲು ಸರ್ಕಾರ ಎಲ್ಲ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳನ್ನು, ಮಾಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನು ಬಂದ್ ಮಾಡಿ ಜನರನ್ನು ಮನೆಯೊಳಗೆ ಬಂಧಿಯಾಗುವಂತೆ ಹೇಳಲಾಗುತ್ತಿದೆ. ಖಾಸಗಿ ಈಜುಕೊಳ ಮುಚ್ಚಿಸಲಾಗಿದೆ. ದೊಡ್ಡ ದೊಡ್ಡವರ ವೈಯಕ್ತಿಕ ಜೆಟ್, ವಿಮಾನಗಳ ಹಾರಾಟ ನಿಷೇಧಿಸಲಾಗಿದೆ. ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರಿಗೆ ಕೊರೋನಾ ಜವಾಬ್ದಾರಿಯನ್ನು ಸರ್ಕಾರ ನೀಡಿದೆ.

      ಈ ಜವಾಬ್ದಾರಿಯುತ ಸ್ಥಾನದಲ್ಲಿರುವವರು, ಸ್ವತಃ ವೈದ್ಯರಾಗಿ, ಪ್ರಜ್ಞಾವಂತ ಎನಿಸಿಕೊಂಡಿರುವವರು ಈ ಹೊತ್ತಲ್ಲಿ ಜನರಿಗೆ ತಮ್ಮ ವೈಯಕ್ತಿಕ ಜೀವನದ ಮೋಜಿನ ಚಿತ್ರವನ್ನು ಹಾಕಿಕೊಂಡಿರುವುದು ಆಘಾತ ತಂದಿದೆ. ಈ ವಿಚಾರವಾಗಿ ರಾಜಕೀಯ ಮಾಡಲು ಹೋಗುವುದಿಲ್ಲ. ಇದು ನೈತಿಕ ಮೌಲ್ಯದ ವಿಚಾರವಾಗಿದೆ. ನಮ್ಮ ಪಕ್ಷದವರು, ಬೇರೆ ಪಕ್ಷದವರು ಮಾತ್ರವಲ್ಲ, ಬಿಜೆಪಿ ನಾಯಕರೇ ನನಗೆ ಕರೆ ಮಾಡಿ ವಿರೋಧ ಪಕ್ಷದ ಅಧ್ಯಕ್ಷನಾಗಿ ಈವರೆಗೂ ಯಾಕೆ ಸುಧಾಕರ್ ಅವರ ರಾಜೀನಾಮೆ ಕೇಳುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ.

     ಆದರೂ ನಾನು ಈ ಸಂದರ್ಭದಲ್ಲಿ ರಾಜೀನಾಮೆಗೆ ಆಗ್ರಹಿಸುವುದಿಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳೂ ರಾಜೀನಾಮೆ ಕೇಳಬಾರದು, ರಾಜ್ಯಪಾಲರು ವಜಾಗೊಳಿಸಬಾರದು, ನನ್ನ ಪ್ರಕಾರ ಸುಧಾಕರ್ ಅವರೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿದ್ದಾರೆ. ಈ ವಿಚಾರ ಕೊರೋನಾ ವೈರಸ್ ವಿರುದ್ಧದ ಹೋರಾಟದ ಮುಂದಾಳತ್ವ ವಹಿಸಿರುವ ಸಚಿವರೊಬ್ಬರ ನಡೆ, ನೈತಿಕ ಹೊಣೆಗಾರಿಕೆಗೆ ಬಿಟ್ಟ ವಿಚಾರ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಕ್ಕಿಂತ ಬಿಜೆಪಿಯ ಹೈಕಮಾಂಡ್ ಏನು ಉತ್ತರಿಸಿ, ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಮುಖ್ಯ. ಈ ವಿಚಾರವನ್ನು ಅವರಿಗೆ ಬಿಡುತ್ತೇನೆ ಎಂದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap