ಚಂಡೀಗಢ:
ಪಂಜಾಬ್‌ನ ಚಂಡೀಗಢದಲ್ಲಿ 2o24 ರಲ್ಲಿ ನಡೆದ ಗ್ರೆನೇಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ) ಭಯೋತ್ಪಾದಕ ಸಂಘಟನೆಯ ನಾಲ್ವರು ಭಯೋತ್ಪಾದಕರ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ಭಾನುವಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಆರೋಪಿಗಳಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂಡಾ ಮತ್ತು ಅಮೆರಿಕ ಮೂಲದ ಹರ್‌ಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಪಾಸಿ ಸೇರಿದ್ದಾರೆ ಎಂದು ತಿಳಿದು ಬಂದಿದೆ.
ಎನ್‌ಐಎ ನ್ಯಾಯಾಲಯದ ಮುಂದೆ ಸಲ್ಲಿಸಲಾದ ಆರೋಪಪಟ್ಟಿಯಲ್ಲಿ, ನಾಲ್ವರು ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ), ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ದಾಳಿಯನ್ನು ಯೋಜಿಸುವ ಮತ್ತು ಬೆಂಬಲಿಸು ಕಾಯಿದೆಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ರಿಂಡಾ ಮತ್ತು ಹ್ಯಾಪಿ ಪಾಸಿ ಎಂಬ ಇಬ್ಬರು ಭಯೋತ್ಪಾದಕರು ಈ ದಾಳಿಯ ಪ್ರಮುಖ ರೂವಾರಿ ಮತ್ತು ಸಂಚುಕೋರರು ಎಂದು ಎನ್‌ಐಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸೆಪ್ಟೆಂಬರ್ 2024 ರ ದಾಳಿಯು ನಿವೃತ್ತ ಪಂಜಾಬ್ ಪೊಲೀಸ್ ಅಧಿಕಾರಿಯೊಬ್ಬರನ್ನು ಗುರಿಯಾಗಿಸಿಕೊಂಡು ಉದ್ದೇಶಿಸಲಾಗಿತ್ತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ದಾಳಿಯನ್ನು ಭಾರತ ಮೂಲದ ಇಬ್ಬರು ಉಗ್ರರು ರೋಹನ್ ಮಸಿಹ್ ಮತ್ತು ವಿಶಾಲ್ ಮಸಿಹ್ ನಡೆಸಿದ್ದರು. ಸೆಪ್ಟೆಂಬರ್ 11, 2024 ರಂದು ಚಂಡೀಗಢದ ಸೆಕ್ಟರ್ 10D ಯಲ್ಲಿರುವ ಮನೆಯ ಮೇಲೆ ಗ್ರೆನೇಡ್ ದಾಳಿ ನಡೆದಿತ್ತು. ಸಂಜೆ 5.30 ರ ಸುಮಾರಿಗೆ ಗ್ರೆನೇಡ್ ದಾಳಿ ನಡೆದಿದ್ದು, ಸ್ಫೋಟದ ಪರಿಣಾಮ ಕಿಟಕಿಗಳು ಮತ್ತು ಹೂವಿನ ಕುಂಡಗಳು ಹಾನಿಗೊಂಡಿದ್ದವು. ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಅವರ ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದರು.
ಸ್ಫೋಟ ಸಂಭವಿಸುವ ಸ್ವಲ್ಪ ಸಮಯದ ಮೊದಲು ಆಟೋರಿಕ್ಷಾದಲ್ಲಿ ಮೂವರು ಜನರು ಘಟನಾ ಸ್ಥಳಕ್ಕೆ ಆಗಮಿಸಿ ಸ್ಫೋಟ ನಡೆಸಲು ತಯಾರಿ ನಡೆಸಿದ್ದರು. ಸ್ಫೋಟ ಸಂಭವಿಸಿದ ಕ್ಷಣವನ್ನು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಪೊಲೀಸರು ಮೊದಲು ರೋಹನ್ ಮಸಿಹ್‌ನನ್ನು ಬಂಧಿಸಿದ್ದರು. ಮತ್ತೊಬ್ಬ ಆರೋಪಿ ವಿಶಾಲ್ ಮಸಿಹ್ ತಲೆ ಮರಿಸಿಕೊಂಡಿದ್ದ, ನಂತರ ಆತನ ಹುಡುಕಾಟ ನಡೆಸಿ ಬಂಧಿಸಲಾಗಿತ್ತು. ಇದೀಗ ಬಿಕೆಐ ಜಾಲದ ಇತರ ಸದಸ್ಯರನ್ನು ಪತ್ತೆಹಚ್ಚಲು ಮತ್ತು ಭಾರತದಲ್ಲಿನ ಅದರ ಕಾರ್ಯಾಚರಣೆಗಳನ್ನು ನಾಶಮಾಡಲು ತನಿಖೆಗಳು ಇನ್ನೂ ನಡೆಯುತ್ತಿವೆ ಎಂದು ಎನ್‌ಐಎ ಬಹಿರಂಗಪಡಿಸಿದೆ.
