ಸುಗ್ರೀವಾಜ್ಞೆ ಹಿಂಪಡೆಯದಿದ್ದರೆ ಬೀದಿಗಿಳಿದು ಹೋರಾಟ : ದೇವೇಗೌಡ

ಬೆಂಗಳೂರು:

     ಭೂ ಸುಧಾರಣಾ ಕಾಯಿದೆ ರದ್ದು, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮತ್ತು ಕೈಗಾರಿಕಾ ನಿಯಮ ತಿದ್ದುಪಡಿ ಮತ್ತಿತರ ತಿದ್ದುಪಡಿಗಳಿಗೆ ವಿರೋಧ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಜೆಡಿಎಸ್ ಸದಸ್ಯ ಎಚ್.ಡಿ.ದೇವೇಗೌಡ ಸರ್ಕಾರ ಸುಗ್ರೀವಾಜ್ಞೆಗಳನ್ನು ಹಿಂಪಡೆಯದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಗ್ರೀವಾಜ್ಞೆ ಮೂಲಕ ಕಾಯ್ದೆಗಳನ್ನು ಜಾರಿಗೆ ತಂದು ರೈತರನ್ನು ಕಾರ್ಮಿಕರನ್ನು ಬೀದಿಪಾಲು ಮಾಡುತ್ತಿದ್ದಾರೆ. ಇದನ್ನು ವಿರೋಧಿಸಿ ಮೂರು ಬಾರಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961, ಸೆಕ್ಷನ್ 79-ಎ, 79-ಬಿ, 79-ಸಿ ರದ್ದು ಮಾಡಿರುವುದು ರೈತರೋಧಿ ಕ್ರಮವಾಗಿದೆ ಎಂದು ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಎಪಿಎಂಸಿ ಕಾಯ್ದೆ ತಿದ್ದುಪಡಿಯೂ ರಾಜ್ಯಕ್ಕೆ ಮಾರಕವಾಗಿದೆ ಮತ್ತು ಕೈಗಾರಿಕೆ ವಿಚಾರ ಹಾಗೂ ಮತ್ತಿತರ ನಿಯಮಗಳ ತಿದ್ದುಪಡಿ ಮಾಡಿ ಸರ್ಕಾರ ರೈತ ವಿರೋಧಿ ತೀರ್ಮಾನಗಳನ್ನೂ ತೆಗೆದುಕೊಂಡಿದೆ. ಮಹಾಮಾರಿ ಕೊರೊನಾ ಕಾರಣ ಇಷ್ಟು ದಿನ ತಾವು ಈ ಬಗ್ಗೆ ಧ್ವನಿಯೆತ್ತಿರಲಿಲ್ಲ. ಸರ್ಕಾರದ ನಿಯಮ ಉಲ್ಲಂಘಿಸಬಾರದೆಂದು ಹಿಂದೆ ಸರಿದಿದ್ದೆ , ಹೀಗೆ ಮುಂದುವರಿದರೆ ನಮ್ಮ ಜನತೆಗೆ ತೊಂದರೆಯಾಗುತ್ತದೆ ಎಂದು ಈ ದಿನ ಮಾಧ್ಯಮಗಳ ಮುಖಾಂತರ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿರುವುದಾಗಿ ದೇವೇಗೌಡ ಸ್ಪಷ್ಟಪಡಿಸಿದರು.

     ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕಾಯ್ದೆ ಪರಿಣಾಮ ಏನಾಗಲಿದೆ ಎಂಬ ಬಗ್ಗೆ ಸರ್ಕಾರ ಜನರಿಗೆ ಮಾಹಿತಿ ನೀಡದೆ ಕಾಯ್ದೆ ಜಾರಿ ಮಾಡಿದ್ದಾರೆ. ಇದರಿಂದ ರಿಯಲ್ ಎಸ್ಟೇಟ್ ಮಾಫಿಯಾಗೆ ಅನುಕೂಲವಾಗುತ್ತದೆ. ನಮ್ಮ ರೈತರು ಬೀದಿಗೆ ಬೀಳಲಿದ್ದಾರೆ. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಈ ಮಾಫಿಯಾ ಹೆಚ್ಚಾಗುತ್ತದೆ. ಸರ್ಕಾರ ದಯಮಾಡಿ ಈ ಎಲ್ಲ ಕಾಯ್ದೆಗಳನ್ನು ರದ್ದು ಪಡಿಸಿ ರೈತರ ಪರವಾಗಿ ನಿಲ್ಲಬೇಕು. ಇದು ಅತ್ಯಂತ ಕೆಟ್ಟ ತಿದ್ದುಪಡಿ ಕಾಯ್ದೆ ಎಂದು ಟೀಕಾಪ್ರಹಾರ ನಡೆಸಿದರು.

     ಯಾರೋ ಒಬ್ಬ ಕೈಗಾರಿಕೆ ಉದ್ಯಮಿ ಬಂದು ಭೂಮಿ ಪಡೆಯುತ್ತಾನೆ, ಕೈಗಾರಿಕೆ ಉದ್ದೇಶಕ್ಕಾಗಿ ಪಡೆದ ಭೂಮಿಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡಬೇಕು, ನಂತರ ಅವನಿಗೆ ಬೇಕಾದರೆ 7 ವರ್ಷಗಳ ನಂತರ ಅದೇ ಭೂಮಿಯನ್ನು ಪರಾಭಾರೆ ಕೂಡ ಮಾಡಬಹುದು.7 ವರ್ಷಗಳ ನಂತರ ಅಂದಿನ ಬೆಲೆಗೆ ಮಾರಾಟ ಮಾಡುತ್ತಾನೆ. ಇದರಿಂದ ರೈತರಿಗೆ ಆಗುವ ಲಾಭವೇನು ? ಬಹುಮತ ಇದೆ ಎನ್ನುವ ಒಂದೇ ಕಾರಣಕ್ಕೆ ಸರ್ಕಾರ ಇಂತಹ ಕಾನೂನು ತರುವುದು ನಿಜಕ್ಕೂ ರಾಜ್ಯದ ಜನತೆಗೆ ಮಾಡುವ ಅನ್ಯಾಯ. ಸರ್ಕಾರ ಈ ತಕ್ಷಣ ಎಚ್ಚೆತ್ತು ಇದನೆಲ್ಲ ನಿಲ್ಲಿಸಬೇಕು. ನಿಲ್ಲಿಸದಿದ್ದರೆ ಈ ನೀತಿ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಮಾಜಿ ಪ್ರಧಾನಿ ಎಚ್ಚರಿಸಿದರು.

    ಕೊರೋನಾ ವಿಚಾರದಲ್ಲಿ ರಾಜ್ಯ ಸರ್ಕಾರ ಎಷ್ಟು ಪ್ಯಾಕೇಜ್ ಬಿಡುಗಡೆ ಮಾಡಿದೆ, ಎಷ್ಟು ಹಣ ಪೋಲಾಗಿದೆ ಎಲ್ಲವೂ ಜಗಜ್ಜಾಹೀರಾಗಿದೆ. ಕೊರೋನಾ ವೈದ್ಯಕೀಯ ಉಪಕರಣಗಳ ಹಗರಣದಲ್ಲಿ ಎರಡು ಸಾವಿರ ಕೋಟಿ ಹಗರಣ ನಡೆದಿದೆ ಎಂದು ಕಾಂಗ್ರೆಸ್ ಕೂಡಾ ಆರೋಪ ಮಾಡಿದೆ. ಇದರ ಬಗ್ಗೆ ಹೋರಾಟ ಮಾಡಬೇಕೋ ಬೇಡವೋ ಗೊತ್ತಾಗುತ್ತಿಲ್ಲ. ಯಾರು ಭ್ರಷ್ಟಾಚಾರ ಮಾಡಿರುತ್ತಾರೋ ಅವರಿಗೆ ಮತ್ತೆ ಶಕ್ತಿ ಬರುತ್ತದೆ. ಇದಕ್ಕೆ ಇತಿಹಾಸದಲ್ಲಿ ಸಾಕ್ಷಿಗಳಿವೆ. ಹಾಗೆಂದ ಮಾತ್ರಕ್ಕೆ ತಾವು ಸುಮ್ಮನೆ ಕುಳಿತುಕೊಂಡಿದ್ದೇನೆ ಎಂದರ್ಥವಲ್ಲ. ಹೀಗೆ ಜನಸಾಮಾನ್ಯರ ವಿಚಾರದಲ್ಲಿ ಆಟವಾಡಿದರೆ ಸುಮ್ಮನೆ ಬಿಡುವುದಿಲ್ಲ. ಈಗಲಾದರೂ ಕೊರೊನ ವಿಚಾರದಲ್ಲಿ ಎಚ್ಚೆತ್ತು ಕೆಲಸ ಮಾಡಲಿ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap