ಹಿರಿಯ ನಾಗರಿಕರನ್ನು ಪ್ರೀತಿಯಿಂದ ಆರೈಕೆ ಮಾಡಿ : ಲತಾ ರವಿಕುಮಾರ್

ತುಮಕೂರು

  ತಂದೆ-ತಾಯಂದಿರ ಬೇಡಿಕೆಗಳನ್ನು ಈಡೇರಿಸುವುದರ ಜೊತೆಗೆ ಅವರನ್ನು ಪ್ರೀತಿ ಮತ್ತು ಕಾಳಜಿಯಿಂದ ನೋಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್ ಹೇಳಿದರು.

   ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆ ಮತ್ತು ಹಿರಿಯ ನಾಗರಿಕರಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಇವರ ಸಹಯೋಗದಲ್ಲಿಂದು ಬಾಲಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹಿರಿಯನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು, ನಾವು ಚಿಕ್ಕವರಿದ್ದಾಗ ನಮ್ಮ ಬೇಕು-ಬೇಡಗಳನ್ನು ಅರ್ಥ ಮಾಡಿಕೊಂಡು ನಮಗೆ ಅಗತ್ಯ ಸೌಲಭ್ಯಗಳನ್ನು ತಂದೆ-ತಾಯಂದಿರು ಒದಗಿಸುತ್ತಾರೆ. ಅದೇ ರೀತಿಯಲ್ಲಿ ಮಕ್ಕಳು ಸಹ ವಯಸ್ಸಾದ ತಂದೆ-ತಾಯಿಯರನ್ನು ಕಡೆಗಣಿಸದೆ ಗೌರವದಿಂದ ಕಂಡು ಮನತುಂಬುವ ಪ್ರೀತಿಯನ್ನು ನೀಡಬೇಕು ಎಂದು ಅವರು ಹೇಳಿದರು.

   ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಮಾತನಾಡಿ, ಮಕ್ಕಳು ಹೆತ್ತ ತಂದೆ-ತಾಯಿಯರನ್ನು ಕೇವಲ ಅನುಕಂಪದಿಂದ ನೋಡಿಕೊಳ್ಳಬಾರದು. ನಾವು ಅಸಹಾಯಕರು, ನಮಗೆ ವಯಸ್ಸಾಗಿದೆ ಎಂಬ ಮನಸ್ಥಿತಿ ಅವರಿಗೆ ಬರದಂತೆ ಅವರನ್ನು ನಿಜವಾದ ಪ್ರೀತಿಯಿಂದ ನೋಡಿಕೊಳ್ಳಬೇಕು. ಸರ್ಕಾರ ಹಿರಿಯ ನಾಗರಿಕರಿಗಾಗಿ ಸಾಕಷ್ಟು ಸೌಲಭ್ಯಗಳನ್ನು ಮೀಸಲಿಟ್ಟಿದ್ದು, ಅವುಗಳನ್ನು ಪ್ರತಿಯೊಬ್ಬ ಹಿರಿಯ ನಾಗರಿಕರು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

   ಜಿಲ್ಲಾ ಹಿರಿಯ ನಾಗರಿಕರ ಸಂಘಟನೆಯ ಅಧ್ಯಕ್ಷ ಮಹದೇವರಾವ್ ಬೋಬಡೆ ಮಾತನಾಡಿ, ವಿಶ್ವಸಂಸ್ಥೆಯು 2000ನೇ ಇಸವಿಯಲ್ಲಿ ಹಿರಿಯ ನಾಗರಿಕರ ದಿನಾಚರಣೆ ಮಾಡಬೇಕು ಎಂದು ಘೋಷಣೆ ಮಾಡಿತ್ತು. ಅದರಂತೆ ಇಂದು ವಿಶ್ವದಾದ್ಯಂತ ವಿಶ್ವ ಹಿರಿಯ ನಾಗರಿಕ ದಿನಾಚರಣೆಯನ್ನು ಆಚರಣೆ ಮಾಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿರಿಯ ನಾಗರಿಕರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಆ ಯೋಜನೆಗಳ ಸೌಲಭ್ಯಗಳ ಬಗ್ಗೆ ಗ್ರಾಮೀಣ ಜನರಿಗೆ ಮಾಹಿತಿ ಇಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯಾಗಾರ ಮಾಡುವ ಮೂಲಕ ಹಿರಿಯ ನಾಗರಿಕರ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ಜನರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

    ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಜಿಲ್ಲಾ ಮುಖ್ಯಕಾರ್ಯನಿರ್ವಹಣಾಧಿಕಾರಿ ಶುಭಾಕಲ್ಯಾಣ್ ಮಾತನಾಡಿ, ಹಿರಿಯರನ್ನು ಆರೈಕೆ ಮಾಡುವ ಸಲುವಾಗಿ ನಮ್ಮ ವ್ಯವಸ್ಥೆಯಲ್ಲಿ ಪೋಷಕರು ಮತ್ತು ಹಿರಿಯ ನಾಗರಿಕರ ಪಾಲನೆ ಕಲ್ಯಾಣ ಕಾಯ್ದೆ 2007 ಕಾನೂನು ಜಾರಿಗೆ ಬಂದಿದೆ. ಈ ಕಾಯ್ದೆ ಅಡಿ ನಿತ್ಯ ಪ್ರಕರಣಗಳು ದಾಖಲಾಗುತ್ತಿದ್ದು, ಮಾನವೀಯ ಮೌಲ್ಯಗಳು ಕುಸಿಯುತ್ತಿರುವುದು ಬೇಸರದ ಸಂಗತಿಯಾಗಿದೆ. ಮಾನವೀಯತೆಯಿಂದಾಗಿ ಹೆಸರುವಾಸಿಯಾಗಿರುವ ನಮ್ಮ ದೇಶ ವಿಶ್ವಕ್ಕೆ ಮಾದರಿಯಾಗಿದ್ದು, ದಿನದಿಂದ ದಿನಕ್ಕೆ ಮಾನವೀಯ ಮೌಲ್ಯ ಕುಸಿಯುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

     ಹಿಂದಿನ ಕಾಲ ಸುಖವಾಗಿ ಇರಲಿಲ್ಲ. ನಮ್ಮ ತಂದೆ ತಾಯಿ ತುಂಬಾ ಕಷ್ಟಪಟ್ಟು ನಮ್ಮನ್ನು ಒಂದು ಸ್ಥಾನಕ್ಕೆ ತಂದಿರುತ್ತಾರೆ. ಅವರನ್ನು ನಾವು ಅತ್ಯಂತ ಗೌರವದಿಂದ ನಡೆಸಿಕೊಳ್ಳಬೇಕು. ಹಿರಿಯ ನಾಗರಿಕರಿಗೆ ನೀಡುವ ಸೌಲಭ್ಯದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಗಂಭೀರವಾಗಿ ಚರ್ಚೆ ಮಾಡುತ್ತೇನೆ ಎಂದು ಅವರು ಹೇಳಿದರು.

    ಹಿರಿಯ ನಾಗರಿಕರ ಸಮಸ್ಯೆಗಳನ್ನು ಆಲಿಸಲು ಶ್ರೀರಾಮು ಫೌಂಡೇಶನ್ ಹೆಸರಿನಲ್ಲಿ ಸಹಾಯವಾಣಿ ಕೇಂದ್ರ ಶುರು ಮಾಡಿದ್ದು, ಹಿರಿಯ ನಾಗರಿಕರು 1090 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು ಎಂದು ಶ್ರೀ ರಾಮು ಫೌಂಡೇಷನ್ ಸಂಸ್ಥೆಯ ಕಾರ್ಯದರ್ಶಿ ಎಂ.ಜಿ.ತಿಮ್ಮರೆಡ್ಡಿ ಹೇಳಿದರು.

    ಕಾರ್ಯಕ್ರಮದಲ್ಲಿ ಸ್ವತಂತ್ರ ಹೋರಾಟಗಾರರಾದ ಸಂಪತ್ ಕುಮಾರ್ ಮತ್ತು ಟಿ.ಆರ್. ರೇವಣ್ಣ ಅವರನ್ನು ಸನ್ಮಾನಿಸಿದರು. ಕ್ರೀಡಾ ಮತ್ತು ಸಾಂಸ್ಕøತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಹಿರಿಯ ನಾಗರಿಕರಿಗೆ ಬಹುಮಾನ ವಿತರಿಸಿದರು.ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಎಂ.ರಮೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್, ನಿವೃತ್ತ ತಹಶೀಲ್ದಾರ್ ಪುಟ್ಟಸ್ವಾಮಪ್ಪ, ಜಿಲ್ಲೆಯ ಹಿರಿಯ ನಾಗರಿಕರು, ಇಲಾಖೆಯ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap