ಸಾಂಕ್ರಾಮಿಕ ರೋಗಗಳ ತಡೆಗೆ ಮುಂಜಾಗ್ರತಾ ಕ್ರಮಕೈಗೊಳ್ಳಿ : ಡಿ.ಎಚ್.ಓ

ಹಾವೇರಿ:

        ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಉಲ್ಬವಾಗುವ ಸಾಧ್ಯತೆ ಇರುತ್ತದೆ. ಕಾರಣ ಕುಡಿಯುವ ನೀರಿನಿಂದ ಹರಡುವ ಸಾಂಕ್ರಾಮಿಕ ರೋಗಗಳಾದ ಕಾಲರಾ, ಕರಳುಬೇನೆ, ವಾಂತಿ ಭೇಧಿ, ಅತಿಸಾರ ಭೇಧಿ, ಕಾಮಾಲೆ ಮುಂತಾದ ರೋಗಗಳು ಹೆಚ್ಚಾಗಿ ಹರಡುವ ಸಾಧ್ಯತೆ ಇದ್ದು, ಈ ರೋಗಗಳ ತಡೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

         ಜಿಲ್ಲೆಯ ಎಲ್ಲಾ ಕುಡಿಯುವ ನೀರಿನ ಮೂಲಗಳಿಂದ ವಿಶೇಷವಾಗಿ ಗ್ರಾಮಾಂತರ ಪ್ರದೇಶದಲ್ಲಿ ನೀರಿನ ಮಾದರಿಗಳನ್ನು ನಿರಂತರವಾಗಿ ಸಂಗ್ರಹಿಸಿ, ಪರೀಕ್ಷಿಸಿ, ಕಲುಷಿತವಾಗಿರುವ ಮೂಲಗಳನ್ನು ತಕ್ಷಣ ಕ್ಲೋರಿನೇಷನ್ ಮಾಡಿಸಬೇಕು. ಗೃಹಮಟ್ಟದಲ್ಲಿ ಸುಲಭವಾಗಿ ನೀರನ್ನು ಶುದ್ಧೀಕರಿಸಲು, ಇಲಾಖೆಯಲ್ಲಿ ಲಭ್ಯವಿರುವ ಹಾಲೋಜನೆ ಮಾತ್ರೆಗಳನ್ನು ವಿತರಿಸಿ, ಉಪಯೋಗಿಸುವ ಬಗ್ಗೆ ಜನಸಾಮಾನ್ಯರಿಗೆ ತಿಳುವಳಿಕೆ ನೀಡಬೇಕು.

         ವೈಯಕ್ತಿಕ ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ಹಾಗೂ ಆಹಾರದ ಸಂರಕ್ಷಣೆ ಪರಿಸರ ನೈರ್ಮಲ್ಯದ ನಿರ್ವಹಣೆ ಬಗ್ಗೆ ತಿಳಿಸುವುದು. ರಸ್ತೆ / ಬೀದಿ ಬದಿಗಳಲ್ಲಿ ಮಾರುವ ಕತ್ತರಿಸಿದ ಹಣ್ಣು ಮತ್ತು ತೆರೆದಿಟ್ಟ ಆಹಾರ ಪದಾರ್ಥಗಳನ್ನು ಸೇವಿಸಬಾರದೆಂದು ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ನೀಡಲು ಎಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಬೇಕು.

          ಸ್ಥಳಿಯ ಆಹಾರ ಸುರಕ್ಷತಾ ಅಧಿಕಾರಿಗಳು, ಹೋಟೆಲ್ ಮತ್ತು ಅಂಗಡಿಗಳ ತಪಾಸಣೆ ನಡೆಸಿ ಆಹಾರ ಮತ್ತು ನೀರಿನ ಗುಣಮಟ್ಟದ ಸುರಕ್ಷತೆ ಬಗ್ಗೆ ಗಮನ ಹರಿಸುವುದು. ಬಿಸಿ ನೀರು ಸರಬರಾಜು ಮಾಡಲು ಹೋಟೆಲ್ ಮಾಲೀಕರಿಗೆ ಕಟ್ಟನಿಟ್ಟಿನ ಸೂಚನೆ ನೀಡಬೇಕು. ಪ್ರತಿ ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಜಿಲ್ಲಾ ಪಂಚಾಯತ್ ಇವರುಗಳೊಂದಿಗೆ ಚರ್ಚಿಸಿ, ಸಂಬಂಧಿಸಿದ ಅಧಿಕಾರಿಗಳ ಸಭೆಯನ್ನು ಕರೆದು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಗ್ರಾಮ ಪಂಚಾಯತ್:

           ನೀರು ಸಂಗ್ರಹಿಸುವ ಟ್ಯಾಂಕ್‍ಗಳನ್ನು ಕನಿಷ್ಠ 20 ದಿನಗಳಿಗೊಮ್ಮೆ ಬ್ಲೀಚಿಂಗ್ ಪುಡಿಯಿಂದ ಸ್ವಚ್ಛಗೊಳಿಸುವುದು. ಟ್ಯಾಂಕರ್ ನೀರು ಕುಡಿಯಲು ಯೋಗ್ಯವೇ ಎಂಬುದನ್ನು ಪರೀಕ್ಷಿಸಿ ದೃಢೀಕರಿಸಿದ ನಂತರ ಸರಬರಾಜು ಮಾಡಲು ಕ್ರಮ ವಹಿಸಬೇಕು. ಕುಡಿಯುವ ನೀರು ಕಲುಷಿತವಾಗದಂತೆ ಪೂರೈಕೆ ವ್ಯವಸ್ಥೆಯಲ್ಲಿ ಸೋರುವಿಕೆಯನ್ನು ಗುರುತಿಸಿ ತಕ್ಷಣ ದುರಸ್ತಿಗೊಳಿಸುವುದು ಗ್ರಾಮದಲ್ಲಿ ನೈರ್ಮಲ್ಯವನ್ನು ತೃಪ್ತಿಕರವಾಗಿ ನಿರ್ವಹಿಸಬೇಕು.

           ಸ್ಯಾನಿಟರಿ ಹಾಗೂ ಚರಂಡಿ ನೀರು ಹರಿಯುವ ಕಡೆಗಳಲ್ಲಿ ಕುಡಿಯುವ ನೀರಿನ ಪೈಪ್‍ಗಳನ್ನು ಅಳವಡಿಸದಂತೆ ಕ್ರಮಕೈಗೊಳ್ಳಬೇಕು. ಕೊಳವೆ ಬಾವಿ ಸುತ್ತಲಿನ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಹಾಗೂ ಉಪಯೋಗಿಸಿದ ನೀರು ಮತ್ತೆ ಕೊಳವೆ ಬಾವಿಗೆ ಸೇರದಂತೆ ನಿಗಾವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

            ಅಗತ್ಯ ಸಂದರ್ಭಗಳಲ್ಲಿ ಸೂಕ್ತ ಚಿಕಿತ್ಸೆಗಾಗಿ ಅಗತ್ಯವಾದ ಜೀವ ರಕ್ಷಕ ಔಷಧಿಗಳು, ಐ.ವಿ ಪ್ಲೂಯಿಡ್ಸ್   ಹಾಗೂ ಕ್ರೀಮಿ ಕೀಟನಾಶಕಗಳನ್ನು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಲಭ್ಯವಿರುವಂತೆ ಕ್ರಮ ಕೈಗೊಳ್ಳುವುದು. ಹೆಚ್ಚಿನ ಅವಶ್ಯಕತೆಯಿದ್ದಲ್ಲಿ ಔಷಧಗಳನ್ನು ಕರ್ನಾಟಕ ರಾಜ್ಯ ಡ್ರಗ್ಸ್ ಆಂಡ್ ಲಾಜಿಸ್ಟಿಕ್ ವೇರ್ ಹೌಸ್ ಸೋಸೈಟಿ   ಇವರಿಂದ ಪಡೆಯಬೇಕು. ಓ.ಆರ್.ಎಸ್ ಪ್ಯಾಕೇಟ್ ಮತ್ತು ಹಾಲೋಜೋನ್ ಮಾತ್ರೆಗಳು ಆರೋಗ್ಯ ಸಹಾಯಕರು ಮತ್ತು ಆಶಾ ಕಾರ್ಯಕರ್ತರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವಂತೆ ಕ್ರಮ ಕೈಕೊಳ್ಳಬೇಕು ಎಂದು ತಿಳಿಸಿದ್ದಾರೆ.

        ಜಿಲ್ಲೆ, ತಾಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಈ ಮೂರು ಹಂತಗಳಲ್ಲಿ ಕ್ಷಿಪ್ರ ಕಾರ್ಯ ಪಡೆ   ಗಳನ್ನು ರಚಿಸಿ ರೋಗಪೀಡಿತ ಸ್ಥಳಕ್ಕೆ ಧಾವಿಸಬೇಕು. ಜನಪ್ರತಿನಿಧಿಗಳ ಹಾಗೂ ಸಮುದಾಯದ ಮುಖ್ಯಸ್ಥರ ಸಭೆಗಳಲ್ಲಿ ಆರೋಗ್ಯ ಇಲಾಖೆಯಲ್ಲಿ ಲಭ್ಯವಿರುವ ಎಲ್ಲಾ ಸವಲತ್ತುಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.

       ಕರಳುಬೇನೆ/ಕಾಲರಾ/ಜಾಂಡೀಸ್ ಇತ್ಯಾದಿ ಸಾಂಕ್ರಾಮಿಕಗಳು ಸಂಭವಿಸಿದ್ದಲ್ಲಿ ಕೈಗೊಳ್ಳುವ ನಿಯಂತ್ರಣ ಕ್ರಮಗಳು: ಕ್ಞಿಪ್ರ ಪ್ರತಿಕ್ರಿಯಾ ತಂಡ   ವನ್ನು ತಕ್ಷಣ ಕಾಯಿಲೆ ಪೀಡತ ಸ್ಥಳಕ್ಕೆ ಕಳುಹಿಸಿ ಗ್ರಾಮದಲ್ಲಿಯೇ ಒಂದು ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ತೆರೆದು, ರೋಗವು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವವರೆಗೂ, ದಿನದ 24 ಗಂಟೆಯೂ ನಿಗಾವಣೆ ಮತ್ತು ವೈದ್ಯಕೀಯ ಸೇವಾ ಸೌಲಭ್ಯಗಳನ್ನು ನೀಡಬೇಕು.

         ಗಂಭೀರ ಸ್ವರೂಪದ ರೋಗಿಗಳನ್ನು ಅಂಬುಲೆನ್ಸ್ ಮೂಲಕ ಹತ್ತಿರ ತಾಲೂಕು/ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸಾಗಿಸುವ ವ್ಯವಸ್ಥೆ ಕಲ್ಪಿಸಬೇಕು. ಸಾಂಕ್ರಾಮಿಕ ರೋಗದ ಕಾರಣ (ಕಲುಷಿತ ಕುಡಿಯುವ ನೀರು/ಆಹಾರ)ವನ್ನು ಗುರುತಿಸಿ, ಪರ್ಯಾಯ ವ್ಯವಸ್ಥೆಯಲ್ಲಿ ಸುರಕ್ಷಿತ ನೀರನ್ನು ಪೂರೈಸಲು ಹಾಗೂ ಸೋರುವಿಕೆಗಳನ್ನು ತಕ್ಷಣ ದುರಸ್ತಿ ಪಡಿಸಲು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸುವುದು. ಸೂಕ್ತ ಕ್ರಮಕ್ಕಾಗಿ ಖುದ್ದಾಗಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು. ಸಾಂಕ್ರಾಮಿಕ ರೋಗಗಳು ಹರಡದಂತೆ ಪೀಡಿತ ಪ್ರದೇಶದಲ್ಲಿ ಸಕ್ರಿಯರೋಗ ಸಮೀಕ್ಷೆ ಕಾರ್ಯವನ್ನು ರೋಗವು ಸಂಪೂರ್ಣವಾಗಿ ಹತೋಟಿಗೆ ಬಂದ 10 ದಿನಗಳವರೆಗೆ ಮುಂದುವರೆಸಬೇಕು ಎಂದು ಜಿಲ್ಲೆಯ ಎಲ್ಲ ಪ್ರಾ.ಆ.ಕೇಂದ್ರ, ಸ.ಆ.ಕೇಂದ್ರ , ತಾಲೂಕಾ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳು, ತಾಲೂಕಾ ಆರೋಗ್ಯಾಧಿಕಾರಿಗಳು ಹಾಗೂ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link