ಗುಟಕಾ ಮಾರಾಟಗಾರರು ಹಾಗೂ ಧೂಮಪಾನ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ

ಹಾವೇರಿ

          ಸಾರ್ವಜನಿಕ ಸ್ಥಳಗಳಲ್ಲಿ ಬಿಡಿ, ಸಿಗರೇಟ್ ಸೇದುವವರ ಮೇಲೆ ಹಾಗೂ ಅಡಿಕೆ ಪೊಟ್ಟಣದ ಜೊತೆಗೆ ಪ್ರತ್ಯೇಕ ತಂಬಾಕು ಪೊಟ್ಟಣ(ಗುಟಕಾ) ಮಾರಾಟ ಮಾಡುವವರ ಮೇಲೆ ಕಠಿಣ ಕ್ರಮಕೈಗೊಳ್ಳಿ ಎಂದು ಪೊಲೀಸ್ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ. ವಿ.ವೆಂಕಟೇಶ್ ಅವರು ಸೂಚನೆ ನೀಡಿದರು.

         ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಮಂಗಳವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳು, ಸಾರ್ವಜನಿಕ ಸ್ಥಳಗಳಲ್ಲಿ ಗುಟಕಾ ಸೇವನೆ ಮದ್ಯಪಾನ ಮಾಡುವವರ ಮೇಲೆ ಕೋಪ್ಟಾ ಕಾಯ್ದೆ ಅನುಸಾರ ಕಠಿಣ ಕ್ರಮ ಕೈಗೊಂಡು ತಂಬಾಕು ನಿಯಂತ್ರಣಕ್ಕೆ ಪರಿಣಾಮಕಾರಿಯಾಗಿ ಎಲ್ಲ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.

          ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಈ ಕುರಿತಂತೆ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ, ಸಮುದಾಯ ಗುಂಪು ಚರ್ಚೆ, ತರಬೇತಿ ಕಾರ್ಯಾಗಾರಗಳು, ಕಾರ್ಯಪಡೆ ರಚನೆಯಂತಹ ಪರಿಣಾಮಕಾರಿ ಕಾರ್ಯಗಳಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

         ನಿಯಮಾನುಸಾರ ಬಸ್ ನಿಲ್ದಾಣಗಳು, ಆಸ್ಪತ್ರೆಗಳು, ಶಾಲಾ-ಕಾಲೇಜುಗಳು, ವಿದ್ಯಾರ್ಥಿ ನಿಲಯಗಳಲ್ಲಿ ಹಾಗೂ ಎಲ್ಲ ಸರ್ಕಾರಿ ಕಚೇರಿಗಳ ಆವರಣದಲ್ಲಿ ಧೂಮಪಾನ ನಿಷೇಧಿತ ವಲಯವೆಂದು ಕಡ್ಡಾಯವಾಗಿ ನಾಮಫಲಕಗಳನ್ನು ಅಳವಡಿಸಬೇಕು. ನಿಷೇಧಿತ ವಲಯದಲ್ಲಿ ತಂಬಾಕು ಸೇವೆ, ಮದ್ಯಪಾನ ಚಟುವಟಿಕಗಳು ಕಂಡುಬಂದರೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

          ಪರವಾನಿಗೆ ಪಡೆದ ಬಾರ್ ಮತ್ತು ರೆಸ್ಟೋರೆಂಟ್ ಹಾಗೂ ಮದ್ಯದಂಗಡಿಗಳಲ್ಲಿ ಗುಂಪು ಗುಂಪಾಗಿ ಸಿಗರೇಟ್ ಸೇವನೆಯಂತಹ ಚಟುವಟಿಕಗಳಿಗೆ ನಿಯಂತ್ರಣ ಹಾಕಲು, ಪ್ರತ್ಯೇಕವಾಗಿ ಸ್ಮೋಕಿಂಗ್ ಜೂನ್ ಸ್ಥಾಪಿಸಲು ನಿರ್ದೇಶನ ನೀಡಿ ಅನುಷ್ಠಾನಕ್ಕೆ ಕಠಿಣ ಕ್ರಮಕೈಗೊಳ್ಳಬೇಕು. ಅಬಕಾರಿ ಇಲಾಖೆ ನೇತೃತ್ವದಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಈ ಕಾರ್ಯದ ಅನುಷ್ಠಾನಕ್ಕೆ ಕ್ರಮವಹಿಸಬೇಕು ಎಂದು ಸೂಚಿಸಿದರು.

           ಸಣ್ಣಪುಟ್ಟ ಪೆಟ್ಟಿಗೆ ಅಂಗಡಿ, ಬೀಡಾ ಅಂಗಡಿಗಳಲ್ಲಿ ಅಡಿಕೆ ಪೊಟ್ಟಣದ ಜೊತೆಗೆ ಪ್ರತ್ಯೇಕವಾಗಿ ತಂಬಾಕು ಪುಡಿಯ ಪೊಟ್ಟಣ ಮಾರಾಟ ಮಾಡುವುದು ತಿಳಿದು ಬಂದಿದೆ. ಆಹಾರ ಸುರಕ್ಷತಾ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಈ ಅಂಗಡಿಗಳ ಮೇಲೆ ದಾಳಿಮಾಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

           ಕ್ಯಾನ್ಸರ್, ಟಿಬಿ ಇತರ ಅಪಾಯಕಾರಿ ರೋಗಗಳನ್ನು ತಡೆಯಲು ತಂಬಾಕು ನಿಯಂತ್ರಣ ಅತ್ಯವಶ್ಯವಾಗಿದೆ. ಕಾನೂನಿನಡಿ ಎಲ್ಲ ಇಲಾಖಾಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಧೂಮಪಾನ, ಗುಟಕಾ ಸೇವನೆಯಂತಹ ಚಟುವಟಿಕೆಗಳನ್ನು ನಿಯಂತ್ರಣಕ್ಕೆ ತನ್ನಿ. ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು ತರಗತಿಯ ಅವಧಿಯಲ್ಲಿ ಗುಟಕಾ, ಧೂಮಪಾನ ಸೇವನೆಯನ್ನು ಕೈಬಿಡಲು ಸುತ್ತೋಲೆ ಹೊರಡಿಸಿ. ಬಿಡುವಿನ ವೇಳೆಯಲ್ಲಿ ಶಿಕ್ಷಕರು ಈ ಚಟುವಟಿಕೆಯಲ್ಲಿ ತೊಡಗಿದರೆ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಕುತೂಹಲದಿಂದ ಈ ಚಟುವಟಿಕೆಯಲ್ಲಿ ತೊಡಗುವ ಸಾಧ್ಯತೆ ಹೆಚ್ಚಾಗುತ್ತದೆ. ಅರಿವು ಮತ್ತು ಜಾಗೃತಿಯ ಜೊತೆಗೆ ನಡಾವಳಿಯನ್ನು ಬದಲಾಯಿಸುವಂತ ಕಾರ್ಯಕ್ರಮಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೆ ತರುವುದರ ಜೊತೆಗೆ ಕಾನೂನಾತ್ಮಕವಾಗಿ ದಂಡ, ಶಿಕ್ಷೆಯಂತಹ ಕಠಿಣ ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

          ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ನಾಗರಾಜ ನಾಯಕ, ಆರ್.ಸಿ.ಎಚ್.ಅಧಿಕಾರಿ ಡಾ.ಜಯಾನಂದ, ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ಪೊಲೀಸ್ ಇಲಾಖೆಯ ಅಧಿಕಾರಿಗಳು, ತಂಬಾಕು ನಿಯಂತ್ರಣ ಅಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು, ಎಲ್ಲಾ ತಾಲೂಕಾ ವೈದ್ಯಾಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link