ಕುಡಿಯುವ ನೀರು ಹಾಗೂ ಮೇವಿನ ಕೊರತೆ ಆಗದಂತೆ ಅಗತ್ಯ ಕ್ರಮಕೈಗೊಳ್ಳಲಾಗಿದೆ : ಎಚ್.ಡಿ.ಕುಮಾರಸ್ವಾಮಿ

ಹಾವೇರಿ

          ಬರಪೀಡಿತ ಪ್ರದೇಶಗಳೆಂದು ಘೋಷಿಸಿರುವ ರಾಜ್ಯದ 154 ತಾಲೂಕುಗಳಲ್ಲಿ 8.5 ಕೋಟಿ ಉದ್ಯೋಗ ದಿನಗಳನ್ನು ಸೃಷ್ಟಿಮಾಡಲಾಗಿದೆ . ಬೆಳೆ ಪರಿಹಾರ ಹಾಗೂ ಬರ ಪರಿಹಾರ ಕಾರ್ಯಕ್ಕಾಗಿ 30 ಜಿಲ್ಲೆಯಲ್ಲಿ ಯುದ್ದೋಪಾದಿಯಲ್ಲಿ ಕಾರ್ಯಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.

           ಶುಕ್ರವಾರ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಅಸುಂಡಿ ಗ್ರಾಮಕ್ಕೆ ಭೇಟಿ ನೀಡಿ ಬರ ಪರಿಸ್ಥಿತಿ ಪರಿಶೀಲನೆ ಸಂದರ್ಭದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಪೀಡಿತ ತಾಲೂಕುಗಳಲ್ಲಿ ಪ್ರಥಮಾದ್ಯತೆಯಾಗಿ ಕುಡಿಯುವ ನೀರು ಹಾಗೂ ಮೇವಿನ ಕೊರತೆಯಾಗದಂತೆ ಅಗತ್ಯಕ್ರಮಕೈಗೊಳ್ಳಲಾಗಿದೆ.

            ಈ ಕಾರ್ಯಕ್ಕೆ ಯಾವುದೇ ಹಣದ ಕೊರತೆ ಇರುವುದಿಲ್ಲ. ನಗರ ಪ್ರದೇಶದಲ್ಲಿಯೂ ಸಹ ನೀರಿನ ಸಮಸ್ಯೆ ಇದೆ ಎಂದು ತಿಳಿದು ಬಂದಿದ್ದು ನಗರ ಪ್ರದೇಶಕ್ಕೂ ಸಹ ತಕ್ಷಣ ಹಣ ಬಿಡುಗಡೆಮಾಡಲಾಗುವುದು ಎಂದು ಹೇಳಿದರು.

             2009 ರಿಂದ ಈವರೆಗೆ ರೈತರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಎರಡು ಲಕ್ಷ ರೂ.ವರೆಗೆ ಮಾಡಿದ ಬೆಳೆಸಾಲ ಸಾಲ ಮನ್ನಾ ಮಾಡಲಾಗಿದೆ. 38 ಸಾವಿರ ಕೋಟಿ ರೂ.ಗಳನ್ನು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಭರಿಸಬೇಕಾಗಿದೆ. ರೈತರಿಗೆ ನ್ಯಾಯಯುತವಾಗಿ ಬೆಳೆವಿಮೆ ದೊರಕಿಸಲು ವಿಡಿಯೋ ಸಂವಾದದ ಮೂಲಕ ಸೂಚನೆ ನೀಡಲಾಗಿದೆ ಹಾಗೂ ಸರ್ಕಾರ ರೈತರಪರವಾಗಿ ಕೆಲಸಮಾಡುತ್ತಿದೆ ಎಂದರು.

            ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಈರುಳ್ಳಿ ಹಾಗೂ ಹಿಂಗಾರು ಹಂಗಾಮಿನಲ್ಲಿ ಬಿಳಿಜೋಳ ಬೆಳೆ ನಾಶವಾಗಿದೆ. 59 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೇವಾಂಶದಲ್ಲಿ ಜೋಳ ಬೆಳೆಯಲಾಗುತ್ತಿತ್ತು. ಆದರೆ ತೇವಾಂಶದ ಕೊರತೆಯಿಂದ ಬೆಳೆ ನಾಶವಾಗಿದೆ. ಒಂದು ಎಕರೆ ಬೆಳೆಗೆ ಗೊಬ್ಬರ, ಬೀಜ ಹಾಗೂ ಕೂಲಿಗಾಗಿ 8 ರಿಂದ 10 ಸಾವಿರ ಖರ್ಚಾಗಿತ್ತದೆ ಎಂದು ಹೇಳಲಾಗುತ್ತಿದೆ. ಸರ್ಕಾರದಿಂದ ಇನ್‍ಪುಟ್ ಸಬ್ಸಿಡಿಯಾಗಿ ಹೆಕ್ಟೇರ್‍ಗೆ ಆರು ಸಾವಿರದಿಂದ 6200ರೂ.ರವರೆಗೆ ನೀಡಲಾಗುದು ಎಂದು ಹೇಳಿದರು.

            ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಹಾಗೂ ಹಜ್ ಇಲಾಖೆ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್‍ಖಾನ್, ಶಾಸಕರಾದ ಬಿ.ಸಿ.ಪಾಟೀಲ, ಅನೇಕ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಕೃಷಿ, ತೋಟಗಾರಿಕೆ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ