ಜಾಣ ಕುರುಡು ಪ್ರದರ್ಶಿಸುತ್ತಿರುವ ತಾಲ್ಲೂಕು ಆಡಳಿತ

ಕೊರಟಗೆರೆ

        ಮಿತಿ ಮೀರಿದ ಕಲ್ಲಿನ ಗಣಿಗಾರಿಕೆಯಿಂದ ವಾಯು ಮಾಲಿನ್ಯ ಹೆಚ್ಚಾಗಿ ಗಣಿಗಾರಿಕೆಯ ಸ್ಥಳದಿಂದ 2-3 ಕಿಲೋಮೀಟರ್‍ವರೆಗೆ ಬೇಸಾಯ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸಿಗದ ಪರಿಸ್ಥಿತಿ ನಿರ್ಮಾಣವಾಗಿ, ರೈತರ ಬಾಳು ಮಾರುಬಟ್ಟೆಯಾಗಿದೆ ಎಂದು ಹತ್ತಾರು ಗ್ರಾಮದ ಗ್ರಾಮಸ್ಥರು ಸತ್ತ ಎಮ್ಮೆಯನ್ನು ಇಟ್ಟು ರಸ್ತೆತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದ ಘಟನೆ ಕೊರಟಗೆರೆ ತಾಲ್ಲೂಕಿನಲ್ಲಿ ಜರುಗಿದೆ.

        ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ಹೋಬಳಿಯ ಬಿಟ್ಟನಕುರಿಕೆ ಹಾಗೂ ಹೊಲತಾಳು ರಸ್ತೆ ಬಳಿ ಗಣಿಗಾರಿಕೆಯಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ, ಗಣಿಗಾರಿಕೆಯ ಧೂಳಿನಿಂದ ರೈತರು ಬಿತ್ತಿದ ಬೆಳೆಯ ಮೇಲೆ ಕುಂತು ಬೆಳೆಯಾಗದೆ ಕುಡಿಯುವ ನೀರು ಕಲುಷಿತವಾಗಿ ಹತ್ತಾರು ಜಾನುವಾರುಗಳು ಸತ್ತಿರುವುದಲ್ಲದೇ ಇತ್ತೀಚೆಗೆ ಧೂಳಿನ ಮೇವು ತಿಂದು ಸಾವಿರಾರು ರೂ ಬೆಲೆಬಾಳುವ ಸೀಮೆಹಸು ಮತ್ತು ಎಮ್ಮೆ ಸತ್ತು ಹೋಗಿದೆ. ನಮಗೆ ನ್ಯಾಯ ದೊರಕಿಸಿ ಕೊಡಿ, ನಮ್ಮ ಸ್ಥಿತಿ ದುಸ್ಥಿತಿಗೆ ತಲುಪಿದೆ ಎಂದು ಆರೋಪಿಸಿ ನೂರಾರು ರೈತರು ಎಮ್ಮೆ ಇಟ್ಟುಕೊಂಡು ರಸ್ತೆ ತಡೆ ನಡೆಸಿ ಗಣಿಗಾರಿಕೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

        ತೋವಿನಕೆರೆ ಹೋಬಳಿ ಒಂದರಲ್ಲೆ 10-15 ಭಾಗಗಳಲ್ಲಿ ಕಲ್ಲಿನ ಗಣಿಗಾರಿಕೆ ನಡೆಯುತ್ತಿದ್ದು, ಬೃಹತ್ ಪ್ರಮಾಣದಲ್ಲಿ ಹೊಲತಾಳು ಹಾಗೂ ಬಿಟ್ಟನಕುರಿಕೆ ಬೆಟ್ಟದ ತಪ್ಪಲಿನಲ್ಲಿ ರುದ್ರೇಶ್ವರ ಸ್ಟೋನ್‍ಕ್ರಷರ್,(ಗ್ಯಾಸ್ ಬಾಬು) ವಿಷಾದ್ ಕ್ರಷರ್, ದೇವಿಪ್ರಸಾದ್, ಬಾವಿಕಟ್ಟೆ ಸ್ಟೋನ್‍ಕ್ರಷರ್(ಹೆಚ್‍ಎಮ್‍ಎಸ್) ಎಂಬುವ 4-6 ಕಲ್ಲಿನ ಕ್ರಷರ್‍ಗಳು ದಿನದ 24 ಗಂಟೆಯೂ ಕೆಲಸ ನಿರ್ವಹಿಸುತ್ತಿದ್ದು, ಒಂದೊಂದು ಕಲ್ಲಿನ ಗಣಿಗಾರಿಕೆ ಸ್ಥಳದಲ್ಲಿ 5-6 ಕ್ರಷರ್ ಮಿಷನ್ ಜೋಡಿಸಿ ನೂರಾರು ಲೋಡ್‍ನಷ್ಟು ಜಲ್ಲಿ ಎಮ್‍ಸ್ಯಾಂಡ್ ಉತ್ಪತ್ತಿಯಾಗುತ್ತಿದೆ.

          ಕಲ್ಲಿಗಣಿಗಾರಿಕೆ ತೀವ್ರತೆ ಎಷ್ಟಿದೆ ಎಂದರೆ ದಿನ 24 ಗಂಟೆಯೂ ಕ್ರಷರ್‍ಗಳು ಕೆಲಸ ನಿರ್ವಹಿಸುತ್ತಿದ್ದು, 5-6 ಕ್ರಷರ್ ಜೋಡಣೆ ಒಂದೊಂದು ಪ್ರದೇಶದಲ್ಲಿ ಜೋಡಿಸಿ ಬೃಹತ್‍ಕಾರ ಬೆಟ್ಟಗಳನ್ನು 2 ವರ್ಷಗಳಲ್ಲಿ ಕರಗಿಸುವಷ್ಟು ಕೆಲಸವಾಗಿದೆ ಅಂದರೆ ಇಲ್ಲಿನ ಕೆಲಸದ ತೀವ್ರತೆ ಅರಿಯಬೇಕು, ದೊಡ್ಡದೊಡ್ಡ ಬೆಟ್ಟಗಳು ಕರಗಿ ಹೋಗುತ್ತಿವೆ , ಕಲ್ಲಿನ ಗಣಿಗಾರಿಕೆಗೆ ಬಳಸುವಂತಹ ಸಿಡಿಮದ್ದಿನಿಂದ

         ಕಿಲೋಮೀಟರ್‍ಗಟ್ಟಲೇ ಭೂಮಿ ಕಂಪಿಸಿ ಕೆಲವು ಮನೆ ತೋಟದ ಮನೆಗಳು ಬಿರುಕು ಬಿಟ್ಟರೆ, ಸಿಡಿಮದ್ದಿನಿಂದ ಸ್ಪೋಟಿಸಿದ ನಂತರ ಹೊರ ಬರುವ ಧೂಳಿನ ಕಣ 2-3 ಕಿಲೋಮೀಟರ್ ರೈತರ ಬೆಳೆ ಮೇಲೆ ಕುಳಿತು ಬೆಳೆ ನಾಶವಾಗಿ ಜೊತೆಗೆ ಈ ಧೂಳು ನೀರಿಗೂ ಮಿಶ್ರಣವಾಗಿ ಕಲುಷಿತ ನೀರು ವಾಯು ಮಾಲಿನ್ಯದಿಂದ ಇಲ್ಲಿನ ಜನ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

           ಈ ಕಲ್ಲಿನ ಗಣಿಗಾರಿಕೆಯಿಂದ ಪ್ರತಿ ದಿನ 500-600 ರಷ್ಟು ಲಾರಿ ಲೋಡ್ ಜಲ್ಲಿಕಲ್ಲು, ಎಮ್‍ಸ್ಯಾಂಡ್ ಹೊತ್ತ ಲಾರಿಗಳು ಸಾಗುತ್ತಿದ್ದು, ಗಣಿ ಮತ್ತು ಭೂವಿಜ್ಞಾನದಿಂದ 16 ಟನ್ ನಷ್ಟು ಭಾರ ಹೊತ್ತ ಲಾರಿಗಳಿಗೆ ಮಾತ್ರ ಪರ್ಮಿಷನ್ ಇದ್ದರೂ ಈ ಲಾರಿಗಳು 30-35 ಟನ್ ನಷು ಭಾರ ಹೊತ್ತು ರಸ್ತೆಗೆ ಇಳಿಯುವುದರಿಂದ ದುರಸ್ತೆಯಾಗಿ 2-3 ತಿಂಗಳುಗಳಲ್ಲಿ ರಸ್ತೆ ಹಾಳಾಗಿ ಆಳುದ್ದ ಗುಂಡಿಗಳು ಬಿದ್ದು, ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುವುದಲ್ಲದೇ 500-600 ಲಾರಿಗಳು ರಾತ್ರಿ ಹಗಲೆನ್ನದೇ ವೇಗವಾಗಿ ಸಂಚರಿಸುತ್ತಿರುವುದು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರ ಪ್ರಯಾಣಕ್ಕೆ ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದ್ದು, ರಸ್ತೆ ಸಂಚಾರ ಸಹ ದುಸ್ತಿರವಾಗಿದೆ ಎಂದು ಸಾರ್ವಜನಿಕರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

          ಈ ಭಾಗದಲ್ಲಿ ನಡೆಯುತ್ತಿರುವ ಕಲ್ಲಿನಗಣಿಗಾರಿಕೆ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಕೆಲಸ ನಿರ್ವಹಿಸುತ್ತಿದ್ದು, ಎಲ್ಲಾ ಕಾನೂನುಗಳು ನಿಯಮಕ್ಕೆ ತಾಳೆಯೇ ಹೊಂದುತ್ತಿಲ್ಲ, ಇವರು ಪಡೆದಿರುವ ಕಾನೂನಾತ್ಮಕ ಕೆಲವೊಂದು ನಿಯಮಾನುಸಾರವಾಗಿ ನಡೆಯದೇ ಎಲ್ಲಾ ವ್ಯವಹಾರಗಳು ಬೃಹತ್‍ಕಾರವಾಗಿಯೇ ನಡೆಯುತ್ತಿದೆ. ಕ್ರಷರ್ ಮಾಲಿಕರು ಬಂಡವಾಳ ಶಾಹಿಗಳಾಗಿರುವುದರಿಂದ ಯಾರು ವಿರೋಧ ವ್ಯಕ್ತಪಡಿಸಿದರೂ ಅವರ ಬಾಯಿ ಮುಚ್ಚಿಸುವ ಚಾಣಾಕ್ಷತನ ಇವರಲ್ಲಿ ಇರುವುದರಿಂದ ಸಾರ್ವಜನಿಕರ ಹಾಗೂ ರೈತರ ಹಿತಾಶಕ್ತಿ ಮಣ್ಣಿನಲ್ಲಿ ಮಣ್ಣಾಗಿದೆ ಎನ್ನಬಹುದಾಗಿದೆ.

          ಈ ಗಣಿಗಾರಿಕೆಯ ಸ್ಪೋಟಕ ಹಾಗೂ ಧೂಳಿಗೆ ಇಲ್ಲಿನ ರೈತರ ಬಾಳು ಸಂಕಷ್ಟದಲ್ಲಿದ್ದು, ಧೂಳು ನೂರಾರು ಹೆಕ್ಟರ್‍ಜಮೀನಿನ ಬೆಳೆಯ ಮೇಲೆ ಕುಳಿತು ಬಿತ್ತ ಬೆಳೆ ರೈತನ ಕೈ ಸೇರದೇ ಬೆಳೆ ನಷ್ಟ ಅನುಭವಿಸುತ್ತಿರುವುದು ಒಂದೆಡೆಯಾದರೆ ಧೂಳಿನ ಮೇವು ತಿಂದ 20-25 ಕ್ಕೂ ಹೆಚ್ಚು ಸಾಕುಪ್ರಾಣಿಗಳು, ಜಾನುವಾರುಗಳು ಅಸು ನೀಗಿದ್ದು, ಇತ್ತೀಚೆಗಷ್ಟೆ ಸಾವಿಗೀಡಾದ ಎಮ್ಮೆ, ಸೀಮೆ ಹಸುವನ್ನು ರೈತರು ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸಿದರಾದರೂ ಇವರ ಕೂಗು ಆ ಗ್ರಾಮಕ್ಕಷ್ಟೆ ಸೀಮಿತವಾಗಿ, ಯಾವುದೇ ಪ್ರಯೋಜನವಾಗದೆ ರೈತ ಬೆಳೆನಷ್ಟ, ಜಾನುವಾರು ನಷ್ಟ, ಕುಡಿಯುವ ನೀರುಕಲುಷಿತ, ಸೇವಿಸುವ ಗಾಳಿ ಕಲುಷಿತವಾಗಿ ಸಂಕ್ರಾಂಮಿಕ ರೋಗದಿಂದ ಬಳಲುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗಾಢ ನಿದ್ದೆಗೆ ಜಾರಿರುವ ಇಲಾಖೆಗಳು;-

       ಇದಕ್ಕೆ ಸಂಬಂಧಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿದ್ರಾವಸ್ಥೆಯಲ್ಲಿದ್ದು, ಸಾರ್ವಜನಿಕರ ಹಾಗೂ ರೈತರ ಅರ್ಜಿಗಳು ಹೋದರೂ ಕ್ಯಾರೆ ಎನ್ನದೇ ಡಸ್ಟ್‍ಬಿನ್ ಹಾಕುವ ಪ್ರವೃತ್ತಿ ಬೆಳೆಸಿಕೊಂಡಿದ್ದು, ಕಾನೂನಾತ್ಮಕವಾಗಿ ಇವರು ನೀಡಿರುವ ಅನುಮತಿಗೆ ಅನುಸಾರವಾಗಿ ಅಲ್ಲಿಗಣಿಗಾರಿಕೆ ನಡೆಯುತ್ತಿದೆಯೇ, ಸ್ಥಳ ಪರಿಶೀಲನೆ ನಡೆಸಿ ಯಾವ ಕ್ರಮ ತೆಗೆದುಕೊಂಡಿದ್ದಾರೆ ಎಂದು ಅವಲೋಕಿಸಿದರೆ ಅರೆಬರೆ ಉತ್ತರದಲ್ಲೇ ಅಧಿಕಾರಿಗಳು ಕಾಲಾಹರಣ ಮಾಡುತ್ತಿದ್ದಾರೆ, ಇನ್ನೂ ಜಿಲ್ಲಾಡಳಿತ ಈ ಬೃಹತ್‍ಕಾರವಾದ ಗಣಿಗಾರಿಕೆ ವಿರುದ್ದ ಯಾವ ಕ್ರಮ ತೆಗೆದುಕೊಂಡಿದ್ದಾರೆ ಎಂದು ನೋಡುವುದಾದರೆ ಅದೂ ಶೂನ್ಯ. ಇನ್ನು ತಾಲ್ಲೂಕ್ ಆಡಳಿತ ತಹಶೀಲ್ದಾರ್‍ಗೆ ಬರುವ ದೂರುಗಳು ನೆಪಮಾತ್ರಕ್ಕೆ ತನಿಖೆ, ಆ ಭಾಗದ ಆರ್‍ಐ ಮತ್ತು ವಿ.ಎ ಕಳುಹಿಸಿ ಸುಮ್ಮನಾಗುವ ಪ್ರವೃತ್ತಿ ಉಳಿದಂತೆ ಆರ್.ಟಿ,ಒ ಹಾಗೂ ಪೊಲೀಸ್ ಇಲಾಖೆ ಅತೀ ಭಾರ ಹೊತ್ತ ಮತ್ತು ಒಂದೇ ಲೈಸೆನ್ಸ್‍ಗೆ ಒಂದೇಗಾಡಿ ಹತ್ತಾರು ಬಾರಿಜಲ್ಲಿ ಸಾಗಿಸುವುದರ ಬಗ್ಗೆ ಯಾವುದೇ ಕ್ರಮ ಜರುಗಿಸದಿರುವುದು ಸಾರ್ವಜನಿಕರ ಅಸಮದಾನಕ್ಕೆ ಕಾರಣವಾಗಿದೆ,

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap