ಚಳ್ಳಕೆರೆ
ಇತ್ತೀಚಿನ ದಿನಗಳಲ್ಲಿ ಚಳ್ಳಕೆರೆ ಕ್ಷೇತ್ರ ಉತ್ತಮ ಅಭಿವೃದ್ಧಿ ಹೊಂದಿದೆ ಎಂಬ ಹೆಮ್ಮೆಯ ಹಿಂದೆಯೇ ಮೃತ್ಯುಗೆ ಆಹ್ವಾನ ನೀಡುವ ರಸ್ತೆಗಳ ಬಗ್ಗೆಯೂ ಸಹ ತುರ್ತಾಗಿ ಸರ್ಕಾರ ಗಮನಹರಿಸಬೇಕೆಂದು ಪ್ರಗತಿಪರ ಚಿಂತಕ ಸಿ.ಪಿ.ಮಹೇಶ್‍ಕುಮಾರ್ ತಿಳಿಸಿದ್ದಾರೆ.
ಅವರು, ಪತ್ರಿಕೆಯೊಂದಿಗೆ ಮಾತನಾಡಿ, ಭಾನುವಾರ ಬೆಳಗಿನ ಸಮಯದಲ್ಲಿ ನಾಯಕನಹಟ್ಟಿ ರಸ್ತೆಯಲ್ಲಿ ಮದುವೆ ಕಾರ್ಯಕ್ಕೆ ಬೈಕ್‍ನಲ್ಲಿ ಆಗಮಿಸುತ್ತಿದ್ದ ಸಂದರ್ಭದಲ್ಲಿ ಕಿರಿದಾದ ರಸ್ತೆ ಹಿನ್ನೆಲೆಯಲ್ಲಿ ಬೈಕ್ ಪಲ್ಟಿಯಲ್ಲಿ ಮಹಿಳೆ ಮೃತಪಟ್ಟಿದ್ದು, ಇದಕ್ಕೆ ರಸ್ತೆಯ ಎರಡೂ ಭಾಗಗಳಲ್ಲಿರುವ ಹದಗೆಟ್ಟ ರಸ್ತೆ, ಗುಂಡಿಗಳೇ ಕಾರಣವೆಂದು ಅವರು ಆರೋಪಿಸಿದ್ಧಾರೆ. ನಗರದ ದುಗ್ಗಾವರ ರಸ್ತೆ, ಚಿತ್ರದುರ್ಗ ರಸ್ತೆ, ಪಾವಗಡ ರಸ್ತೆಯಲ್ಲೂ ಸಹ ಇಂತಹ ಅಪಾಯದ ಸ್ಥಿತಿ ಇದ್ದು, ಈ ರಸ್ತೆಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಅಪಘಾತಗಳಿಗೆ ಶಿಥಿಲಗೊಂಡ ರಸ್ತೆಗಳೇ ಕಾರಣವೆನ್ನುತ್ತಾರೆ.
ವಿಶೇಷವಾಗಿ ಪಾವಗಡ ಮತ್ತು ಬಳ್ಳಾರಿ ರಸ್ತೆಯ ಹೊರಭಾಗದಲ್ಲಿ ರಸ್ತೆಯ ಎರಡೂ ಬದಿ ಹದಗೆಟ್ಟಿದ್ದು ವಾಹನ ಸಂಚಾರವು ವೇಗವಾಗಿ ಬರುವಾಗ ಎದುರುಗಡೆ ವಾಹನಕ್ಕೆ ದಾರಿ ಮಾಡಿಕೊಡಲು ಹೋಗಿ ಆಕಸ್ಮಿಕವಾಗಿ ವಾಹನವನ್ನು ಎಡಕ್ಕೆ ಚಲಿಸಿದಾಗ ಅಲ್ಲಿರುವ ಗುಂಡಿ ಮತ್ತು ಆಳವಾದ ತಿರುವಿನ ವಾಹನ ಅಪಘಾತಕ್ಕೆ ಕಾರಣವಾಗುತ್ತದೆ. ಭಾನುವಾರ ಬೆಳಗಿನ ಜಾವ ಬಳ್ಳಾರಿ ರಸ್ತೆಯಲ್ಲೂ ಸಹ ವಾಹನ ಸವಾರನೊಬ್ಬ ಇಂತಹವುದೇ ಅಪಘಾತದಿಂದ ಬಿದ್ದು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ಧಾನೆ.
ಭಾನುವಾರ ಬೆಳಗ್ಗೆ ನಾಯಕನಹಟ್ಟಿ ರಸ್ತೆಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಮನಮೈನಹಟ್ಟಿಯ ಮೀನಾಕ್ಷಮ್ಮ(35) ಮೃತಪಟ್ಟಿದ್ದು, ರಸ್ತೆಯಲ್ಲಿದ್ದ ಆಳವಾದ ಕಂದಕವೇ ಈ ಅಪಘಾತಕ್ಕೆ ಕಾರಣವೆನ್ನಲಾಗಿದೆ. ಅದ್ದರಿಂದ ತಾಲ್ಲೂಕು ಆಡಳಿತ ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇಂತಹ ಹದಗೆಟ್ಟ ರಸ್ತೆಯ ಬಗ್ಗೆ ಮಾಹಿತಿ ಪಡೆದು ತುರ್ತು ರಿಪೇರಿ ಮಾಡಿದಲ್ಲಿ ವಾಹನ ಅಪಘಾತಗಳು ನಿಯಂತ್ರಣಗೊಳ್ಳುತ್ತವೆಯಲ್ಲದೆ ಮರಣ ಹೊಂದುವವರ ಸಂಖ್ಯೆಯೂ ಸಹ ನಿಯಂತ್ರಣಗೊಳ್ಳುತ್ತದೆ. ಈ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ವಾಹನಗಳ ಅಪಘಾತವನ್ನು ನಿಯಂತ್ರಿಸಲು ಕಾಯೋನ್ಮುಖವಾಗಬೇಕಿದೆ.