ಚಿಕ್ಕನಾಯಕನಹಳ್ಳಿ :
ತಾಲ್ಲೂಕಿನ ಕೆರೆಗಳಿಗೆ ಹರಿಯುವ ಎತ್ತಿನಹೊಳೆ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಂದು ನೂರು ಕೋಟಿ ರೂ ಮೀಸಲಿಟ್ಟಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ಶೆಟ್ಟಿಕೆರೆ ಹೋಬಳಿಯ ಗೋಡೆಕೆರೆ ಗೇಟ್ ಹತ್ತಿರ ನಡೆದ ಎತ್ತಿನಹೊಳೆ ನೀರಾವರಿ ಯೋಜನೆಯ ಎರಡನೇ ಹಂತದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಅವರು, ಎತ್ತಿನಹೊಳೆ ಯೋಜನೆಯು ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗೆ ಹೋಗುವ ಕಾಮಗಾರಿಯಾಗಿದೆ. ಈ ಯೋಜನೆಯು ತಿಪಟೂರು, ಚಿ.ನಾ.ಹಳ್ಳಿ ತಾಲ್ಲೂಕುಗಳಲ್ಲಿ ಹೋಗುತ್ತಿತ್ತು ಹೊರತು ತಾಲ್ಲೂಕಿನ ಕೆರೆಗಳಿಗೆ ನೀರು ಬಿಡಲು ಯೋಜನೆಯಲ್ಲಿ ಇರಲಿಲ್ಲ, ನಾನು ಮತ್ತು ತಿಪಟೂರಿನ ಶಾಸಕರಾದ ಬಿ.ಸಿ. ನಾಗೇಶ್ ಒತ್ತಾಯಿಸಿ ತಾಲ್ಲೂಕಿಗೂ ಪಾಲು ಸಿಗುವಂತೆ ಮಾಡಿದ್ದೇವೆ ಎಂದರು.
ಭದ್ರ ಮೇಲ್ದಂಡೆ, ಹೇಮಾವತಿ, ಎತ್ತಿನಹೊಳೆ ಈ ಮೂರು ಯೋಜನೆಯಿಂದ 112 ಕೆರೆಗಳಿಗೆ ನೀರು ಪೂರೈಕೆಯಾಗಲಿದೆ. ಹೇಮಾವತಿ ಯೋಜನೆಯಲ್ಲಿ 26 ಕೆರೆಗಳು, ಭದ್ರ ಮೇಲ್ದಂಡೆ, ಎತ್ತಿನಹೊಳೆ ಸೇರಿದಂತೆ 96 ಕೆರೆಗಳಿಗೆ ನೀರು ತುಂಬುವ ಸರ್ಕಾರದ ಕೆಲಸ ಪ್ರಗತಿಯಲ್ಲಿದೆ. ಇನ್ನೂ ಎರಡು ವರ್ಷದಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿ ಸಂಪೂರ್ಣವಾಗಲಿದೆ. ಎತ್ತಿನಹೊಳೆ ಕಾಮಗಾರಿಗೆ ಬೇಕಾಗುವ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಗುತ್ತಿಗೆದಾರರು ಮತ್ತು ರೈತರು ಮಾತುಕತೆ ನಡೆಸಿ ಭೂಮಿ ಪರಿಹಾರವನ್ನು ಫಲಾನುಭವಿಗಳು ಪಡೆಯಬೇಕಾಗಿದೆ.
ಈಗಾಗಲೇ ಭೂಮಿಯಲ್ಲಿರುವ ಮರಗಳನ್ನು ಹೊರತುಪಡಿಸಿ ಇರುವ ಬೆಳೆಗಳಿಗೆ ಪರಿಹಾರವಾಗಿ ಇಪ್ಪತ್ತೈದು ಸಾವಿರ ರೂಗಳನ್ನು ನೀಡಲಾಗಿದೆ. ಭೂಸ್ವಾಧೀನ ಕಾಯ್ದೆಯಲ್ಲಿ ಜಮೀನಿನ ಬೆಲೆ ಮಾರುಕಟ್ಟೆ ಆಧಾರಿತವಾಗಿ ನಾಲ್ಕು ಪಟ್ಟು ನಿಗದಿಪಡಿಸಿ ಪರಿಹಾರವನ್ನು ನೀಡಲಾಗುವುದು, ಸಣ್ಣ ನೀರಾವರಿ ಇಲಾಖೆಯಿಂದ ಈಗಾಗಲೇ 260ಕೋಟಿ ಅನುದಾನ ನೀಡಲಾಗಿದೆ ಎಂದರು.
ರೈತ ಮುಖಂಡ ಮಲಗೊಂಡನಹಳ್ಳಿ ಪ್ರಸನ್ನಕುಮಾರ್ ಮಾತನಾಡಿ ಎತ್ತಿನಹೊಳೆ ಯೋಜನೆಯ ಕಾಮಗಾರಿಯು ಸಚಿವ ಜೆ.ಸಿ.ಮಾಧುಸ್ವಾಮಿರವರ ಕ್ರಿಯಾಶೀಲತೆಯಿಂದಾಗಿ ನಡೆಯುತ್ತಿದೆ, ಜಮೀನು ನೀಡಿದ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಭೂಸ್ವಾಧೀನದ ಪರಿಹಾರ ಹಣವನ್ನು ಸರ್ಕಾರದಿಂದ ಸಿಗಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಲಿದ್ದಾರೆ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ತುಮಕೂರು ಹಾಲು ಒಕ್ಕೂಟದ ಹಳೇಮನೆ ಶಿವನಂಜಪ್ಪ, ಜೆ.ಸಿ.ಪುರ ಗ್ರಾ.ಪಂ. ಅಧ್ಯಕ್ಷ ಮಹಾಲಿಂಗಯ್ಯ, ತಿಮ್ಲಾಪುರ ಶಂಕರಣ್ಣ, ಜೆ.ಸಿ.ಪುರದ ಗೋವಿಂದರಾಜು ಹಾಗೂ ಕಾಮಗಾರಿಯ ಗುತ್ತಿಗೆದಾರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ