ಹಾವೇರಿ
ತಂಬಾಕು ಉತ್ಪನ್ನಗಳ ಸೇವೆನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಹೆಚ್ಚಿನ ಹೊಣೆಗಾರಿಕೆ ವಿವಿಧ ಸರ್ಕಾರಿ ಅಧಿಕಾರಿಗಳ ಮೇಲಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ ಅವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾ ಆರೋಗ್ಯ ಭವನದಲ್ಲಿ ಮಂಗಳವಾರ ಜಿಲ್ಲೆಯ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಹಾಗೂ ಸರ್ಕಾರೇತರ ಸಂಘ-ಸಂಸ್ಥೆಗಳ ಪ್ರತಿನಿಧಿಗಳಿಗೆ ರಾಷ್ಟ್ರೀಯ ತಂಬಾಕು ನಿಯಂತ್ರಣ, ಕೋಟ್ಪಾ ಕಾಯ್ದೆ-2003 ಹಾಗೂ ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮ ಮತ್ತು ಚಿಕಿತ್ಸೆ ಸೌಲಭ್ಯಗಳ ಕುರಿತಂತೆ ಆಯೋಜಿಸಲಾದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ. ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಧೂಮಪಾನ ಮುಕ್ತ ವಲಯ ಎಂದು ಘೋಷಣೆ ಮಾಡಬೇಕು. ತಂಬಾಕು ಮುಕ್ತ ಕ್ಯಾಂಪಸ್ ಅನುಷ್ಠಾನಕ್ಕೆ ತಾವೆಲ್ಲ ಮುಂದಾಗಬೇಕು. ಎಲ್ಲ ಕಚೇರಿಗಳಲ್ಲಿ ಈ ಕುರಿತಂತೆ ಧೂಮಪಾನ ನಿಷೇಧಿಸಲಾಗಿದೆ ಎಂಬ ನಾಮಫಲಕವನ್ನು ಪ್ರದರ್ಶಿಸುವುದು ಕಡ್ಡಾಯವಾಗಿದೆ ಎಂದು ಹೇಳಿದರು.
ರಾಜ್ಯ ತಂಬಾಕು ನಿಯಂತ್ರಣ ಕೋಶದ ವಿಭಾಗೀಯ ತಂಬಾಕು ನಿಯಂತ್ರಣ ಸಲಹೆಗಾರ ಮಾಲತೇಶ ಉಳ್ಳಾಗಡ್ಡಿ ಅವರು ಮಾತನಾಡಿ, ನಿಷೇಧಿತ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ ಕೂಡಲೇ ರೂ.200ರವರೆಗೆ ದಂಡ ವಿಧಿಸಬಹುದು ಹಾಗೂ 18 ವರ್ಷದೊಳಗಿನ ವ್ಯಕ್ತಿಗಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಹಾಗೂ ಶಿಕ್ಷಣ ಸಂಸ್ಥೆಗಳ 100 ಮೀಟರ್ ಅಂತರದ ಒಳಗೆ ತಂಬಾಕು ಉತ್ಪನ್ನಗಳ ಮಾರಾಟ ಶಿಕ್ಷಾರ್ಹ ಅಪರಾಧವಾಗಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸರ್ಕಾರಿ ಅಧಿಕಾರಿ, ಸಿಬ್ಬಂದಿಗಳು ಹಾಗೂ ಸಂಘ-ಸಂಸ್ಥೆ ಪ್ರತಿನಿಧಿಗಳು ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡರು.
ಕಾರ್ಯಕ್ರಮ ಜಿಲ್ಲಾ ಸಲಹೆಗಾರ ಡಾ.ಸಂತೋಷ್ ದಡ್ಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ 2018-19ನೇ ಸಾಲಿನಿಂದ ಜಿಲ್ಲೆಯಲ್ಲಿ ಜಾರಿಗೆ ಬಂದಿದೆ. ಆರೋಗ್ಯಕ್ಕೆ ಹಾನಿಕರವಾಗಿರುವ ತಂಬಾಕು ಉತ್ಪನ್ನಗಳ ಸೇವನೆಯನ್ನು ತಡೆಯುವ ನಿಟ್ಟಿನಲ್ಲಿ ಸಾಮೂಹಿಕ ಸಹಭಾಗಿತ್ವದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನಾವೆಲ್ಲ ಕೈಗೊಳ್ಳಬೇಕಾಗಿದೆ.
ಆ ನಿಟ್ಟಿನಲ್ಲಿ ಈ ಕಾರ್ಯಾಗಾರದ ಮೂಲಕ ಎಲ್ಲ ಅಧಿಕಾರಿಗಳು ನೌಕರರಿಗೆ ಅರಿವು ಮೂಡಿಸಲು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ.ಸುಹೀಲ್ ಹಾಗೂ ಡಾ.ಆಸೀಪ್ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳ ರಸ್ತೆ ಸಾರಿಗೆ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿಗಳು, ಖಾಸಗಿ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು, ಸ್ವಯಂ ಸೇವಾ ಸಂಘಗಳ ಪ್ರತಿನಿಧಿಗಳು ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಸಾಮಾಜಿಕ ಕಾರ್ಯಕರ್ತ ದಾದಾಪೀರ ಹೂಲಿಕಟ್ಟಿ ಅವರು ಸ್ವಾಗತಿಸಿ, ವಂದಿಸಿದರು.