ಹುಳಿಯರು
ಹುಳಿಯಾರು ಸಮೀಪದ ಅಂಕಸಂದ್ರ ಗೊಲ್ಲರಹಟ್ಟಿಯಲ್ಲಿ ನೀರಿಗೆ ಬರ ಸೃಷ್ಟಿಯಾಗಿದೆ. ಇರುವ ಕೊಳವೆಬಾವಿಗಳೆಲ್ಲ ಬತ್ತಿ ಹೋಗಿ, ಕಿಲೋಮೀಟರ್ ದೂರದಿಂದ ನೀರನ್ನು ಹೊತ್ತು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟಾದರೂ ತಾಲೂಕು ಆಡಳಿತ ಟ್ಯಾಂಕರ್ ನೀರನ್ನು ಕೊಡಲು ಮೀನಮೇಷ ಎಣಿಸುತ್ತಿದೆ.
ಒಟ್ಟು 70 ಮನೆಗಳಿರುವ ಇಲ್ಲಿ 1 ಕೊಳವೆಬಾವಿ ಸಿಸ್ಟನ್‍ಗಳಿಗೆ ತುಂಬಿಸಿ ನೀರು ಕೊಡಲಾಗುತ್ತಿತ್ತು. ಆದರೆ, ಕಳೆದ ವರ್ಷ ಈ ಕೊಳವೆಬಾವಿಯಲ್ಲಿ ಸಂಪೂರ್ಣ ನೀರು ಬತ್ತಿ ನೀರಿನ ಹಾಹಾಕಾರ ಸೃಷ್ಠಿಯಾಗಿತ್ತು. ನಂತರ ಅಂಕಸಂದ್ರ ಮತ್ತು ಗೊಲ್ಲರಹಟ್ಟಿ ಮಧ್ಯೆ ಕೊಳವೆಬಾವಿ ಕೊರೆದು ಎರಡೂ ಊರಿಗೆ ನೀರು ಕೊಡಲಾಗುತ್ತಿತ್ತು. ಈಗ ಈ ಕೊಳವೆಬಾವಿಯೂ ಬತ್ತಿ ನೀರಿನ ಸಮಸ್ಯೆ ಸೃಷ್ಠಿಯಾಗಿದೆ.
ಪರಿಣಾಮ ನೀರು ತರುವುದಕ್ಕೆ ಸೈಕಲ್‍ಗಳಲ್ಲಿ ಹಾಗೂ ದ್ವಿಚಕ್ರ ವಾಹನಗಳಲ್ಲಿ ಅಲೆಯಬೇಕಾಗಿದೆ. ರಾತ್ರಿಯಾದರೂ ಸರಿ ತ್ರೀಫೇಸ್ ವಿದ್ಯುತ್ ಬಂದಾಗ ತೋಟಗಳಿಗೆ ಹೋಗಿ ಅಲ್ಲಿನ ಮಾಲೀಕರನ್ನು ಕಾಡಿಬೇಡಿ ನೀರು ತರುವ ಅನಿವಾರ್ಯತೆ ಸೃಷ್ಠಿಯಾಗಿದೆ . ಮಹಿಳೆಯರಿಗಂತೂ ಕೊಳವೆಬಾವಿಗಳಲ್ಲಿ ನೀರು ದೊರೆತರೆ ಅಲ್ಲಿಂದ ತಂದು ಅಡುಗೆ ಮಾಡುವಂತಾಗಿದೆ ಎಂದು ಗ್ರಾಮಸ್ಥರಾದ ರಾಜಣ್ಣ ಅಳಲು ತೋಡಿಕೊಳ್ಳುತ್ತಾರೆ.
ಕುಡಿಯಲು ಒಂದಿಷ್ಟು ನೀರು ಕೊಡುವಂತೆ ಜನಪ್ರತಿನಿಧಿಗಳಿಗೆಲ್ಲ ಮನವಿ ಮಾಡಲಾಗಿದೆ. ಯಾರೂ ಇತ್ತ ಗಮನ ಹರಿಸುತ್ತಿಲ್ಲ. ಅಧಿಕಾರಿಗಳಿಗೆ ಹೇಳಿದರೂ ನೀತಿ ಅಂಹಿತೆ ಇರುವುದರಿಂದ ಟ್ಯಾಂಕರ್ ನೀರು ಕೊಡಲು ಬರುವುದಿಲ್ಲ ಎಂದು ಸಬೂಬು ಹೇಳುತ್ತಾರೆ. ಹಾಗಾಗಿ ದಿನದಿಂದ ದಿನಕ್ಕೆ ನೀರಿನ ಕೊರತೆ ಹೆಚ್ಚಾಗುತ್ತಿದೆ. ಪ್ರತಿಭಟನೆ ಮಾಡದೇ ಬೇರೆ ವಿಧಿ ಇಲ್ಲ ಎಂಬಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ನೀತಿ ಸಂಹಿತೆಯಲ್ಲಿ ಈಗಾಗಲೇ ಸಡಿಲಿಕೆ ಮಾಡಿದ್ದು ಕುಡಿಯುವ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಬಹುದಾಗಿದೆ. ಹಾಗಾಗಿ ತಹಶೀಲ್ದಾರರು ತಕ್ಷಣ ಈ ಕುಗ್ರಾಮದ ನೀರಿನ ಸಮಸ್ಯೆ ಬಗೆಹರಿಸಿ ನೆಮ್ಮದಿಯ ಜೀವನ ನಡೆಸುವಂತೆ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.