ಟಿಎಪಿಸಿಎಂಎಸ್‍ಗೆ 41 ಲಕ್ಷ ರೂ.ಆದಾಯ

ಚಿತ್ರದುರ್ಗ:

    ಚಿತ್ರದುರ್ಗ ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘ ಈಗ 41 ಲಕ್ಷ ರೂ.ಗಳ ಲಾಭದಲ್ಲಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಎಂ.ಮಂಜುನಾಥಪ್ಪ ಕೋಗುಂಡೆ ತಿಳಿಸಿದರು.

     ಜೂ.29 ರ ಇಂದು ನಡೆಯಲಿರುವ ಸಂಘದ 2018-19 ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯ ಕುರಿತು ಟಿ.ಎ.ಪಿ.ಸಿ.ಎಂ. ಎಸ್.ನಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು 1959 ರಿಂದ ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತ ಬರುತ್ತಿರುವ ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘ 1961 ರಲ್ಲಿ ಆರ್.ಎಂ.ಸಿ.ರಸ್ತೆಯಲ್ಲಿ ಭವ್ಯವಾದ ಕಟ್ಟಡವನ್ನು ಹೊಂದಿತು.

     ಎರಡು ಉಗ್ರಾಣಗಳನ್ನು ನಿರ್ಮಿಸಿಕೊಂಡು ಚಿಲ್ಲರೆ ಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಎ.ಪಿ.ಎಂ.ಸಿ.ಆವರಣದಲ್ಲಿರುವ ಸಿ.ಬ್ಲಾಕ್‍ನಲ್ಲಿ ಎಂಟು ಗೋಡಾನ್‍ಗಳನ್ನು ನಿರ್ಮಿಸಿಕೊಂಡು ಸಂಘದ ಸದಸ್ಯರಿಗೆ ಬೇಕಾದ ರಸಗೊಬ್ಬರ, ಬಿತ್ತನೆ ಬೀಜಗಳನ್ನು ಖಾಸಗಿ ವರ್ತಕರಿಗಿಂತ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರು.

     2018-19 ನೇ ಸಾಲಿನಲ್ಲಿ 52.73 ಲಕ್ಷ ರೂ.ವೆಚ್ಚದಲ್ಲಿ ರೈತರಿಗೆ ಬೇಕಾಗುವ ಕೃಷಿ ಸಲಕರಣೆಗಳಾದ ಪಿ.ವಿ.ಸಿ.ಮತ್ತು ಜಿ.ಎ.ಪೈಪ್‍ಗಳು, ಇನ್ನಿತರೆ ಬಿಡಿಭಾಗಗಳು ಹಾಗೂ ಗೃಹೋಪಯೋಗಿ ಸಾಮಾಗ್ರಿಗಳನ್ನು ವಿತರಿಸಲಾಗಿದೆ. 1446 ರೈತ ಸದಸ್ಯರು, 31 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸದಸ್ಯರುಗಳನ್ನೊಂದಿದೆ. ಹದಿನಾಲ್ಕು ಲಕ್ಷ 67 ಸಾವಿರ ರೂ.ಗಳ ಷೇರು ಬಂಡವಾಳವಿದ್ದು, ಕಳೆದ ಹನ್ನೆರಡು ವರ್ಷಗಳಿಂದಲೂ ಸದಸ್ಯರುಗಳಿಗೆ ಶೇ.25 ರಷ್ಟು ಷೇರ್ ಡಿವಿಡೆಂಟ್ ನೀಡುತ್ತ ಬರುತ್ತಿದೆ ಎಂದು ಮಾಹಿತಿ ನೀಡಿದರು.

     ಎಸ್.ಎಸ್.ಎಲ್.ಸಿ.ಮತ್ತು ಪಿ.ಯು.ಸಿ.ಯಲ್ಲಿ ಶೇ.80 ರಷ್ಟು ಅಂಕಗಳನ್ನು ಗಳಿಸಿರುವ ರೈತ ಮಕ್ಕಳಿಗೆ ಪ್ರತಿ ವರ್ಷವೂ ಪ್ರತಿಭಾ ಪುರಸ್ಕಾರ ನೀಡಿ ಒಂದು ಸಾವಿರ ರೂ.ಗಳ ಚೆಕ್ ನೀಡಿ ಪ್ರೋತ್ಸಾಹಿಸುತ್ತ ಬರಲಾಗುತ್ತಿದೆ. ಸಂಘದ ಸದಸ್ಯರು ಯಾರಾದರೂ ಮರಣ ಹೊಂದಿದಾಗ ಅಂತ್ಯಸಂಸ್ಕಾರಕ್ಕಾಗಿ ಮೂರು ಸಾವಿರ ರೂ.ಗಳನ್ನು ನೀಡಲಾಗುವುದು. ಮುಂದಿನ ದಿನಗಳಲ್ಲಿ ಭರಮಸಾಗರ ಮತ್ತು ಭೀಮಸಮುದ್ರದಲ್ಲಿ ರಸಗೊಬ್ಬರ ಶಾಖೆಗಳನ್ನು ತೆರೆದು ರೈತರಿಗೆ ಇನ್ನು ಹೆಚ್ಚಿನ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕೃಷಿ ಪರಿಕರಗಳನ್ನು ವಿತರಿಸುವ ಉದ್ದೇಶವಿದೆ. ಸರ್ಕಾರದಿಂದ ಯಾವುದೇ ಷೇರಿಲ್ಲದೆ ಸ್ವಂತ ಬಂಡವಾಳದಿಂದ ಸಂಘವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ ಎಂದರು.

     ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ನಿರ್ದೇಶಕರುಗಳಾದ ಟಿ.ಸಣ್ಣತಿಮ್ಮಪ್ಪ, ಎಂ.ಸಿದ್ದಪ್ಪ, ಎನ್.ಜಿ.ಷಣ್ಮುಖಪ್ಪ, ಟಿ.ನಾಗರಾಜ್, ಬಿ.ಲೋಲಾಕ್ಷಮ್ಮ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link