ಚಿತ್ರದುರ್ಗ:
ಗಣಿತ ಎಂದರೆ ಕಬ್ಬಿಣದ ಕಡಲೆ ತುಂಬಾ ಕಷ್ಟವಾದುದು ಎನ್ನುವುದು ಸರ್ವೆ ಸಾಮಾನ್ಯ. ಆದರೆ ಶಿಕ್ಷಕರುಗಳು ಕಷ್ಟವಾದ ವಿಷಯವನ್ನು ಸುಲಭವಾಗಿ ಮಕ್ಕಳಿಗೆ ಬೋಧಿಸುವ ಸಾಮಥ್ರ್ಯ ಬೆಳೆಸಿಕೊಳ್ಳಬೇಕು ಎಂದು ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರು ಹಾಗೂ ಪದನಿಮಿತ್ತ ಸಹ ನಿರ್ದೇಶಕರಾದ ಎಂ.ರೇವಣಸಿದ್ದಪ್ಪ ಗಣಿತ ಶಿಕ್ಷಕರುಗಳಿಗೆ ಕರೆ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಿಂದ ಜಿಲ್ಲೆಯ ಪ್ರೌಢಶಾಲಾ ಗಣಿತ ಶಿಕ್ಷಕರುಗಳಿಗೆ ತ.ರಾ.ಸು. ರಂಗ ಮಂದಿರದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಪ್ರೌಢಶಾಲೆಯ ಬಹಳಷ್ಟು ವಿದ್ಯಾರ್ಥಿಗಳು ಗಣಿತ ಕಷ್ಟ ಎಂದು ಹೇಳುವುದು ಸಹಜ. ಶಿಕ್ಷಕರುಗಳು ಕಠಿಣವಾದ ವಿಷಯಗಳನ್ನು ಮಕ್ಕಳ ಮನಸ್ಸಿಗೆ ಮುಟ್ಟುವಂತೆ ಪಾಠ ಮಾಡಿದಾಗ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಆಗ ಫಲಿತಾಂಶದಲ್ಲಿ ಸುಧಾರಣೆಯಾಗಲಿದೆ.
ಗಣಿತ ವಿಷಯ ಪರಿವೀಕ್ಷಕಿ ಎಸ್.ಟಿ.ಸವಿತ ಗಣಿತ ಶಿಕ್ಷಕರುಗಳಿಗೆ ಕಾರ್ಯಾಗಾರ ಹಮ್ಮಿಕೊಂಡಿರುವುದು ಅತ್ಯುತ್ತಮವಾದ ಕೆಲಸ. ಇದೇ ರೀತಿ ಬೇರೆ ಎಲ್ಲಾ ವಿಷಯಗಳ ಪರಿವೀಕ್ಷಕರುಗಳು ತಮ್ಮ ತಮ್ಮ ವಿಷಯಗಳ ಕುರಿತು ಶಿಕ್ಷಕರುಗಳಿಗೆ ಕಾರ್ಯಾಗಾರ ನಡೆಸಿದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಸಹಕಾರಿಯಾಗಲಿದೆ ಎಂದು ಮನವಿ ಮಾಡಿದರು.
ಜಿ.ಪಂ.ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಅನಂತರವರು ಮಾತನಾಡಿ ಗಣಿತ ವಿಷಯದ ಬಗ್ಗೆ ಮಕ್ಕಳಲ್ಲಿರುವ ಭಯವನ್ನು ಹೋಗಲಾಡಿಸುವ ಕೆಲಸವನ್ನು ಮೊದಲು ಶಿಕ್ಷಕರುಗಳು ಮಾಡಬೇಕಿದೆ. ಸರ್ಕಾರಿ ಶಾಲೆಗಿಂತ ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಪ್ರತಿವರ್ಷವೂ ಹೆಚ್ಚಿನ ಫಲಿತಾಂಶ ಬರುತ್ತಿರುವುದು ನೋವಿನ ಸಂಗತಿ. ಸರ್ಕಾರ ನಿಮಗೆ ಕೈತುಂಬಾ ಸಂಬಳ ನೀಡುತ್ತದೆ.
ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಬಲಿಷ್ಟ ದೇಶ ಕಟ್ಟುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಶಿಕ್ಷಕರುಗಳಿಗೆ ತಿಳಿಸಿದರು.
ಸರ್ಕಾರಿ ಶಾಲೆ ಅದರಲ್ಲೂ ಕನ್ನಡ ಮಾಧ್ಯಮದ ಮಕ್ಕಳು ದಡ್ಡರು, ಖಾಸಗಿ ಶಾಲೆ ಆಂಗ್ಲ ಮಾಧ್ಯಮದ ಮಕ್ಕಳು ಬುದ್ದಿವಂತರು ಎನ್ನುವ ತಪ್ಪು ಕಲ್ಪನೆ ಶಿಕ್ಷಕರು ಹಾಗೂ ಪೋಷಕರುಗಳಲ್ಲಿದೆ. ಮೊದಲು ಇದು ನಿವಾರಣೆಯಾದರೆ ಚಿತ್ರದುರ್ಗ ಜಿಲ್ಲೆ ಫಲಿತಾಂಶದಲ್ಲಿ ಒಂದನೆ ಸ್ಥಾನ ಪಡೆಯಬಹುದು ಎಂದು ಹೇಳಿದರು.
ಸಿರಿವಂತ ಕುಟುಂಬದ ಮಕ್ಕಳು, ಪ್ರತಿಭಾವಂತರು ಯಾರು ಸರ್ಕಾರಿ ಶಾಲೆಗೆ ಸೇರುವುದಿಲ್ಲ. ಜಸ್ಟ್ ಪಾಸ್ ಆಗುವವರು ಮಾತ್ರ ಸರ್ಕಾರಿ ಶಾಲೆಗೆ ಬರುತ್ತಾರೆ. ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಕಡೆ ಶಿಕ್ಷಕರುಗಳು ಹೆಚ್ಚಿನ ಗಮನ ಕೊಡಬೇಕು. ಮಕ್ಕಳು ಮುಂದೊಂದು ದಿನ ನಿಮ್ಮ ಹೆಸರೇಳಬೇಕಾದರೆ ತಿದ್ದಿ ತೀಡಿ ರೂಪ ಕೊಟ್ಟು ಗಣಿತ ವಿಷಯದ ಬಗ್ಗೆ ಅವರಲ್ಲಿರುವ ದಿಗಿಲನ್ನು ಮೊದಲು ನಿವಾರಣೆ ಮಾಡಿ ಎಂದು ಗಣಿತ ಶಿಕ್ಷಕರುಗಳಲ್ಲಿ ಕೋರಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಎ.ಕೆ.ಕೆಂಗಪ್ಪ ಗಣಿತ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು.
ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯ ಶಿವಮೊಗ್ಗದ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಎ.ಜಿ.ಗೋಪಾಲಕೃಷ್ಣ ಕೊಳ್ತಾಯ ಉಪನ್ಯಾಸ ನೀಡಿದರು.ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಕೋದಂಡರಾಮ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ, ವಿದ್ಯಾಧಿಕಾರಿಗಳಾದ ಸಿ.ವಿಜಯಕುಮಾರ್, ಡಿ.ನರಸಿಂಹಪ್ಪ, ವೃತ್ತಿ ಶಿಕ್ಷಣ ವಿಷಯ ಪರಿವೀಕ್ಷಕ ಎಸ್.ಟಿ.ಮಹಲಿಂಗಪ್ಪ, ಗಣಿತ ವಿಷಯ ಪರಿವೀಕ್ಷಕರಾದ ಎಸ್.ಟಿ.ಸವಿತ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶರೆಡ್ಡಿ, ವಿಷಯ ಪರಿವೀಕ್ಷಕರುಗಳಾದ ಹೆಚ್.ಗೋವಿಂದಪ್ಪ, ಕೆ.ಶಿವಣ್ಣ, ಕುಬೇಂದ್ರಪ್ಪ ಮೆಕ್ಕಪ್ಪನವರ್, ಎಸ್.ಟಿ.ಚಂದ್ರಣ್ಣ ವೇದಿಕೆಯಲ್ಲಿದ್ದರು.
ಶಿಕ್ಷಕ ಶ್ರೀನಿವಾಸಮೂರ್ತಿ ಪ್ರಾರ್ಥಿಸಿದರು. ಜಿಲ್ಲಾ ಗಣಿತ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಜಯಣ್ಣ ಸ್ವಾಗತಿಸಿದರು. ಶಿಕ್ಷಕ ರುದ್ರಮುನಿ ವಂದಿಸಿದರು. ಶಿಕ್ಷಕ ಎಂ.ಫಣೀಂದ್ರಕುಮಾರ್ ನಿರೂಪಿಸಿದರು.