ಉನ್ನತ ಸ್ಥಾನಮಾನಕ್ಕೆ ಶಿಕ್ಷಕರೇ ಮಾರ್ಗದರ್ಶಕರು..!

ಚಿತ್ರದುರ್ಗ
  ವಿಶ್ವದ ಯಾವುದೇ ಉನ್ನತ ಸ್ಥಾನಮಾನಗಳನ್ನು ಪಡೆಯಲು ಸ್ವಯಂ ಪ್ರಯತ್ನ ಅಷ್ಟೇ ಸಾಲದು, ಇದಕ್ಕೆ ಪೂರಕವಾಗಿ ಮಾರ್ಗದರ್ಶಕರು ಬೇಕೇ ಬೇಕು. ಈ ಮಾರ್ಗದರ್ಶಕರೇ ಶಿಕ್ಷಕರು ಎಂದು ಚಿತ್ರದುರ್ಗ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಅವರು ಹೇಳಿದರು.ನಗರದ ತರಾಸು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ  ಗುರುವಾರ ಆಯೋಜಿಸಿದ್ದ ‘ಶಿಕ್ಷಕರ ದಿನಾಚರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
   ದೇಶ ಅಭಿವೃದ್ಧಿ ಹೊಂದಲು ಶಿಕ್ಷಕರ ಪಾತ್ರ ಬಹುಮುಖ್ಯ. ವಿದ್ಯಾರ್ಥಿಗಳಿಗೆ ಯಾವುದೇ ವಿಷಯದ ಬಗ್ಗೆ ಆಕರ್ಷಕವಾಗಿ ಮನದಟ್ಟಾಗುವಂತೆ ಬೋಧಿಸಬೇಕು. ಶಿಕ್ಷಕರಾದವರು ವಿದ್ಯಾರ್ಥಿಗಳಲ್ಲಿ ಪ್ರೀತಿ ವಿಶ್ವಾಸದೊಂದಿಗೆ ಅವರ ಜೀವನದಲ್ಲಿ ಮರೆಯಲಾಗದ ಗುರುಗಳಾಗಬೇಕು ಎಂದು ಕರೆ ನೀಡಿದರು
 
    ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ಉತ್ತಮ ಫಲಿತಾಂಶ ಪಡೆದು, ಪಿಯುಸಿಯಲ್ಲಿ ಕಳಪೆ ಫಲಿತಾಂಶ ದಾಖಲಾಗುತ್ತಿದೆ. ಇದಕ್ಕೆ ಪ್ರಮುಖ ಸಮಸ್ಯೆ ಪಠ್ಯಪುಸ್ತಕಗಳ ಕೊರತೆ ಎಂಬ ದೂರು ಕೇಳಿಬರುತ್ತಿದೆ.  ಹೀಗಾಗಿ ಶಾಸಕರ ನಿಧಿಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಒದಗಿಸಲು ನೆರವು ನೀಡುವುದಾಗಿ ಭರವಸೆ ನೀಡಿದರು.  
    ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯ ಬೋಧನೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು.  ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಕಲಿಸಬೇಕು ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್ ಮಾತನಾಡಿ, ಪ್ರತಿಯೊಬ್ಬರಿಗೂ ತಂದೆ ತಾಯಿ ದೇವರಾದರೆ, ವಿದ್ಯಾರ್ಥಿಗಳಿಗೆ ಸನ್ಮಾರ್ಗ ಹಾಗೂ ಯಶಸ್ಸಿನ ಜೀವನದ ದಾರಿ ತೋರುವವರೇ ಗುರು. ಶಿಕ್ಷಕರ ವೃತ್ತಿ ಪವಿತ್ರವಾದದ್ದು, ಜಗತ್ತನ್ನು ಬೆಳೆಸಿ ಬೆಳಗಿಸುವ ಶಕ್ತಿ ಶಿಕ್ಷಕ ವೃತ್ತಿಯಲ್ಲಿದೆ. ಅಜ್ಞಾನದ ಸೆರೆಯನ್ನು ಹೋಗಲಾಡಿಸುವವನೇ ನಿಜವಾದ ಶಿಕ್ಷಕ ಎಂದರು
    ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಮಾತನಾಡಿ, ಶಿಕ್ಷಕರೆಂದರೇ ಶಾಲಾ ಹಂತದಲ್ಲಿ ಪಾಠ ಬೋಧಿಸುವವರು ಮಾತ್ರವಲ್ಲ. ಅಗತ್ಯ ಮಾಹಿತಿ ಮತ್ತು ಮಾರ್ಗದರ್ಶನ ನೀಡುವವರೆಲ್ಲರೂ ಶಿಕ್ಷಕರಾಗಿರುತ್ತಾರೆ. ಒಬ್ಬ ವ್ಯಕ್ತಿಯನ್ನು ಉತ್ತಮ ಪ್ರಜೆಯನ್ನಾಗಿಸುವಲ್ಲಿ ಶಿಕ್ಷಕರ ಪಾತ್ರ ಶೇ. 75 ರಷ್ಟಿದ್ದರೆ, ಉಳಿದ ಶೇ. 25 ಆ ವ್ಯಕ್ತಿಯ ಪ್ರಯತ್ನ ಮಾತ್ರ ಎಂದರು
 
     ಶಿಕ್ಷಕರಾದವರು ಎಲ್ಲಾ ವಿದ್ಯಾರ್ಥಿಗಳನ್ನು ಸಮಾನ ದೃಷ್ಠಿಯಲ್ಲಿ ಕಾಣಬೇಕು. ಆಧುನಿಕತೆಗೆ ತಕ್ಕಂತೆ ಶಿಕ್ಷಕರು ತಮ್ಮ ಬೋಧನಾ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಮಕ್ಕಳು ಪೋಷಕರಿಗಿಂತ ಶಿಕ್ಷಕರ ಮಾತನ್ನು ಚಾಚೂ ತಪ್ಪದೇ ಪಾಲಿಸುತ್ತಾರೆ. ಹೀಗಾಗಿ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ, ಉತ್ತಮ ಪ್ರಜೆಯನ್ನಾಗಿ ಮಾಡಿ ಎಂದು ಕರೆ ನೀಡಿದರು.
    ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ ಸತ್ಯಭಾಮ ಮಾತನಾಡಿ, ತಂದೆ ತಾಯಿಗಳು ಮಕ್ಕಳಿಗೆ ಜನ್ಮ ಕೊಟ್ಟರೇ, ಗುರು ಆ ಮಗುವಿಗೆ ಸನ್ಮಾರ್ಗ ತೋರಿಸುವÀವನು. ಹಿಂದಿನ ಕಾಲದಲ್ಲಿ ಶಿಷ್ಯರು ಗುರುಗಳನ್ನು ಹುಡುಕಿ ವಿದ್ಯಾದಾಹ ತೀರಿಸಿಕೊಳ್ಳುತ್ತಿದ್ದರು. ಶಿಕ್ಷಕ ವೃತ್ತಿ ತನ್ನದೇ ಆದ ಘನತೆ ಗೌರವವನ್ನು ಹೊಂದಿದೆ. ಎಲ್ಲಾ ವೃತ್ತಿಗಳಿಗೆ ಶಿಕ್ಷಕ ವೃತ್ತಿ ತಾಯಿ ಇದ್ದಂತೆ ಅದರ ಘನತೆಯನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
      ಕಾರ್ಯಕ್ರಮದಲ್ಲಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಡಾ. ಕೆ. ಅನಂತ್, ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಆರ್. ಕೃಷ್ಣಮೂರ್ತಿ,  ಗುರುಮೂರ್ತಿ, ಆರ್. ನರಸಿಂಹರಾಜು, ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷೆ ಶಾಂತಮ್ಮ ರೇವಣಸಿದ್ದಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರೇವಣಸಿದ್ದಪ್ಪ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಗದೀಶ್ ಸೇರಿದಂತೆ ವಿವಿಧ ಶಿಕ್ಷಕರ ಸಂಘಗಳ ಪದಾಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು. 
     
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap