ನಗರದಲ್ಲಿ 24/7 ನೀರು ಪೂರೈಕೆಯ ಪ್ರಾಯೋಗಿಕ ಸಿದ್ಧತೆಗೆ

5 ವಾರ್ಡ್‍ಗಳು ಸನ್ನದ್ಧ, ದಿನಾಂಕ ಘೋಷಣೆ ಬಾಕಿ

ತುಮಕೂರು

ವಿಶೇಷ ವರದಿ : ಆರ್.ಎಸ್.ಅಯ್ಯರ್

       ತುಮಕೂರು ನಗರದಲ್ಲಿ 24/7 ನೀರು ಪೂರೈಕೆಯ ಮಹತ್ವಾಕಾಂಕ್ಷಿ ಯೋಜನೆಯ ಅನುಷ್ಠಾನಕ್ಕೆ ತುಮಕೂರು ಮಹಾನಗರ ಪಾಲಿಕೆ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿಯು ಪ್ರಾಯೋಗಿಕ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದರ ಫಲಶ್ರುತಿಯಾಗಿ ಪ್ರತಿನಿತ್ಯ ಒಂದು ಗಂಟೆ ಅವಧಿ ಪ್ರಾಯೋಗಿಕವಾಗಿ ನೀರು ಪೂರೈಸುವ ಸಲುವಾಗಿ ಪ್ರಸ್ತುತ ನಗರದ 5 ವಾರ್ಡ್‍ಗಳನ್ನು ತಾಂತ್ರಿಕವಾಗಿ ಸನ್ನದ್ಧಗೊಳಿಸಿಕೊಳ್ಳಲಾಗಿದೆ. ನೀರು ಸರಬರಾಜು ಮಾಡುವ ದಿನಾಂಕವನ್ನು ಘೋಷಿಸುವುದಷ್ಟೇ ಈಗ ಬಾಕಿ ಉಳಿದಿದೆ.

ಯಾವ ಪ್ರದೇಶಗಳು ಸಿದ್ಧ?

       24/7 ಕುಡಿಯುವ ನೀರು ಪೂರೈಕೆಗೆ ಅನುಕೂಲವಾಗುವಂತೆ ನಗರದಲ್ಲಿ ಒಟ್ಟು 37 ಡಿ.ಎಂ.ಎ. (ಡಿಸ್ಟ್ರಿಕ್ಟ್ ಮೀಟರಿಂಗ್ ಏರಿಯಾ)ಗಳನ್ನು ರೂಪಿಸಲಾಗಿದೆ. ಇವುಗಳಲ್ಲಿ ಇದೀಗ 5 ಡಿ.ಎಂ.ಎ.ಗಳು ತಾಂತ್ರಿಕವಾಗಿ ಸಜ್ಜುಗೊಂಡಿವೆ. ಅವುಗಳೆಂದರೆ ತುಮಕೂರು ನಗರದ ಜಯನಗರ (31 ನೇ ವಾರ್ಡ್), ಸಪ್ತಗಿರಿ ಬಡಾವಣೆ (30 ನೇ ವಾರ್ಡ್), ಅಶೋಕನಗರ (26 ನೇ ವಾರ್ಡ್), ದಿಬ್ಬೂರು (6 ನೇ ವಾರ್ಡ್) ಮತ್ತು ಅರಳಿಮರದ ಪಾಳ್ಯ (3 ನೇ ವಾರ್ಡ್). ಈ 5 ಡಿ.ಎಂ.ಎ. (ಡಿಸ್ಟ್ರಿಕ್ಟ್ ಮೀಟರಿಂಗ್ ಏರಿಯಾ)ಗಳನ್ನು ಆಮೂಲಾಗ್ರವಾಗಿ ಪರಿಶೀಲಿಸಲಾಗಿದ್ದು, ಒತ್ತಡ ಸಹಿತ ನೀರು ಪೂರೈಕೆಗೆ ಇವು ಸಜ್ಜಾಗಿವೆ ಎಂಬುದನ್ನು ಇಲಾಖಾಧಿಕಾರಿಗಳು ದೃಢಪಡಿಸಿಕೊಂಡಿದ್ದಾರೆ. ಹೀಗಾಗಿ ಈ 5 ವಾರ್ಡ್‍ಗಳ ವ್ಯಾಪ್ತಿಯಲ್ಲಿ ನೀರು ಸರಬರಾಜು ಮಾಡಲು ತಾಂತ್ರಿಕವಾಗಿ ಯಾವುದೇ ಅಡಚಣೆ ಇಲ್ಲ ಎಂಬುದು ಖಚಿತವಾಗಿದೆ.

1 ಗಂಟೆ ಕಾಲ ನೀರು ಪೂರೈಕೆ

       24/7 ನೀರು ಪೂರೈಕೆ ಒಂದು ಸವಾಲಾಗಿರುವುದರಿಂದ, ಈಗ ಪ್ರಾಯೋಗಿಕವಾಗಿ ಪ್ರತಿನಿತ್ಯ ಈ 5 ವಾರ್ಡ್‍ಗಳ ವ್ಯಾಪ್ತಿಯಲ್ಲಿ ನಿಗದಿತ ಒಂದು ಗಂಟೆ ಕಾಲಾವಧಿ ನೀರು ಪೂರೈಸಲು ಅಧಿಕಾರಿಗಳು ಯೋಜಿಸಿದ್ದಾರೆ. ಹೊಸ ಪೈಪ್‍ಲೈನ್ ಮೂಲಕ ನಲ್ಲಿಗಳಲ್ಲಿ ನೀರು ಹೇಗೆ ಪೂರೈಕೆ ಆಗುತ್ತದೆ? ಪೈಪ್‍ಲೈನ್‍ನಲ್ಲಿ ಸೋರಿಕೆ ಆಗುತ್ತಿದೆಯೇ? ಯಾವುದೇ ಮನೆಗೆ ನೀರು ಸರಬರಾಜಾಗಲು ಅಡ್ಡಿಯಾಗಿದೆಯೇ? ನೀರು ಪೂರೈಕೆಯ ಒತ್ತಡ (ಪ್ರೆಷರ್) ಯಾವ ಪ್ರಮಾಣದಲ್ಲಿದೆ? ನೆಲ ಅಂತಸ್ತು (ಗ್ರೌಂಡ್ ಫ್ಲೋರ್) ಮಾತ್ರವಲ್ಲದೆ, ಮೊದಲನೇ ಅಂತಸ್ತಿಗೂ (ಫಸ್ಟ್ ಫ್ಲೋರ್) ಈ ಒತ್ತಡದ ಮೂಲಕವೇ ನೀರು ಸರಬರಾಜಾಗುತ್ತಿದೆಯೇ? ನೀರಿನ ಮೀಟರ್ ಸಮರ್ಪಕವಾಗಿ ಚಾಲನೆಯಾಗುತ್ತಿದೆಯೇ? ಎಂಬಿತ್ಯಾದಿ ತಾಂತ್ರಿಕ ಸಂಗತಿಗಳನ್ನು ಈ ಪ್ರಾಯೋಗಿಕ ಅವಧಿಯಲ್ಲಿ ಗಮನಿಸಲಾಗುವುದು. ಇಂತಹ ಯಾವುದೇ ಸಮಸ್ಯೆ ಕಂಡುಬಂದಲ್ಲಿ, ಅವುಗಳನ್ನು ಪರಿಹರಿಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

     ಒಂದು ಡಿ.ಎಂ.ಎ. ವ್ಯಾಪ್ತಿಯಲ್ಲಿ 2,300 ರಿಂದ 2,500 ನಲ್ಲಿ ಸಂಪರ್ಕಗಳಿರುತ್ತವೆಂದು ಲೆಕ್ಕ ಹಾಕಲಾಗಿದೆ. ಹೀಗಾಗಿ ಮೊದಲ ಹಂತದಲ್ಲಿ 5 ಡಿ.ಎಂ.ಎ. ವ್ಯಾಪ್ತಿಯ ಒಟ್ಟು ಸುಮಾರು 11,300 ರಿಂದ 12,500 ನಲ್ಲಿ ಸಂಪರ್ಕಗಳು ಈ ನೂತನ ಸೌಲಭ್ಯವನ್ನು ಪಡೆಯಲಿವೆಯೆಂದು ಅಂದಾಜಿಸಲಾಗಿದೆ.

     ನೀರು ಬಿಡುವ ವೇಳೆಯನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗುವುದು. ಆ ಒಂದು ಗಂಟೆ ಅವಧಿಯಲ್ಲಿ ನೀರು ಹೊಸ ನಲ್ಲಿ ಸಂಪರ್ಕದ ಮೂಲಕ ಬರಲಿದೆ. ಒಂದೆರಡು ತಿಂಗಳುಗಳ ಕಾಲ ಈ ಪ್ರಾಯೋಗಿಕ ಪರಿಶೀಲನೆ ಮುಂದುವರೆಯಲಿದೆ. ಎಲ್ಲವೂ ಸಮರ್ಪಕವಾಗಿದ್ದು, ತಾಂತ್ರಿಕವಾಗಿ ಸಮ್ಮತವಾದ ಬಳಿಕವಷ್ಟೇ ನೀರಿನ ಮೀಟರ್ ಅನ್ನು ಚಾಲನೆಗೊಳಿಸಲಾಗುವುದು. ಆತನಕ ಈಗಿರುವ ನೀರಿನ ಶುಲ್ಕವೇ ಜಾರಿಯಲ್ಲಿರಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಜ.26 ರಿಂದ ಜಾರಿ ನಿರೀಕ್ಷೆ

     ಈ ಮೊದಲು ಜನವರಿ 15 ರ ಸಂಕ್ರಾಂತಿ ಹಬ್ಬದ ಬಳಿಕ ಈ ಐದು ಡಿ.ಎಂ.ಎ. ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ದಿನವೂ ಒಂದು ಗಂಟೆ ಕಾಲ ನೀರು ಸರಬರಾಜಾಗಲಿದೆ ಎಂದು ಊಹಿಸಲಾಗಿತ್ತು. ಆದರೆ ಇದೀಗ ಜನವರಿ 26 ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರಾಯೋಗಿಕವಾಗಿ ಚಾಲನೆಗೊಳಿಸಲು ಯೋಜಿಸಲಾಗುತ್ತಿದೆಯೆಂದು ಹೇಳಲಾಗಿದೆ. ಸದರಿ ದಿನಾಂಕವನ್ನು ಅಧಿಕೃತವಾಗಿ ಘೋಷಿಸುವುದೊಂದೇ ಈಗ ಬಾಕಿ ಉಳಿದಿದೆ.

2 ಕಡೆಗಳಲ್ಲಿ ಅಡಚಣೆ

    ನಗರದ ಗಾಂಧಿನಗರ ಮತ್ತು ಬಾರ್‍ಲೈನ್‍ನಲ್ಲಿರುವ ಡಿ.ಎಂ.ಎ.ಗಳು ಸಿದ್ಧಗೊಂಡಿವೆಯಾದರೂ, ಅದನ್ನು ಈಗ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸ್ಮಾರ್ಟ್‍ಸಿಟಿ ಕಂಪನಿ ಕಾಮಗಾರಿಗಳಿಂದ ವಿಶೇಷವಾಗಿ ಸಿ.ಎಸ್.ಐ. ಲೇಔಟ್ ಮತ್ತು ಕೆ.ಆರ್.ಬಡಾವಣೆಗಳಲ್ಲಿ ಮನೆಮನೆ ಸಂಪರ್ಕ (ಎಚ್.ಎಸ್.ಸಿ.)ಗಳಿಗೆ ಅತಿ ಹೆಚ್ಚಿನ ಧಕ್ಕೆ ಆಗಿರುವುದರಿಂದ ಈ ಸಮಸ್ಯೆ ಎದುರಾಗಿದೆ. ಇವೆರಡು ಡಿ.ಎಂ.ಎ. ಕಾರ್ಯಾಚರಣೆ ಸದ್ಯಕ್ಕೆ ಅನಿಶ್ಚಿತವೆನ್ನಲಾಗುತ್ತಿದೆ.

7 ಡಿ.ಎಂ.ಎ. ಪರಿಶೀಲನೆ

     ಇದಲ್ಲದೆ ಮಿಕ್ಕ 7 ಡಿ.ಎಂ.ಎ. (ಸಿದ್ಧರಾಮೇಶ್ವರ ಬಡಾವಣೆ, ದೇವರಾಯಪಟ್ಟಣ, ಎಸ್.ಐ.ಟಿ., ಸಿದ್ಧಗಂಗಾ ಬಡಾವಣೆ, ಸೋಮೇಶ್ವರಪುರಂ, ಶ್ರೀನಗರ ಮತ್ತು ಗೋಕುಲ ಬಡಾವಣೆ)ಗಳನ್ನು ಪರಿಶೀಲಿಸುವ ಕಾರ್ಯವನ್ನು ಅಧಿಕಾರಿಗಳು ಮುಂದುವರೆಸಿದ್ದಾರೆ. ಮುಂದಿನ ಸುಮಾರು 10 ದಿನಗಳಲ್ಲಿ ಇವುಗಳೂ ಸಿದ್ಧಗೊಳ್ಳಬಹುದೆಂದು ನಿರೀಕ್ಷಿಸಲಾಗುತ್ತಿದೆ.

     2019 ರಲ್ಲಿ ನಿರೀಕ್ಷೆ ಮೀರಿ ಮಳೆ ಬಂದ ಕಾರಣ ಹಾಸನ ಜಿಲ್ಲೆ ಗೊರೂರಿನ ಹೇಮಾವತಿ ಜಲಾಶಯ ತುಂಬಿ ತುಳುಕುತ್ತಿರುವ ಹಿನ್ನೆಲೆಯಲ್ಲಿ ಇಂತಹುದೊಂದು ಯೋಜನೆಯ ಅನುಷ್ಠಾನಕ್ಕೆ ಧೈರ್ಯ ಮಾಡಲಾಗಿದೆ. ಜೊತೆಗೆ ಈಗಾಗಲೇ ಇರುವ ಬುಗುಡನಹಳ್ಳಿ ಜಲಸಂಗ್ರಹಾಗಾರ ಮತ್ತು ಹೆಬ್ಬಾಕ ಕೆರೆಯ ಜೊತೆಗೆ, ತುಮಕೂರು ಅಮಾನಿಕೆರೆಯನ್ನೂ ಹೇಮಾವತಿ ಜಲಸಂಗ್ರಹಾಗಾರವನ್ನಾಗಿ ಮಾಡುವ ಕಾಮಗಾರಿ ಭರದಿಂದ ಸಾಗಿರುವುದು ಆ ಧೈರ್ಯವನ್ನು ದುಪ್ಪಟ್ಟುಗೊಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap