ಪಾವಗಡ:
ಕಾರ್ಮಿಕ ಸಂಘಟನೆಗಳು ಎರಡು ದಿನಗಳು ಕರೆದಿದ್ದ ದೇಶವ್ಯಾಪಿ ಮುಷ್ಕರದ ಭಾಗವಾಗಿ ಬುಧವಾರ ಪಾವಗಡ ಪಟ್ಟಣದ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಲಾಗಿದೆ.
ಪ್ರತಿಭಟನೆಯಲ್ಲಿ ರಾಜ್ಯ ಕಟ್ಟಡ ಕಾರ್ಮಿಕರ ಸಂಘದ ಮುಖಂಡ ಬಲ್ಲೇನಹಳ್ಳಿ ಶ್ರೀರಾಮಯ್ಯ ಮಾತನಾಡಿ, 45 ದಿನಗೊಳಗಾಗಿ, ಕಾರ್ಮಿಕ ಸಂಘಗಳ ನೋಂದಣಿಗೆ ಕ್ರಮ ತೆಗೆದುಕೊಳ್ಳಬೇಕು. ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಕಾರ್ಮಿಕ ಸಂಘ ರಚಿಸುವ ಹಕ್ಕು ಮತ್ತು ಸಾಮೂಹಿಕ ಚೌಕಾಸಿಯ ಹಕ್ಕುಗಳನ್ನು ಸಂಸತ್ತಿನಲ್ಲಿ ಮಂಡಣೆ ಮಾಡಬೇಕು. ಗುತ್ತಿಗೆ ಕಾರ್ಮಿಕ ಪದ್ದತಿಯನ್ನು ರದ್ದುಪಡಿಸಿ, ಸಮಾನ ಕೆಲಸಕ್ಕೆ ಸಮಾನವೇತನ ನೀಡಬೇಕು ಎಂದು ಒತ್ತಾಯಿಸಿದರು.
ಮುಂದುವರೆದು ಮಾತನಾಡಿ, ಗುತ್ತಿಗೆ ನೌಕರರನ್ನು ಕಾಯಂಗೊಳಿಸಲು ಶಾಸನ ಹೊರಡಿಸಬೇಕು. ಹಣದುಬ್ಬರ ತಡೆಗಟ್ಟಬೇಕು. ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಪಡಿತರ ವ್ಯವಸ್ಥೆಯನ್ನು ಉತ್ತಮಪಡಿಸಬೇಕು. ಪಾವಗಡ ತಾಲ್ಲೂಕಿಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸಬೇಕು. ಡಾ.ಸ್ವಾಮಿನಾಥನ್ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕು. ರೈತರ ಆತ್ಮಹತ್ಯೆ ತಡೆಗಟ್ಟಬೇಕು.
ರೈತರ ಎಲ್ಲಾ ರೀತಿಯ ಸಾಲಮನ್ನಾ ಮಾಡಬೇಕು. ಕಾರ್ಮಿಕರಿಗೆ ಕನಿಷ್ಠ 18 ಸಾವಿರ ರೂ. ವೇತನ ನೀಡಬೇಕು ಎಂದು ಆಗ್ರಹಿಸಿದರು.
ಎ.ಐ.ಟಿ.ಯು.ಸಿ. ಮುಖಂಡ ಗೌಡೇಟಿ ನಾಗರತ್ನಪ್ಪ ಮಾತನಾಡಿ, ಸಾರ್ವಜನಿಕ ಉದ್ದಿಮೆಗಳ ಷೇರು ವಿಕ್ರಯ ಹಾಗೂ ಬ್ಯಾಂಕ್, ವಿಮಾ, ರಕ್ಷಣಾವಲಯದಲ್ಲಿನ ವಿದೇಶಿ ಬಂಡವಾಳ ಹೂಡಿಕೆ ರದ್ದುಪಡಿಸಬೇಕು. 43 ನೆ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸಿನಂತೆ ಆಶಾ, ಅಂಗನವಾಡಿ, ಬಿಸಿಯೂಟ, ಇನ್ನಿತರ ಸ್ಕೀಂ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ನಿಧಿ ಸ್ಥಾಪನೆಗೆ ಮತ್ತು ಸದ್ಯಕ್ಕೆ ಅಗತ್ಯ ಹಣ ಬಿಡುಗಡೆ ಮಾಡಬೇಕು. ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಸಾರ್ವಜನಿಕ ಭವಿಷ್ಯ ನಿಧಿ ನೀಡಲು ಶಾಸನ ಹೊರಡಿಸಬೇಕು ಎಂದು ಆಗ್ರಹಿಸಿದರು.
ಅಂಗನವಾಡಿ ಸಂಘಧ ತಾ. ಉಪಾಧ್ಯಕ್ಷೆ ರಮೀಜಾ ಮಾತನಾಡಿ, ಉದ್ಯೋಗಗಳನ್ನು ಸೃಷ್ಟಿಸಬೇಕು. ಬೋನಸ್, ಪವತಿ ಗ್ರಾಜ್ಯೂಟಿ, ವೇತನ, ಇ.ಎಸ್.ಐ., ಪಿ.ಎಫ್. ಕಾಯ್ದೆಗಳಲ್ಲಿನ ಅರ್ಹತೆಗೆ ವೇತನ ಮಿತಿ ಮತ್ತು ಪಾವತಿಗೆ ಗರಿಷ್ಠ ಮಿತಿ ತೆಗೆಯಬೇಕೆಂದು ಒತ್ತಾಯಿಸಿದರು.
ಶಾಲಾ, ಕಾಲೇಜು, ಸರ್ಕಾರಿ ಕಚೇರಿಗಳು ತೆರೆದಿದ್ದು, ಸರ್ಕಾರಿ ಹಾಗೂ ಖಾಸಗಿ ಬಸ್‍ಗಳು ಎಂದಿನಂತೆ ಸಂಚರಿಸಿದವು.
ಕಿಸಾನ್ ಸಂಘದ ಅಧ್ಯಕ್ಷ ವಿ.ಕೃಷ್ಣರಾವ್, ಹಸಿರುಸೇನೆ ರೈತ ಸಂಘದ ಅಧ್ಯಕ್ಷ ಪೂಜಾರಪ್ಪ, ಸಿ.ಐ.ಟಿ.ಯು. ಮುಖಂಡರಾದ ಕೆಂಚಮ್ಮ,,ಲಕ್ಷ್ಮೀದೇವಿ, ಶಿವಕುಮಾರ್, ಸುಶೀಲಮ್ಮ,, ಅಲುವೇಲಮ್ಮ, ರತ್ನಮ್ಮ, ನಾಗಲಕ್ಷ್ಮೀ, ಅಕ್ಕಮ್ಮ, ಹಮಾಲಿ ಸಂಘದ ರಾಮಾಂಜಿ ಮತ್ತಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ