ಹೊಳಲ್ಕೆರೆ
ತಾಲೂಕಿನ ತಾಳಿಕಟ್ಟೆ ಗ್ರಾಮದ 17 ವರ್ಷದ ಯುವತಿಗೆ ಕೊರೊನಾ ಪಾಸಿಟಿವ್ ದೃಡಪಟ್ಟ ಹಿನ್ನೆಲೆಯಲ್ಲಿ, ಅವರ ಮನೆಯಿಂದ ಒಂದು ಕಿಮೀ ವ್ಯಾಪ್ತಿಯ ಸುತ್ತಳತೆಯನ್ನು ಕಂಟೊನ್ಮೆಂಟ್ ಜೋನ್ ಆಗಿsಸಲಾಗಿದೆ.
ಯುವತಿಯ ಮನೆ ಹೊಸದುರ್ಗ-ಚನ್ನಗಿರಿ ಮಾರ್ಗದ ಮುಖ್ಯ ರಸ್ತೆಯಲ್ಲಿರುವ ಕಾರಣ ಆ ಮನೆಯ ಮುಂದಿನ ರಸ್ತೆಯನ್ನು ಬ್ಯಾರಿಕೇಡ್‍ಗಳಿಂದ ಲಾಕ್ ಮಾಡಲಾಗಿದೆ. ಮನೆಯ ಸುತ್ತಾ ಮುತ್ತಾ ಯಾರು ಓಡಾಡದಂತೆ ಎಚ್ಚರವಹಿಲಾಗಿದೆ. ಇನ್ನು ಗ್ರಾಪಂ ಪಿಡಿಒ, ಆರೋಗ್ಯ ಇಲಾಖೆ ಸಿಬ್ಬಂದಿ ಮನೆಯ ಅಕ್ಕ ಪಕ್ಕದ 100 ಮೀಟರ್ ಅಂತರದಲ್ಲಿ ಹೈಪೊಕ್ಲೋರೈಡ್ ದ್ರಾವಣ ಸ್ಪ್ರೇ ಮಾಡಿಸಿದ್ದಾರೆ.
ಮನೆಯಿಂದ ಒಂದು ಕಿಮೀ ವ್ಯಾಪ್ತಿಯನ್ನ ಕಂಟೋನ್ಮೆಂಟ್ ಜೋನ್ ಆಗಿ ಪರಿವರ್ತಿಸಲಾಗಿದ್ದು, ಈ ಭಾಗದಲ್ಲಿ ಎಲ್ಲಾ ರೀತಿಯ ಹೋಟೆಲ್, ಬೇಕರಿ, ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿಸಲಾಗಿದೆ. ಹಾಗೆಯೇ ಈ ಭಾಗದ ಜನರು ಕೂಡ ಅನಗತ್ಯವಾಗಿ ಹೊರಬರದಂತೆ ಸೂಚಿಸಲಾಗಿದೆ. ಅಗತ್ಯ ವಸ್ತುಗಳನ್ನು ಖರೀದಿಸುವುದಾದರೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ನಿರ್ಧೇಶಿಸಲಾಗಿದೆ.
ಪಾಸಿಟಿವ್ ವರದಿ ಬರುತಿದ್ದಂತೆಯೇ ಪ್ರಾಥಮಿಕ ಹಂತದಲ್ಲಿ ಯುವತಿಯ ಸಂಪರ್ಕದಲ್ಲಿದ್ದ ಅಜ್ಜ, ಅಜ್ಜಿ, ಮಾವ, ಅತ್ತೆ, ಇಬ್ಬರು ತಂಗಿಯರು, ಆಸ್ಪತ್ರೆಗೆ ಕರೆದೊಯ್ದಿದ್ದ ಕಾರು ಚಾಲಕ ಹಾಗೂ ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ನೀಡಿದ್ದ 4 ಜನ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ತಾಲೂಕಿನ ಬೊಮ್ಮನಕಟ್ಟೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ದ್ವಿತೀಯ ಹಂತದ ಸಂಪರ್ಕದಲ್ಲಿದ್ದ ಯುವತಿಯ ಮಾವನ ಪತ್ನಿ, ಮಕ್ಕಳು, ಅತ್ತಿಗೆ, ಆತನ ತಂದೆ, ತಾಯಿ, ಅತ್ತಿಗೆ, ಹಾಗೂ ಡ್ರೈವರ್ ಪತ್ನಿಯನ್ನು ಸ್ಕ್ರೀನಿಂಗ್‍ಗೆ ಒಳಪಡಿಸಿ, ಕೈಗೆ ಸೀಲ್ ಹಾಕಿ ಹೋಂ ಕ್ವಾರಂಟೈನ್ ಮಾಡಲಾಗಿದ್ದು, ಮನೆಯ ಒಳಗಡೆಯಿಂದ ಲಾಕ್ ಮಾಡಿಸಲಾಗಿದೆ. ಇವರ ಗಂಟಲು ದ್ರವವನ್ನು ಪಡೆದು ಪರೀಕ್ಷೆ ಕಳುಹಿಸಲಾಗಿದೆ. ಡ್ರೈವರ್ ಪತ್ನಿ ಗರ್ಬಿಣಿಯಾಗಿದ್ದು, ಆಕೆಯ ಆರೈಕೆ ಬಗ್ಗೆ ಆರೋಗ್ಯ ಇಲಾಖೆ ಜಾಗೃತಿ ವಹಿಸಿದೆ.
ಚನ್ನಗಿರಿ ತಾಲೂಕಿನ ಒಡನಾಟ ಹೆಚ್ಚು:
ತಾಳಿಕಟ್ಟೆ ಗ್ರಾಮವು ಹೊಳಲ್ಕೆರೆ ತಾಲೂಕಿನ ಗಡಿ ಭಾಗದಲ್ಲಿದ್ದು, ಇಲ್ಲಿಗೆ ಚನ್ನಗಿರಿ ತಾಲೂಕಿನ ಜನತೆಯ ಒಡನಾಟ ಹೆಚ್ಚಾಗಿದೆ. ಅಲ್ಲದೆ ಚನ್ನಗಿರಿ ತಾಲೂಕಿನಲ್ಲಿ ಹೋಟೆಲ್‍ಗಳು ಬಂದ್ ಆಗಿರುವ ಕಾರಣ ತಾಳಿಕಟ್ಟೆಗೆ ಹೆಚ್ಚು ಜನರು ಆಗಮಿಸುತಿದ್ದರು. ಅಲ್ಲದೆ ಈ ಗ್ರಾಮದಿಂದ ಕೂಲಿ ಕಾರ್ಮಿಕರು ಕೂಡ ಚನ್ನಗಿರಿ ತಾಲೂಕಿಗೆ ಹೋಗುತಿದ್ದರು. ಇದರಿಂದಾಗಿ ದಾವಣಗೆರೆಯ ಸೋಂಕು ತಗಲಿರಬಹುದು ಎಂದು ಸಂಶಯ ಕೂಡ ಎದುರಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ