ಅದರಲ್ಲಿದ್ದದ್ದು ಭದ್ರತೆ ಸಂಬಂಧದ ಉಪಕರಣ : ಡಿಸಿ

ಚಿತ್ರದುರ್ಗ :

     ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಏ. 09 ರಂದು ಚುನಾವಣಾ ಪ್ರಚಾರಕ್ಕಾಗಿ ಚಿತ್ರದುರ್ಗ ಜಿಲ್ಲೆಗೆ ಬಂದ ಸಂದರ್ಭದಲ್ಲಿ ಹೆಲಿಕಾಪ್ಟರ್‍ನಿಂದ ಇಳಿಸಿದ ಸೂಟ್‍ಕೇಸ್‍ನಲ್ಲಿ ಭದ್ರತೆಗೆ ಸಂಬಂಧದ ಉಪಕರಣಗಳು ಇದ್ದವು. ಈ ಕುರಿತು ನಿಯಮಾನುಸಾರ ಎಲ್ಲ ವಾಹನಗಳನ್ನು ತಪಾಸಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಸ್ಪಷ್ಟನೆ ನೀಡಿದರು.

     ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಪ್ರಧಾನಿ ಮೋದಿ ಅವರು ಚಿತ್ರದುರ್ಗಕ್ಕೆ ಆಗಮಿಸಿದ್ದಾಗ ಹೆಲಿಕ್ಯಾಪ್ಟರ್‍ನಿಂದ ಕೆಳಗಿಳಿಸಲಾದ ಬಾಕ್ಸ್ ವಿವಾದಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿದ್ದಾರೆ.ಸೂಟ್ ಕೇಸ್ ವಿವಾದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಸತ್ಯಕ್ಕೆ ದೂರವಾದ ವರದಿಗಳು ಪ್ರಕಟವಾಗಿದ್ದು, ವಾಸ್ತವದಲ್ಲಿ ಪ್ರಧಾನಮಂತ್ರಿಗಳಂತಹ ಅತಿಗಣ್ಯ ವ್ಯಕ್ತಿಗಳು ಎಸ್‍ಪಿಜಿ ಭದ್ರತೆಯ ವ್ಯಾಪ್ತಿಯಲ್ಲಿ ಇರುತ್ತಾರೆ. ಸೂಟ್‍ಕೇಸ್‍ನಲ್ಲಿ ಇದ್ದಿದ್ದು, ಲಾಜಿಸ್ಟಿಕ್ ಹಾಗೂ ಭದ್ರತೆಗೆ ಸಂಬಂಧಿತ ಉಪಕರಣಗಳು ಮಾತ್ರ. ಬಳಿಕ, ಇಲ್ಲಿಂದ ಹೊರಟ ಎಲ್ಲ ವಾಹನಗಳನ್ನೂ ನಿಯಮಗಳಂತೆ ಎಫ್‍ಎಸ್‍ಟಿ ತಂಡದಿಂದ ತಪಾಸಣೆ ಮಾಡಲಾಗಿದೆ ಎಂದು ತಿಳಿಸಿದರು

        ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಪ್ರಧಾನಮಂತ್ರಿಗಳು ಹಾಗೂ ಭಯೋತ್ಪಾದಕರಿಂದ ತೀವ್ರ ಜೀವ ಬೆದರಿಕೆ ಎದುರಿಸುತ್ತಿರುವ, ಅತಿ ಭದ್ರತೆಯ ವ್ಯಾಪ್ತಿಗೆ ಬರುವ ರಾಜಕೀಯ ನಾಯಕರುಗಳ ಹೆಲಿಕಾಪ್ಟರ್ ಹಾಗೂ ವಿಮಾನಗಳ ತಪಾಸಣೆಯಿಂದ ವಿನಾಯಿತಿ ನೀಡಲಾಗಿದೆ. ಅದರಂತೆ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಹಾಗೂ ರಾಹುಲ್ ಗಾಂಧಿಯವರು ಜಿಲ್ಲೆಗೆ ಆಗಮಿಸಿದ್ದ ಸಂದರ್ಭದಲ್ಲಿಯೂ ಮಾರ್ಗಸೂಚಿಯನ್ವಯವೇ ಎಸ್‍ಪಿಜಿ ಭದ್ರತೆ ವ್ಯಾಪ್ತಿಯಲ್ಲಿದ್ದ ಹೆಲಿಕಾಪ್ಟರ್ ತಪಾಸಣೆಯಿಂದ ವಿನಾಯಿತಿ ನೀಡಲಾಗಿದೆ.

        ಚುನಾವಣಾ ಆಯೋಗದ ಮಾರ್ಗಸೂಚಿಯನ್ನೇ ಚಿತ್ರದುರ್ಗ ಜಿಲ್ಲೆಯಲ್ಲಿಯೂ ಪಾಲಿಸಲಾಗಿದೆ. ಉಳಿದಂತೆ ಜಿಲ್ಲೆಯಲ್ಲಿ ಎಲ್ಲ ರಾಜಕೀಯ ನಾಯಕರುಗಳ ಹೆಲಿಕಾಪ್ಟರ್ ಹಾಗೂ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಹೀಗಾಗಿ ಯಾವುದೇ ನಿಯಮಗಳ ಉಲ್ಲಂಘನೆ ಜಿಲ್ಲೆಯಲ್ಲಿ ಆಗಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿದರು.

        ಜಿಲ್ಲಾ ರಕ್ಷಣಾಧಿಕಾರಿ ಡಾ. ಅರುಣ್ ಅವರು ಕೂಡ ಪ್ರತಿಕ್ರಿಯಿಸಿ, ಪ್ರಧಾನಮಂತ್ರಿಗಳ ಜಿಲ್ಲಾ ಪ್ರವಾಸ ಸಂದರ್ಭದಲ್ಲಿ ಎಸ್‍ಪಿಜಿ ಭದ್ರತಾ ತಂಡದವರು ಹೆಲಿಕಾಪ್ಟರ್‍ನಿಂದ ಕೆಳಗಿಳಿಸಿದ ಸೂಟ್‍ಕೇಸ್‍ನಲ್ಲಿ ಭದ್ರತೆಗೆ ಸಂಬಂಧಿತ ಉಪಕರಣಗಳಿದ್ದವು ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಉಳಿದಂತೆ ಎಲ್ಲ ವಾಹನಗಳ ತಪಾಸಣೆಯನ್ನೂ ಎಫ್‍ಎಸ್‍ಟಿ ತಂಡ ನಿಯಮಾನುಸಾರ ಕೈಗೊಂಡಿದೆ. ಹೀಗಾಗಿ ಯಾವುದೇ ವದಂತಿಗಳನ್ನು ನಂಬುವ ಅಗತ್ಯವಿಲ್ಲ ಎಂದರು. ಅಪರ ಜಿಲ್ಲಾಧಿಕಾರಿ ಸಂಗಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link