ನಾವು ಎತ್ತಿದ ಪ್ರಶ್ನೆಗಳಿಗೆ ಸರ್ಕಾರ ಸಮರ್ಪಕ ಉತ್ತರ ನೀಡಿಲ್ಲ : ಪ್ರತಿಪಕ್ಷ

ಬೆಂಗಳೂರು     ಕೊರೊನಾ ವಿಷಯದಲ್ಲಿ ನಡೆದ ಚರ್ಚೆಗೆ ಸರ್ಕಾರ ನೀಡಿರುವ ಉತ್ತರ ಸಮರ್ಪಕವಾಗಿಲ್ಲ. ಸಚಿವರು ನೀಡಿರುವ ಉತ್ತರ
ಭ್ರಷ್ಟಾಚಾರವನ್ನು ಸಮರ್ಥಿಸಿಕೊಳ್ಳುವಂತಿದೆ ಎಂದು ಆರೋಪಿಸಿ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಕಲಾಪ ಬಹಿಷ್ಕರಿಸಿದರು.

   ನಾವು ಎತ್ತಿದ ಪ್ರಶ್ನೆಗಳಿಗೆ ಸರ್ಕಾರ ಸಮರ್ಪಕ ಉತ್ತರ ನೀಡಿಲ್ಲ. ಆಸ್ಪತ್ರೆಗಳಲ್ಲಿ ಸುಲಿಗೆ ನಡೆಯುತ್ತಿದೆ. ಆದ್ದರಿಂದ ನ್ಯಾಯಾಂಗ ತನಿಖೆ ಆಗಬೇಕು. ಆಗ ಮಾತ್ರ ಸತ್ಯ ಹೊರಗೆ ಬರಲಿದೆ. ಈ ಸರ್ಕಾರ ಭ್ರಷ್ಟಾಚಾರ ನಡೆಸಿದೆ, ಆದ್ದರಿಂದ ಕಲಾಪ ಬಹಿಷ್ಕರಿಸುತ್ತಿದ್ದೇವೆ ಎಂದು ಹೇಳಿ ಹೊರನಡೆದರು.

   ಇದಕ್ಕೂ ಮೊದಲು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನೀಡಿದ ಉತ್ತರದ ಕುರಿತು ಮಾತನಾಡಿದ ಸಿದ್ದರಾಮಯ್ಯ, ಕೊರೊನಾ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಒಂದು ವೇಳೆ ಸರ್ಕಾರ ಹೇಳುವ ವಿಷಯ, ಅಂಕಿ-ಅಂಶ ಸತ್ಯವಾಗಿದ್ದರೆ ಸರ್ಕಾರ, ನ್ಯಾಯಾಂಗ ತನಿಖೆಗೆ ಏಕೆ ಹೆದರುತ್ತಿದೆ? ಇದು ಜನರ ಹಣ. ಆದ್ದರಿಂದ ನ್ಯಾಯಾಂಗ ತನಿಖೆಗೆ ಒತ್ತಾಯಿಸುತ್ತೇವೆ ಎಂದು ಪುನರುಚ್ಚರಿಸಿದರು.

   ಹಿಂದಿನ ಸರ್ಕಾರ ತಪ್ಪು ಮಾಡಿದ್ದರೆ ಅದನ್ನು ಕೂಡ ತನಿಖೆ ವ್ಯಾಪ್ತಿಗೆ ಸೇರಿಸಿ, ಉಪ್ಪು ತಿಂದವರು ನೀರು ಕುಡಿಯಲಿ, ಅದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ನಾವು ಅಡ್ಡಬರುವುದಿಲ್ಲ ಎಂದು ಹೇಳಿದರು.ಈ ಮಧ್ಯೆ ಕಾಂಗ್ರೆಸ್ ಶಾಸಕ ಎಚ್.ಕೆ.ಪಾಟೀಲ್ ಮಧ್ಯಪ್ರವೇಶಿಸಿ, ಸಚಿವರು ನೀಡಿರುವ ಉತ್ತರದಲ್ಲಿ ಗುಣಮಟ್ಟದ ವಿಷಯವನ್ನು ಪ್ರಸ್ತಾಪಿಸಿಲ್ಲ. ವೈದ್ಯಕೀಯ ಉಪಕರಣ ಗುಣಮಟ್ಟ ಇಲ್ಲದ ಕಾರಣ ಅವುಗಳನ್ನು ಹಿಂದಕ್ಕೆ ಕಳುಹಿಸಿದ ಬಗ್ಗೆ ಎಲ್ಲಿಯೂ ಹೇಳಿಲ್ಲ ಎಂದು ಹೇಳಿದರು.

   ಇದಕ್ಕೆ ಉತ್ತರಿಸಿದ ಸುಧಾಕರ್, ಗುಣಮಟ್ಟ ಇಲ್ಲದ ಉಪಕರಣ ಪೂರೈಸಿದ ಕಂಪನಿಗಳನ್ನು ಬ್ಲಾಕ್ ಲಿಸ್ಟ್‍ಗೆ ಸೇರಿಸಿದ್ದೇವೆ. ಅವರಿಗೆ ಒಂದು ರೂಪಾಯಿ ಹಣ ಕೂಡ ನೀಡಿಲ್ಲ. ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕುತ್ತೇವೆ ಎಂದು ಹೇಳಿದರು.ಸಿದ್ದರಾಮಯ್ಯ ಮಾತನಾಡಿ, ಪ್ಲಾಸ್ಟಿ ಸರ್ಜ್ ಎಂಬ ಮಹಾರಾಷ್ಟ್ರ ಮೂಲದ ಕಂಪನಿ ಕಳಪೆ ಪಿಪಿಇ ಕಿಟ್ ಪೂರೈಸಿತ್ತು. ಇದನ್ನು ವಿರೋಧಿಸಿ ವೈದ್ಯರು ಪ್ರತಿಭಟನೆ ನಡೆಸಿದರು. ಅಷ್ಟರಲ್ಲಿ 2 ಲಕ್ಷ ಚಿಲ್ಲರೆ ಕಿಟ್‍ಗಳು ಬಳಕೆಯಾಗಿತ್ತು. ಇದರಿಂದಾಗಿ ಎಷ್ಟು ಜನ ಸತ್ತಿದ್ದರು? ಎಷ್ಟು ಸಿಬ್ಬಂದಿಗೆ ತೊಂದರೆಯಾಗಿಲ್ಲ ಎಂದು ಪ್ರಶ್ನಿಸಿದರು.

   ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಬಹಳ ಬುದ್ಧಿವಂತಿಕೆಯಿಂದ ಸುದೀರ್ಘವಾಗಿ ಮಾತನಾಡಿದ್ದಾರೆ. ಭಾವನಾತ್ಮಕವಾಗಿಯೂ ಮಾತನಾಡಿದ್ದಾರೆ. ನಾವು ಯುದ್ಧದ ಮಧ್ಯದಲ್ಲಿದ್ದೇವೆ, ಎಲ್ಲರೂ ಸಹಕಾರ ನೀಡಬೇಕು ಎಂಬಂತಹ ಮಾತುಗಳನ್ನು ಕೂಡ ಹೇಳಿದ್ದಾರೆ. ಫೆಬ್ರುವರಿ 9 ರಿಂದ ಜುಲೈ 13 ರವರೆಗೆ ಸಹಕಾರ ನೀಡಿದ್ದೇವೆ. ಒಂದೇ ಒಂದು ಚಕಾರವೆತ್ತಿಲ್ಲ. ಸರ್ಕಾರದ ವಿರುದ್ಧ ಮಾತನಾಡಿಲ್ಲ. ಆದರೆ ಉಪಕರಣ ಖರೀದಿಯಲ್ಲಿ ಭ್ರಷ್ಟಾಚಾರ ಮಾಡಿದಾಗ ಮೌನವಾಗಿರಬೇಕೆ? ಕೇಂದ್ರ ಸರ್ಕಾರ 4 ಲಕ್ಷ ರೂ.ಗೆ ವೆಂಟಿಲೇಟರ್ ಖರೀದಿಸಿದ್ದಾರೆ. 5.16 ಲಕ್ಷದಿಂದ 18 ಲಕ್ಷ ರೂ.ವರೆಗೆ ನೀವು ಖರೀದಿಸಿದ್ದೀರಿ, ಹಾಗಾದರೆ ಕೇಂದ್ರ ಸರ್ಕಾರ ಕಳಪೆ ವೆಂಟಿಲೇಟರ್ ಖರೀದಿಸಿತ್ತೇ ಎಂದು ಪ್ರಶ್ನಿಸಿದರು.ಇಷ್ಟೊಂದು ದರದಲ್ಲಿ ವ್ಯತ್ಯಾಸ ಇರುವಾಗ ಮೌನವಾಗಿ ಇರಬೇಕೇ ? ಅವುಗಳನ್ನು ಕಣ್ಣು ಮುಚ್ಚಿ ಒಪ್ಪಿಕೊಳ್ಳಬೇಕೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಯಡಿಯೂರಪ್ಪಗೂ ತಮಗೂ ವೈಯಕ್ತಿಕ ಬಾಂಧವ್ಯವಿದೆ;

    ಯಡಿಯೂರಪ್ಪ ಅವರಿಗೂ ತಮಗೂ ವೈಯಕ್ತಿಕ ಬಾಂಧವ್ಯವಿದೆ. ಅದು ಬೇರೆ, ನಾವು ಇಬ್ಬರೂ ಒಂದೇ ಆಸ್ಪತ್ರೆಯಲ್ಲಿ ಇದ್ದಾಗ, ರಾಜ್ಯದ ಜನ ಮತ್ತು ನೀವು ಏನೆಲ್ಲಾ ಮಾತನಾಡಿದ್ದೀರಿ ಗೊತ್ತಿದೆ ಎಂದು ಸಿದ್ದರಾಮಯ್ಯ ಕುಟುಕಿದರು.ಬಳಿಕ ಜೆಡಿಎಸ್ ಶಾಸಕ ಬಂಡೆಪ್ಪ ಕಾಶೆಂಪೂರ್ , ಪ್ರಿಯಾಂಕ್ ಖರ್ಗೆ, ಸೌಮ್ಯ ರೆಡ್ಡಿ, ಶಿವಲಿಂಗೇಗೌಡ, ಅಜಯ್ ಸಿಂಗ್, ಯು.ಟಿ.ಖಾದರ್ ಮತ್ತಿತರರು ಮಾತನಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap