ಸ್ಥಾಯಿ ಸಮಿತಿ ಅಧ್ಯಕ್ಷರ ದಿಢೀರ್ ಭೇಟಿ : ಅನೈರ್ಮಲ್ಯ ಪತ್ತೆ, ಹೋಟೆಲ್‍ಗೆ ದಂಡ

ತುಮಕೂರು

    ಹೋಟೆಲ್ ಒಂದಕ್ಕೆ ದಿಢೀರ್ ಭೇಟಿ ನೀಡಿ, ಅಲ್ಲಿ ಅನೈರ್ಮಲ್ಯ ಹಾಗೂ ನಿಷೇಧಿತ ಪ್ಲಾಸ್ಟಿಕ್ ಬಳಕೆ ಕಂಡುಬಂದ ಹಿನ್ನೆಲೆಯಲ್ಲಿ ಸದರಿ ಹೋಟೆಲ್‍ಗೆ ದಂಡ ವಿಧಿಸಲಾದ ಪ್ರಸಂಗ ನಡೆದಿದೆ. ತುಮಕೂರು ಮಹಾನಗರ ಪಾಲಿಕೆಯ ಸಾರ್ವಜನಿಕ ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ಟಿ.ಕೆ.ನರಸಿಂಹಮೂರ್ತಿ ಅವರ ನೇತೃತ್ವದಲ್ಲಿ ಪಾಲಿಕೆಯ ಆರೋಗ್ಯಾಧಿಕಾರಿ ಡಾ. ನಾಗೇಶ್‍ಕುಮಾರ್, ಪರಿಸರ ಇಂಜಿನಿಯರ್‍ಗಳಾದ ಮೃತ್ಯುಂಜಯ ಮತ್ತು ಕೃಷ್ಣಮೂರ್ತಿ, ಹೆಲ್ತ್‍ಇನ್ಸ್‍ಪೆಕ್ಟರ್ ಮಂಜುಳ, ಆಹಾರ ಸುರಕ್ಷತಾ (ಫುಡ್ ಸೇಫ್ಟಿ) ಅಧಿಕಾರಿ ನಾರಾಯಣಪ್ಪ ಅವರು ಗುರುವಾರ ಮಧ್ಯಾಹ್ನ ತುಮಕೂರು ನಗರದ ಸಂತೆಪೇಟೆ ಬಳಿ ಇರುವ ಸೀಲ್ಯಾಂಡ್ ಹೋಟೆಲ್‍ಗೆ ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಿದರು.

   ಆಗ ಅಲ್ಲಿ ಅನೈರ್ಮಲ್ಯ ಇರುವುದು ಹಾಗೂ ನಿಷೇಧಿತ ಪ್ಲಾಸ್ಟಿಕ್ ಬಳಸುತ್ತಿದ್ದುದು ಕಂಡುಬಂದ ಹಿನ್ನೆಲೆಯಲ್ಲಿ ಸದರಿ ಹೋಟೆಲ್ ಮಾಲೀಕರಿಗೆ ಸ್ಥಳದಲ್ಲೇ 15,000 ರೂ. ದಂಡ ವಿಧಿಸಲಾಯಿತು. ಇದಲ್ಲದೆ ಇನ್ನು ಮೂರು ದಿನಗಳಲ್ಲಿ ಹೋಟೆಲ್‍ನಲ್ಲಿನ ನ್ಯೂನತೆಗಳನ್ನು ಸರಿಪಡಿಸಿಕೊಳ್ಳದಿದ್ದರೆ, ಹೋಟೆಲ್‍ಗೆ ನೀಡಿರುವ ಪರವಾನಗಿಯನ್ನು ರದ್ದುಪಡಿಸಲಾಗುವುದೆಂದು ಎಚ್ಚರಿಸಲಾಯಿತು ಎಂದು ಡಾ.ನಾಗೇಶ್ ಕುಮಾರ್ ತಿಳಿಸಿದ್ದಾರೆ.

ಮೀನು ಮಾರಾಟಗಾರಿಗೆ ನೈರ್ಮಲ್ಯ ಕಾಪಾಡಲು ಸೂಚನೆ :

    ಇದೇ ಸಂತೆಪೇಟೆಯಲ್ಲಿರುವ ಮೀನು ಮಾರಾಟಗಾರರ ಮಳಿಗೆಗಳಿಗೂ ಈ ತಂಡವು ಭೇಟಿ ನೀಡಿ, ಕಟ್ಟುನಿಟ್ಟಾಗಿ ನೈರ್ಮಲ್ಯವನ್ನು ಕಾಪಾಡಬೇಕೆಂದು ಸೂಚನೆ ನೀಡಿತು.

   ಯಾವುದೇ ಕಾರಣಕ್ಕೂ ಮೀನುಗಳನ್ನು ತೆರೆದ ಸ್ಥಳದಲ್ಲಿ ಮಾರಬಾರದು. ಇದರಿಂದ ನೊಣಗಳು ಮುತ್ತುತ್ತಿದ್ದು, ರೋಗಗಳು ಹರಡುವ ಆತಂಕ ಉಂಟಾಗುತ್ತಿದೆ. ಆದ್ದರಿಂದ ಕಡ್ಡಾಯವಾಗಿ ಐಸ್ ಬಾಕ್ಸ್‍ಗಳಲ್ಲಿಟ್ಟುಕೊಂಡೇ ಮಾರಾಟ ಮಾಡಬೇಕು ಎಂದು ಅಧಿಕಾರಿಗಳು ಮೀನು ಮಾರಾಟಗಾರರಿಗೆ ನಿರ್ದೇಶಿಸಿದರು.

   ಇದೇ ಸಂದರ್ಭದಲ್ಲಿ ಕೆಲವು ಅಂಗಡಿಗಳವರು ಉದ್ದಿಮೆ ಪರವಾನಗಿ ಇಲ್ಲದೆ ಮಾರಾಟ ಮಾಡುತ್ತಿದ್ದುದೂ ಬೆಳಕಿಗೆ ಬಂದಿದ್ದು, ಅಂಥವರಿಗೆ ಉದ್ದಿಮೆ ಪರವಾನಗಿ ನೀಡಲಾಯಿತು.

ನಿರಂತರ ತಪಾಸಣೆ

    ಪ್ರಸ್ತುತ ಬೇಸಿಗೆ ಕಾಲವಾಗಿದ್ದು ಸಾಂಕ್ರಾಮಿಕ ರೋಗಗಳಾದ ಕಾಲರಾ, ಕರಳುಬೇನೆ ಇತ್ಯಾದಿ ಹರಡುವ ಸಂಭವ ಇದೆ. ಈಗಾಗಲೇ ಪಕ್ಕದ ಬೆಂಗಳೂರು ಮಹಾನಗರದಲ್ಲಿ ಕಾಲರಾ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಹಾಗೂ ಪ್ರಸ್ತುತ ಎಲ್ಲೆಲ್ಲೂ ಕೊರೋನಾ ಭೀತಿಯೂ ತಲೆದೋರಿರುವುದರಿಂದ ತುಮಕೂರು ನಗರಾದ್ಯಂತ ಬೀದಿಬದಿ ಆಹಾರ ತಿನಿಸುಗಳ ಮಾರಾಟ ಮಳಿಗೆ, ಜ್ಯೂಸ್ ಮಳಿಗೆಗಳು, ಕೋಳಿ ಮತ್ತು ಮಾಂಸದ ಅಂಗಡಿಗಳು, ಹೋಟೆಲ್‍ಗಳಲ್ಲಿ ನೈರ್ಮಲ್ಯ ಇರಬೇಕೆಂಬ ದೃಷ್ಟಿಯಿಂದ ಪಾಲಿಕೆಯ ವತಿಯಿಂದ ಇಂತಹ ತಪಾಸಣೆಯನ್ನು ನಗರಾದ್ಯಂತ ಕೈಗೊಂಡಿದ್ದು, ಇದನ್ನು ಈ ಬೇಸಿಗೆ ಅವಧಿಯಲ್ಲಿ ನಿರಂತರವಾಗಿ ಮುಂದುವರೆಸಲಾಗುವುದು ಎಂದು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಕೆ.ನರಸಿಂಹಮೂರ್ತಿ ತಿಳಿಸಿದ್ದಾರೆ.

ಕಾನೂನು ಕ್ರಮ ಅನಿವಾರ್ಯ

   ಪ್ರತಿನಿತ್ಯ ಬೆಳಗ್ಗೆ ಅಥವಾ ಸಂಜೆ ತಮ್ಮ ತಂಡವು ನಗರದ ಯಾವುದೇ ಭಾಗದ ಮಳಿಗೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಆಹಾರ ಪದಾರ್ಥಗಳಿರುವ ಕಡೆ ಅನೈರ್ಮಲ್ಯ ಇದ್ದರೆ, ತಕ್ಷಣವೇ ಕಾನೂನಿನ ಪ್ರಕಾರ ಕ್ರಮ ಜರುಗಿಸಲಾಗುವುದು. ನಮ್ಮ ತಂಡದ ಜೊತೆ ಆಹಾರ ಸುರಕ್ಷತಾ ಅಧಿಕಾರಿಗಳೂ ಇರುವರು ಎಂದು ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಫುಡ್‍ಸ್ಟ್ರೀಟ್‍ಗೆ ಆಯುಕ್ತರ ಭೇಟಿ

    ಪಾಲಿಕೆ ಆಯುಕ್ತ ಟಿ.ಭೂಬಾಲನ್ ಅವರು ಬುಧವಾರ ಸಂಜೆ ತುಮಕೂರು ನಗರದ ವಿದ್ಯಾನಗರದಲ್ಲಿ ಬಿ.ಎಚ್. ರಸ್ತೆಗೆ ಹೊಂದಿಕೊಂಡಂತೆ ಇರುವ ಫುಡ್‍ಸ್ಟ್ರೀಟ್‍ಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಪರಿಸರವನ್ನು ಗಮನಿಸಿದರು. ಅಲ್ಲಿರುವ ಎಲ್ಲ ಅಂಗಡಿಗಳಿಗೂ ಭೇಟಿ ನೀಡಿ, ಸ್ವಚ್ಛತೆ ಬಗ್ಗೆ ಪರಿಶೀಲಿಸಿದರು. ಪ್ರತಿಯೊಬ್ಬರೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕೆಂದು ಎಲ್ಲ ವ್ಯಾಪಾರಿಗಳಿಗೂ ಕಟ್ಟುನಿಟ್ಟಿನ ಸೂಚನೆ ಕೊಟ್ಟರು. ಈ ಸಂದರ್ಭದಲ್ಲಿ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ನಾಗೇಶ್ ಕುಮಾರ್ ಇದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap