ಗೊಲ್ಲ ಸಮುದಾಯದ ಬಾಂಧವ್ಯ ಕದಡುವ ಹುನ್ನಾರ ಬೇಡ

ಶಿರಾ

    ಶಿರಾ ಭಾಗದಲ್ಲಿ ಐತಿಹಾಸಿಕವಾಗಿ ಗೊಲ್ಲ ಸಮುದಾಯ ತನ್ನದೇ ಆದ ಹಿನ್ನೆಲೆ ಹೊಂದಿದೆ. ಈ ಭಾಗದ ಅನೇಕ ಯಾದವ ಮುಖಂಡರು ವಿವಿಧ ಪಕ್ಷಗಳಲ್ಲಿ ಗುರ್ತಿಸಿಕೊಂಡಿದ್ದಾರೆ. ಎಲ್ಲಾ ಜಾತಿ, ಜನಾಂಗಗಳ ನಡುವೆ ಅತಿ ಹೆಚ್ಚು ಬಾಂಧವ್ಯಗಳನ್ನು ಹೊಂದಿರುವ ಈ ಭಾಗದ ಗೊಲ್ಲ ಸಮುದಾಯವನ್ನು ಚುನಾವಣೆ ನೆಪದಲ್ಲಿ ಈ ತಾಲ್ಲೂಕಿನವರಲ್ಲದ ಹಾಗೂ ಈ ಜಿಲ್ಲೆಯವರೇ ಅಲ್ಲದ ಕೆಲವರು ಉಪ ಚುನಾವಣೆ ಹಿನ್ನೆಲೆಯಲ್ಲಿ ನಾವೂ ಕೂಡ ಗೊಲ್ಲರೆಂದು ಹೇಳಿಕೊಂಡು ನಮ್ಮ ಬಾಂಧವ್ಯ ಕೆಡಿಸುವ ಹುನ್ನಾರ ನಡೆಸಿದ್ದಾರೆ. ಅಂತಹವರು ಕೂಡಲೇ ತಮ್ಮ ವರ್ತನೆಯನ್ನು ನಿಲ್ಲಿಸಬೇಕು ಎಂದು ತಾ. ಗೊಲ್ಲ ಸಂಘಟನೆಯ ಅಧ್ಯಕ್ಷ ಶ್ರೀನಿವಾಸಬಾಬು ಹೇಳಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಕ್ಷೇತ್ರದಲ್ಲಿ ಗೊಲ್ಲ ಸಮುದಾಯದ ಅನೇಕ ಮುಖಂಡರು ಕಾಂಗ್ರೆಸ್, ಜೆ.ಡಿ.ಎಸ್. ಹಾಗೂ ಬಿ.ಜೆ.ಪಿ. ಪಕ್ಷಗಳಲ್ಲಿ ವ್ಯಾಪಕವಾಗಿ ಗುರ್ತಿಸಿಕೊಂಡಿದ್ದಾರೆ. ಗೊಲ್ಲರ ಮೂಲಭೂತ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರಗಳಿಗೆ ಸಂಘಟನೆಯ ಮೂಲಕ ಒತ್ತಡ ತಂದ ಪರಿಣಾಮ ಕೆಲವೊಂದು ಸಮಸ್ಯೆಗಳನ್ನು ಎಲ್ಲಾ ಪಕ್ಷಗಳು ಈಡೇರಿಸಿವೆಯಾದರೂ ಈ ಕ್ಷೇತ್ರದವರೇ ಅಲ್ಲದ, ಈ ಜಿಲ್ಲೆಯವರೇ ಅಲ್ಲದ ಕೆಲ ರಾಜಕೀಯ ಧುರೀಣರು ಗೊಲ್ಲರ ಮತಗಳನ್ನು ಸೆಳೆಯಲು ಮನಸೋ ಇಚ್ಛೆ ಹೇಳಿಕೆಗಳನ್ನು ನೀಡುತ್ತಿದ್ದು ನಮ್ಮ ಸಮುದಾಯ ಅಂತಹವರಿಗೆ ಮಣೆ ಹಾಕುವುದಿಲ್ಲ ಎಂದರು.

     ಶಿರಾ ಕ್ಷೇತ್ರದ ಉಪ ಚುನಾವಣೆ ಸಂಬಂಧ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿರುವ ಹೊರ ಭಾಗದ ಗೊಲ್ಲರು ಎಂದು ಹೇಳಿಕೊಳ್ಳುವ ಮುಖಂಡರ ಕೊಡುಗೆ ಈ ಕ್ಷೇತ್ರಕ್ಕೆ ಏನೂ ಇಲ್ಲ. ಊರು ಗೊಲ್ಲ, ಕಾಡು ಗೊಲ್ಲ ಎಂಬ ಬೆಡಗುಗಳನ್ನು ಬಳಸಿಕೊಂಡು ನಮ್ಮನ್ನು ಮುಜುಗರಕ್ಕೆ ಒಳಪಡಿಸುವ ಕೆಲಸವನ್ನು ಹೊರಗಡೆಯಿಂದ ಬರುವ ರಾಜಕಾರಣಿಗಳು ಮಾಡುತ್ತಿದ್ದಾರೆ. ಕಾಡು ಗೊಲ್ಲ ಜನಾಂಗವು ಸಮಾಜದ ಒಳಿತಿಗೆ, ಸಮಾಜಕ್ಕೆ ಆಗುವ ಅನ್ಯಾಯದ ವಿರುದ್ಧವಾಗಿ ಎಂದೂ ಕೂಡ ಒಗ್ಗಟ್ಟಿನಿಂದ ಇದೆ ಎಂದು ಶ್ರೀನಿವಾಸ್ ತಿಳಿಸಿದರು.
ಎನ್.ಸಿ.ದೊಡ್ಡಯ್ಯ ಮಾತನಾಡಿ, ನಗರದಲ್ಲಿ ಕಾಡು ಗೊಲ್ಲ ಸಮುದಾಯದ ವಿದ್ಯಾರ್ಥಿ ನಿಲಯದ ಕಟ್ಟಡ ನಡೆಯುತ್ತಿದ್ದು, ನಿಮಗೆ ಶಿರಾ ತಾಲ್ಲೂಕಿನ ಗೊಲ್ಲರ ಬಗ್ಗೆ, ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇದ್ದರೆ ಸದರಿ ಹಾಸ್ಟೆಲ್ ಕಟ್ಟಡಕ್ಕೆ ಮೊದಲು ನೆರವಾಗಿ, ಈ ಸಮುದಾಯದ ಮೂಲಭೂತ ಸಮಸ್ಯೆಗಳಿಗೆ ಮೊದಲು ಸ್ಪಂದಿಸಿ ಎಂದರು.

    ಸೋರೇಕುಂಟೆ ಸತ್ಯನಾರಾಯಣ್ ಮಾತನಾಡಿ, ಕಾಡು ಗೊಲ್ಲರ ಆರಾಧ್ಯ ದೈವವಾದ ಜುಂಜಪ್ಪನಗುಡ್ಡೆಯನ್ನು ಐತಿಹಾಸಿಕ ತಾಣವಾಗಿ ಮಾಡಬೇಕಿದೆ. ಎಸ್‍ಸಿ/ಎಸ್‍ಟಿ ಪಂಗಡಕ್ಕೆ ನೀಡುವಂತಹ ಮಾದರಿಯಲ್ಲಿ ಸರ್ಕಾರ ಕಾಡು ಗೊಲ್ಲ ವಿದ್ಯಾರ್ಥಿಗಳಿಗೂ ಸೌಲಭ್ಯ ನೀಡುವಂತಾಗಬೇಕಿದೆ. ಕಾಡು ಗೊಲ್ಲ ಜನಾಂಗವನ್ನು ಪ.ಪಂಗಡಕ್ಕೆ ಸೇರಿಸಲು ಸರ್ಕಾರಕ್ಕೆ ಒತ್ತಡ ಹೇರಬೇಕಿದ್ದು, ಇಂತಹ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದ ಜಿಲ್ಲೆಯವರೇ ಅಲ್ಲದ ಕೆಲ ಮುಖಂಡರು ಗೊಲ್ಲರ ಭಾವನೆಗಳಿಗೆ ದಕ್ಕೆ ತರುವುದು ಸರಿಯಲ್ಲ ಎಂದರು.

     ತುಮಕೂರು ವಿ.ವಿ. ಸಿಡಿಕೇಟ್ ಸದಸ್ಯ ಶ್ರೀನಿವಾಸ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿದ್ದಾಗ ಕುರಿಗಾಹಿಗಳ ಕುರಿ ಮೃತಪಟ್ಟರೆ ಒಂದು ಕುರಿಗೆ 5,000 ರೂ.ಗಳ ಸಹಾಯ ಧನದ ಪರಿಹಾರ ಘೋಷಿಸಿ ನೀಡುತ್ತಿತ್ತು. ಈಗ ಬಿ.ಜೆ.ಪಿ. ಸರ್ಕಾರ ಕಾಡು ಗೊಲ್ಲ ಅಭಿವೃದ್ಧಿ ಮಂಡಳಿಯನ್ನು ಅನುಷ್ಠಾನಗೊಳಿಸಿದೆ. ಹೀಗೆ ವಿವಿಧ ಸರ್ಕಾರಗಳು ಮನವಿಗೆ ಸ್ಪಂದಿಸಿದ್ದು ಈ ಭಾಗದ ಗೊಲ್ಲರಲ್ಲಿ ಪಕ್ಷಾತೀತ ಭಾವನೆ ಇದ್ದು ಚುನಾವಣೆ ನೆಪದಲ್ಲಿ ಬಂದು ಬಾಂಧವ್ಯಗಳನ್ನು ಕೆಡಿಸಬೇಡಿ ಎಂದರು.

   ತಾ.ಪಂ. ಅಧ್ಯಕ್ಷ ಚಂದ್ರಯ್ಯ, ಶ್ರೀರಂಗಪ್ಪ ಯಾದವ್, ಮಾಗೋಡು ಶ್ರೀರಂಗಪ್ಪ, ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಈರಣ್ಣ, ಮಾಗೋಡು ನಾಗರಾಜು, ಚೇರ್ಮನ್ ಕರಿಯಣ್ಣ, ಕಲ್ಲುಕೋಟೆ ದೇವರಾಜು, ಹುಳಿಗೆರೆ ಶ್ರೀರಂಗಪ್ಪ, ಕೊಟ್ಟಿ ಅಶೋಕ್, ಸಿ.ಟಿ.ನಾಗರಾಜಪ್ಪ, ಡಿ.ಎಂ.ಪಿ. ಕರಿಯಣ್ಣ, ದೊಡ್ಡಗೂಳ ಪರ್ಸಣ್ಣ, ಮಂಜುನಾಥ್, ಈರಮಾರಪ್ಪ, ದೊಡ್ಡಗೂಳ ನಾಗರಾಜು, ಗೋವಿಂದರಾಜು ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link