ತುರುವೇಕೆರೆ
ಕರೊನಾ ವೈರಸ್‍ನಿಂದಾಗಿ ಪಟ್ಟಣದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅದೆಷ್ಟೊ ಕಾರ್ಮಿಕರಿಗೆ ಹಾಗೂ ಅದರ ವಿರುದ್ದ ಶ್ರಮಿಸುತ್ತಿರುವ ತಾಲ್ಲೂಕು ಆಡಳಿತ, ಆರೋಗ್ಯ ಇಲಾಖೆ, ಆರಕ್ಷಕ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿಯವರಿಗೆ ತುರುವೇಕೆರೆ ಪಟ್ಟಣದ ಅನೇಕ ಸಂಘ ಸಂಸ್ಥೆಗಳು ಊಟ ಹಾಗೂ ಅಗತ್ಯ ವಸ್ತುಗಳನ್ನು ಪೂರೈಸುತ್ತಿರುವುದು ನಾಗರಿಕರ ಪ್ರಶಂಸೆಗೆ ಒಳಗಾಗಿದೆ.
ಪಟ್ಟಣದಲ್ಲಿ ಪ್ರತಿನಿತ್ಯ ದುಡಿದು ತಿನ್ನುವಂತಹ ನೂರಾರು ಕೂಲಿ ಕಾರ್ಮಿಕರು, ನಿರ್ಗತಿಕರು, ವಯೋವೃದ್ದರು ಹಾಗೂ ಹೊರರಾಜ್ಯಗಳಿಂದ ಬಂದು ಸಂಕಷ್ಟಕ್ಕೆ ಸಿಲುಕಿರುವ ಅದೆಷ್ಟೋ ಕಾರ್ಮಿಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಸಿವಿನಿಂದ ಬಳಲುತಿದ್ದವರನ್ನು ಮೊದಲಿಗೆ ಗುರುತಿಸಿದ ಹೆಚ್.ಆರ್. ರಾಮೇಗೌಡ ಅಭಿಮಾನಿ ಬಳಗದ ಸದಸ್ಯರು ಲಾಕ್ ಡೌನ್‍ನ ಆರಂಭದಿಂದಲೆ ಪ್ರತಿ ಮುಂಜಾನೆ ಉಪಾಹಾರ ಹಾಗೂ ಮಧ್ಯಾಹ್ನ ಊಟ ನೀಡಲು ಪ್ರಾರಂಭಿಸಿತು.
ಹೆಚ್.ಆರ್. ರಾಮೇಗೌಡರ ವಸತಿಗೃಹದಲ್ಲಿ ಅಭಿಮಾನಿ ಬಳಗದ ಸದಸ್ಯರುಗಳು ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಪ್ರತಿದಿನ ತಾವೇ ಕೈಯ್ಯಾರ ಅಡುಗೆ ತಯಾರಿಸಿ ವ್ಯಾನಿನಲ್ಲಿಟ್ಟುಕೊಂಡು ನಿರಾಶ್ರಿತರ ಸ್ಥಳಗಳಿಗೆ ತಾವೇ ತೆರಳಿ ಅವರಿಗೆ ಊಟ ನೀಡುತ್ತಿರುವುದು ನಿಜಕ್ಕೂ ಪ್ರಶಂಸನೀಯ. ಇವರ ನಿರಂತರ ಸೇವಾಕಾರ್ಯ ಪ್ರಚಾರಗೊಂಡ ಬೆನ್ನಲ್ಲೆ ಚಿತ್ರಕಲಾ ಸಮಿತಿ, ಲಯನ್ಸ್ ಕ್ಲಬ್, ಪತಂಜಲಿ ಯೋಗಶಿಕ್ಷಣ ಸಮಿತಿ, ಸುರಭಿ ಸಂಗಮ, ಗ್ಲೋಬಲ್ ಎಂಬೆಸ್ಸಿ ಕಾಲೇಜು ಸೇರಿದಂತೆ ತಾಲ್ಲೂಕಿನ ಅನೇಕ ಸಂಘ ಸಂಸ್ಥೆಗಳು ಸಂಕಷ್ಟಕ್ಕೆ ಈಡಾದವರ ಹಸಿವನ್ನು ನೀಗಿಸಲು ಸರದಿಯಂತೆ ಇವರೊಂದಿಗೆ ಕೈಜೋಡಿಸಿದ್ದಾರೆ.
ಸೇವಾಕರ್ತರು ಇಲ್ಲದ ದಿವಸಗಳಲ್ಲಿ ರಾಮೇಗೌಡ ಅಭಿಮಾನಿ ಬಳಗದವರಿಂದಲೇ ಇದು ಮುಂದುವರಿಯಲಿದೆ. ಇನ್ನು ಭಜರಂಗ ದಳದ ಕಾರ್ಯಕರ್ತರು ಸಂಕಷ್ಟದಲ್ಲಿರುವ ಬಡಕಾರ್ಮಿಕರಿಗೆ ಆಹಾರದ ಕಿಟ್ ಗಳನ್ನು ವಿತರಿಸಿದ್ದಾರೆ. ಕೆಲವು ಗ್ರಾಮಗಳಲ್ಲಿ ಕೆಲಸಕ್ಕೆಂದು ಬಂದು ತಮ್ಮೂರಿಗೆ ಹೋಗಲಾಗದೆ ಆಯ ಗ್ರಾಮಗಳಲ್ಲೇ ಬೀಡುಬಿಟ್ಟಿರುವ ಅದೆಷ್ಟೋ ಕಾರ್ಮಿಕ ಕುಟುಂಬಗಳಿಗೆ ಆಯಾ ಗ್ರಾಮದ ಜನತೆ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಇಷ್ಟಲ್ಲದೆ ಶಾಸಕ ಮಸಾಲ ಜಯರಾಂ, ಜಿ.ಪಂ.ಮಾಜಿ ಸದಸ್ಯ ಎನ್.ಆರ್.ಜಯರಾಂ, ಡಾ. ಚೌದ್ರಿ ನಾಗೇಶ್, ತಾಲ್ಲೂಕು ವೀರಶೈವ ಮಹಾ ಸಭಾದ ಅಧ್ಯಕ್ಷ ಎಸ್.ಎಂ.ಕುಮಾರಸ್ವಾಮಿ, ಸೇರಿದಂತೆ ಅನೇಕ ದಾನಿಗಳು ಅಗತ್ಯ ವಸ್ತುಗಳಾದ ಮಾಸ್ಕ್, ಸ್ಯಾನಿಟೈಸ್ಹರ್ ಸೇರಿದಂತೆ ಆಹಾರ ಪದಾರ್ಥಗಳ ಕಿಟ್‍ನ್ನು ನೀಡುವ ಮೂಲಕ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶ ನೀಡಿದ್ದಾರೆ.
ಒಟ್ಟಿನಲ್ಲಿ ಯಾವುದೇ ಒಂದು ಕಾರ್ಯ ಯೋಜನೆ ಫಲಪ್ರದವಾಗಬೇಕೆಂದರೆ ಪ್ರಚಾರದಿಂದ ಮಾತ್ರ ಸಾಧ್ಯ. ರಾಮೇಗೌಡರ ಅಭಿಮಾನಿ ಬಳಗದವರ ಸೇವೆ ಪತ್ರಿಕೆಯಲ್ಲಿ ಪ್ರಕಟಗೊಂಡ ಫಲವಾಗಿ ಅನೇಕ ಸಂಘಸಂಸ್ಥೆಗಳು ಮುಂದೆ ಬರುವಂತಾಯಿತು. ಯಾವುದೇ ಸಂಘ ಸಂಸ್ಥೆಗಳು ಪೂರ್ವ ಯೋಜಿತ ಕ್ರಮಗಳು ತಿಳಿಯದ್ದರಿಂದಲೇ ಹಿಂದೇಟು ಹಾಕಬಹುದು. ಇಲ್ಲಿ ಮುಂದಾಳತ್ವ ಪ್ರಮುಖವಾಗಿರುತ್ತದೆ. ಮುನ್ನಡೆಸುವವರ ಪಾತ್ರ ಬಹು ಮುಖ್ಯವಾಗಿರುತ್ತದೆ. ಅಂತಹ ಕಾರ್ಯದಲ್ಲಿ ಹೆಚ್.ಆರ್.ರಾಮೇಗೌಡ ಅಭಿಮಾನಿ ಬಳಗದವರು ದಿಟ್ಟ ಹೆಜ್ಜೆ ಇಟ್ಟಿರುವುದಂತೂ ನಿಜಕ್ಕೂ ಮೆಚ್ಚುವಂತದ್ದು. ಸೇವಾ ಮನೋಭಾವ ವಿದ್ದವರಷ್ಟೇ ಇಂತಹ ಕಾರ್ಯ ಮಾಡಲು ಸಾಧ್ಯ. ಇದ್ದವರೆಲ್ಲಾ ದಾನಿಗಳಲ್ಲ. ಇಲ್ಲದಿದ್ದವರೂ ತಮ್ಮಲ್ಲಿದ್ದುದನ್ನೇ ಹಂಚಿ ತಿನ್ನುವ ಮಂದಿ ಅದೆಷ್ಟಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ