ಹಾವೇರಿ

ಸಾಮಮನ್ನಾ ಯೋಜನೆಯಡಿ ಬಾಕಿ ಇರುವ ಅರ್ಹ ರೈತರ ದಾಖಲೆಗಳನ್ನು ಪರಶೀಲನೆ ನಡೆಸಲಾಗುತ್ತದೆ. ಅರ್ಹತಾ ಪತ್ರ ಪಡೆದ ರೈತರ ಸಾಲವನ್ನು 24 ತಾಸಿನಲ್ಲಿ ಮನ್ನಾ ಮಾಡಲಾಗುವುದು ಎಂದು ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಭರವಸೆ ನೀಡಿದರು.
ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲೂಕಿನ ಕೆರೆ ತುಂಬಿಸುವ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಹಾಗೂ ದೂದಿಹಳ್ಳಿ ಮೊರಾರ್ಜಿ ದೇಸಾಯಿ ನೂತನ ಕಟ್ಟಡದ ಲೋಕಾರ್ಪಣೆ ಸೇರಿದಂತೆ 330.94 ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಶನಿವಾರ ಹಿರೇಕೆರೂರು ತಾಲೂಕು ದೂದಿಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಸ್ವಾತಂತ್ರ್ಯ ನಂತರವೂ ರೈತರು ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದು, ರೈತರಿಗೆ ನೆಮ್ಮದಿ ಬದುಕು ಕಲ್ಪಿಸಲು ಸಂಕಲ್ಪ ಮಾಡಲಾಗಿದೆ. ಮೊನ್ನೆ ಮಂಡಿಸಿದ ರಾಜ್ಯ ಬಜೆಟ್‍ನಲ್ಲಿ ಅನುದಾನದ ಇತಿಮಿತಿಯಲ್ಲಿಯೂ ಏತ ನೀರಾವರಿ ಯೋಜನೆಗೆ ಐದು ಸಾವಿರ ರೂ. ಕೋಟಿಗಳನ್ನು ಕಾಯ್ದಿರಿಸಲಾಗಿದೆ. ರಾಜ್ಯದ ಎಲ್ಲ ಕೆರೆಗಳನ್ನು ತುಂಬಿಸುವ ಗುರಿಹಾಕಿಕೊಳ್ಳಲಾಗಿದೆ. ರೈತರ ಬೆಳೆಗೆ ನೀರು ಹಾಗೂ ವೈಜ್ಞಾನಿಕ ಬೆಲೆ ನೀಡಿದಾಗ ಮಾತ್ರ ರೈತ ನೆಮ್ಮದಿ, ಗೌರವ ಹಾಗೂ ಸ್ವಾಭಿಮಾನದಿಂದ ಬದುಕಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರಸಕ್ತ ಆಯವ್ಯಯದಲ್ಲಿ ರೈತರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಹಿರೇಕೆರೂರು ಭಾಗದ ಜನರ ಬಹು ದಿನಗಳ ಬೇಡಿಕೆಯಾದ ಸರ್ವಜ್ಞ ಏತ ನೀರವಾರಿ ಯೋಜನೆ ಜಾರಿಗೆ ಚಾಲನೆ ನೀಡಲಾಗಿದೆ. ಈ ಯೋಜನೆಗೆ 185 ಕೋಟಿ ರೂ. ಒದಗಿಸಲಾಗಿದೆ. 88 ಕೆರೆಗಳನ್ನು ತುಂಬಿಸುವ ಈ ಯೋಜನೆಯಿಂದ ಅಂತರ್ಜಲ ಅಭಿವೃದ್ಧಿಯಾಗಿ ಹಿರೇಕೆರೂರಿನ 58 ಹಾಗೂ ರಟ್ಟೀಹಳ್ಳಿ ತಾಲೂಕಿನ 30 ಗ್ರಾಮಗಳ ಜನ, ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಅಂಜರ್ತಲ ಹೆಚ್ಚಳದಿಂದ ಕೃಷಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಪ್ರಸಕ್ತ ಆಯವ್ಯಯದಲ್ಲಿ ಜಿಲ್ಲೆಯಲ್ಲಿ 20 ಹಾಸಿಗೆಗಳ ಆಯುಷ್ ಸಂಯುಕ್ತ ಆಸ್ಪತ್ರೆ ಸ್ಥಾಪನೆಗೆ 20 ಕೋಟಿ ರೂ. ಒದಗಿಸಲಾಗಿದೆ. ಶಿಗ್ಗಾಂವಿಯಲ್ಲಿ ನೂತನ ಜವಳಿ ಪಾರ್ಕ್ ಐದು ಕೋಟಿ ರೂ. ಅನುದಾನ ಒದಗಿಸಲಾಗಿದೆ. ಸಂತ ಶಿಶುನಾಳ ಶರೀಫರ ಸಮಾಧಿ ಇರುವ ಶಿಶುನಾಳ ಗ್ರಾಮದ ಅಭಿವೃದ್ಧಿಗೆ ಐದು ಕೋಟಿ ರೂ. ಘೋಷಿಸಲಾಗಿದೆ.
ಹಿರೇಕೆರೂರು ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರದ ವಿವಿಧ ಕಾರ್ಯಕ್ರಮಗಳಿಗಾಗಿ ಪ್ರೋತ್ಸಾಹ ನೀಡಲಾಗುವುದು. ಜಿಲ್ಲೆ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಕೆಲಸಮಾಡೋಣ ಎಂದು ಹೇಳಿದರು.
ಉಪ ಮುಖ್ಯಮಂತ್ರಿಗಳು, ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಗೋವಿಂದ ಎಂ.ಕಾರಜೋಳ, ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಮತನಾಡಿದರು. ಕರ್ನಾಟಕ ರಾಜ್ಯ ಉಗ್ರಾಣ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಯು.ಬಿ. ಬಣಕಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರಂಭದಲ್ಲಿ ಗೃಹ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬಸವರಾಜ ಬೊಮ್ಮಾಯಿ, ಕೇಂದ್ರ ರೆಲ್ವೆ ರಾಜ್ಯ ಸಚಿವರಾದ ಸುರೇಶ ಅಂಗಡಿ, ಜಿ.ಪಂ.ಅಧ್ಯಕ್ಷ ಬಸವನಗೌಡ ದೇಸಾಯಿ, ಲೋಕಸಭಾ ಸದಸ್ಯರಾದ ಶಿವಕುಮಾರ ಉದಾಸಿ, ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರು(ಪೂಜಾರ), ಜಿ.ಪಂ.ಸದಸ್ಯರಾದ ಸಿದ್ಧರಾಜ ಕಲಕೋಟಿ, ಹಿರೇಕೆರೂರು ತಾ.ಪಂ.ಅಧ್ಯಕ್ಷ ರಾಜು ಬಣಕಾರ ಹಾಗೂ ಚನ್ನಳ್ಳಿ ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಸಿದ್ದವ್ವ ವಡ್ಡರ ಇತರರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಸ್ವಾಗತಿಸಿದರು. ಜಿ.ಪಂ.ಮುಖ್ಯಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
