ಚಿಕ್ಕನಾಯಕನಹಳ್ಳಿ
ತಾಲ್ಲೂಕಿನ ಯಾವ ರಾಷ್ಟ್ರೀಕೃತ ಬ್ಯಾಂಕಿಗೆ ಹೋದರೂ ಸಾಲುಗಟ್ಟಿ ನಿಲ್ಲಬೇಕು. ಜನರು ಗಂಟೆಗಟ್ಟಲೆ ಕಾದರೂ ಕೆಲಸಗಳಾಗುತ್ತಿಲ್ಲ, ಸರ್ಕಾರದ ಯೋಜನೆಗಳ ಹಣ ಜನರಿಗೆ ತಲುಪುತ್ತಿಲ್ಲ, ಈ ಬಗ್ಗೆ ತುಮಕೂರು ಲೀಡ್ ಬ್ಯಾಂಕ್ ಮ್ಯಾನೇಜರ್‍ಗೆ ತಿಳಿದಿದ್ದರೂ ಸಮಸ್ಯೆ ಬಗೆಹರಿಸುತ್ತಿಲ್ಲ. ಇವರೊಬ್ಬ ಅಸಮರ್ಥ ಅಧಿಕಾರಿ, ಸಮಸ್ಯೆಯನ್ನು ಪರಿಹರಿಸಬೇಕಾದ ತಾಲ್ಲೂಕು ಆಡಳಿತ ಕೂಡ ಸತ್ತಿದೆ ಎಂದು ತಾ.ಪಂ.ಉಪಾಧ್ಯಕ್ಷ ಆಲದಕಟ್ಟೆ ತಿಮ್ಮಯ್ಯ ಆರೋಪಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾ.ಪಂ.ಅಧ್ಯಕ್ಷೆ ಕೆ.ಹೊನ್ನಮ್ಮ ಶೇಷಯ್ಯರವರ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷದಿಂದಲೂ ರಾಜೀವ್‍ಗಾಂಧಿ ಚೈತನ್ಯ ಯೋಜನೆ, ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಹಾಗೂ ಪ್ರೋತ್ಸಾಹಧನ, ಪಶುಭಾಗ್ಯ ಯೋಜನೆ ಸೇರಿದಂತೆ ಸರ್ಕಾರಿ ಯೋಜನೆಗಳ ಅನುದಾನದ ಹಣ ಜನರ ಖಾತೆಗಳಿಗೆ ಬಂದೇ ಇಲ್ಲ ಈ ಬಗ್ಗೆ ರೈತರು ಬ್ಯಾಂಕ್ ಮ್ಯಾನೇಜರ್‍ಗಳನ್ನು ಕೇಳಲು ಹೋದರೆ ಬ್ಯಾಂಕ್‍ನಲ್ಲಿ ಅವರಿಗೆ ಬೆಲೆ ಇಲ್ಲದಂತೆ ಅಧಿಕಾರಿಗಳು, ಸಿಬ್ಬಂದಿಗಳು ಮಾತನಾಡುತ್ತಾರೆ ಎಂದರು.
ಸಮಾಜ ಕಲ್ಯಾಣ ಇಲಾಖಾಧಿಕಾರಿ ರೇಣುಕಾದೇವಿ ಮಾತನಾಡಿ, ಕೇಂದ್ರ ಸರಕಾರದ ಆದೇಶದಂತೆ ವಿದ್ಯಾರ್ಥಿಗಳು ಬ್ಯಾಂಕಿನಲ್ಲಿ ಖಾತೆ ತೆಗೆದು ವ್ಯವಹಾರ ನಡೆಸಿಲ್ಲ ಎಂಬ ಕಾರಣ ನೀಡಿ ಖಾತೆಗಳನ್ನು ಸ್ಥಗಿತಗೊಳಿದ್ದರಿಂದ ವಿದ್ಯಾರ್ಥಿಗಳ ಖಾತೆಗೆ ಸರಿಯಾಗಿ ಪ್ರೋತ್ಸಾಹಧನ ಜಮಾ ಆಗುತ್ತಿಲ್ಲ, ಇದರಿಂದ ತಾಲ್ಲೂಕಿನ 80 ರಿಂದ 85 ಜನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪೆಂಡಿಂಗ್ ಇದೆ ಎಂದು ತಿಳಿಸಿದರು.
ಬೆಳ್ಳಾರದಲ್ಲಿರುವ ಮೆಟ್ರಿಕ್ ನಂತರ ಹಾಸ್ಟೆಲ್‍ನಲ್ಲಿ 3 ಜನ ವಿದ್ಯಾರ್ಥಿಗಳಿರುವುದರಿಂದ ಇಲ್ಲಿ ಸರಿಯಾಗಿ ಹಾಸ್ಟೆಲ್ ನಡೆಸಲು ಸಾಧ್ಯವಾಗುತ್ತಿಲ್ಲ. ಇದನ್ನು ಹುಳಿಯಾರಿಗೆ ಸ್ಥಳಾಂತರಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಮಾಡಲಾಗಿದೆ ಎಂದು ಅಧಿಕಾರಿ ಶಿವರಾಜ್ ಹೇಳಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಹುಳಿಯಾರ್ ಕುಮಾರ್ ಮಾತನಾಡಿ, ಹುಳಿಯಾರು ಬಿ.ಸಿ.ಎಮ್ ಹಾಸ್ಟೆಲ್‍ನಲ್ಲಿ ಹಾಳಾದ ತರಕಾರಿಯನ್ನು ಅಡುಗೆಗೆ ಉಪಯೋಗಿಸುತ್ತಿರುವುದರ ಬಗ್ಗೆ ಮಾಹಿತಿ ಇದೆ. ಇದರ ಬಗ್ಗೆ ಗಮನ ಹರಿಸುವಂತೆ ಸಲಹೆ ನೀಡಿದರು.
ಪಂಚಾಯಿತ್ ರಾಜ್ ಎಂಜಿನಿಯರಿಂಗ್ ಇಲಾಖಾ ವತಿಯಿಂದ ಅಂಗನವಾಡಿ, ಶಾಲಾ ಕಟ್ಟಡಗಳು, ಶೌಚಾಲಯ, ಶಾಲಾ ಕಾಂಪೌಂಡ್ ಹಾಗೂ ಕೊಠಡಿಗಳ ದುರಸ್ತಿ ಶಾಲಾ ಕಟ್ಟಡಗಳ ನಿರ್ವಹಣೆ ಶಿಥಿಲಗೊಂಡ ಕಟ್ಟಡಗಳನ್ನು ಕೆಡವಿ ಮರುನಿರ್ಮಾಣ ಮಾಡುವ ಬಗ್ಗೆ ಕ್ರಿಯಾ ಯೋಜನೆ ಹಾಗೂ ಟೆಂಡರ್ ಕರೆದುದರ ಬಗ್ಗೆ ವರದಿ ನೀಡಿದ್ದೀರಿ.
ಈ ಎಲ್ಲಾ ಕಾಮಗಾರಿ ಮಾಡಲು ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದೀರಾ ಎಂದು ತಾ.ಪಂ ಉಪಾಧ್ಯಕ್ಷ ಆಲದಕಟ್ಟೆ ತಿಮ್ಮಯ್ಯ ಪಂಚಾಯತ್ ರಾಜ್ ಎಂಜಿನಿಯರ್ ಅಶ್ವತ್‍ನಾರಾಯಣ ಅವರನ್ನು ಪ್ರಶ್ನಿಸಿದಾಗ ಇದರ ಬಗ್ಗೆ ಶಿಕ್ಷಣ ಇಲಾಖೆಯವರಿಗೆ ಮಾಹಿತಿ ಇದೆ ಎಂದರು. ಶಿಕ್ಷಣ ಇಲಾಖೆಯ ಬಿ.ಆರ್.ಸಿ ಸಂಗಮೇಶ್ ಮಾತನಾಡಿ ಇಲಾಖೆಯ ಶಿಥಿಲಗೊಂಡ ಕಟ್ಟಡಗಳು, ಕಾಂಪೌಂಡ್, ಶೌಚಾಲಯ, ಶಾಲಾ ಕಟ್ಟಡಗಳ ಬಗ್ಗೆ ಎಂಜಿನಿಯರ್ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಶಾಲಾ ಉಸ್ತುವಾರಿ ಸಮಿತಿ ಆಯ್ಕೆ ಮಾಡಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಕಳಿಸಲಾಗಿದೆ. ಜಿಲ್ಲಾಧಿಕಾರಿಗಳು ಸೆಲೆಕ್ಷನ್ ಮಾಡಿ ಕಳಿಸುತ್ತಾರೆ.
ಜಿಲ್ಲಾ ಪಂಚಾಯಿತ್ ಹಾಗೂ ತಾಲ್ಲೂಕು ಪಂಚಾಯಿತಿ ಅನುಮೋದನೆ ತೆಗೆದುಕೊಂಡು ಪಟ್ಟಿಯನ್ನು ಕಳಿಸುತ್ತೇವೆ ಎಂದರು. ಈ ಬಗ್ಗೆ ಕಡತಗಳನ್ನು ತೆಗೆದುಕೊಂಡು ನೀಡಿ ಎಂದು ಅಧಿಕಾರಿ ಸಂಗಮೇಶ್‍ಗೆ ಉಪಾಧ್ಯಕ್ಷ ತಿಮ್ಮಯ್ಯ ಹೇಳಿದರು. ಕಡತಗಳನ್ನು ನೀಡುವುದಾಗಿ ಬಿ.ಆರ್.ಸಿ ಸಂಗಮೇಶ್ ಹೇಳಿದರು. ತಾಲ್ಲೂಕಿನ ಎಲ್ಲಾ ಹೋಬಳಿಗಳ ಶಿಥಿಲಗೊಂಡ ಶಾಲೆಗಳ ರಿಪೇರಿ ಮಾಡಲು ಆದ್ಯತೆ ನೀಡುವಂತೆ ತಾ.ಪಂ ಉಪಾಧ್ಯಕ್ಷ ಆಲದಕಟ್ಟೆ ತಿಮ್ಮಯ್ಯ ಸಭೆಗೆ ತಿಳಿಸಿದರು.
ತಾಲ್ಲೂಕಿನಲ್ಲಿ ಒಟ್ಟು 74 ನ್ಯಾಯ ಬೆಲೆ ಅಂಗಡಿಗಳು, 43 ವಿ.ಎಸ್.ಎಸ್ ಎನ್. ಸಹಕಾರ ಸಂಘಗಳಿವೆ. ಇದರಿಂದ ಒಟ್ಟು 51.115 ಪಡಿತರ ಚೀಟಿಗಳಿವೆ, ಪಡಿತರ ಚೀಟಿ ನೀಡಬೇಕಾದ 839 ಬಿ.ಪಿ.ಎಲ್ ಕಾರ್ಡಗಳ ಪೆಂಡಿಂಗ್ ಇದೆ ಎಂದ ಅವರು, ಪ್ರತಿ ಖಾಸಗಿ ಹಾಗೂ ವಿ.ಎಸ್.ಎಸ್.ಎನ್ ಸಹಕಾರ ಸಂಘಗಳಿಗೆ 500 ಕಾರ್ಡ್‍ಗಳಿರುತ್ತವೆ. ಪಡಿತರ ಕಾರ್ಡ್‍ನಲ್ಲಿ ಪ್ರತಿಯೊಬ್ಬರಿಗೆ 7 ಕೆ.ಜಿ ಅಕ್ಕಿ 1 ಕೆ.ಜಿ ತೊಗರಿ ಬೆಳೆ ನೀಡಲಾಗುತ್ತಿದೆ. ಈ ತಿಂಗಳು ತೊಗರಿ ಬೆಳೆ ಬಂದಿಲ್ಲ ಎಂದು ಸಭೆಗೆ ಆಹಾರ ಇಲಾಖಾಧಿಕಾರಿ ಶ್ರೀನಿವಾಮೂರ್ತಿ ತಿಳಿಸಿದರು.
ಸಭೆಯಲ್ಲಿ ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಹುಳಿಯಾರ್‍ಕುಮಾರ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ನಾರಾಯಣ ಸ್ವಾಮಿ , ತಾಲ್ಲೂಕು ಮಟ್ಟದ ಅಧಿಕಾರಿಗಳಾದ ಬೆಸ್ಕಾಂ ಎಇಇ ಗವಿರಂಗಯ್ಯ, ಕೃಷಿ ಅಧಿಕಾರಿ ಉಮಾಶಂಕರ್, ಅಕ್ಷರ ದಾಸೋಹ ಅಧಿಕಾರಿ ನಾಗಭೂಷಣ್ ಸೇರಿದಂತೆ ಹಲವು ಉಪಸ್ಥಿತರಿದ್ದರು.