ಹುಳಿಯಾರು:
ನಫೆಡ್ ಕೇಂದ್ರಕ್ಕೆ ರಾಗಿ, ಕೊಬ್ಬರಿ ಬಿಟ್ಟರೆ ಅದರ ಬಾಬ್ತು ಹಣ ಪಡೆಯಲು ತಿಂಗಳಾನುಗಟ್ಟಲೆ ಕಾಯಬೇಕು ಎಂಬ ಆರೋಪವಿದೆ. ಹಾಗಾಗಿಯೇ ಎಷ್ಟಾದರೂ ಸಿಗಲಿ ತಕ್ಷಣ ಹಣ ಸಿಗುತ್ತದಲ್ಲ ಎಂದು ರೈತರು ಎಪಿಎಂಸಿ ವರ್ತಕರಿಗೆ ಮಾರುವುದು ಮಾಮೂಲಾಗಿದೆ. ಆದರೆ ಈ ವರ್ಷ ಅದೇನಾಶ್ಚರ್ಯವೋ ಏನೋ ತಿಂಗಳೊಳಗೆ ರಾಗಿ ಹಣ ಬ್ಯಾಂಕ್ ಖಾತೆಗೆ ಜಮೆಯಾಗಿದೆ. ಲಾಕ್‍ಡೌನ್ ಅವಧಿಯ ಸಂಕಷ್ಟದ ಕಾಲದಲ್ಲಿ ಕೃಷಿಕರಿಗೆ ಈ ಹಣ ವರದಾನವಾಗಿದೆ.
ಹುಳಿಯಾರು ಎಪಿಎಂಸಿ ಆವರಣದ ಬೆಂಬಲ ಬೆಲೆಯ ರಾಗಿ ಖರೀದಿ ಕೇಂದ್ರದಲ್ಲಿ ಇದೂವರೆವಿಗೂ 2474 ರೈತರು ರಾಗಿ ಮಾರಲು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 2184 ರೈತರಿಂದ 46,733 ಕ್ವಿಂಟಲ್ ರಾಗಿ ಖರೀದಿಸಲಾಗಿದೆ. ಇನ್ನೂ 294 ರೈತರಿಂದ ರಾಗಿ ಖರೀದಿ ಬಾಕಿ ಉಳಿದಿದೆ. ಇದರಲ್ಲಿ ಲಾಕ್‍ಡೌನ್ ಘೋಷಣೆಯ ಹಿಂದಿನ ದಿನದವರೆವಿಗೂ ಅಂದರೆ ಮಾರ್ಚ್ 24 ರ ವರೆವಿಗೂ 1839 ರೈತರಿಂದ 39,959 ಕ್ವಿಂಟಲ್ ರಾಗಿ ಖರೀದಿಸಿದ್ದಾರೆ. ಇದರ ಬಾಬ್ತು 12.59 ಕೋಟಿ ರೂ.ಗಳನ್ನು ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದ್ದಾರೆ.
ಲಾಕ್‍ಡೌನ್ ಸಂದರ್ಭದಲ್ಲೇ ರಾಗಿ ಹಣವನ್ನು ಪಾವತಿ ಮಾಡಿದ್ದು ಸಹಜವಾಗಿಯೇ ರಾಗಿ ಬೆಳೆಗಾರರ ಸಂಭ್ರಮಕ್ಕೆ ಕಾರಣವಾಗಿದೆ. ಒಬ್ಬೊಬ್ಬ ರೈತರಿಗೆ ಕನಿಷ್ಟ ಎಂದರೂ ಮೂವತ್ತು ಸಾವಿರ ರೂಗಳಿಗೂ ಹೆಚ್ಚು ಹಣ ಪಾವತಿಯಾಗಿರುವುದು ಕಷ್ಟದಲ್ಲೂ ರೈತರ ಮೊಗದಲ್ಲಿ ನಗು ತಂದಿದೆ. ಲಾಕ್‍ಡೌನ್‍ನಿಂದ ಕೃಷಿ ಕೆಲಸವಿಲ್ಲೆ, ಬೆಳೆದ ಕೃಷಿ ಉತ್ಪನ್ನಗಳಿಗೆ ಬೆಲೆಯಿಲ್ಲದೆ, ಮೈಕ್ರೋ ಫೈನಾನ್ಸ್, ಲೇವಾದೇವಿದಾರರಿಂದ ಸಾಲ ಸಿಗದೆ ಸಂಕಷ್ಟ ಎದುರಿಸುತ್ತಿದ್ದ ಕಾಲದಲ್ಲಿ ಈ ಹಣ ವರದಾನವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ