ಹರಪನಹಳ್ಳಿ:
ಶೌಚಾಲಯ ಪಕ್ಕದಲ್ಲೇ ಮತ್ತೊಂದು ಶೌಚಾಲಯ ನಿರ್ಮಾಣದಿಂದ ಪುರಸಭೆಯ ಹಣ ಪೋಲಾಗುತ್ತಿದೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿ ಉಳಿದಿದೆ.
ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ 2015-16 ನೇ ಸಾಲಿನಲ್ಲಿ 9 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಾಣವಾಗಿದೆ. ಆದರೆ ಬಳಕೆಯ ಭಾಗ್ಯವಿಲ್ಲ. ನಿರ್ವಹಣೆ ಮಾಡುವವರು ದಿಕ್ಕಿಲ್ಲದಂತಿರುವಾಗ ಪಕ್ಕದ 10 ರಿಂದ 20 ಅಡಿ ಅಂತರದಲ್ಲಿ ಮತ್ತೊಂದು ಶೌಚಾಲಯ 5.45 ಲಕ್ಷ ವೆಚ್ಚದಲ್ಲಿ ನಿರ್ಮಾಣಕ್ಕೆ ಪುರಸಭೆ ಮುಂದಾಗಿರುವುದು ಎಲ್ಲರಿಗೂ ಸೋಜಿಗವೆನಿಸಿದೆ.
ಜನಜಂಗುಳಿಯ ರಸ್ತೆಗಳು
ಪಟ್ಟಣದ ರಾಜ್ಯ ಹೆದ್ದಾರಿಯಲ್ಲೆ ಮುಖ್ಯ ಮಾರುಕಟ್ಟೆ ಹೊಂದಿದ್ದು, ಪ್ರವಾಸಿಮಂದಿರ ವೃತ್ತದಲ್ಲಿ ಸರ್ಕಾರಿ ಕಚೇರಿಗಳು ಹಾಗೂ ಶಾಲಾ ಕಾಲೇಜುಗಳು ಹೆಚ್ಚಾಗಿರುವುರಿಂದ ಸಾವಿರಾರು ವಿದ್ಯಾರ್ಥಿಗಳೂ ಹಾಗೂ ಸಾರ್ವಜನಿಕರು ಹಾದು ಹೋಗುವ ಮುಖ್ಯ ವೃತ್ತವಾಗಿದೆ. ಸದಾ ಜನಜಂಗುಳಿಯಲ್ಲಿ ತುಂಬಿರುವ ರಸ್ತೆ ಮತ್ತು ವೃತ್ತಕ್ಕೆ ಶೌಚಾಲಯದ ಕೊರತೆ ಎದ್ದು ಕಾಣುತ್ತಿದ್ದು. ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆ ಬದಿಯ ಲಂಡನ್ ಹಳ್ಳಕ್ಕೆ ಪುರುಷರ ಮೂತ್ರಾಲಯಕ್ಕೆ ಅಡ್ಡಗೋಡೆ ನಿರ್ಮಿಸಿದ್ದಾರೆ. ಸ್ತ್ರೀಯರಿಗೆ ಶೌಚಾಲಯದ ತೊಂದರೆ ಅನುಭವಿಸುವುದು ಹೊಸತೇನಲ್ಲ ಎನ್ನುವಂತಿರುವಾಗ. ಮಹಿಳೆಯರು ಹಾಗೂ ಪುರುಷರಿಗೆ ಸುಲಭ ಶೌಚಾಲಯ 9 ಲಕ್ಷ ವೆಚ್ಚದಲ್ಲಿ ನಿರ್ಮಿಸಿ ಮೂರು ವರ್ಷಗಳೇ ಗತಿಸಿದರು ಬಳಕೆಯಿಲ್ಲದಾಗಿದೆ.
ದೊಡ್ಡ ತಾಲೂಕು
ಜಿಲ್ಲೆಯಲ್ಲಿಯೇ ಇರುವ ತಾಲೂಕುಗಳಲ್ಲಿ ದೊಡ್ಡದಾದ ತಾಲೂಕಾಗಿರುವ ಹರಪನಹಳ್ಳಿಗೆ ಅನ್ಯ ಕಾರ್ಯ ನಿಮಿತ್ತ ಸಾವಿರಾರು ಸಂಖ್ಯೆಯಲ್ಲಿಇ ಸಾರ್ವಜನಿಕರು ತಾಲೂಕು ಕೇಂದ್ರಕ್ಕೆ ಬಂದು ಹೋಗುತ್ತಾರೆ. ಆದರೆ ಶೌಚಾಲಯದ ಕೊರತೆಯಿಂದ ಗಿಡ ಮರ ಹಾಗೂ ಕಾಂಪೌಂಡ್ ಗೋಡೆಗಳನ್ನು ಆಶ್ರಯಿಸದೇ ವಿಧಿಯಿಲ್ಲದಂತಾಗಿದೆ.
ಅವಶ್ಯವೆನಿಸಿದ ಕಡೆ ಶೌಚಾಲಯ ನಿರ್ಮಾಣ ಮಾಡದೆ ಇರುವ ಶೌಚಾಲಯಕ್ಕೆ ಹೊಂದಿಕೊಂಡಂತೆ ಇನ್ನೋಂದು ಶೌಚಾಲಯ ನಿರ್ಮಾಣದಿಂದ ಪುರಸಭೆ ಹಣ ವೃಥಾ ಪೋಲಾಗುತ್ತಿದೆ ಎನ್ನುವುದು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದೆ.ಈ ಸಮಸ್ಯೆ ಪುರಸಭೆಗಷ್ಟೇ ಅಲ್ಲ ಪಟ್ಟಣದ ಪ್ರಮುಖ ಇಲಾಖೆಗಳಲ್ಲೂ ಶೌಚಾಲಯವಿಲ್ಲ. ತಾಲೂಕು ಪಂಚಾಯಿತಿ ಶೌಚಾಲಯ ನಿರ್ಮಾಣ ಮಾಡಿ 3 ವರ್ಷಕ್ಕೂ ಹೆಚ್ಚು ಕಾಲವಾದರೂ ಇನ್ನೂ ಹಾಕಿದ ಬೀಗ ಕೂಡ ತೆಗೆದಿಲ್ಲ. ಸಾರ್ವಜನಿಕರು ಅವಸರಕ್ಕೆ ಪರದಾಡುವಂತಿದೆ. ಮಹಿಳೆಯರ ಪರಿಸ್ಥಿತಿಯಂತೂ ಹೇಳತೀರದ್ದಾಗಿದೆ.
ಇನ್ನೂ ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರಿಗೆ ಶೌಚಾಲಯವೇ ಇಲ್ಲ. ಕಟ್ಟಡದ ಗೋಡೆಯ ಪಕ್ಕದಲ್ಲಿ ಸಾರ್ವಜನಿಕರು ಅವಸರಕ್ಕೆ ಹೋಗಿ ಬರುವುದು ಸಾಮಾನ್ಯವೆನಿಸಿದರೆ. ಕಚೇರಿ ಒಳಗಡೆ ಕುಳಿತು ಕಾರ್ಯ ನಿರ್ವಹಿಸುವ ಅಧಿಕಾರಿಗಳಿಗೆ ವಾಸನೆಯಿಂದ ತೊಂದರೆಯಾ ಗುತ್ತಿದ್ದರೂ ಹೇಳಿಕೊಳ್ಳದ ಸ್ಥಿತಿಯಿದೆ.