ಬೆಂಗಳೂರು
ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗಗಳು ಸರಿಯಾಗಿ ಕೆಲಸ ಮಾಡುವಂತೆ ಎಚ್ಚರಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದ್ದ ನಾಲ್ಕನೇ ಅಂಗವಾದ ಪತ್ರಿಕೋದ್ಯಮ ಕ್ಷೇತ್ರದಲ್ಲಿಯೂ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗಡೆ ಬೇಸರ ವ್ಯಕ್ತಪಡಿಸಿದರು.
ಶಾಸಕಾಂಗ, ಕಾರ್ಯಾಂಗ ಹಾಗೂ ಮಾಧ್ಯಮ ರಂಗದ ಮೇಲೂ ಜನರಿಗೆ ನಂಬಿಕೆ ಇಲ್ಲದಾಗಿದ್ದು, ಕಾಸಿಗಾಗಿ ಸುದ್ದಿಯಿಂದ ನೈತಿಕ ಮೌಲ್ಯಗಳು ಕುಸಿದಿವೆ ಎಂದು ಆತಂಕ ವ್ಯಕ್ತಪಡಿಸಿದರು.ಜಯನಗರದ ನ್ಯಾಷನಲ್ ಕಾಲೇಜು ಸಭಾಂಗಣದಲ್ಲಿ ದಿ ನ್ಯಾಷನಲ್ ಎಜುಕೇಶನ್ ಸೊಸೈಟಿ ಆಫ್ ಕರ್ನಾಟಕ ಆಯೋಜಿಸಿದ್ದ, ಪರಿಣಾಮಕಾರಿ ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ ಕುರಿತು ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿ ಕಾಸಿಗಾಗಿ ಸುದ್ದಿ ಮತ್ತು ಮೆಚ್ಚುಗೆ, ಬಣ್ಣಿಸುವ ಸುದ್ದಿ ಪ್ರಸಾರ ನಿಲ್ಲಿಸಬೇಕಾಗಿದೆ ಎಂದು ಹೇಳಿದರು
ದೇಶದ ಬಹುತೇಕರಲ್ಲಿ ಅಧಿಕಾರದಿಂದ ಹಣ, ಹಣದಿಂದ ಅಧಿಕಾರ ಎಂಬ ಭ್ರಮೆ ಇದ್ದು, ಶ್ರೀಮಂತಿಕೆ, ಅಧಿಕಾರ ಪೂಜಿಸುವ ಈ ಸಮಾಜದಲ್ಲಿ ಸತ್ಯವಂತರಿಗೆ ಬೆಲೆ ಇಲ್ಲದಾಗಿದೆ. ರಾಜಕೀಯ ನಾಯಕರಿಗೆ ದೇಶದ ಅಭಿವೃದ್ಧಿ ಹಾಗೂ ಜನಹಿತಾಸಕ್ತಿ ಬಗ್ಗೆ ಕಾಳಜಿ ಇಲ್ಲದಾಗಿದೆ ಎಂದ ಅವರು, ಸತ್ಯಾಂಶವನ್ನು ದೇಶದ ಜನರಿಗೆ ಮುಟ್ಟಿಸುವ ಕೆಲಸ ಆಗಬೇಕು ಎಂದರು.
ಪೊಲೀಸ್ ಮತ್ತು ಮಾಧ್ಯಮ ಕುರಿತು ಮಾತನಾಡಿದ ನಿವೃತ್ತ ಪೆÇಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ, ಪ್ರಜಾಪ್ರಭುತ್ವದಲ್ಲಿ ಪೊಲೀಸ್ ಮತ್ತು ಮಾಧ್ಯಮ ಪ್ರಮುಖ ಪಾತ್ರ ವಹಿಸುತ್ತಿದೆ. ಆದರೆ, ಇವತ್ತಿನ ವ್ಯವಸ್ಥೆ ಪೆÇಲೀಸರಿಂದ ಸ್ವಾತಂತ್ರ್ಯ ಕಿತ್ತುಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವ ಅವಶ್ಯಕತೆ ಇದೆ. ಸಂಸತ್ತು ವಿಧಾನಸಭೆಯಲ್ಲಿ ಶೇ.50ರಷ್ಟು ಕ್ರಿಮಿನಲ್ ಹಿನ್ನೆಯಲ್ಲಿರುವವರು ಇದ್ದಾರೆ. ಇವರು ಅಧಿಕಾರದಲ್ಲಿರುವಾಗ ನ್ಯಾಯಾಂಗದ ಬಲವರ್ಧನೆ ಹೇಗೆ ಸಾಧ್ಯ. ಬದಲಾವಣೆ ತರಲು ಶ್ರೀರಾಮನೇ ಬಂದ ಎಂದುಕೊಂಡೆವು. ಆದರೆ 6 ವರ್ಷದಿಂದ ಯಾವ ಬದಲಾವಣೆಯೂ ಕಾಣಲಿಲ್ಲ. ಎಲ್ಲವೂ ಜಾಸ್ತಿಯೇ ಆಗಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಎನ್‍ಇಎಸ್ ರಾಜ್ಯ ಕಾರ್ಯದರ್ಶಿ ಎಸ್.ಎನ್.ನಾಗರಾಜ್ ರೆಡ್ಡಿ, ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್.ಪರಿಣಿತಾ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಎಸ್.ಜಯಸಿಂಹ, ಪತ್ರಕರ್ತ ಗೌರಿಶ್ ಅಕ್ಕಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ