ಮೇ21ರಂದು ಜೆಡಿಎಸ್ ಪಕ್ಷದ ಶಾಸಕಾಂಗ ಸಭೆ..!!

0
4

ಬೆಂಗಳೂರು

      ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ಮೇ 21 ರಂದು ಜೆಡಿಎಸ್ ಪಕ್ಷದ ಮಹತ್ವದ ಶಾಸಕಾಂಗ ಸಭೆ ನಡೆಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ನಿರ್ಧರಿಸಿದ್ದಾರೆ.

       ಅಂದು ನಡೆಯಲಿರುವ ಪಕ್ಷದ ಶಾಸಕಾಂಗ ಸಭೆಗೆ ತಪ್ಪದೆ ಹಾಜರಾಗುವಂತೆ ಜೆಡಿಎಸ್‍ನ ಎಲ್ಲ ವಿಧಾನಸಭಾ ಸದಸ್ಯರು,ವಿಧಾನಪರಿಷತ್ ಸದಸ್ಯರು,ಸಂಸದರಿಗೆ ಆಹ್ವಾನ ನೀಡಲಾಗಿದೆ.

       ಲೋಕಸಭಾ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕಿ ಶ್ರೀಮತಿ ಸೋನಿಯಾಗಾಂಧಿ ಅವರು ಮೇ ಇಪ್ಪತ್ಮೂರರಂದು ಬಿಜೆಪಿ ವಿರೋಧಿ ಶಕ್ತಿಗಳ ಸಭೆ ನಡೆಸುತ್ತಿದ್ದು ಇದಕ್ಕೆ ಪೂರ್ವಭಾವಿಯಾಗಿ ದೇವೇಗೌಡರು ಪಕ್ಷದ ಶಾಸಕಾಂಗ ಸಭೆ ಕರೆದಿದ್ದಾರೆ.

        ಒಂದು ವೇಳೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಏನು ಮಾಡಬೇಕು?ಅಥವಾ ಬಿಜೆಪಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಏನು ಮಾಡಬೇಕು?ಅನ್ನುವ ಕುರಿತು ಸಭೆ ಚರ್ಚಿಸಲಿದೆ.

       ಸಧ್ಯದ ಪರಿಸ್ಥಿತಿಯಲ್ಲಿ ಲೋಕಸಭಾ ಚುನಾವಣೆ ಕಾಂಗ್ರೆಸ್ ಹಾಗೂ ಬಿಜೆಪಿಗೆ ಅಧಿಕಾರ ಹಿಡಿಯಲು ಪೂರಕವಾಗಿ ಸ್ವಯಂಬಲ ನೀಡುವುದಿಲ್ಲ.ಹೀಗಾಗಿ ಮುಂದಿನ ಕೇಂದ್ರ ಸರ್ಕಾರ ರಚನೆಯ ವಿಷಯದಲ್ಲಿ ತೃತೀಯ ಶಕ್ತಿಗಳದೇ ನಿರ್ಣಾಯಕ ಪಾತ್ರ ಎಂಬುದು ದೇವೇಗೌಡರ ಸಧ್ಯದ ಲೆಕ್ಕಾಚಾರ.

        ಒಂದು ವೇಳೆ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರ ಗದ್ದುಗೆ ಹಿಡಿದರೆ ಕೇಂದ್ರ ಮಂತ್ರಿ ಮಂಡಲದಲ್ಲಿ ಜೆಡಿಎಸ್ ಕೂಡಾ ಒಂದು ಮಂತ್ರಿ ಸ್ಥಾನ ಪಡೆಯಬಹುದು ಅನ್ನುವುದು ಅವರ ಯೋಚನೆ.ಅಷ್ಟೇ ಮುಖ್ಯವಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಕೇಂದ್ರದ ಅಧಿಕಾರ ಗದ್ದುಗೆ ಹಿಡಿದರೆ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ನಿರುಮ್ಮಳವಾಗಿ ನಡೆದುಕೊಂಡು ಹೋಗುತ್ತದೆ.ಹಾಗಾದಾಗ ಯಾವ ಕಾರಣಕ್ಕೂ ಪರಿಸ್ಥಿತಿ ವ್ಯತಿರಿಕ್ತವಾಗುವುದಿಲ್ಲ ಎಂಬುದು ಅವರ ಯೋಚನೆ.

        ಹಾಗೆಯೇ ಬಿಜೆಪಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟ ಕೇಂದ್ರದ ಅಧಿಕಾರ ಗದ್ದುಗೆ ಹಿಡಿದರೆ ಆಗ ಇಲ್ಲಿನ ಸರ್ಕಾರವನ್ನು ಅಲುಗಾಡಿಸಲು ಯಡಿಯೂರಪ್ಪ ನೇತೃತ್ವದ ಬಿಜೆಪಿ ಯತ್ನಿಸಬಹುದು.ಹಾಗಾದಾಗ ಕೇಂದ್ರದ ಕಾಂಗ್ರೆಸ್ ವರಿಷ್ಟರೇ ಇಲ್ಲಿನ ಸರ್ಕಾರವನ್ನು ಉಳಿಸಲು ಹರಸಾಹಸ ಮಾಡುತ್ತಾರೆ.

       ಯಾಕೆಂದರೆ ಕೇಂದ್ರದಲ್ಲಿ ಅಧಿಕಾರ ಇಲ್ಲದೆ ಇರುವಾಗ ರಾಜ್ಯ ಮಟ್ಟದಲ್ಲಾದರೂ ತಮ್ಮ ಶಕ್ತಿ ಉಳಿಯಬೇಕು ಎಂಬುದು ಅದರ ಲೆಕ್ಕಾಚಾರವಾಗಿರುತ್ತದೆ.ಹೀಗಾಗಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟ ಅಧಿಕಾರ ಹಿಡಿದರೂ ಜೆಡಿಎಸ್ ವೈಯಕ್ತಿಕವಾಗಿ ಗೊಂದಲಗೊಳ್ಳುವ ಅಗತ್ಯವೇನೂ ಇಲ್ಲ ಎಂಬುದು ದೇವೇಗೌಡರ ಅಭಿಪ್ರಾಯ.ಇಂತಹ ಎಲ್ಲ ಅಭಿಪ್ರಾಯಗಳ ನಡುವೆಯೇ ಪಕ್ಷದ ಶಾಸಕಾಂಗ ಸಭೆಯನ್ನು ಅವರು ಕರೆದಿದ್ದು ಈ ಸಭೆಯಲ್ಲಿ ಪಕ್ಷದ ಇನ್ನಿತರ ಹಿರಿಯ ನಾಯಕರೂ ಭಾಗವಹಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

 

LEAVE A REPLY

Please enter your comment!
Please enter your name here