ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳುವಂತೆ ಸಿಎಂಗೆ ನೂತನ ಶಾಸಕರ ಮನವಿ..!

ಬೆಂಗಳೂರು

     ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ತಲೆ ಎತ್ತುವಂತೆ ಮಾಡಿದ್ದೇವೆ.ಈಗ ಮಂತ್ರಿಮಂಡಲಕ್ಕೆ ಸೇರಿಸಿಕೊಂಡು ನಮ್ಮ ಮುಖ ಉಳಿಸಿ ಎಂದು ಉಪಚುನಾವಣೆಯಲ್ಲಿ ಗೆದ್ದ ಹನ್ನೆರಡು ಮಂದಿ ಶಾಸಕರು ಸಿಎಂ ಯಡಿಯೂರಪ್ಪ ಅವರ ಮುಂದೆ ಬೇಡಿಕೆಯಿಟ್ಟಿದ್ದಾರೆ.

     ಇಂದು ಬೆಳಿಗ್ಗೆ ಡಾಲರ್ಸ್ ಕಾಲೋನಿಯಲ್ಲಿರುವ ಯುಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ ಈ ಶಾಸಕರು ತಮ್ಮ ಬೇಡಿಕೆಯನ್ನು ಪ್ರಬಲವಾಗಿ ಮಂಡಿಸಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿದ್ದ ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯದಲ್ಲಿದ್ದ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಉರುಳುವಂತೆ ಮಾಡಿದೆವು.ನಾವು ಕೂಡಾ ಶಾಸಕತ್ವದಿಂದ ಅನರ್ಹಗೊಂಡೆವು. ಇದಾದ ನಂತರ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು.ಈ ಸಮರದಲ್ಲಿ ಅನರ್ಹರ ಪಡೆಯಲ್ಲಿದ್ದ ಹೆಚ್.ವಿಶ್ವನಾಥ್ ಹಾಗೂ ಎಂ.ಟಿ.ಬಿ.ನಾಗರಾಜ್ ಅವರು ಸೋಲನುಭವಿಸಿದರು.

     ಈಗ ಉಪಚುನಾವಣೆಯಲ್ಲಿ ಗೆದ್ದ ನಾವು ಮಂತ್ರಿಗಳಾಗದೆ ಅತಂತ್ರರಾಗಿದ್ದೇವೆ.ಚುನಾವಣೆಯಲ್ಲಿ ಸೋತವರು ದಿಕ್ಕು ಕಾಣದೆ ಕುಳಿತಿದ್ದಾರೆ.ಆದರೆ ನಮಗ್ಯಾರಿಗೂ ಬಿಜೆಪಿ ಕೊಟ್ಟ ಮಾತು ಈಡೇರಿಸಿಲ್ಲ.ಉಪಚುನಾವಣೆಯ ಫಲಿತಾಂಶ ಬಂದು ಮೂರು ವಾರಗಳೇ ಕಳೆದವು.ಆದರೆ ಸಚಿವ ಸಂಪುಟ ವಿಸ್ತರಣೆಯ ಮಾತೇ ಕೇಳುತ್ತಿಲ್ಲ.ಧ್ವನಿ ಎತ್ತಿದ ಶುರುವಿನಲ್ಲಿ ಡಿಸೆಂಬರ್ ಅಂತ್ಯದ ವೇಳೆಗೆ ಮಂತ್ರಿ ಮಂಡಲ ವಿಸ್ತರಣೆ ಎಂದಿರಿ.ತದನಂತರ ಅದು ಸಂಕ್ರಾಂತಿಗೆ ಬದಲಾಗಿ,ಈಗ ಬಜೆಟ್ ಅಧಿವೇಶನದ ನಂತರ ಎಂಬ ಮಾತು ಕೇಳಿಬರುತ್ತಿದೆ.

      ಪರಿಣಾಮವಾಗಿ ನಮ್ಮ ಕ್ಷೇತ್ರದ ಮತದಾರರು ಕೂಡಾ ನಮ್ಮನ್ನು ವ್ಯಂಗ್ಯವಾಗಿ ಪ್ರಶ್ನಿಸುವ ಸ್ಥಿತಿ ಬಂದಿದೆ.ನಿಮ್ಮ ಪಕ್ಷಗಳನ್ನು ತೊರೆದು ಬಿಜೆಪಿಗೆ ಹೋಗಿ ಶಾಸಕರಾಗುವ ಬದಲು ನಿಮ್ಮ ಪಕ್ಷದಲ್ಲೇ ಶಾಸಕರಾಗಿ ಉಳಿದುಕೊಳ್ಳಬಹುದಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ. ಉಪಚುನಾವಣೆಯಲ್ಲಿ ಗೆದ್ದ ತಕ್ಷಣ ಮಂತ್ರಿಗಳಾಗುತ್ತೇವೆ ಎಂದುಕೊಂಡ ನಮಗೆ ಈ ರೀತಿಯ ಮುಜುಗರದ ಸನ್ನಿವೇಶ ಎದುರಾಗುತ್ತದೆ ಎಂದು ಬಾವಿಸಿರಲಿಲ್ಲ ಎಂದು ಈ ಶಾಸಕರ ಪಡೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೆದುರು ನೋವು ತೋಡಿಕೊಂಡಿತು.

      ಉನ್ನತ ಮೂಲಗಳ ಪ್ರಕಾರ,ಸಂಪುಟ ವಿಸ್ತರಣೆಯ ಬದಲು ಪುನರ್ರಚನೆಯನ್ನೇ ಮಾಡಲು ಯೋಚಿಸಿದ್ದೇನೆ.ಆದರೆ ಪರಿವಾರದ ಕೆಲ ನಾಯಕರು ಪಕ್ಷದ ವರಿಷ್ಟರ ಮುಂದೆ ಒಂದು ಸಮಸ್ಯೆಯನ್ನಿಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಶಾಸಕರಿಗೆ ವಿವರಿಸಿದರು.
 

   ಮಂತ್ರಿಮಂಡಲಕ್ಕೆ ಉಪಚುನಾವಣೆಯಲ್ಲಿದ್ದವರನ್ನೆಲ್ಲ ಸೇರಿಸಿಕೊಳ್ಳಬೇಕು ಎಂಬುದು ಸರಿಯಲ್ಲ.ಹಾಗೇನಾದರೂ ಮಾಡಿದರೆ ರಾಜಧಾನಿ ಬೆಂಗಳೂರಿನಿಂದ ಎಂಟು ಜನ ಮಂತ್ರಿಗಳಾದಂತಾಗುತ್ತದೆ.ಬೆಳಗಾವಿ ಜಿಲ್ಲೆಯಿಂದ ಆರು ಮಂದಿ ಮಂತ್ರಿಗಳಾದಂತಾಗುತ್ತದೆ.

    ಹೀಗೆ ಎರಡೇ ಜಿಲ್ಲೆಗಳಿಂದ ಹದಿನಾಲ್ಕು ಮಂದಿ ಮಂತ್ರಿಗಳಾದರೆ ಉಳಿದ ಇಪ್ಪತ್ತೆಂಟು ಜಿಲ್ಲೆಗಳಿಂದ ಕೇವಲ ಇಪ್ಪತ್ತು ಜನ ಮಂತ್ರಿಗಳಾದರೆ ಜಿಲ್ಲಾವಾರು,ಜಾತಿವಾರು ಪ್ರಾತಿನಿಧ್ಯದ ವಿಷಯದಲ್ಲಿ ಸರ್ಕಾರ ಅಪಕೀರ್ತಿಗೆ ಈಡಾಗುವುದು ಅನಿವಾರ್ಯವಾಗುತ್ತದೆ.

      ಹೀಗಾಗಿ ಹಾಲಿ ಸಚಿವ ಸಂಪುಟದಲ್ಲಿರುವ ಬೆಂಗಳೂರಿನ ಮಂತ್ರಿಗಳ ಪೈಕಿ ಇಬ್ಬರನ್ನು ಕೈ ಬಿಡಿ.ಬೆಳಗಾವಿಯಿಂದ ಮಂತ್ರಿಗಳಾಗಿರುವವರ ಪೈಕಿ ಇಬ್ಬರನ್ನು ಕೈ ಬಿಡಿ.ಹಾಗೆಯೇ ಒಬ್ಬರನ್ನು ರಾಜ್ಯಪಾಲ ಹುದ್ದೆಗೆ ನೇಮಕ ಮಾಡಿ,ಮತ್ತೊಬ್ಬರನ್ನು ವಿಧಾನಪರಿಷತ್ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವ ಮೂಲಕ ಒಟ್ಟು ಆರು ಮಂದಿಯನ್ನು ಕೈಬಿಡಿ ಎಂದು ಪರಿವಾರದ ಪ್ರಮುಖ ನಾಯಕರು ವರಿಷ್ಟರ ಮುಂದಿಟ್ಟಿದ್ದಾರೆ.

   ಆದರೆ ಯಾರನ್ನು ಕೈ ಬಿಡಬೇಕು ಎಂಬ ವಿಷಯದಲ್ಲಿ ಅವರು ಇಟ್ಟಿರುವ ಪ್ರಸ್ತಾಪ ಸಹಜವಾಗಿಯೇ ನನಗೆ ತಲೆನೋವಾಗಿದೆ .ಹೀಗಾಗಿ ವರಿಷ್ಟರ ಜತೆ ಮಾತನಾಡುವವರೆಗೆ ಸುಮ್ಮನಿರಿ,ನಿಮ್ಮನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳುವ ಜವಾಬ್ದಾರಿ ನನ್ನದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಶಾಸಕರ ಪಡೆಗೆ ಭರವಸೆಯನ್ನಿತ್ತಿದ್ದಾರೆ.

   ಆದರೆ ಮುಂದಿನ ದಿನಗಳಲ್ಲಿ ಯಾರನ್ನು ಕೈ ಬಿಡಬೇಕು ಎಂಬ ವಿಷಯದಲ್ಲಿ ಗೊಂದಲ ಶುರುವಾಗಬಹುದು ಎಂಬ ತಲೆನೋವು ಅವರನ್ನು ಕಾಡುತ್ತಿದೆಯಲ್ಲದೆ,ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದವರಿಗೆ ಮಂತ್ರಿಗಿರಿ ನೀಡದಿದ್ದರೆ ವಚನದ್ರೋಹದ ಆರೋಪ ಹೊರಬೇಕಾಗುತ್ತದೆ ಎಂಬ ಸಂಕಟಕ್ಕೂ ಅವರು ಗುರಿಯಾಗಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap