ಕುತೂಹಲ ಕೆರಳಿಸಿದೆ ಕಾಂಗ್ರೆಸ್‌ ಸಿ ಎಲ್‌ ಪಿ ಸಭೆ…..!

ಬೆಂಗಳೂರು: 

   ವಿಧಾನ ಮಂಡಲ ಮುಂಗಾರು ಅಧಿವೇಶನ ಕೆಲ ದಿನಗಳ ಹಿಂದಷ್ಟೇ ಮುಕ್ತಾಯವಾಗಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಇಂದು ಬಹಳ ಆಸಕ್ತಿಯಿಂದ ಪ್ರಾಮುಖ್ಯತೆ ನೀಡಿ ಕಾಂಗ್ರೆಸ್ ಶಾಸಕಾಂಗ ಸಭೆ ಕರೆದಿರುವುದು ರಾಜಕೀಯವಾಗಿ ಮಹತ್ವ ಪಡೆದಿದೆ. 

     ಪಕ್ಷದ ಶಾಸಕರು ಅಸಮಾಧಾನ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದಿರುವ ಪತ್ರ ನಕಲಿ ಎಂದು ಹೇಳುತ್ತಿದ್ದರೂ ಕಾಂಗ್ರೆಸ್ ನಾಯಕರಿಗೆ ಆತಂಕವಿರುವುದಂತೂ ಸ್ಪಷ್ಟವಾಗಿದೆ.ಪಕ್ಷದ ಬಿ.ಆರ್.ಪಾಟೀಲ್, ಬಸವರಾಜ ರಾಯರೆಡ್ಡಿ, ಎಂ ಕೃಷ್ಣಪ್ಪ ಸೇರಿದಂತೆ ಹಲವು ಹಿರಿಯ ಶಾಸಕರೇ ಶಾಸಕಾಂಗ ಸಭೆ ಕರೆಯುವಂತೆ ಒತ್ತಡ ಹಾಕಿದ್ದಾರೆ. ಅಲ್ಲದೇ ಸಚಿವರ ವಿರುದ್ಧ ಶಾಸಕರ ಪತ್ರ ಸಮರ ಮತ್ತು ಸಿಎಂ ಸಿದ್ದರಾಮಯ್ಯ ಹಾಗೂ ಬಿ.ಕೆ.ಹರಿಪ್ರಸಾದ್ ನಡುವಿನ ಮುಸುಕಿನ ಗುದ್ದಾಟ ನಡೆಯುತ್ತಿರುವ ಹೊತ್ತಲ್ಲಿ ಈ ಸಭೆ ಭಾರೀ ಮಹತ್ವ ಪಡೆದುಕೊಂಡಿದೆ. 

    ಮತ್ತೊಂದು ಪತ್ರ ಮುಖ್ಯಮಂತ್ರಿಗಳಿಗೆ ತಲುಪಿರುವುದು ಅಸಲಿ ಎಂದು ಹೇಳಲಾಗುತ್ತಿದ್ದು ಅದರಲ್ಲಿ ಶಾಸಕರು ಮತ್ತು ಸಚಿವರುಗಳ ಮಧ್ಯೆ ಸಮನ್ವಯತೆಯಿರಬೇಕೆಂದು ಒತ್ತಾಯ ಮಾಡಲಾಗಿದೆ. ವೀರಶೈವ-ಲಿಂಗಾಯತ ಧರ್ಮಕ್ಕೆ ಸೇರಿದ ನಾಯಕರಾದ ಬಿ ಆರ್ ಪಾಟೀಲ್, ಬಸವರಾಜ ರಾಯರೆಡ್ಡಿಯವರು ಬರೆದಿದ್ದಾರೆ ಎಂದು ಹೇಳಲಾಗುತ್ತಿರುವ ಪತ್ರಗಳು ಅಸಲಿಯಾಗಿದ್ದು ಅದಕ್ಕೆ ಹಲವು ಶಾಸಕರು ಸಹಿ ಹಾಕಿದ್ದಾರೆ.

   
     ಸಚಿವರು ಅನುದಾನ ಬಿಡುಗಡೆಗೂ ಸಹಕರಿಸುತ್ತಿಲ್ಲವೆಂಬ ಆರೋಪವಿದ್ದು, ಸಿಎಂ ಡಿಸಿಎಂ ಎದುರು ದೂರುಗಳ ಸುರಿಮಳೆಯಾಗುವ ಸಾಧ್ಯತೆ ಇದೆ. ಇನ್ನು ವರ್ಗಾವಣೆಗೆ ಸಚಿವರ ಆಪ್ತರು ಹಣ ಕೇಳುತ್ತಿರುವ ಆರೋಪವೂ ಸಭೆಯಲ್ಲಿ ಸ್ಫೋಟಗೊಳ್ಳುವ ಸಾಧ್ಯತೆ ಇದೆ.

 

   ಈ ವಿಚಾರಗಳು ಇಂದಿನ ಸಿಎಲ್ ಪಿ ಸಭೆಯಲ್ಲಿ ಪ್ರಸ್ತಾಪವಾದರೆ ನಾಯಕರು ತೀವ್ರ ಎಚ್ಚರಿಕೆ ವಹಿಸುವ ಸಾಧ್ಯತೆಯಿದೆ. ಹೆಸರು ಹೇಳಲಿಚ್ಛಿಸದ ನಾಯಕರೊಬ್ಬರು ನೀಡಿರುವ ಮಾಹಿತಿ ಪ್ರಕಾರ, ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ಸಿಗದ ಹಲವು ಶಾಸಕರ ಆಟ ಇದಾಗಿದ್ದು ಸರ್ಕಾರದ, ಮುಖ್ಯಮಂತ್ರಿಗಳ ಮತ್ತು ಉಪ ಮುಖ್ಯಮಂತ್ರಿಗಳ ಗಮನ ಸೆಳೆಯುವ ಯತ್ನವಷ್ಟೆ ಎಂದಿದ್ದಾರೆ. ಈ ರೀತಿ ಮಾಡುವುದರಿಂದ ನಿಗಮ ಮಂಡಳಿಗಳಲ್ಲಿಯಾದರೂ ಅಧ್ಯಕ್ಷ ಸ್ಥಾನ ಸಿಗಬಹುದು ಎಂಬುದು ಅವರ ಆಸೆಯಾಗಿದೆ ಎನ್ನುತ್ತಾರೆ.

    ಬಿಕೆ ಹರಿಪ್ರಸಾದ್‌ ವಿಚಾರ ಕೂಡ ಕಾಂಗ್ರೆಸ್ ಪಕ್ಷದ ಬೇಗುದಿಗೆ ಕಾರಣವಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಎಚ್ ಕೆ ಪಾಟೀಲ್ ಕೆ ಎಚ್ ಮುನಿಯಪ್ಪ ಮನವೊಲಿಕೆ ಪ್ರಯತ್ನ ಮಾಡಿದರೂ ಹರಿಪ್ರಸಾದ್ ಬೇಸರ ಕಡಿಮೆಯಾಗಿಲ್ಲ ಎನ್ನಲಾಗಿದೆ. ಕೆಸಿ.ವೇಣುಗೋಪಾಲ್ ಮಧ್ಯಸ್ಥಿಕೆ ವಹಿಸಲಿದ್ದು, ಡಿಕೆ.ಶಿವಕುಮಾರ್ ಮತ್ತು ಕೆಎಚ್.ಮುನಿಯಪ್ಪ ಇಬ್ಬರೂ ಹರಿಪ್ರಸಾದ್ ಮನವೊಲಿಸಲಿದ್ದಾರೆ. ಬೋಸರಾಜು ಎಂಎಲ್​ಸಿ ಅವಧಿ ಮುಗಿದ ಬಳಿಕ ಹರಿಪ್ರಸಾದ್‌ಗೆ ಸಚಿವ ಸ್ಥಾನ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.

    ವೀರಶೈವ ಮಹಾಸಭಾದ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಮುಖ್ಯಮಂತ್ರಿಗಳಿಗೆ ಬರೆದ ಅಸಲಿ ಪತ್ರಕ್ಕೆ ಸಹಿ ಹಾಕಿರುವ ಬಹುತೇಕರು ವೀರಶೈವ ಲಿಂಗಾಯತ ಧರ್ಮಕ್ಕೆ ಸೇರಿದವರಾಗಿದ್ದಾರೆ. ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸುವುದು ಅವರ ತಂತ್ರವಾಗಿದೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ಇರುವುದರಿಂದ ಕಾಂಗ್ರೆಸ್ ನಾಯಕರು ಅಳೆದು ತೂಗಿ ಲೆಕ್ಕಾಚಾರ ಮಾಡುವ ಸಾಧ್ಯತೆಯಿದೆ.

    ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹಲವು ವೀರಶೈವ ಲಿಂಗಾಯತ ಧರ್ಮಕ್ಕೆ ಸೇರಿದ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿಕೊಂಡರು. ಇದು ಕಾಂಗ್ರೆಸ್ ಗೆ ಚುನಾವಣೆಯಲ್ಲಿ ಮತ ಗಳಿಕೆಗೆ ಸಹಕಾರಿಯಾಯಿತು ಕೂಡ. ವೀರಶೈವ ಲಿಂಗಾಯತ ಧರ್ಮಗಳ ನಂಬಿಕೆಯನ್ನು ಉಳಿಸಿಕೊಳ್ಳುವ ಅವಶ್ಯಕತೆ ಕಾಂಗ್ರೆಸ್ ಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap