ಕಳ್ಳಂಬೆಳ್ಳ ಕೆರೆಯತ್ತ ಸಾಗಿದ ಹೇಮಾವತಿ :ನೀರಿನ ಕ್ರೇಡಿಟ್ ಪಡೆಯಲು ಮುಂದಾದ ಪಕ್ಷಗಳು

ಶಿರಾ

      ಶಿರಾ ನಗರದ ಜನತೆಗೆ ಕುಡಿಯಲು ನೀರು ಪೂರೈಸುವ ದೊಡ್ಡ ಕೆರೆಯಲ್ಲಿದ್ದ ಹೇಮಾವತಿಯ ನೀರು ಇದೀಗ ಸಂಪೂರ್ಣ ಖಾಲಿಯಾಗುವ ಹಂತ ತಲುಪಿದೆ. ಕಳ್ಳಂಬೆಳ್ಳ ಕೆರೆಯಂತೂ ಕಳೆದ ಎರಡು ತಿಂಗಳ ಹಿಂದೆಯೇ ಹನಿ ನೀರಿಲ್ಲದೇ ಬಣಗುಡುತ್ತಿದೆ.ಪ್ರತಿ ವರ್ಷವೂ ಕನಿಷ್ಠ ಅರ್ಧಕ್ಕಿಂತಲೂ ಹೆಚ್ಚು ತುಂಬುತ್ತಿದ್ದ ಕಳ್ಳಂಬೆಳ್ಳ ಕೆರೆಗೆ ಈ ವರ್ಷ ನೀರು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹರಿದಿದೆ. ಈ ನಡುವೆ ಶಿರಾ ನಗರದ ಜನತೆಗೆ ಕುಡಿಯಲು ನೀರು ನೀಡುವ ಸಲುವಾಗಿ ಕಳ್ಳಂಬೆಳ್ಳ ಕೆರೆಯ ನೀರನ್ನು ಬಳಸಿಕೊಳ್ಳಲಾಗಿತ್ತು. ಕಳ್ಳಂಬೆಳ್ಳ ಕೆರೆಯು ಅರ್ಧಕ್ಕಿಂತಲೂ ಹೆಚ್ಚು ತುಂಬಿದಾಗ ಸೈಫನ್ ಪೈಪ್‍ಗಳ ಮೂಲಕ ಶಿರಾ ಕೆರೆಗೆ ಕುಡಿಯುವ ಉದ್ದೇಶದಿಂದ ಹರಿಸಿಕೊಳ್ಳಲಾಗಿತ್ತು.

     ಶಿರಾ ಕೆರೆಗೆ ಹೇಮಾವತಿ ಹರಿಯುವುದೇ ಕಷ್ಟ ಅನ್ನುತ್ತಿರುವಾಗ ಜಿಲ್ಲಾಡಳಿತವನ್ನು ಬೆನ್ನು ಹತ್ತಿ ಹಾಗೂ ಹೀಗೂ ಕ್ಷೇತ್ರದ ಶಾಸಕರು ಶಿರಾ ಕೆರೆಗೆ ಅಗತ್ಯಕ್ಕೆ ತಕ್ಕಷ್ಟು ನೀರನ್ನು ತುಂಬಿಸಿಕೊಂಡಿದ್ದರು. ಅದೇ ರೀತಿಯಲ್ಲಿ ಕಳ್ಳಂಬೆಳ್ಳ ಕೆರೆಯಲ್ಲೂ ಒಂದಷ್ಟು ನೀರನ್ನು ಶೇಖರಣೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮಾಜಿ ಸಚಿವ ಜಯಚಂದ್ರ ಸೇರಿದಂತೆ ಹೇಮಾವತಿ ಹೋರಾಟ ಸಮಿತಿ, ರೈತ ಸಂಘ ಕೂಡ ಈ ಎರಡೂ ಕೆರೆಗಳಿಗೆ ಹೆಚ್ಚಿನ ನೀರು ಹರಿಸಿಕೊಳ್ಳಲು ಅಧಿಕಾರಿಗಳ ಮೇಲೆ ಒತ್ತಡ ತಂದಿದ್ದು ನಿಜ.

     ಮೊದಲನೆಯ ಹಂತದಲ್ಲಿ ಕಳ್ಳಂಬೆಳ್ಳ-ಶಿರಾ ಕೆರೆಗೆ ಹೇಮಾವತಿ ಹರಿಯಿತಾದರೂ ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್‍ಡೌನ್ ಆದ ಕಾರಣದಿಂದಾಗಿ ಶಿರಾ ನಗರದ ಜನತೆಗೆ ಕುಡಿಯುವ ನೀರಿನ ಅಗತ್ಯತೆಯನ್ನು ಹೆಚ್ಚಾಗಿ ಪೂರೈಸಲಾಯಿತು. ಅದು ಅನಿವಾರ್ಯವೂ ಆಗಿತ್ತು. ಹೀಗಾಗಿ ಜುಲೈ ತಿಂಗಳವರೆಗೂ ಬಳಸಿಕೊಳ್ಳಬಹುದಿದ್ದ ಶಿರಾ ಕೆರೆಯ ನೀರು ಖಾಲಿಯಾಗುವ ಹಂತ ತಲುಪಿದ್ದು ಸಹಜವೂ ಹೌದು.
ಶಿರಾ ಕೆರೆಗೆ ಮೊದಲ ಹಂತದಲ್ಲಿ ಹರಿದಿದ್ದ ನೀರು ಇನ್ನು ಕೇವಲ 15 ದಿನ ಮಾತ್ರ ಬಳಸಲು ಸಾಧ್ಯವಿದೆ. ಇನ್ನು 15 ದಿನದೊಳಗೆ ಶಿರಾ ಕೆರೆಗೆ ಹೇಮಾವತಿ ಹರಿಯದೇ ಇದ್ದಲ್ಲಿ ನಿಜಕ್ಕೂ ನಗರದ ಜನತೆಯ ಪಾಡು ಹೇಳತೀರದಾಗಲಿದೆ.

     ಇನ್ನು ನಾಲ್ಕೈದು ತಿಂಗಳ ಮೊದಲೇ ಕೆರೆಯಲ್ಲಿನ ನೀರನ್ನು ಕಳೆದುಕೊಂಡ ಕಳ್ಳಂಬೆಳ್ಳ ಭಾಗದ ರೈತರ ಸ್ಥಿತಿಯಂತೂ ನಿಜಕ್ಕೂ ಶೋಚನೀಯವೇ ಸರಿ. ಕೆರೆಯಲ್ಲಿ ನೀರಿಲ್ಲದ ಪರಿಣಾಮ ರೈತರ ಅನೇಕ ಕೊಳವೆ ಬಾವಿಗಳ ಅಂತರ್ಜಲ ಸಂಪೂರ್ಣ ಬತ್ತಿ ಹೋಗಿದೆ. ರೈತರ ಅಡಕೆ-ತೆಂಗಿನ ತೋಟಗಳು ನೀರಿಲ್ಲದೆ ಒಣಗಿ ಹೋಗುತ್ತಿವೆ.

      ಈ ಎಲ್ಲಾ ಸಂಕಷ್ಟಗಳ ನಡುವೆ ತುಮಕೂರು ನಾಲಾವಲಯದ ಪಟ್ರಾವತನಹಳ್ಳಿ ಬಳಿಯ 109 ನೆ ಎಸ್ಕೇಪ್ ಗೇಟ್ ಮೂಲಕ ಎರಡನೆಯ ಹಂತದಲ್ಲಿ ಹೇಮಾವತಿಯ ನೀರು ಕಳ್ಳಂಬೆಳ್ಳ ಕೆರೆಯತ್ತ ಜೂನ್ 10 ರಿಂದ ಹರಿಯತೊಡಗಿದೆ.

     ಕಳೆದ ಹಲವು ದಿನಗಳಿಂದಲೂ ಹೇಮಾವತಿಯ ನೀರು ಬುಗುಡನಹಳ್ಳಿ ಕೆರೆಯತ್ತ ಹರಿಯುತ್ತಿತ್ತಾದರೂ ಶಿರಾ ಭಾಗಕ್ಕೆ ಹರಿಯಬಿಟ್ಟಿರಲಿಲ್ಲ. ಶಿರಾ ಹಾಗೂ ಕಳ್ಳಂಬೆಳ್ಳ ಕೆರೆಗೂ ಹರಿಸುವಂತೆ ಶಾಸಕ ಬಿ.ಸತ್ಯನಾರಾಯಣ್ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಮಾಜಿ ಸಚಿವರು ಹಾಗೂ ವಿವಿಧ ಸಂಘಟನೆಗಳು ಶಿರಾ-ಕಳ್ಳಂಬೆಳ್ಳ ಕೆರೆಗೆ ನೀರು ಹರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದರು.

      ಇದೀಗ ಜೂನ್ 10 ರಿಂದ ಹೇಮಾವತಿಯ ನಾಲೆಯಿಂದ 150 ಸಿ.ಎಂ.ಎಫ್.ಟಿ. ನೀರು ಕಳ್ಳಂಬೆಳ್ಳ-ಶಿರಾ ಕೆರೆಯತ್ತ ಹರಿಯತೊಡಗಿದೆ. ನೀರಾವರಿ ಸಮಿತಿ ಹಾಗೂ ಸರ್ಕಾರದ ಆದೇಶದಂತೆ ಸದರಿ ನೀರು ಕೇವಲ 13 ದಿನಗಳು ಮಾತ್ರ ಹರಿಯಲಿದ್ದು ಸಂಪೂರ್ಣ ಖಾಲಿಯಾಗಿರುವ ಕಳ್ಳಂಬೆಳ್ಳ ಕೆರೆಗೆ ಹಾಗೂ ಕೆಲವೇ ದಿನಗಳಲ್ಲಿ ಖಾಲಿಯಾಗಲಿರುವ ಶಿರಾ ಕೆರೆಗೆ ನೀರು ಹರಿಯಬಹುದೇ ಎಂಬ ಆತಂಕವೂ ಜನ ಸಾಮಾನ್ಯರಲ್ಲಿದೆ.

     ನಿಗದಿಗೊಳಿಸಿದ 13 ದಿನಗಳಲ್ಲಿ ಕಳ್ಳಂಬೆಳ್ಳ ಹಾಗೂ ಶಿರಾ ಕೆರೆಗಳಿಗೆ ನೀರು ಹರಿಯಬಲ್ಲದೆ ಎಂಬ ಅನುಮಾನವೂ ಜನತೆಯನ್ನು ಕಾಡುತ್ತಿದೆ. ಕಳೆದ ಹಲವು ವರ್ಷಗಳಲ್ಲಿ 13 ದಿನ ನೀರನ್ನು ಹರಿಸಿದಾಗ ಯಾವ ವರ್ಷವೂ ಕೂಡ ಈ ಎರಡೂ ಕೆರೆಗಳು ತುಂಬಿದ ನಿದರ್ಶನವಂತೂ ಇಲ್ಲ.

     ತುಮಕೂರು ನಾಲಾವಲಯದ ಪಟ್ರಾವತನಹಳ್ಳಿ 109 ನೆ ಎಸ್ಕೇಪ್ ಗೇಟ್ ಮೂಲಕ ಬುಧವಾರದಿಂದ ಹರಿಯತೊಡಗಿದ್ದು, ಕಳ್ಳಂಬೆಳ್ಳ ಕೆರೆಯವರೆಗೂ ಅನೇಕ ಹಳ್ಳ-ಕೊಳ್ಳಗಳನ್ನಷ್ಟೇ ಅಲ್ಲದೆ ಬೃಹತ್ ಪ್ರಮಾಣದ ಚೆಕ್ ಡ್ಯಾಂಗಳನ್ನೂ ತುಂಬಿಕೊಂಡು ನೀರು ಹರಿಯಬೇಕಿದೆ. ಈಗ ಕನಿಷ್ಠ ಕಳ್ಳಂಬೆಳ್ಳ ಕೆರೆಗಾದರೂ ಒಂದಷ್ಟು ನೀರು ಹರಿಯಬಹುದೇ ಎಂಬ ಸಂಶಯಗಳು ರೈತರನ್ನು ಕಾಡತೊಡಗಿವೆ.

    ಹೇಮಾವತಿಯ ನೀರು ನಿಗದಿಗೊಳಿಸಿದ 13 ದಿನದ ಒಳಗೆ ಶಿರಾ ಕೆರೆಗೆ ಹರಿಯುವುದೇ ಸಂಶಯವಿದ್ದು ಇಂತಹ ಸಮಯದಲ್ಲೂ ಕೆಲವು ರಾಜಕಾರಣಿಗಳ ಬೆಂಬಲಿಗರು ನಮ್ಮಿಂದಲೇ ಹೇಮಾವತಿಯ ನೀರು ಹರಿಯುತ್ತಿದೆ ಎಂದು ಮುಂದಿನ ಚುನಾವಣೆಯ ಲಾಭ ಪಡೆಯುವ ಹುನ್ನಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ನಡೆಸುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.

    ಜಿಲ್ಲಾ ಸಚಿವ ಮಾಧುಸ್ವಾಮಿ ಅವರಿಗೆ ವ್ಯಾಪಕವಾಗಿ ಒತ್ತಡ ತಂದೆವು, ಹೀಗಾಗಿ ಎರಡನೇ ಹಂತದ ನೀರು ಹರಿಯಿತು ಎಂದು ಈ ಭಾಗದ ಬಿಜೆಪಿ ಪಕ್ಷದ ಮುಖಂಡರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬೆನ್ನನ್ನು ತಾವು ತಟ್ಟಿಕೊಳ್ಳುತ್ತಿದ್ದರೆ, ಇತ್ತ ಮಾಜಿ ಸಚಿವರ ಬೆಂಬಲಿಗರು ತಾವೇನೂ ಕಡಿಮೆ ಇಲ್ಲ ಎಂಬಂತೆ ಮಾಜಿ ಸಚಿವರು ಸರ್ಕಾರದ ಮೇಲೆ ಹಾಗೂ ಜಿಲ್ಲಾಧಿಕಾರಿಗಳ ಮೇಲೆ ಹೇರಿದ ವ್ಯಾಪಕ ಒತ್ತಡವೆ ಹೇಮಾವತಿಯ ಎರಡನೇ ಹಂತದ ನೀರು ಹರಿಯಲು ಕಾರಣ ಅನ್ನುತ್ತಿದ್ದಾರೆ.

      ಯಾರೂ ಏನೇ ಬಡಾಯಿ ಕೊಚ್ಚಿಕೊಳ್ಳಲಿ ಈ ಕ್ಷೇತ್ರದ ಶಾಸಕರು ಪ್ರಬಲ ಒತ್ತಡ ತಂದ ಪರಿಣಾಮವಷ್ಟೇ ಹೇಮಾವತಿ ನೀರನ್ನು ಹರಿಯಬಿಡಲಾಗಿದ್ದು, ಕುಡಿಯಲು ನೀರನ್ನು ಪೂರೈಸಿಕೊಳ್ಳುವ ಸಲುವಾಗಿ ಶಾಸಕರು ಜಿಲ್ಲಾ ಸಚಿವರನ್ನಷ್ಟೇ ಅಲ್ಲ ಸರ್ಕಾರದ ಮೇಲೆಯೇ ವ್ಯಾಪಕ ಒತ್ತಡ ತಂದಿದ್ದರು ಎಂಬ ಹೇಳಿಕೆಯನ್ನು ಜೆಡಿಎಸ್ ಪಕ್ಷದ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.

      ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ನಡೆಯುತ್ತಿರುವುದೆ ನೀರಿನ ರಾಜಕಾರಣ ಎಂಬುದು ಜಗಜ್ಜಾಹೀರಾಗಿದೆ. ಆಯಾ ಪಕ್ಷಗಳ ರಾಜಕೀಯ ಮುಖಂಡರು ಸುಮ್ಮನಿದ್ದರೂ ಮತ್ತೆ ಮತ್ತೆ ಈ ಭಾಗದ ವಿವಿಧ ಪಕ್ಷಗಳ ಮುಖಂಡರ ಬೆಂಬಲಿಗರು ಮಾತ್ರ ನೀರು ಹರಿಸಿಕೊಂಡ  ತಮ್ಮ ಪಕ್ಷದ ಯಜಮಾನರುಗಳಿಗೆ ಕೊಡಿಸಿಕೊಡಲು ಸಾಮಾಜಿಕ ಜಾಲತಾಣಗಳಲ್ಲಿ ವಾದ-ಪ್ರತಿವಾದಗಳನ್ನೇ ನಡೆಸಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.

     ಗುರುವಾರದಿಂದ ಹೇಮಾವತಿಯ ನೀರು ಈ ಎರಡೂ ಕೆರೆಗಳತ್ತ ಹರಿಯಲು ಆರಂಭವಾಗಿದೆಯೇ ಹೊರತು ಹರಿಯುತ್ತಿರುವ ನೀರು ಇನ್ನೂ ಕೆರೆಗಳಿಗೆ ತಲುಪಿಯೇ ಇಲ್ಲವಾದರೂ, ರಾಜಕೀಯ ಮುಖಂಡರು ರಾಜಕಾರಣದ ಬೇಳೆ ಬೇಯಿಸಿಕೊಳ್ಳುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಜನ ಸಾಮಾನ್ಯರು ಕೂಡ ಪ್ರಶ್ನಿಸುವಂತಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap