ಸ್ಮಾರ್ಟ್‍ಸಿಟಿ ಕಾಮಗಾರಿ ಪರಿಣಾಮ ಪ್ರಮುಖ ರಸ್ತೆಗಳಲ್ಲೆಲ್ಲ ಸಂಚಾರಕ್ಕೆ ಸಂಕಟ

ತುಮಕೂರು

ವಿಶೇಷ ಲೇಖನ : ಆರ್.ಎಸ್.ಅಯ್ಯರ್

    ತುಮಕೂರು ನಗರದ ಹೃದಯಭಾಗದಲ್ಲಿ ಸ್ಮಾರ್ಟ್‍ಸಿಟಿ ಕಾಮಗಾರಿಗಳು ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳು ಏಕಕಾಲದಲ್ಲಿ ನಡೆಯುತ್ತಿರುವ ಪರಿಣಾಮ, ನಗರದ ಹೃದಯಭಾಗದ ರಸ್ತೆಗಳೆಲ್ಲ ಅಗೆತಕ್ಕೊಳಗಾಗುತ್ತಿದ್ದು ಜನ-ವಾಹನ ಸಂಚಾರಕ್ಕೆ ತೀವ್ರ ಸಂಕಟ ಸೃಷ್ಟಿಯಾಗಿದೆ. ಕಳೆದ ಕೆಲ ತಿಂಗಳುಗಳಿಂದ ಅನಿವಾರ್ಯವಾಗಿ ದಿನವೂ ಸಂಚಾರಿಗರ ಪಾಲಿಗೆ ನರಕಯಾತನೆ ಉಂಟಾಗುತ್ತಿದೆ.

    ತುಮಕೂರು ನಗರದ ಎಲ್ಲ ಪ್ರಮುಖ ವಾಣಿಜ್ಯ ವಹಿವಾಟುಗಳೆಲ್ಲವೂ ನಗರದ ಅಶೋಕ ರಸ್ತೆ, ಎಂ.ಜಿ.ರಸ್ತೆ, ಜನರಲ್ ಕಾರಿಯಪ್ಪ ರಸ್ತೆ, ಜೆ.ಸಿ. ರಸ್ತೆ, ವಿವೇಕಾನಂದ ರಸ್ತೆ, ಹೊರಪೇಟೆ ರಸ್ತೆ, ಮಂಡಿಪೇಟೆ ರಸ್ತೆ, ಗುಬ್ಬಿಗೇಟ್‍ನಿಂದ ಎಸ್.ಎಸ್.ವೃತ್ತದವರೆಗಿನ ಬಿ.ಎಚ್.ರಸ್ತೆಯ ಆಸುಪಾಸಿನಲ್ಲೇ ಕೇಂದ್ರೀಕೃತಗೊಂಡಿದೆ. ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ರೈಲು ನಿಲ್ದಾಣ, ಕೋರ್ಟು-ಕಚೇರಿಗಳು-ಬ್ಯಾಂಕುಗಳು, ಸಿನಿಮಾ ಮಂದಿರಗಳು ಹೀಗೆ ಎಲ್ಲವೂ ಈ ಭಾಗದಲ್ಲಿ ಹಾಗೂ ಆಸುಪಾಸಿನಲ್ಲೇ ಇವೆ.

   ತುಮಕೂರು ನಗರದ ಹೊರಭಾಗ ಎಷ್ಟೇ ಬಡಾವಣೆಗಳು ತಲೆಯೆತ್ತುತ್ತಿದ್ದರೂ, ಹೊರವಲಯದಲ್ಲಿ ವಾಣಿಜ್ಯ ಚಟುವಟಿಕೆಗಳು ಬೆಳೆಯುತ್ತಿದ್ದರೂ, ಸಹಜವಾಗಿಯೇ ನಗರದೊಳಗಿನ ಈ ಪ್ರದೇಶಗಳು ವಿಪರೀತ ಜನಾಕರ್ಷಣೆಯನ್ನು ಉಳಿಸಿಕೊಂಡಿವೆ. ಹೀಗಾಗಿಯೇ ಇಲ್ಲಿ ಸದಾ ಜನ-ವಾಹನ ಸಂಚಾರ ಅಧಿಕವಾಗಿರುತ್ತದೆ. ಇಂತಹ ಪ್ರಮುಖ ಪ್ರದೇಶದಲ್ಲೇ ಈಗ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು, ಸಹಜವಾಗಿಯೇ ಇದು ದಿನವೂ ಸಾಮಾನ್ಯ ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿವೆ.

   ಈ ತಕ್ಷಣಕ್ಕೆ ನಮ್ಮ ನಗರದಲ್ಲಿ ಬಿ.ಎಚ್.ರಸ್ತೆಯ ಗಾಯತ್ರಿ ಚಿತ್ರಮಂದಿರದಿಂದ ಹಿಡಿದು ಗುಂಚಿವೃತ್ತದವರೆಗಿನ ಎಂ.ಜಿ. ರಸ್ತೆಯೊಂದೇ ವಾಹನ ನಿಲುಗಡೆಗೆ, ವಾಹನ ಸಂಚಾರಕ್ಕೆ, ಜನಸಂಚಾರಕ್ಕೆ ಇರುವ ಏಕೈಕ ರಸ್ತೆಯೆಂದರೆ ಆ ರಸ್ತೆಯಲ್ಲಿ ಉಂಟಾಗಿರುವ ಟ್ರಾಫಿಕ್ ಒತ್ತಡ ಊಹಾತೀತವೆನಿಸದು. ಕಾರಣ, ಎಂ.ಜಿ.ರಸ್ತೆಗೆ ಪರ್ಯಾಯದಂತಿರುವ ಜನರಲ್ ಕಾರಿಯಪ್ಪ ರಸ್ತೆಯಲ್ಲಿ ಕಳೆದೊಂದು ವರ್ಷದಿಂದ ರಸ್ತೆ ಅಭಿವೃದ್ಧಿಯ ವಿವಿಧ ಸ್ವರೂಪದ ಕಾಮಗಾರಿಗಳು ನಡೆದಿದ್ದು, ಆ ಇಡೀ ರಸ್ತೆ ಒಂದರ್ಥದಲ್ಲಿ ಪಾಶ್ರ್ವವಾಯುಪೀಡಿತವಾಗಿದೆ.

    ಎಲ್ಲೆಂದರಲ್ಲಿ ಅಗೆತದಿಂದ ಇಡೀ ರಸ್ತೆ ಹಾಳಾಗಿದ್ದು, ಜನ-ವಾಹನ ಸಂಚಾರಕ್ಕೆ, ವಾಹನ ನಿಲುಗಡೆಗೆ ಭಾರಿ ಸಮಸ್ಯೆಯಾಗುತ್ತಿದೆ. ಇದೇ ರೀತಿಯ ಸಮಸ್ಯೆ ಅಶೋಕ ರಸ್ತೆಯಲ್ಲಿ ಟೌನ್ ಹಾಲ್ ವೃತ್ತದಿಂದ ಹಿಡಿದು ಸ್ವಾತಂತ್ರ್ಯಚೌಕದವರೆಗೂ ಇದೆ. ಪ್ರಸ್ತುತ ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಪುನರ್ ನಿರ್ಮಾಣ ಕಾಮಗಾರಿ ಆರಂಭವಾಗಿರುವುದರಿಂದ ಬಸ್ ನಿಲ್ದಾಣವು ಬಸವೇಶ್ವರ ರಸ್ತೆಯ ಡಿಪೋಗೆ ಸ್ಥಳಾಂತರಗೊಂಡಿದೆ.

    ಇದರಿಂದಾಗಿ ಇಲ್ಲಿಗೆ ಬಂದು ಹೋಗುವ ಬಸ್ಗಳು ಈ ರಸ್ತೆಯ ತಿರುವುಗಳಲ್ಲಿ ಪದೇ ಪದೇ ಟ್ರಾಫಿಕ್ ಜಾಮ್‍ಗೆ ಒಳಗಾಗುತ್ತಿರುತ್ತವೆ. ಬಸ್ ನಿಲ್ದಾಣ ಪ್ರವೇಶಿಸುವಾಗಲೂ ಎರಡೂ ದಿಕ್ಕುಗಳಿಂದ ವಾಹನಗಳು ನುಗ್ಗುವುದರಿಂದ ಅಲ್ಲೂ ಟ್ರಾಫಿಕ್ ಜಾಮ್ ಸಮಸ್ಯೆ ತಲೆಯೆತ್ತುತ್ತಿದೆ. ಇದೇ ರೀತಿ ಡಿಪೋದಿಂದ ನಿರ್ಗಮಿಸುವ ವಾಹನಗಳು ಗುಬ್ಬಿವೀರಣ್ಣ ಕಲಾಕ್ಷೇತ್ರದ ರಸ್ತೆಯನ್ನು ಅವಲಂಬಿಸಿದ್ದು, ಆ ರಸ್ತೆಯಲ್ಲೂ ಇದೇ ರೀತಿಯ ಸಮಸ್ಯೆಗಳು ಆಗುತ್ತಿವೆ.

     ಜೊತೆಗೆ ಪಕ್ಕದಲ್ಲೇ ಖಾಸಗಿ ಬಸ್ ನಿಲ್ದಾಣವೂ ಇದ್ದು, ಅಲ್ಲಿಗೆ ಬಂದು-ಹೋಗುವ ಬಸ್‍ಗಳೂ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದು, ಇಡೀ ಬಸವೇಶ್ವರ ರಸ್ತೆಯಲ್ಲಿ ಸಂಚರಿಸುವುದೇ ತಲೆನೋವಾಗಿ ಪರಿಣಮಿಸುತ್ತಿದೆ. ಇನ್ನು ಜೆ.ಸಿ.ರಸ್ತೆಯಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವೇನಿಲ್ಲ. ಕೆ.ಲಕ್ಕಪ್ಪ ವೃತ್ತದಿಂದ ಕಲಾಕ್ಷೇತ್ರದ ತಿರುವಿನವರೆಗೂ ಇಲ್ಲೀಗ ವಿಪರೀತ ವಾಹನ ಸಂಚಾರ ಇರುತ್ತದೆ. ಜೊತೆಗೆ ರಸ್ತೆ ಬದಿ ವ್ಯಾಪಾರಿಗಳೂ ಇಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದು, ಎಲ್ಲೂ ಸಹ ವಾಹನ ನಿಲುಗಡೆಗೆ ಹಾಗೂ ಪಾದಚಾರಿಗಳ ಸುರಕ್ಷಿತ ಸಂಚಾರಕ್ಕೆ ಅವಕಾಶವೇ ಇಲ್ಲವಾಗಿದೆ.

     ಅಶೋಕ ರಸ್ತೆಯಿಂದ ನೇರವಾಗಿ ಎಂ.ಜಿ.ರಸ್ತೆ ಮತ್ತು ಜನರಲ್ ಕಾರಿಯಪ್ಪ ರಸ್ತೆಯವರೆಗೂ ನೇರ ಸಂಪರ್ಕ ಕಲ್ಪಿಸುವ ವಿವೇಕಾನಂದ ರಸ್ತೆಯಂತೂ ರಸ್ತೆ ಅಗೆತದಿಂದ ನಜ್ಜುಗುಜ್ಜಾಗಿದ್ದು, ವಾಹನಗಳು ಆಮೆವೇಗದಲ್ಲಿ ಸಂಚರಿಸುವುದೂ ಕಷ್ಟವಾಗಿದೆ. ಇನ್ನು ಪಾದಚಾರಿಗಳ ಸ್ಥಿತಿಯಂತೂ ಚಿಂತಾಜನಕ. ವಾಹನ ನಿಲುಗಡೆಯೂ ಸಮಸ್ಯಾತ್ಮಕ. ಹೊರಪೇಟೆ ಮುಖ್ಯರಸ್ತೆಯು ಕೋತಿತೋಪಿನಿಂದ ಗುಬ್ಬಿಗೇಟ್‍ವರೆಗೆ ನೇರ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಈ ರಸ್ತೆಯ ಉದ್ದಕ್ಕೂ ಅಗೆದಿರುವುದರಿಂದ ಇಲ್ಲೂ ಸಹ ಜನ-ವಾಹನ ಸಂಚಾರ ಸದಾ ತೊಂದರೆಗೆ ಸಿಲುಕುತ್ತಿರುತ್ತದೆ. ಇವೆಲ್ಲ ರಸ್ತೆಗಳಲ್ಲಿ ಉಂಟಾಗಿರುವ ಒತ್ತಡ ಈಗ ಎಂ.ಜಿ.ರಸ್ತೆಯ ಮೇಲೆ ಬಿದ್ದಿದೆ. ಅಕ್ಕಪಕ್ಕದ ರಸ್ತೆಗಳಿಗೆ ಕಾರ್ಯಾರ್ಥ ಬರುವವರೆಲ್ಲರೂ, ಈಗ ಎಂ.ಜಿ.ರಸ್ತೆಯಲ್ಲೇ ವಾಹನ ನಿಲುಗಡೆ ಮಾಡಿ ತೆರಳುವ ಸಂದರ್ಭ ಉಂಟಾಗಿದೆ.

     ಕಾರಿಯಪ್ಪ ರಸ್ತೆಯ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಒಂದು ತಿಂಗಳಾದರೂ ಬೇಕಾದೀತೆಂದು ಹೇಳಲಾಗುತ್ತಿದೆ. ಅತ್ತ ಅಶೋಕ ರಸ್ತೆಯಲ್ಲಿ ಬಸ್ ನಿಲ್ದಾಣ ಪೂರ್ಣಗೊಳ್ಳಲು ಇನ್ನೂ ಎರಡು ವರ್ಷ ಆಗಲಿದ್ದು, ಆ ರಸ್ತೆಯಲ್ಲಿನ ಅಗೆತ ಸದ್ಯಕ್ಕಂತೂ ಪೂರ್ಣವಾಗಿಲ್ಲ. ಜೆ.ಸಿ.ರಸ್ತೆಯ ಸಮಸ್ಯೆ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ವಿವೇಕಾನಂದ ರಸ್ತೆಯಲ್ಲಂತೂ ಶಾಶ್ವತ ಪರಿಹಾರದ ಭರವಸೆಯೇ ಇಲ್ಲ.

     ಇಂತಹುದೊಂದು ಇಕ್ಕಟ್ಟಿನ ಸನ್ನಿವೇಶದಲ್ಲಿ ಎಂ.ಜಿ.ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನೂ ಈಗಲೇ ಆರಂಭಿಸಿಬಿಟ್ಟರೆ ಸದ್ಯಕ್ಕೆ ನಗರದ ಹೃದಯಭಾಗದ ಸ್ಥಿತಿ ಮತ್ತಷ್ಟು ಅಯೋಮಯ ಆಗುವುದರಲ್ಲಿ ಎರಡು ಮಾತಿಲ್ಲ.ಒಂದೆಡೆ ಸ್ಮಾರ್ಟ್‍ಸಿಟಿ ಕಾಮಗಾರಿಗಳು ನಡೆಯುತ್ತಿವೆ. ಇನ್ನೊಂದೆಡೆ ಒಳಚರಂಡಿ ಕಾಮಗಾರಿ, ಕುಡಿಯುವ ನೀರಿನ ಯೋಜನೆ ಕಾಮಗಾರಿ, ಬೆಸ್ಕಾಂನ ಭೂಗತ ಕೇಬಲ್ ಕಾಮಗಾರಿಗಳು ನಡೆದಿದ್ದು, ಯಾರು-ಎಲ್ಲಿ-ಯಾವಾಗ-ಏಕೆ ಅಗೆಯುತ್ತಾರೆಂಬುದೇ ಯಾರಿಗೂ ಗೊತ್ತಾಗದ ಗೊಂದಲದಲ್ಲಿ ಇವೆಲ್ಲ ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ.