ದಾವಣಗೆರೆ
ಜಿಲ್ಲಾದ್ಯಂತ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಯು ಅವಾಂತರ ಸೃಷ್ಟಿಸಿದ್ದು, ಬೆಳೆಹಾನಿ, ಮನೆಗಳ ಒಳಗೆ ನುಗ್ಗಿದ ನೀರು, ಮನೆ ಕುಸಿತ ಸೇರಿದಂತೆ ಅಪಾರ ಹಾನಿ ಸಂಭವಿಸಿ ಜನಜೀವನ ಅಸ್ತವ್ಯಸ್ತಗೊಂಡಿದೆ.ಭಾನುವಾರ ಮಧ್ಯಾಹ್ನ ತುಂತುರು ಹನಿಗಳೊಂದಿಗೆ ಆರಂಭವಾದ ಮಳೆಯು ರಾತ್ರಿ 8 ಗಂಟೆಯಷ್ಟೊತ್ತಿಗೆ ತನ್ನ ಆರ್ಭಟವನ್ನು ಜಿಲ್ಲಾದ್ಯಂತ ಮುಂದುವರೆಸಿತು. ಚನ್ನಗಿರಿ, ಹೊನ್ನಾಳಿ ತಾಲ್ಲೂಕಿನಲ್ಲಿ ಬಹಳಷ್ಟು ಬೆಳೆ ಹಾನಿ ಸಂಭವಿಸಿದ್ದು, ದಾವಣಗೆರೆ ನಗರದ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನರು ಇಡೀ ರಾತ್ರಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ದಾವಣಗೆರೆ ತಾಲ್ಲೂಕಿನ ಮುದಹದಡಿ, ದಾವಣಗೆರೆಯ ಶಾಮನೂರು, ಶಂಕರ ವಿಹಾರ ಬಡಾವಣೆ, ಎಸ್‍ಪಿಎಸ್ ನಗರ, ಜಾಲಿ ನಗರ, ಶೇಖರಪ್ಪ ನಗರ, ಎಸ್.ಎಂ.ಕೃಷ್ಣ ನಗರ, ಶಿವನಗರ ಸೇರಿದಂತೆ ಹಲವು ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದ್ದರಿಂದ ಈ ಭಾಗದ ನಿವಾಸಿಗಳು ತಮ್ಮ ಮನೆಗಳಿಗೆ ನುಗ್ಗಿದ ನೀರನ್ನು ಖಾಲಿ ಮಾಡಲು ರಾತ್ರಿವಿಡಿ ಜಾಗರಣೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು.
ಶಾಮನೂರು ರಾಚಪ್ಪನ ಬೀಳಿನಲ್ಲಿ ವೀರೇಶ್ ಅವರ ಮನೆ ಭಾಗಶಃ ಕುಸಿದಿದ್ದು, ಆ ಸಂದರ್ಭದಲ್ಲಿ ಮನೆಯಲ್ಲಿ ಯಾರು ಇರದ ಕಾರಣ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ಪ್ರದೇಶದಲ್ಲಿರುವ ಸುಮಾರು 130 ಮನೆಗಳಲ್ಲೂ ಮಳೆ ನೀರು ನುಗ್ಗಿದ್ದರೆ, ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಮಾಡಿದ ನಂತರ ಮನೆಗಳಿಗೆ ನೀರು ನುಗ್ಗವ ಸಮಸ್ಯೆ ಉಂಟಾಗಿದೆ.
ಮೊದಲು ಈ ಭಾಗದಿಂದ ಆ ಭಾಗಕ್ಕೆ ನೀರು ಹರಿಯಲು ಆರು ಪೈಪುಗಳನ್ನು ಹಾಕಲಾಗಿತ್ತು. ಆದರೆ, ಸರ್ವೀಸ್ ರಸ್ತೆಯಾದ ನಂತರ ಒಂದು ಪೈಪು ಮಾತ್ರ ಹಾಕಲಾಗಿದೆ. ಈ ಒಂದು ಪೈಲಿನಲ್ಲಿ ಕಸ ಕಡ್ಡಿ ತುಂಬಿರುವುದರಿಂದ ಮನೆಗಳಿಗೆ ನೀರು ನುಗ್ಗಲಾರಂಭಿತ್ತದೆ. ಈ ಬಗ್ಗೆ ಅಧಿಕಾರಿಗಳಿಗೆ ಹಲವು ಬಾರಿ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ರಾಚಪ್ಪನ ಬೀಳಿನ ನಿವಾಸಿಗಳಾದ ಗೌರಮ್ಮ, ರೇಖಾ.
ಕಳೆದ ಮೂರು ವರ್ಷಗಳಿಂದ ಮಳೆ ನೀರು ಮನೆಗಳಿಗೆ ನುಗ್ಗಲು ಆರಂಭವಾಗಿದ್ದು, ಮಳೆ ಬಂದರೆ, ಈ ಭಾಗದ ಜನತೆ ನೀರು ಹಾಕಲು ರಾತ್ರಿ ಇಡೀ ಜಾಗರಣೆ ಮಾಡಬೇಕಾಗಿದೆ. ವೃದ್ಧರೂ, ಮಕ್ಕಳು ಪಡುವ ಕಷ್ಟ ಅಷ್ಟಿಷ್ಟಲ್ಲ ಎಂದು ಇಲ್ಲಿನ ನಿವಾಸಿ ಸುನಿತಾ ಅಳಲು ತೋಡಿಕೊಂಡರು.
ಸಂಚಾರ ಅಸ್ತವ್ಯಸ್ತ :
ನಗರದಲ್ಲಿ ಮಳೆ ಬಂದಿದ್ದರಿಂದ ರಾಷ್ಟ್ರೀಯ ಹೆದ್ದಾರಿ ಹಾಗೂ ಕೆಳ ಸೇತುವೆ ಬಳಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಕತ್ತಲಿನಲ್ಲಿ ರಸ್ತೆಗಳ ಮಧ್ಯೆ ಗುಂಡಿಗಳು ಬಿದ್ದಿದ್ದು, ಅವುಗಳನ್ನು ತಿಳಿಯದೆ ವಾಹನ ಸವಾರರು ಬಿದ್ದು, ಗಾಯಗೊಂಡಿರುವ ಅವಘಡವು ಕಳೆದ ರಾತ್ರಿ ನಡೆದಿದೆ ಎಂದು ಸಾರ್ವಜನಿಕರು ಮಾಹಿತಿ ನೀಡಿದರು.
ನಗರದ ಶಂಕರ ವಿಹಾರ ಬಡಾವಣೆಯಲ್ಲಿ ಬಹಳಷ್ಟು ಮನೆಗಳಿಗೆ ಮಳೆಯ ನೀರು ನುಗ್ಗಿದ್ದು, ಈ ಭಾಗದಲ್ಲಿ ಸಮಪರ್ಕ ಒಳಚರಂಡಿ, ರಸ್ತೆ ವ್ಯವಸ್ಥೆ ಇಲ್ಲದಿರುವುದೇ ಪ್ರಮುಖ ಕಾರಣವಾಗಿದೆ ಎಂದು ಸ್ಥಳೀಯರು ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಭಾನುವಾರ ಸುರಿದ ಮಳೆಯಿಂದಾಗಿ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಹುತೇಕ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಹತ್ತು ವರ್ಷಗಳ ನಂತರ ಚನ್ನಗಿರಿ ಪಟ್ಟಣದ ಹರಿದ್ರಾವತಿ ಹಳ್ಳ ಮೈದುಂಬಿ ಹರಿಯುತ್ತಿದೆ. ಮಾವಿನಹೊಳೆ ಕೆರೆಯ ಕೋಡಿ ಬಿದ್ದಿದೆ. ಹಿರೇಹಳ್ಳ ತುಂಬಿ ಹರಿಯುತ್ತಿದೆ. ಭತ್ತದ ಗದ್ದೆ, ಅಡಕೆ ತೋಟ, ಮೆಕ್ಕೆಜೋಳದ ಹೊಲಗಳು ಜಲಾವೃತವಾಗಿವೆ. ಏಷ್ಯ ಖಂಡದ ಎರಡನೇ ಅತಿ ದೊಡ್ಡ ಕೆರೆ ಎಂದೆ ಖ್ಯಾತಿ ಪಡೆದಿರುವ ಸೂಳೆಕೆರೆ ತುಂಬಲು ಇನ್ನೂ ಮೂರ್ಕಾಲು ಅಡಿ ನೀರು ಮಾತ್ರ ಬಾಕಿ ಇದೆ ಎನ್ನಲಾಗಿದೆ.
ಇನ್ನೂ ಹೊನ್ನಾಳಿ ತಾಲೂಕಿನ ಸುಂಕದಕಟ್ಟೆ ಗ್ರಾಮದಲ್ಲಿ ಸಿಡಿಲು ಬಡಿದು ಒಂದು ಎತ್ತು ಮೃತಪಟ್ಟಿದೆ. ಹರಿಹರ ತಾಲೂಕಿನ ಮಲೇಬೆನ್ನೂರು ಸುತ್ತಮುತ್ತ ಭತ್ತದ ಗದ್ದೆ, ಅಡಕೆ ತೋಟಗಳಲ್ಲಿ ನೀರು ನಿಂತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








