ಹರಿಹರ:
ಪರಿಶಿಷ್ಟ ಪಂಗಡಕ್ಕೆ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಶೇ.7.5 ರಷ್ಟು ಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯಿಸಿ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಭಾನುವಾರ ನಾಯಕ ಸಮಾಜ ಬಾಂಧವರು ರಾಜನಹಳ್ಳಿಯಿಂದ ರಾಜಧಾನಿ ಬೆಂಗಳೂರು ವರೆಗೆ ಪಾದಯಾತ್ರೆ ಆರಂಭಿಸಿದ್ದಾರೆ.
ತಾಲೂಕಿನ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದ ಆವರಣದಲ್ಲಿರುವ ಲಿಂಗೈಕ್ಯ ಪುಣ್ಯನಂದಪುರಿ ಸ್ವಾಮೀಜಿ ಅವರ ಕೃತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ರಾಜಧಾನ ಬೆಂಗಳೂರು ವರೆಗೆ ಬೃಹತ್ ಪಾದಯಾತ್ರೆ ಆರಂಭಿಸಿದರು.
ವಿವಿಧ ಶ್ರೀಗಳ ಸಾಥ್:
ಪಾದಯಾತ್ರೆಗೆ ಹರಿಹರದ ವೀರಶೈವ-ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀವಚನಾನಂದ ಸ್ವಾಮೀಜಿ, ನಂದಿಗುಡಿಯ ಶ್ರೀಬಸವಕುಮಾರ ಸ್ವಾಮೀಜಿ, ವಿಜಯಪುರದ ವನಶ್ರೀ ಗುರುಪೀಠ ಶ್ರೀಗಳು, ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಹಿಮ್ಮಡಿ ಕೇತೇಶ್ವರ ಸ್ವಾಮೀಜಿಯವರು ಸಾಥ್ ನೀಡಿ, ಶುಭ ಹಾರೈಸಿದರು.
ಪಾದಯಾತ್ರೆಯ ನೇತೃತ್ವ ವಹಿಸಿದ್ದ ವಾಲ್ಮೀಕಿ ಗುರು ಪೀಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ಪರಿಶಿಷ್ಟ ಪಂಗಡಕ್ಕೆ ರಾಜ್ಯ ಸರ್ಕಾರವು ಕೇವಲ ರಾಜಕೀಯವಾಗಿ ಶೇ.7.5ರಷ್ಟು ಮೀಸಲಾತಿ ನೀಡುತ್ತಿದ್ದು, ಉದ್ಯೋಗ ಮತ್ತು ಶಿಕ್ಷಣದಲ್ಲಿ ಕೇವಲ ಶೇ.3 ರಷ್ಟು ಮಿಸಲಾತಿ ನೀಡುತ್ತಿದೆ. ಹೀಗಾಗಿ ನಮ್ಮ ಸಮುದಾಯದ ಮಕ್ಕಳು ಶಿಕ್ಷಣ ಹಾಗೂ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆಂದು ಆರೋಪಿಸಿದರು.
ರಾಜ್ಯ ಸರ್ಕಾರದ ಕ್ರಮದಿಂದಾಗಿ ಶೋಚಿತ ಸಮುದಾಯಗಳಲ್ಲಿ ಒಂದಾಗಿರುವ ಪರಿಶಿಷ್ಟ ಪಂಗಡಕ್ಕೆ ಸಾಕಷ್ಟು ಅನ್ಯಾಯವಾಗಿದೆ. ನಾಯಕ ಸಮುದಾಯದವರು ವ್ಯಕ್ತಿ ಆರಾಧನೆ ಹಾಗೂ ಪಕ್ಷ ಆರಾಧನೆಯಲ್ಲಿ ತಮ್ಮ ಇಡೀ ಜೀವನಮಾನ ಕಳೆದಿದ್ದಾರೆ. ಇನ್ನಾದರೂ ವಾಲ್ಮೀಕಿ ಹೆಸರಿನಲ್ಲಿ ಧರ್ಮದ ತಳಹದಿಯಲ್ಲಿ ಸಂಘಟಿತರಾಗಿ ಸರ್ಕಾರದ ಕಿವಿ ಹಿಂಡಬೇಕೆಂದು ಕರೆ ನೀಡಿದರು.
ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿಯವರ ಜೊತೆ ನಾವೆಲ್ಲರು ಇದ್ದೇವೆ. ಸರ್ಕಾರ ಈಗಲಾದರೂ ನಮ್ಮ ಕೂಗಿಗೆ ಬೆಲೆ ಕೊಡಬೇಕು. ಹಿಂದೆ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಮನವಿ ಸಲ್ಲಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಎಚ್ಚೆತ್ತು ಸರ್ಕಾರ ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಪ್ರಸ್ತುತ ನೀಡುತ್ತಿರುವ ಶೇ.3ರಷ್ಟು ಮೀಸಲಾತಿಯನ್ನು ಶೇ.7.5ಕ್ಕೆ ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಶಾಸಕ, ಬಿಜೆಪಿ ಮುಖಂಡ ಬಿ.ಶ್ರೀರಾಮುಲು ಸುದ್ದಿಗಾರರೊಂದಿಗೆ ಮಾತನಾಡಿ, ಪರಿಶಿಷ್ಟ ಪಂಗಡಕ್ಕೆ ಶಿಕ್ಷಣ, ಉದ್ಯೋಗದಲ್ಲಿ ಶೇ.7.5 ಮೀಸಲಾತಿಗೆ ಒತ್ತಾಯಿಸಿ ರಾಜನಹಳ್ಳಿ ಶ್ರೀವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಸಾರಥ್ಯದಲ್ಲಿ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಸಮಾಜದ ಈ ಹೋರಾಟದಲ್ಲಿ ನಾವು ಜಯಶೀಲರಾಗಬೇಕು. ನಾಯಕ ಸಮುದಾಯದ ಹೋರಾಟವು ಯಾವುದೇ ಸಮಾಜ, ಜಾತಿಯ ವಿರುದ್ಧದ ಹೋರಾಟವಲ್ಲ. ನಮ್ಮ ಹಕ್ಕಿಗಾಗಿ ಸಂಘಟಿತ ಹೋರಾಟ ಆರಂಭಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಅನೇಕ ವರ್ಷದಿಂದಲೂ ಪರಿಶಿಷ್ಟ ಪಂಗಡಕ್ಕೆ ಶೇ.7.5 ಮೀಸಲಾತಿಗೆ ಒತ್ತಾಯಿಸಿ ಹೋರಾಟ ನಡೆಸಿಕೊಂಡೇ ಬಂದಿದ್ದೇವೆ. ಆದರೆ, ಈ ವರೆಗೆ ಆಳಿರುವ ಎಲ್ಲಾ ಸರ್ಕಾರಗಳು ಹಾಗೂ ಯಾವ ಮುಖ್ಯಮಂತ್ರಿಗಳು ಸಹ ನಮ್ಮ ಸಮುದಾಯದ ಕೂಗಿಗೆ ಸ್ಪಂದಿಸಿಲ್ಲ. ಜನಸಂಖ್ಯೆ ಆಧಾರದಲ್ಲಿ ಪರಿಶಿಷ್ಟ ಪಂಗಡಕ್ಕೆ ಶೇ.7.5 ಮೀಸಲಾತಿ ನೀಡುವಂತೆ ಒತ್ತಾಯಿಸಿ ಸಮಾಜಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ನಡೆಸಲಿದ್ದೇವೆ ಎಂದು ಹೇಳಿದರು.
ಪಾದಯಾತ್ರೆಯಲ್ಲಿ ಶಾಸಕರಾದ ಎಸ್ ರಾಮಪ್ಪ, ಎಂ.ಪಿ.ರೇಣುಕಾಚಾರ್ಯ, ಎಸ್.ವಿ.ರಾಮಚಂದ್ರ, ರಘುಮೂರ್ತಿ, ಗಣೇಶ್, ಬಳ್ಳಾರಿ ಸಂಸದ ದೇವೇಂದ್ರಪ್ಪ, ಮಾಜಿ ಶಾಸಕರಾದ ಎಚ್.ಎಸ್ ಶಿವಶಂಕರ್, ಬಿ.ಪಿ ಹರೀಶ್, ರಾಜ್ಯ ಜೆಡಿಎಸ್ ಪರಿಶಿಷ್ಟ ಪಂಗಡ ವಿಭಾದ ಅಧ್ಯಕ್ಷ ಹೊದಿಗೆರೆ ರಮೇಶ್ , ಸಮಾಜದ ಮುಖಂಡರಾದ ಎಚ್.ಕೆ.ರಾಮಚಂದ್ರಪ್ಪ, ಕೆ.ಎಚ್.ಓಬಳಪ್ಪ, ಹದಡಿ ಎಂ.ಬಿ.ಹಾಲಪ್ಪ, ಬಿ.ವೀರಣ್ಣ, ಕುರ್ಕಿ ಮುರುಗೇಂದ್ರಪ್ಪ, ವಿನಾಯಕ ಪೈಲ್ವಾನ್, ಗುಮ್ಮನೂರು ಮಲ್ಲಿಕಾರ್ಜುನ್, ಅಣ್ಣಾಪುರದ ಹೇಮಣ್ಣ, ಗೋಣಿವಾಡದ ಮುರುಗೆಪ್ಪ, ಕಂದಗಲ್ಲು ಮಂಜಣ್ಣ, ಅಣಜಿ ಅಂಜಿನಪ್ಪ, ಚಟ್ಟೋಬನಹಳ್ಳಿ ಕರಿಓಬಣ್ಣ, ಲಕ್ಷ್ಮಣ, ಶ್ರೀನಿವಾಸ ದಾಸಕರಿಯಪ್ಪ, ಕಲ್ಕರೆ ಮಂಜಣ್ಣ, ಲೋಕಿಕೆರೆ ಓಬಳೇಶ್, ಮಹಾಲಕ್ಷ್ಮೀಚಂದ್ರಪ್ಪ, ವಿಜಯಶ್ರೀ, ಹೊನ್ನಾಳಿ ಚಂದ್ರಪ್ಪ, ಹರಿಹರದ ಪುಟ್ಟಪ್ಪ, ಜಿಗಳಿ ರಂಗಪ್ಪ, ಮಂಜಣ್ಣ, ವಿಜಯಶ್ರೀ, ಗೌರಮ್ಮ, ಕರಿಯಪ್ಪ, ಮಾರುತಿ, ರಮೇಶ್, ಬಸವಣ್ಣ, ಗಂಗಣ್ಣ ಹಾಗೂ ಸಮಾಜದ ಜಿಲ್ಲಾ ಪಂಚಾಯಿತಿ , ತಾಲೂಕು ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.