ಸರಳ ಬದುಕಿಗೆ ಶರಣಾಗುವ ಮನಸ್ಥಿತಿಯೆ?

ತುಮಕೂರು

     ಕೊರೊನಾ ವೈರಸ್ ಹಾವಳಿ ಹಾಗೂ ಲಾಕ್‍ಡೌನ್ ನಂತರ ಖರೀದಿ ಹವ್ಯಾಸದ ಮನೋಭಾವಕ್ಕೆ ಜನರು ಕಡಿವಾಣ ಹಾಕಿಕೊಂಡಂತಿದೆ. ಈ ಮೊದಲು ಇದ್ದಂತೆ, ಬಯಸಿದ್ದನ್ನೆಲ್ಲಾ, ಹೊಸತು ಕಂಡದ್ದನ್ನೆಲ್ಲಾ ಕೊಳ್ಳುವ ಕೊಳ್ಳುಬಾಕ ಸಂಸ್ಕøತಿ ಜನರಲ್ಲಿ ಈಗ ಇಲ್ಲವಾಗುತ್ತಿದೆ. ಒಂದಲ್ಲಾ ಒಂದು ವಿಧದಲ್ಲಿ ಎಲ್ಲರೂ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಲೇ ಇದ್ದಾರೆ. ಇದರ ಪರಿಣಾಮವಾಗಿ ತೀರಾ ಅಗತ್ಯವಾದ ಅಥವಾ ದಿನಬಳಕೆ ಪದಾರ್ಥಗಳ ಹೊರತಾಗಿ ಇನ್ನಾವುದನ್ನೂ ಖರೀದಿ ಮಾಡಲು ಜನ ಹಿಂಜರಿಯುತ್ತಿದ್ದಾರೆ. ಇದಕ್ಕೆ ಜನರಲ್ಲಿ ಆದಾಯ ಕಮ್ಮಿಯಾಗಿರುವುದು ಒಂದಾದರೆ, ಅಂತಹ ಪದಾರ್ಥಗಳ ಅಗತ್ಯವೂ ಇಲ್ಲ ಎನ್ನುವ ಬದಲಾದ ಭಾವನೆ ಇರಬಹುದು.

    ಕೊರೊನಾ ಹಾಗೂ ಲಾಕ್‍ಡೌನ್ ನಂತರ ಜನರು ತಮ್ಮ ಬದುಕನ್ನು ಸರಳಗೊಳಿಸಿಕೊಳ್ಳುತ್ತಿದ್ದಾರೆ ಎನ್ನುವ ಲಕ್ಷಣಗಳು ಇಂದಿನ ವ್ಯಾಪಾರ ವಹಿವಾಟು ಗಮನಿಸಿದರೆ ಸ್ಪಷ್ಟವಾಗಿ ಕಂಡುಬರುತ್ತದೆ. ಹಿಂದಿನಂತೆ ಐಷಾರಾಮಿಗೆ, ಆಡಂಬರಕ್ಕೆ ಮುಗಿಬೀಳುತ್ತಿಲ್ಲ ಎನ್ನುವ ಅಭಿಪ್ರಾಯವೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

   ತುಮಕೂರು ಜನರ ಕೊಳ್ಳುವ ಮನಸ್ಥಿತಿಯ ಏರುಪೇರಿಗೆ ನಗರದ ಎಂ.ಜಿ.ರಸ್ತೆಯ ಅಂಗಡಿ ಮಳಿಗೆಗಳ ವ್ಯಾಪಾರ ಸ್ಥಿತಿಗತಿಯೇ ಕನ್ನಡಿ ಹಿಡಿಯುತ್ತದೆ. ಅಂದಿನಿಂದ ತುಮಕೂರು ಜನರ ಅಭಿರುಚಿ ಬೆಳೆಸುವ, ತಕ್ಕಂತೆ ಬದಲಾವಣೆ ಮಾಡಿಕೊಂಡು ಬಂದಿರುವ ಎಂ.ಜಿ.ರಸ್ತೆಯ ವ್ಯಾಪಾರ ವಹಿವಾಟು, ಕೊರೊನಾ ಸಂಕಷ್ಟ ಕಾಲದಲ್ಲಿ ಯಾವ ಬದಲಾವಣೆಯನ್ನೂ ನಿರೀಕ್ಷಿಸುವ ಸ್ಥಿತಿಯಲ್ಲಿಲ್ಲ. ಇದಕ್ಕೆಲ್ಲಾ ಪ್ರಮುಖ ಕಾರಣ ಜನರ ಆರ್ಥಿಕ ಸಂಕಷ್ಟ.

    ತುಮಕೂರಿನ ಬಟ್ಟೆ ಅಂಗಡಿಗಳಲ್ಲೂ ಕೊಳ್ಳುವ ಗ್ರಾಹಕರ ಸಂಖ್ಯೆ ತೀರಾ ಕಡಿಮೆಯಾಗಿದೆ. ಬ್ರಾಂಡೆಡ್ ಉಡುಪುಗಳಿಗೂ ಬೇಡಿಕೆ ಇಲ್ಲ. ಮದುವೆ ಸಮಾರಂಭಗಳಿಲ್ಲ, ಜಾತ್ರೆ ಉತ್ಸವಗಳಿಲ್ಲ. ಹೊಸ ಡ್ರೆಸ್ ಹಾಕಿಕೊಂಡು ಎಲ್ಲಿಗೂ ಹೋಗುವಂತಿಲ್ಲ, ಇನ್ನಾವ ಸಡಗರಕ್ಕೆ ಖರೀದಿ ಮಾಡಬೇಕು ಎನ್ನುವಂತಾಗಿದೆ. ರೇಷ್ಮೆ ಸೀರೆಗಳ ಮಾರಾಟ ತೀರಾ ಕುಸಿದಿದೆ. ಮದುವೆ ಸೀಜನ್‍ನಲ್ಲಿ ರೇಷ್ಮೆ ಮಾರಾಟ ಭರಾಟೆ ಇರುತ್ತಿತ್ತು. ಈ ವರ್ಷ ಮದುವೆಗಳು ನಡೆಯದೆ ಜವಳಿ ವ್ಯಾಪಾರಕ್ಕೆ ಕಿಮ್ಮತ್ತು ಬರಲಿಲ್ಲ.

    ಹಳ್ಳಿಗಳಿಂದ ಜನ ತುಮಕೂರಿಗೆ ಬರುತ್ತಿಲ್ಲ. ಎಂ.ಜಿ.ರಸ್ತೆಯ ಬಹುತೇಕ ಅಂಗಡಿಗಳ ವ್ಯಾಪಾರ ಸುತ್ತಮುತ್ತಲ ಹಳ್ಳಿಗಳಿಂದ ಬರುವ ಜನರೇ ಪ್ರಮುಖ ಗ್ರಾಹಕರು. ಬಸ್ ವ್ಯವಸ್ಥೆ ಬಂದ್ ಆಗಿ ಹಳ್ಳಿ ಜನ ಬರುತ್ತಿಲ್ಲ. ಹೇಗಾದರೂ ಸರಿ ತುಮಕೂರಿಗೆ ಬಂದು ಖರೀದಿ ಮಾಡಬೇಕು ಎನ್ನುವ ತುರ್ತು, ಅಗತ್ಯವೂ ಅವರಿಗಿಲ್ಲ, ಬೇಕಾದ್ದನ್ನೆಲ್ಲಾ ಕೊಳ್ಳುವ ಹಣವೂ ಅವರಲ್ಲಿಲ್ಲ ಎಂದು ಬಟ್ಟೆ ಅಂಗಡಿಯೊಂದರ ಮಾಲೀಕರು ಹೇಳುತ್ತಾರೆ.

   ಹಬ್ಬ ಹರಿದಿನ, ಮದುವೆ ಸೀಜನ್‍ನಲ್ಲಿ ನಮ್ಮ ಅಂಗಡಿಯಲ್ಲಿ ಗ್ರಾಹಕರು ತುಂಬಿರುತ್ತಿದ್ದರು. ಹತ್ತಾರು ಸೇಲ್ಸ್‍ಗರ್ಲ್‍ಗಳಿಗೆ ರಾತ್ರಿವರೆಗೂ ಬಿಡುವಾಗದಷ್ಟು ವ್ಯಾಪಾರವಾಗುತ್ತಿತ್ತು. ಈಗ ಗ್ರಾಹಕರೂ ಬರುತ್ತಿಲ್ಲ. ಅಂಗಡಿಯಲ್ಲಿ ಮೊದಲಿನಷ್ಟು ಸಿಬ್ಬಂದಿಯೂ ಇಲ್ಲ ಎಂದರು .ಎಂ.ಜಿ.ರಸ್ತೆಯ ಬಹುತೇಕ ವ್ಯಾಪಾರಿಗಳದ್ದೂ ಇದೇ ಅಭಿಪ್ರಾಯ. ವ್ಯಾಪಾರ ಆಗುವುದಿಲ್ಲ ಎಂದು ಗೊತ್ತಿದ್ದೂ ನಿತ್ಯ ಅಂಗಡಿ ತೆರೆಯುತ್ತೇವೆ, ಆದಷ್ಟೇ ಭಾಗ್ಯ ಎಂದುಕೊಳ್ಳುತ್ತೇವೆ. ವ್ಯಾಪಾರ ಆಗಲಿಲ್ಲ ಎಂದು ಈಗ ಸಂಕಟಪಡುವಂತಿಲ್ಲ. ಅಕ್ಕಪಕ್ಕದ ಅಂಗಡಿಗಳಲ್ಲಿ ಗ್ರಾಹಕರು ತುಂಬಿರುತ್ತಾರೆ, ನಮ್ಮ ಅಂಗಡಿಯಲ್ಲಿ ಜನ ಬರುತ್ತಿಲ್ಲ ಎನ್ನುವುದಾದರೆ ಸಂಕಟ, ವ್ಯವಹಾರ ಮಾತ್ಸರ್ಯ ಉಂಟಾಗಬಹುದು, ಅವರಿಗೂ ಇಲ್ಲ, ನಮಗೂ ಇಲ್ಲ ಎನ್ನುವಂತಾಗಿರುವಾಗ ದು:ಖಪಡುವ ಅಗತ್ಯವಿಲ್ಲ. ಪ್ರಪಂಚದ ಎಲ್ಲಾ ವ್ಯವಹಾರಗಳ ಪರಿಸ್ಥಿತಿಯೂ ಇದೇ ಆಗಿದೆ ಎನ್ನುವಾಗ ಪರಿಸ್ಥಿತಿಗೆ ಸಮಾಧಾನ ಪಟ್ಟುಕೊಳ್ಳದೆ ಗತ್ಯಂತರವಿಲ್ಲ ಎನ್ನುತ್ತಾರೆ.

   ಯಾವ ವ್ಯವಹಾರ ನಿಂತರೂ ಆರೋಗ್ಯ ಸೇವೆ ಲಡೆಗಣಿಸುವಂತಿಲ್ಲ ಆದರೆ, ಕಾಯಿಲೆಕಸಾಲೆ ಎಂದು ವೈದ್ಯರ ಬಳಿ ತಪಾಸಣೆಗ ಬರುವವರೂ ಕಮ್ಮಿಯಾಗಿದ್ದಾರೆ. ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‍ಗಳಲ್ಲಿ ರೋಗಿಗಳ ಸಂಖ್ಯೆ ಮೊದಲಿನಷ್ಟಿಲ್ಲ. ನಿತ್ಯ ಟೋಕನ್ ಪಡೆದು, ವೈದ್ಯರ ಭೇಟಿಗಾಗಿ ಗಂಟೆಗಟ್ಟಲೆ ಕಾಯುವ ಸ್ಥಿತಿ ಇತ್ತು, ಈಗ ಬಹುತೇಕ ಕ್ಲಿನಿಕ್‍ಗಳ ವೈದ್ಯರು ರೋಗಿಗಳಿಗಾಗಿ ಕಾಯುವಂತಾಗಿದೆ. ಹಿಂದೆ, ಜನ ಫೋನ್ ಮಾಡಿ, ವೈದ್ಯರ ಭೇಟಿಗೆ ದಿನಾಂಕ ಕಾಯ್ದಿರಿಸುತ್ತಿದ್ದರು. ಈಗ ಅಂತಹ ಪರಿಸ್ಥಿತಿ ಇಲ್ಲ. ಮುಖ್ಯವಾಗಿ ಹಳ್ಳಿಗಳಿಂದ ಜನ ಬಂದು ಹೋಗಲು ವ್ಯವಸ್ಥೆ ಇಲ್ಲದಿರುವುದು ಇದಕ್ಕೆ ಕಾರಣ ಎಂದು ಹೆಸರು ಬಯಸದ ವೈದ್ಯರೊಬ್ಬರು ಹೇಳುತ್ತಾರೆ.

   ವೈದ್ಯರ ಬಳಿಗೇ ರೋಗಿಗಳು ಬರುವುದು ಕಡಿಮೆಯಾಗಿದೆ ಎಂದ ಮೇಲೆ ಮೆಡಿಕಲ್ ಸ್ಟೋರ್‍ಗಳ ವ್ಯಾಪಾರವೂ ಡಲ್. ಹಾಗೆಂದು ಇತರೆ ವ್ಯಾಪಾರದಷ್ಟು ಕುಸಿದಿಲ್ಲವಾದರೂ ಹಿಂದಿನಂತೆ ಯಥಾಸ್ಥಿತಿಯ ವ್ಯಾಪಾರ ನಡೆಯುತ್ತಿಲ್ಲ. ಬಿಪಿ, ಶುಗರ್ ಮತ್ತಿತರ ಕಾಯಿಲೆಗಳಿಗೆ ನಿಯಮಿತವಾಗಿ ಔಷಧಿ, ಮಾತ್ರೆ ಕೊಳ್ಳುವವರು ಬರುತ್ತಾರೆ ಹೊರತು ಹೆಚ್ಚಿನದನ್ನು ನಿರಕ್ಷಿಸುವಂತಿಲ್ಲ ಎಂಬುದು ಔಷಧಿ ವ್ಯಾಪಾರಿಗಳ ಅಭಿಪ್ರಾಯ.

    ಕೊರೊನಾ ಸೋಂಕು ಹರಡಲು ಶುರುವಾದ ನಂತರದಿಂದ ಜನರಲ್ಲಿ ಕೊರೊನಾ ಭಯ ಹೊರತಾಗಿ ಇನ್ನಾವುದೇ ಕಾಯಿಲೆ ಭೀತಿ ಇದ್ದಂತಿಲ್ಲ. ಸಣ್ಣಪುಟ್ಟ ಕಾಯಲೆಗಳಿಗೆ ಜನ ಆಸ್ಪತ್ರೆಗಳಿಗೆ ಬರುತ್ತಿಲ್ಲ. ಲಾಕ್‍ಡೌನ್ ನಂತರ ಜನರ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿದೆ ಎನಿಸುತ್ತಿದೆ ಎಂದು ಆಯುರ್ವೇದ ಭಂಡಾರದ ಸುಬ್ರಹ್ಮಣ್ಯ ಅಡಿಗ ಅಭಿಪ್ರಾಯಪಟ್ಟಿದ್ದಾರೆ.

    ಲಾಕ್‍ಡೌನ್‍ನಿಂದ ವಾಹನ ಸಂಚಾರ ಸ್ಥಗಿತಗೊಂಡು ಪರಿಸರ ಮಾಲಿನ್ಯ ನಿವಾರಣೆ ಆಗಿದೆ. ಹೊಗೆ, ಧೂಳಿನ ಕಾಯಿಲೆ ನಿಯಂತ್ರಣದಲ್ಲಿವೆ. ಕೆಲಸಕಾರ್ಯ, ವ್ಯವಹಾರಗಳಿಗೆ ಹೋಗಿಬರುವ ಧಾವಂತ ಕಮ್ಮಿಯಾಗಿದೆ, ಅನಗತ್ಯ ಓಡಾಟವೂ ಕಡಿಮೆಯಾಗಿ ದೈಹಿಕ, ಮಾನಸಿಕ ಒತ್ತಡ ಸಮಸ್ಯೆಗಳೂ ಈಗ ನಿಯಂತ್ರಣದಲ್ಲಿವೆ. ಲಾಕ್‍ಡೌನ್ ನಂತರ ಜನ ಹೊರಗೆ ಊಟ, ತಿಂಡಿ, ಚಾಟ್ಸ್ ತಿನ್ನುವುದನ್ನು ಬಿಟ್ಟು ಮನೆ ಊಟ ಅಭ್ಯಾಸ ಹೆಚ್ಚುಮಾಡಿಕೊಂಡಿದ್ದಾರೆ. ಮದುವೆ ಮತ್ತಿತರ ಸಮಾರಂಭಗಳ ಊಟ ಮಾಡುವ ಅವಕಾಶವೂ ಇಲ್ಲ. ಪ್ರವಾಸ, ವೀಕ್‍ಎಂಡ್ ಪಾರ್ಟಿ, ಹೋಟೆಲ್, ಬೇಕರಿ ಪದಾರ್ಥಗಳ ಸೇವನೆಯೂ ಕಡಿಮೆಯಾಗಿ ಅನಾರೋಗ್ಯಕರ ಆಹಾರ ಸೇವನೆಗೆ ಕಡಿವಾಣಬಿದ್ದು ಜನರ ಆರೋಗ್ಯ ಸುಧಾರಣೆಯಾಗಿದೆ ಎಂದು ಹೇಳುತ್ತಾರೆ.

    ಜನರ ಆದಾಯ ಕಮ್ಮಿಯಾಗಿದೆ, ದುಂದುವೆಚ್ಚಗಳಿಗೆ ಕಡಿವಾಣ ಹಾಕಿ ಸರಳ ಬದುಕಿಗೆ ಜನ ಹೊಂದಿಕೊಳ್ಳುತ್ತಿದ್ದಾರೆ. ಜನರ ಮನಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ, ಬದುಕಿನ ವೇಗವೂ 30 ವರ್ಷಗಳ ಹಿಂದಿನಷ್ಟು ನಿಧಾನಗತಿಗಿಳಿದೆ ಎನ್ನುತ್ತಾರೆ.ಈಗ ಜನ ಹೋಟೆಲ್, ಬೇಕರಿ, ಚಾಟ್ಸ್ ಪದಾರ್ಥಗಳ ಸೇವನೆಗೂ ಹಿಂಜರಿಯುತ್ತಿದ್ದಾರೆ. ಮೊದಲಿನಂತೆ ಆಸೆಪಟ್ಟು ಹೋಟೆಲ್‍ಗಳಿಗೆ ಬರುತ್ತಿಲ್ಲ, ಕುಟುಂಬ ಸಮೇತ ಬಂದು ಹೊರಗಿನ ತಿನಿಸು ವರ್ಜಿಸಿದಂತಿದೆ. ಬೇಕರಿ ತಿನಿಸುಗಳನ್ನು ಬಯಸುತ್ತಿಲ್ಲ, ಪಾರ್ಸೆಲ್ ಕೊಂಡುಹೋಗುತ್ತಿಲ್ಲ ಎಂದು ಮಧುರಾ ಬೇಕರಿ ಮಾಲೀಕ ವಾದಿರಾಜ್ ಹೇಳುತ್ತಾರೆ.

   ಜನರ ಅಭಿರುಚಿ ಬದಲಾಗಿದೆಯೋ, ಕೊರೊನಾ ಸೋಂಕಿಗೆ ಹೆದರಿದ್ದಾರೆಯೋ, ಇಲ್ಲವೆ, ಹೊರಗಿನ ತಿನಿಸು ತಿರಸ್ಕರಿಸಿದ್ದಾರೋ ಎಂಬುದು ತಿಳಿಯುತ್ತಿಲ್ಲ ಎಂದರು.ಹೊಸ ಟಿವಿ ಕೊಳ್ಳುವವರಿಲ್ಲ, ಸಾಲದ ಸ್ಕೀಂ ಇದ್ದರೂ ಖರಿದಿಸುತ್ತಿಲ್ಲ, ಹಾಗೂಹೀಗೂ ಮೊಬೈಲ್ ವ್ಯಾಪಾರ ಪರವಾಗಿಲ್ಲ. ಕಾಸ್ಮೆಟಿಕ್ಸ್ ವಸ್ತುಗಳಿಗೂ ಬೇಡಿಕೆ ಇಲ್ಲದಂತಾಗಿದೆ. ಬ್ಯೂಟಿ ಪಾರ್ಲರ್‍ಗಳಿಗೂ ಮಹಿಳೆಯರು ಬರುತ್ತಿಲ್ಲ, ಕೊರೊನಾ ಭಯವೋ, ಆರ್ಥಿಕ ಸಂಕಷ್ಟವೋ ಗೊತ್ತಿಲ್ಲ ಎನ್ನುತ್ತಾರೆ ಮಾಲೀಕರು. ಹಳೆ ಮಿಕ್ಸಿ, ಕುಕ್ಕರ್ ಬದಲಾಯಿಸಿ ಹೊಸದನ್ನು ಕೊಳ್ಳಲುಬರುವವರು ಕಡಿಮೆಯಾಗಿದ್ದಾರೆ. ಮಿಕ್ಸಿ ಕೆಟ್ಟರೆ ರಿಪೇರಿ ಮಾಡಿಸಿಕೊಂಡರಾಯಿತು ಎನ್ನುವ ಮನಸ್ಥಿತಿಯಲ್ಲಿ ಜನ ಹೊಸ ಖರೀದಿಗೆ ಹಿಂದೇಟು ಹಾಗುತ್ತಿದ್ದಾರೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

   ಹಾಸಿಗೆ ಇದ್ದಷ್ಟು ಕಾಲುಚಾಚುವ, ಸರಳತೆಗೆ ಶರಣಾಗಿರುವ ಅಥವಾ ಮುಂದೆ ಇನ್ನೆಂಥಾ ಕಾಲ ಬರುವುದೋ ಇರುವುದನ್ನು ಖರ್ಚು ಮಾಡಿಕೊಳ್ಳುವುದು ಬೇಡ ಎನ್ನುವ ಕಾರಣದಿಂದಲೋ ಜನ ಹೊಸ ಪದಾರ್ಥ ಕೊಳ್ಳುವ ಆಸಕ್ತಿ ಕಳೆದುಕೊಂಡಂತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap