ನನ್ನನ್ನು ಯಾರು ಹೆಚ್ಚು ಟೀಕಿಸುತ್ತಾರೋ ಅವರಿಗೆ ಮೋದಿ ಮತ್ತು ಷಾ ರಿಂದ ಬಹುಮಾನ.!

ಬೆಂಗಳೂರು

    ಮಾಜಿ ಮುಖ್ಯಮಂತ್ರಿ,ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಅವರನ್ನು ಅತಿ ಹೆಚ್ಚು ಟೀಕಿಸಿದವರಿಗೆ ಪ್ರಧಾನಿ ನರೇಂದ್ರಮೋದಿ ಹಾಗೂ ಅಮಿತ್ ಷಾ ಬಹುಮಾನ ಕೊಡುವ ಭರವಸೆ ನೀಡಿದ್ದಾರೆ.

 

  ಹಾಗಂತ ಖುದ್ದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಟ್ವಿಟರ್ ಖಾತೆಯಲ್ಲಿ ವ್ಯಂಗ್ಯವಾಡಿದ್ದು ಆ ಮೂಲಕ ಉಪಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಸಮರ ತಾರಕಕ್ಕೇರತೊಡಗಿದೆ.ಅಂದ ಹಾಗೆ ಇಂದು ಬೆಳಿಗ್ಗೆ ಮಹಾಲಕ್ಷ್ಮೀ ಲೇಔಟ್‍ನಲ್ಲಿ ಪ್ರಚಾರ ಕಾರ್ಯ ಆರಂಭಿಸಿದ ಬಿಜೆಪಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮತ್ತಿತರರು ಜೆಡಿಎಸ್ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದರು.

   ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಏಕಾಂಗಿಯಾಗಿದ್ದಾರೆ.ಅವರಿಗೆ ಪಕ್ಷದ ಯಾವ ನಾಯಕರೂ ಸಹಕಾರ ನೀಡುತ್ತಿಲ್ಲ.ಹೀಗಾಗಿ ಮಾನಸಿಕವಾಗಿ ಅವರು ಕುಗ್ಗಿದ್ದಾರೆ. ಹತಾಶೆಯಿಂದ ಬಿಜೆಪಿ ನಾಯಕರ ಬಗ್ಗೆ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

   ಹೀಗಾಗಿ ಬಿಜೆಪಿ ನಾಯಕರ ಬಗ್ಗೆ ಸಿದ್ಧರಾಮಯ್ಯ ಅವರಾಡುವ ಮಾತುಗಳ ಬಗ್ಗೆ ಯಾರೂ ಚಿಂತಿಸಬೇಕಾದ ಅಗತ್ಯವಿಲ್ಲ.ಪ್ರಾಮುಖ್ಯತೆ ನೀಡಬೇಕಾದ ಅಗತ್ಯವೂ ಇಲ್ಲ ಎಂದು ಸದಾನಂದಗೌಡ ವ್ಯಂಗ್ಯ ಆಡಿದರು.ಜೆಡಿಎಸ್ ಬಗ್ಗೆಯೂ ತಮ್ಮ ವಾಗ್ಧಾಳಿ ಮುಂದುವರಿಸಿದ ಸದಾನಂದಗೌಡ,ಈಗಾಗಲೇ ಜೆಡಿಎಸ್ ಪಕ್ಷ ಅಸ್ತಿತ್ವ ಕಳೆದುಕೊಂಡಿದೆ.ಉಪಚುನಾವಣೆಯಲ್ಲಿ ಆ ಪಕ್ಷದ ಸ್ಟಾರ್ ಕ್ಯಾಂಪೇನರುಗಳ ಪೈಕಿ ಒಂಭತ್ತು ಮಂದಿ ಅವರ ಕುಟುಂಬದವರೇ ಇದ್ದಾರೆ.ಹೀಗಾಗಿ ಆ ಪಕ್ಷದ ಬಗ್ಗೆಯೂ ಹೆಚ್ಚು ಮಾತನಾಡುವ ಅಗತ್ಯವಿಲ್ಲ ಎಂದರು.

    ಒಂದು ಕಡೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರ ವಾಗ್ಧಾಳಿ ಮುಗಿಯುತ್ತಿದ್ದಂತೆಯೇ ಮತ್ತೊಂದೆಡೆಯಿಂದ ಸದಾನಂದಗೌಡರ ವಿರುದ್ಧ ಟ್ವಿಟರ್‍ನಲ್ಲಿ ಮುಗಿಬಿದ್ದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ:ಸದಾನಂದಗೌಡ ಈಗ ಯಾರಿಗೂ ಬೇಡದ ಗೊಬ್ಬರದ ನಾಯಕ ಎಂದು ತಿರುಗೇಟು ನೀಡಿದರು.

    ರಾಜ್ಯದ ಬಿಜೆಪಿ ನಾಯಕರೆಲ್ಲರೂ ನನ್ನ ಮೇಲೇ ಮುಗಿಬೀಳುತ್ತಿರುವುದನ್ನು ನೋಡಿದರೆ ಪ್ರಧಾನಿ ನರೇಂದ್ರಮೋದಿ ಹಾಗೂ ಅಮಿತ್ ಷಾ ಸೇರಿ:ಸಿದ್ಧರಾಮಯ್ಯ ಅವರನ್ನು ಹೆಚ್ಚು ಟೀಕಿಸಿದವರಿಗೆ ಬಹುಮಾನ ನೀಡುತ್ತೇವೆ ಎಂದು ಭರವಸೆ ನೀಡಿರಬೇಕು.ಈ ಬಹುಮಾನ ಪಡೆಯಲು ಸದಾನಂದಗೌಡರೂ ಪೈಪೋಟಿ ನಡೆಸಿದ್ದಾರೆ ಎಂದು ವ್ಯಂಗ್ಯವಾಡಿದರು.

    ನಾನು ಏಕಾಂಗಿಯಾಗಿದ್ದರೆ ಇವರೇಕೆ ಭಯ ಪಡಬೇಕು?ಇವರೇಕೆ ಏಕಾಂಗಿಯ ಮೇಲೆ ಟೀಕೆ ಮಾಡುತ್ತಾ ತಿರುಗಬೇಕು?ಎಂದು ಪ್ರಶ್ನಿಸಿದ ಅವರು,ಪಾಪ,ಸದಾನಂದಗೌಡರು ನನ್ನ ಮಾನಸಿಕ ಸ್ಥಿತಿಯ ಬಗ್ಗೆ ಬಡಬಡಿಸುತ್ತಿದ್ದಾರೆ.ಆದರೆ ನನಗೆ ಸದಾನಂದಗೌಡರ ಬಗ್ಗೆ ಅನುಕಂಪವಿದೆ ಎಂದರು.

    ಮೊದಲು ಮುಖ್ಯಮಂತ್ರಿಯಾದರು.ನಂತರ ಆ ಸ್ಥಾನದಿಂದ ರೈಲ್ವೇ ಮಂತ್ರಿಯಾದರು.ಆನಂತರ ಕಾನೂನು ಮಂತ್ರಿಯಾದರು.ಅಂಕಿ-ಅಂಶ ಖಾತೆ ಸಚಿವರಾದರು.ಹೀಗೆ ಎಲ್ಲ ಕಡೆಗಳಲ್ಲಿ ತಿರಸ್ಕøತಗೊಂಡ ಸದಾನಂದಗೌಡ ಈಗ ಪಕ್ಷದಲ್ಲಿ ಗೊಬ್ಬರವಾಗಿ ಹೋಗಿದ್ದಾರೆ.ತಮಗೆ ಒದಗಿದ ಈ ಗೊಬ್ಬರದ ಸ್ಥಿತಿಯಿಂದ ಹತಾಶರಾಗಿ ಅವರು ಇಂತಹ ಮಾತುಗಳನ್ನಾಡುತ್ತಿದ್ದಾರೆ.ಅದೇ ರೀತಿ ಬಿಜೆಪಿಯ ರಾಜ್ಯ ಘಟಕದ ಯಾರೂ ಅವರನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.

    ಇದಕ್ಕಾಗಿ ಅವರು ಪದೇ ಪದೇ ಜೋಕುಗಳನ್ನು ಮಾಡಿ,ಆ ಜೋಕುಗಳನ್ನು ಕೇಳಿಸಿಕೊಂಡು ತಾವೇ ನಗುತ್ತಾರೆ.ಅದೇ ರೀತಿ ರಾಜ್ಯದ ಜನರಿಗೂ ಮನರಂಜನೆ ನೀಡುತ್ತಿರುತ್ತಾರೆ ಎಂದು ಸಿದ್ಧರಾಮಯ್ಯ ಅವರು ವ್ಯಂಗ್ಯವಾಡಿದರು.ಹೀಗೆ ಉಪಚುನಾವಣೆ ಇನ್ನೆರಡು ವಾರ ಉಳಿದಂತೆಯೇ ರಾಜಕೀಯ ಪಕ್ಷಗಳ ನಡುವೆ ಬಹಿರಂಗ ಸಮರ ತಾರಕಕ್ಕೇರುತ್ತಿದ್ದು ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ವಿಕೋಪಕ್ಕೆ ಹೋಗುವ ಲಕ್ಷಣಗಳು ಕಾಣುತ್ತಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link