ಕುಷ್ಠರೋಗ ಪತ್ತೆ ಅಭಿಯಾನ : ಸಿಬ್ಬಂದಿಗೆ ಸೂಕ್ತ ತರಬೇತಿ ಕೊಡಿ : ಡಿಸಿ 

ಚಿತ್ರದುರ್ಗ  
     ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಸೆ. 05 ರಿಂದ 23 ರವರೆಗೆ ಕುಷ್ಠರೋಗ ಪತ್ತೆ ಅಭಿಯಾನವನ್ನು ಹಮ್ಮಿಕೊಂಡಿದ್ದು, ಈ ಅಭಿಯಾನಕ್ಕೆ ಒಟ್ಟು 3096 ಸಿಬ್ಬಂದಿಗಳನ್ನು ನೇಮಿಸಲಾಗಿದೆ.  ಮನೆ ಮನೆ ಭೇಟಿ ನೀಡಿ ಪತ್ತೆ ಕಾರ್ಯ ಮಾಡುವ ಸಿಬ್ಬಂದಿಗಳಿಗೆ ಸಮರ್ಪಕ ತರಬೇತಿ ನೀಡಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಹೇಳಿದರು.
    ಜಿಲ್ಲೆಯಲ್ಲಿ ಕುಷ್ಠ ರೋಗ ಪ್ರಕರಣ ಪತ್ತೆ ಹಚ್ಚುವ ವಿಶೇಷ ಅಭಿಯಾನ ಆಯೋಜಿಸುವ ಕುರಿತು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಸೆ. 05 ರಿಂದ ಕುಷ್ಠರೋಗ ಪತ್ತೆ ಹಚ್ಚುವ ಅಭಿಯಾನವನ್ನು ಆಯೋಜಿಸಲಾಗಿದ್ದು, ಚಿತ್ರದುರ್ಗ ನಗರವೂ ಸೇರಿದಂತೆ ಒಟ್ಟು 384020 ಮನೆಗಳಿಗೆ ಭೇಟಿ ನೀಡಿ, ರೋಗ ಪತ್ತೆ ಮಾಡುವ ಮಹತ್ವದ ಕಾರ್ಯಕ್ರಮ ಇದಾಗಿದೆ.
      ಅಭಿಯಾನವನ್ನು ಯಶಸ್ವಿಗೊಳಿಸಲು ಒಟ್ಟು 1407 ತಂಡಗಳನ್ನು ರಚಿಸಲಾಗಿದ್ದು, ತಂಡದ ಸದಸ್ಯರು, ಮೇಲ್ವಿಚಾರಕರು ಸೇರಿದಂತೆ 3096 ಸಿಬ್ಬಂದಿಗಳನ್ನು ಅಭಿಯಾನಕ್ಕೆ ನಿಯೋಜಿಸಲಾಗಿದೆ.  ಪ್ರತಿ ತಾಲ್ಲೂಕಿಗೆ ನೋಡಲ್ ಅಧಿಕಾರಿಗಳನ್ನೂ ನೇಮಿಸಲಾಗಿದೆ ಎಂದು ತಿಳಿಸಿದರು
 
       ಕುಷ್ಠರೋಗ ಪತ್ತೆ ಅಭಿಯಾನ ಜಿಲ್ಲೆಯಲ್ಲಿ ಯಶಸ್ವಿಯಾಗಿ ಹಾಗೂ ಪರಿಣಾಮಕಾರಿಯಾಗಿ ಜರುಗಬೇಕು.  ಇದು ಸಾಂಕ್ರಾಮಿಕ ರೋಗವಾಗಿರುವುದರಿಂದ, ಈ ಹಿಂದೆ ಪತ್ತೆ ಮಾಡಲಾದ ಕುಷ್ಠರೋಗಿಗಳಲ್ಲಿ ಗುಣಮುಖರಾದವರು, ಇನ್ನೂ ಚಿಕಿತ್ಸೆ ಪಡೆಯುತ್ತಿರುವವರ ವಿಳಾಸ ಹಾಗೂ ಸಂಪೂರ್ಣ ವಿವರ ಆರೋಗ್ಯ ಇಲಾಖೆಯಲ್ಲಿ ಲಭ್ಯವಿರಬೇಕು. 
       ರೋಗ ಪತ್ತೆ ಅಭಿಯಾನಕ್ಕೆ ತೆರಳುವ ಸಿಬ್ಬಂದಿಗಳು ತಪ್ಪದೆ ಎಲ್ಲ ಹಾಸ್ಟೆಲ್‍ಗಳಿಗೂ ಭೇಟಿ ನೀಡಿ ತಪಾಸಣೆ ನಡೆಸಬೇಕು.  ಕಳೆದ ವರ್ಷ ಕೈಗೊಂಡ ರೋಗ ಪತ್ತೆ ಅಭಿಯಾನದಲ್ಲಿ 9962 ಶಂಕಾಸ್ಪದ ಪ್ರಕರಣಗಳನ್ನು ಗುರುತಿಸಿ, ಒಟ್ಟು 18 ಹೊಸ ರೋಗಿಗಳ ಪತ್ತೆ ಮಾಡಲಾಗಿತ್ತು.  ಜಿಲ್ಲೆಯಲ್ಲಿ ಈ ಬಾರಿ ಕುಷ್ಠರೋಗ ಪತ್ತೆ ಕಾರ್ಯ ಅತ್ಯಂತ ಅಚ್ಚುಕಟ್ಟುತನದಿಂದ ಹಾಗೂ ನಿಖರವಾಗಿ ಜರುಗಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
     ಅಭಿಯಾನವನ್ನು ಪರಿಣಾಮಕಾರಿಯನ್ನಾಗಿಸಲು ಕುಷ್ಠರೋಗ ಪತ್ತೆ ಅಭಿಯಾನ ಕಾರ್ಯಕ್ಕೆ ನೇಮಿಸಲಾಗುವ ಆಶಾ ಕಾರ್ಯಕರ್ತೆಯರಿಗೆ, ಅವರ ಸ್ವಗ್ರಾಮ ಅಥವಾ ಸ್ಥಳೀಯ ಪ್ರದೇಶದಲ್ಲಿ ಪತ್ತೆ ಕಾರ್ಯಕ್ಕೆ ನಿಯೋಜಿಸದೆ, ಬೇರೆ ಗ್ರಾಮಗಳ ಆಶಾ ಕಾರ್ಯಕರ್ತೆಯರನ್ನು ಬೇರೆ ಗ್ರಾಮಗಳಿಗೆ ನಿಯೋಜಿಸಬೇಕು ಎಂದು ತಿಳಿಸಿದರು
 
    ಈ ಅಭಿಯಾನಕ್ಕೆ ಅಗತ್ಯವಿದ್ದಲ್ಲಿ ನರ್ಸಿಂಗ್, ಸ್ನಾತ್ತಕೋತ್ತರ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಂಡು ಖಚಿತ ಮಾಹಿತಿ ಪಡೆಯುವಂತೆ ತರಬೇತಿ ನೀಡಿ ಎಂದರು.  ಕುಷ್ಠ ರೋಗಿಗಳನ್ನು ಪತ್ತೆ ಹಚ್ಚುವ ಭರದಲ್ಲಿ ನೇರವಾಗಿ, ಮನಸ್ಸಿಗೆ ಘಾಸಿ ಉಂಟಾಗುವ ರೀತಿಯಲ್ಲಿ ಕೇಳಬಾರದು, ಮನೆಯ ಸದಸ್ಯರ ಕುರಿತು ಆರೋಗ್ಯ ಮಾಹಿತಿಯ ಜೊತೆ ಇನ್ನಿತರ ರೋಗಗಳ ಬಗ್ಗೆ ತಿಳಿದುಕೊಳ್ಳುವ ಪ್ರಕ್ರಿಯೆಯಲ್ಲಿಯೇ ಕುಷ್ಠರೋಗ ಪತ್ತೆ ಹಚ್ಚಲು ಮುಂದಾಗುವಂತೆ ತರಬೇತಾರ್ಥಿಗಳಿಗೆ ಸೂಚಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕಾರ್ಯವೈಖರಿಗೆ ಅಸಮಾಧಾನ :
      ನಗರದಲ್ಲಿ ಒಟ್ಟು 03 ನಗರ ಆರೋಗ್ಯ ಕೇಂದ್ರಗಳಿದ್ದರೂ,  ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಸಂಜೆ 4 ಗಂಟೆಯ ಬಳಿಕವೂ ಹೆಚ್ಚಿನ ಸಂಖ್ಯೆಯಲ್ಲಿ ನಗರದ ರೋಗಿಗಳು ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಿದ್ದಾರೆ.  ಇದರಿಂದಾಗಿ ವೈದ್ಯರು ಜಿಲ್ಲಾ ಆಸ್ಪತ್ರೆಯಲ್ಲಿನ ವಾರ್ಡ್‍ಗಳ ಭೇಟಿ ಕಾರ್ಯ, ತುರ್ತು ಪ್ರಕರಣಗಳಿಗೆ ಆದ್ಯತೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕರು ತಿಳಿಸಿದರು.
 
      ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ನಗರ ಆರೋಗ್ಯ ಕೇಂದ್ರಕ್ಕೆ ವೈದ್ಯರು ಹಾಗೂ ಅಗತ್ಯ ಸಿಬ್ಬಂದಿಗಳನ್ನು ನೇಮಿಸಲಾಗಿದ್ದರೂ, ಅವರು ಸಮರ್ಪಕ ಕಾರ್ಯ ಮಾಡುತ್ತಿದ್ದಾರೆಯೇ ಇಲ್ಲವೆ ಎಂಬುದನ್ನು ಡಿಹೆಚ್‍ಒ ಪರಿಶೀಲಿಸಬೇಕು.  ನಗರ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಲಭ್ಯವಿಲ್ಲದ ಕಾರಣಕ್ಕಾಗಿಯೇ ಸಂಜೆಯ ಬಳಿಕವೂ ನಗರದ ರೋಗಿಗಳು ಜಿಲ್ಲಾ ಆಸ್ಪತ್ರೆಗೆ ಬರುವಂತಾಗಿದೆ.  ಹೀಗಾದಲ್ಲಿ, ನಗರ ಆರೋಗ್ಯ ಕೇಂದ್ರಗಳು ಏಕೆ ಇರಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು. 
       ಸಭೆಯಲ್ಲಿ ಭಾಗವಹಿಸಿದ್ದ ಕುಷ್ಠರೋಗ ಅಭಿಯಾನದ ತಾಂತ್ರಿಕ ಅಧಿಕಾರಿ ಡಾ. ರಾಜೇಶ್ ಕಾಕಡೆ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ  ಡಾ| ಕಂಬಾಳಿ ಮಠ್ ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಪಾಲಾಕ್ಷ, ತಾಂತ್ರಿಕ ಅಧಿಕಾರಿ ರಾಜೇಶ್ ಕಾಕಡೆ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಯೋಗೀಂದ್ರ ಜಿಲ್ಲೆಯ ವಿವಿಧ ಖಾಸಗಿ ಆಸ್ಪತ್ರೆಗಳ ವೈದ್ಯರು ಉಪಸ್ಥಿತರಿದ್ದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap