ಶಿರಾ
ಶಾಸಕ ಬಿ.ಸತ್ಯನಾರಾಯಣ್ ಅವರ ನಿಧನದ ಹಿನ್ನೆಲೆಯಲ್ಲಿ ಶಿರಾ ಕ್ಷೇತ್ರದ ಉಪ ಚುನಾವಣೆ ನಡೆಯುವುದು ಅನಿವಾರ್ಯವಾಗಿದ್ದು ದಿನ ದಿನಕ್ಕೂ ಕ್ಷೇತ್ರದಲ್ಲಿ ಸ್ಪರ್ಧೆಗಿಳಿಯುವ ಹಂಬಲಿಕೆಯ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗುತ್ತಲೇ ಸಾಗಿದೆ.ಸ್ಪರ್ಧಾ ಕಣದಲ್ಲಿ ಸ್ಪರ್ಧಿಸಲು ಇಚ್ಚಿಸುವ ದುರೀಣರು ಒಂದೆಡೆಯಾದರೆ ಈಗಾಗಲೇ ಕ್ಷೇತ್ರದಲ್ಲಿ ಸಮಾಜಸೇವೆ ಮಾಡಿಕೊಂಡು ಓಡಾಡುತ್ತಾ ಪ್ರಭಲ ಸ್ಪರ್ಧೆ ಒಡ್ಡಲು ಸಜ್ಜುಗೊಳ್ಳುತ್ತಿರುವ ಅಭ್ಯರ್ಥಿಗಳ ಚಟುವಟಿಕೆಗಳು ಕೂಡಾ ಗರಿಗೆದರುತ್ತಿವೆ.
ಕೋರೋನಾ ಸೀಲ್‍ಡೌನ್ ಪ್ರದೇಶಗಳಲ್ಲಿ ಉಚಿತ ದಿನಸಿ ಕಿಟ್ ಹಂಚುವಿಕೆಯು ವಿವಿಧ ಪಕ್ಷಗಳ ದುರೀಣರಲ್ಲಿ ಹೆಚ್ಚಾಗತೊಡಗಿದ್ದು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಸಹಾಯ ಧನ ನೀಡುವುದು ಸೇರಿದಂತೆ ಚುನಾವಣೆಗೂ ಮುನ್ನವೇ ಅನೇಕ ದುರೀಣರು ಧಾನ-ಧರ್ಮದ ನೆಪದಲ್ಲಿ ಕಿಸೆಯೊಳಗಿನ ಹಣವನ್ನು ಖರ್ಚು ಮಾಡುತ್ತಿರುವ ಪರಿಯನ್ನು ಕಂಡರೆ ಈ ಎಲ್ಲಾ ದುರೀಣರು ಈಗಾಗಲೇ ಚುನಾವಣೆಯ ಅತಿ ಶೀಘ್ರತೆಯ ಜಾಡನ್ನು ಹಿಡಿದಂತೆ ಕಾಣಬರುತ್ತಿದೆ.
ಒಂದು ಕಡೆ ಸಮಾಜ ಸೇವಕ ಡಾ.ರಾಜೇಶ್‍ಗೌಡ, ಕಲ್ಕೆರೆ ರವಿಕುಮಾರ್ ಇಡೀ ಕ್ಷೇತ್ರದಲ್ಲಿ ದಿನ ನಿತ್ಯ ಜನ ಸಂಪರ್ಕವನ್ನು ಕಾಯ್ದುಕೊಳ್ಳುತ್ತಾ ಇದ್ದರೆ, ಇತ್ತ ಇನ್ನೊಂದೆಡೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಒಂದು ರೀತಿಯಲ್ಲಿ ಚುನಾವಣಾ ಪ್ರಚಾರವನ್ನೇ ಆರಂಭಿಸಿದ್ದಾರೆ.
ತಾಲ್ಲೂಕು ಆಡಳಿತವು ಮತದಾರರಪಟ್ಟಿ ಪರಿಷ್ಕರಣೆ ಸೇರಿದಂತೆ ಮತದಾರರ ಸೇರ್ಪಡೆ, ಮತದಾರರ ವರ್ಗಾವಣೆಯಂತಹ ಪ್ರಕ್ರಿಯೆಗಳನ್ನು ಚುರುಕಿನಿಂದ ನಡೆಸುವ ಪರಿಯನ್ನು ಕಂಡರೆ ಚುನಾವಣೆ ದಿನಾಂಕ ಕೆಲವೇ ದಿನದಲ್ಲಿ ಪ್ರಕಟಗೊಳ್ಳುವ ಎಲ್ಲಾ ಸೂಚನೆಗಳನ್ನೂ ನೀಡುತ್ತಿದೆ.
ಕಳೆದ ಎರಡು ದಿನಗಳ ಹಿಂದಷ್ಟೇ ಶಿರಾ ನಗರಕ್ಕೆ ಭೇಟಿ ನೀಡಿರುವ ಜಿಲ್ಲಾಧಿಕಾರಿಗಳು ಅಧಿಕಾರಿಗಳ ಸಭೆ ನಡೆಸಿ ಚುನಾವಣಾ ಪೂರ್ವ ಸಿದ್ಧತೆಗಳ ಬಗ್ಗೆ ಸಮಾಲೋಚನೆ ನಡೆಸಿರುವುದನ್ನು ಕಂಡಾಗ ಇನ್ನೇನು ಉಪ ಚುನಾವಣಾ ದಿನಾಂಕ ನಿಗಧಿಗೊಳಿಸುವೊಂದೇ ಬಾಕಿ ಅನ್ನಿಸುತ್ತಿದೆ.
ಉಪ ಚುನಾವಣೆಯು ಇನ್ನೇನು ಸಮೀಪಿಸಿಯೇ ಬಿಟ್ಟಿದೆ ಎಂಬಂತೆ ಕ್ಷೇತ್ರದಲ್ಲಿನ ಬಿ.ಜೆ.ಪಿ. ನಾಯಕರುಗಳು ಬೆನ್ನಿಗೆ ರೆಕ್ಕಿ ಕಟ್ಟಿಕೊಂಡು ಓಡಾಡುತ್ತಿರುವುದು ಕೂಡಾ ಚುನಾವಣೆ ನಡೆಬಹುದೆಂಬ ಗಂಟೆ ಬಾರಿಸಿದೆ. ಮುಂದಿನ ಎರಡೂವರೆ ವರ್ಷದ ಅವಧಿಯ ಶಿರಾ ಕ್ಷೇತ್ರದ ಅಧಿಕಾರ ಬಿ.ಜೆ.ಪಿಯದ್ದೇ ಆಗಬೇಕು ಎಂಬಂತೆ ಟೊಂಕ ಕಟ್ಟಿ ನಿಂತಿರುವ ಆ ಪಕ್ಷದ ದುರೀಣರು ಎಲ್ಲಾ ಪಕ್ಷಗಳಿಗಿಂತಲೂ ಮುನ್ನವೇ ಬೂತ್ ಮಟ್ಟದ ಸಭೆಗಳನ್ನು ಹಳ್ಳಿ ಹಳ್ಳಿಯಲ್ಲೂ ನಡೆಸುತ್ತಿದ್ದು ಆ ಪಕ್ಷದ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಲು ಕಾರಣವಾಗಿದೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷರು ತಮ್ಮ ಬೂತ್ ಮಟ್ಟದ ಸಭೆಗಳಲ್ಲಿ ಕ್ಷೇತ್ರದ ಅಭಿವೃದ್ಧಿಯ ಭರವಸೆಯ ಮಹಾಪೂರಗಳನ್ನೇ ಹರಿಸುತ್ತಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಇಡೀ ಜಿಲ್ಲಾ ಬಿ.ಜೆ.ಪಿ. ಮುಖಂಡರೇ ಶಿರಾ ಕ್ಷೇತ್ರದ ಗ್ರಾಮಾಂತರ ಪ್ರದೇಶಗಳಲ್ಲಿ ನಿರಂತರವಾಗಿ ಕಾರ್ಯಕರ್ತರ ಮನೆ ಬಾಗಿಲು ತಟ್ಟುತ್ತಿದ್ದಾರೆ.
ಆಡಳಿತಾರೂಡ ಸರ್ಕಾರ ರಾಜ್ಯದಲ್ಲಿದ್ದರೂ ತಾಲ್ಲೂಕಿನ ಬಹುತೇಕ ದೇವಸ್ಥಾನಗಳಿಗೆ ಅನುದಾನ ನೀಡದೇ ಇದ್ದ ರಾಜ್ಯ ಸರ್ಕಾರ ಇದೀಗ ಉದಾರತೆ ಮೆರೆಯುತ್ತಿರುವುದನ್ನು ಕಂಡ ಜನತೆಗೂ ಅಚ್ಚರಿ ಅನ್ನಿಸಿದೆ. ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನ ನೀಡಿದರೆ ಶಿರಾ ಕ್ಷೇತ್ರದ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳಬುದೆಂಬ ತಂತ್ರ ಹೆಣೆದಿರುವ ಬಿ.ಜೆ.ಪಿ. ಸರ್ಕಾರ ಸುರೇಶ್‍ಗೌಡರು ಸೆ:6 ರಂದು ನೀಡಿದ ಮನವಿ ಪತ್ರಕ್ಕೆ ಅದೇ ದಿನದಂದು ಮುಖ್ಯಮಂತ್ರಿಗಳು ಅನುದಾನ ನೀಡಲು ಸೂಚನೆ ನೀಡಿರುವುದು ಬಿ.ಜೆ.ಪಿ. ಪಕ್ಷ ಹೆಣೆಯುತ್ತಿರುವ ಈ ಚುನಾವಣೆಯ ರಣ ತಂತ್ರಕ್ಕೆ ಒಂದು ಸಣ್ಣ ಉದಾಹರಣೆಯೂ ಆಗಿದೆ.
ತಾಲ್ಲೂಕಿನ ಕೆ.ಕೆ.ಪಾಳ್ಯ, ಶಿವನಯ್ಯನಪಾಳ್ಯ, ಯಂಜಲಗೆರೆ, ಬ್ರಹ್ಮಸಂದ್ರ, ಸಿದ್ಧಾಪುರ, ಕಲ್ಲಹಳ್ಳಿ, ಬರಗೂರು ಸೇರಿದಂತೆ ಹಲವು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ ಒಂದೇ ದಿನದಲ್ಲಿ ಅನುದಾನ ನೀಡುವಂತೆ ಮುಖ್ಯಮಂತ್ರಿಗಳು ಮೇಲಾಧಿಕಾರಿಗಳಿಗೆ ಸೂಚನೆ ನೀಡಿರುವುದು ಶಿರಾ ಕ್ಷೇತ್ರದ ಚುನಾವಣೆಯ ಮೇಲೆ ಸರ್ಕಾರ ಎಷ್ಟರಮಟ್ಟಿಗೆ ಸರ್ಕಾರ ಕಣ್ಣಿಟ್ಟಿದೆ ಎಂಬುದರ ಅರಿವು ಜನತೆಗೆ ಉಂಟಾಗಿದೆ.
ಚುನಾವಣೆಯ ಕಾವು ಸನ್ನಿಹಿತವಾದಂತೆ ಮಹತ್ವದ ಬೆಳವಣಿಗೆಗಳು ಕೂಡಾ ಉಂಟಾಗುತ್ತಿವೆ. ಸಮಾಜ ಸೇವೆಯಲ್ಲಿ ಗುರ್ತಿಸಿಕೊಂಡಿರುವ ಯುವ ಪ್ರತಿಭೆ ಲಿಂಗದಹಳ್ಳಿ ಚೇತನ್‍ಕುಮಾರ್ ಜೆ.ಡಿ.ಯು. ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಈಗಾಗಲೇ ಘೋಷಣೆಯಾಗಿದ್ದು ಇದರ ಬೆನ್ನಲ್ಲಿಯೇ ಚೇತನ್‍ಕುಮಾರ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರನ್ನು ಸೆ:6 ರಂದು ಭೇಟಿ ಮಾಡಿ ಆಶೀರ್ವಾದ ಪಡೆದಿರುವುದು ಮತ್ತಲವು ಅನುಮಾನಗಳಿಗೆ ಕಾರಣವೂ ಆಗಿದೆ.
ಇದೀಗತಾನೆ ಕ್ಷೇತ್ರದಲ್ಲಿ ರಾಜಕಾರಣದ ಮೆಟ್ಟಿಲು ಹತ್ತುತ್ತಿರುವ ಚೇತನ್ ಹಾಗೂ ಕೆ.ಎನ್.ರಾಜಣ್ಣ ಅವರ ಭೇಟಿ ಕೆಲವರಿಗೆ ಅಚ್ಚರಿಯನ್ನೂ ತಂದಿದ್ದು ಕ್ಷೇತ್ರದಲ್ಲಿ ಏನೆಲ್ಲಾ ಬದಲಾವಣೆಗಳಾಗಬಹುದು ಎಂಬುದರ ಸುಳಿವು ನೀಡಿದಂತೆ ಕಾಣಿಸುತ್ತಿದೆ.ಚುನಾವಣೆಯಲ್ಲಿ ಸ್ಪರ್ಧೆಗಿಳಿಯಲು ಬಯಸಿರುವ ಪಕ್ಷಾತೀತವಾಗಿಯೇ ಗುರ್ತಿಸಿಕೊಂಡಿರುವ ಡಾ.ರಾಜೇಶ್‍ಗೌಡ, ಕಾಂಗ್ರೆಸ್ ಪಕ್ಷದ ಟಿ.ಬಿ.ಜಯಚಂದ್ರ, ಬಿ.ಜೆ.ಪಿ.ಯ ಬಿ.ಕೆ.ಮಂಜುನಾಥ್, ಎಸ್.ಆರ್.ಗೌಡ ಅವರ ಪಕ್ಷದ ಮುಖಂಡರೊಂದಿಗೆ ಕ್ಷೇತ್ರದಲ್ಲಿ ಓಡಾಡುತ್ತಿದ್ದರೆ ಇತ್ತ ಇದೇ ಬಿ.ಜೆ.ಪಿ. ಪಕ್ಷದಿಂದ ಶಾಸಕಿ ಪೂರ್ಣಿಮಾ ಅವರ ಪತಿ ಶ್ರೀನಿವಾಸ್, ತಾಲ್ಲೂಕಿನ ಯಾದವ ಮುಖಂಡ ಷಣ್ಮುಖಪ್ಪ ಕೂಡಾ ಟಿಕೇಟ್‍ಗಾಗಿ ಕಸರತ್ತು ನಡೆಸಿದ್ದಾರೆ.
ಇನ್ನೂ ಜೆ.ಡಿ.ಎಸ್. ಪಕ್ಷದ ಮುಖಂಡರೆಲ್ಲರೂ ತುಂಬಾ ಸೈಲೆಂಟ್ ಆಗಿಬಿಟ್ಟಿದ್ದಾರೆ. ಜೆ.ಡಿ.ಎಸ್.ನಲ್ಲಿ ಆರ್.ಉಗ್ರೇಶ್, ಕಲ್ಕೆರೆ ರವಿಕುಮಾರ್, ಸಿ.ಆರ್.ಉಮೇಶ್, ಬಿ.ಸತ್ಯಪ್ರಕಾಶ್‍ರಂತಹ ಪ್ರಭಲ ಆಕಾಂಕ್ಷಿಗಳಿದ್ದರೂ ಎಲ್ಲಾ ಮುಖಂಡರು ಸದ್ಯಕ್ಕೆ ಸನ್ನಿ ಹಿಡಿದಂತೆ ಸ್ಥಬ್ದರಾಗಿದ್ದಾರೆ. ಶಾಸಕ ಸತ್ಯನಾರಾಯಣ್ ಅವರ ನಿಧನದ ದುಖಃದಿಂದ ಇನ್ನೂ ಯಾರೂ ಚೇತರಿಸಿಯೇಕೊಂಡಿಲ್ಲವೋ ಇಲ್ಲವೇ ಬಾಯಿ ಬಿಟ್ಟರೆ ವರಿಷ್ಠರ ಕೆಂಗಣ್ಣಿಗೆ ಗುರಿಯಾಗುತ್ತೇವೆಂಬ ಭಯವೋ ಒಟ್ಟಾರೆ ಯಾವ ದುರೀಣರು ಕೂಡಾ ಟಿಕೇಟ್ ನಮ್ಮದೇ ಎಂದು ಹೇಳಿಕೊಳ್ಳಲು ಕೂಡಾ ಭೀತಿ ಪಡುವಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
