ರಾಜ್ಯ ಬಜೆಟ್ 2020:ಕೆಲ ಜನಪ್ರಿಯ ಯೋಜನೆಗಳನ್ನು ಕೈಬಿಡಲು ಮುಂದಾದ ಸರ್ಕಾರ

ಬೆಂಗಳೂರು,

            ಫೆಬ್ರವರಿ,3-ಕೇಂದ್ರ ಸರ್ಕಾರದ ಆರ್ಥಿಕ ಕ್ರಮದಿಂದ ರಾಜ್ಯಕ್ಕೆ ಬರಬೇಕಿದ್ದ 25 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಹಣ ಕಟ್ ಆಗಿದ್ದು ಇದರ ಪರಿಣಾಮವಾಗಿ ಮುಂದಿನ ಬಜೆಟ್‍ನಲ್ಲಿ ಅನ್ನಭಾಗ್ಯ ಸೇರಿದಂತೆ ಹಲ ಜನಪ್ರಿಯ ಯೋಜನೆಗಳಿಗೆ ಕತ್ತರಿ ಹಾಕಲು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧರಿಸಿದ್ದಾರೆ.

           ಹದಿನೈದನೇ ಹಣಕಾಸು ಆಯೋಗ ಈ ಸಲ ರಾಜ್ಯಕ್ಕೆ ನಿಗದಿಪಡಿಸಬೇಕಿರುವ ಅನುದಾನದಲ್ಲಿ ಒಂಭತ್ತು ಸಾವಿರ ಕೋಟಿ ರೂಪಾಯಿಗಳನ್ನು ಕಡಿತಗೊಳಿಸಿದ್ದು ಅದೇ ಕಾಲಕ್ಕೆ ಜಿ.ಎಸ್.ಟಿ ಮತ್ತಿತರ ತೆರಿಗೆ,ಅನುದಾನಗಳ ಬಾಬ್ತಿನಲ್ಲಿ ರಾಜ್ಯಕ್ಕೆ ಬರಬೇಕಿರುವ ಹಣದ ಪ್ರಮಾಣ 16000 ಕೋಟಿ ರೂ ಬಂದಿಲ್ಲ.

       ಹೀಗಾಗಿ 2020-2021 ನೇ ಸಾಲಿನ ರಾಜ್ಯ ಬಜೆಟ್‍ಗೆ ಹಣದ ತೀವ್ರ ಕೊರತೆ ಎದುರಾಗಿದ್ದು ಕಟ್ ಆದ ಹಣವನ್ನು ಭರ್ತಿ ಮಾಡಿಕೊಳ್ಳಲು ಜನರ ಮೇಲೆ ಹೆಚ್ಚು ತೆರಿಗೆ ಹೇರಲಾಗದ ಅಸಹಾಯಕತೆಗೆ ಸಿಲುಕಿರುವ ಯಡಿಯೂರಪ್ಪ ಯೋಜನೆಗಳಿಗೆ ನೀಡುವ ಹಣದ ಪ್ರಮಾಣವನ್ನು ಕಡಿಮೆ ಮಾಡಲು ನಿರ್ಧರಿಸಿದ್ದಾರೆ.

        ಹೀಗಾಗಿ ಸಿದ್ಧರಾಮಯ್ಯ ಅವರ ಕಾಲದ ಜನಪ್ರಿಯ ಅನ್ನಭಾಗ್ಯ ಯೋಜನೆಯಿಂದ ಹಿಡಿದು ಹಲವು ಯೋಜನೆಗಳಿಗೆ ನೀಡುವ ಅನುದಾನದ ಪ್ರಮಾಣವನ್ನು ಕಡಿತಗೊಳಿಸಲು ಯಡಿಯೂರಪ್ಪ ಮುಂದಾಗಿದ್ದಾರೆ.ಬಜೆಟ್ ಪೂರ್ವಭಾವಿ ಸಭೆ ನಡೆಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಈ ಕುರಿತು ಇಲಾಖೆ ಪ್ರಮುಖರಿಗೆ ಈಗಾಗಲೇ ಸಂದೇಶ ನೀಡತೊಡಗಿದ್ದು ತಮ್ಮ ತಮ್ಮ ಇಲಾಖೆಗಳಲ್ಲಿ ಇಂತಿಂತಹ ಯೋಜನೆಗಳಿಗಾಗಿ ಹೆಚ್ಚಿನ ಹಣ ನೀಡಬೇಕು ಎಂಬ ಪ್ರಸ್ತಾವವನ್ನು ನಿರಾಕರಿಸತೊಡಗಿದ್ದಾರೆ.
2019-2020 ರ ಬಜೆಟ್‍ನಲ್ಲಿ ವಿವಿಧ ಇಲಾಖೆಗಳಿಗೆ ಮಂಜೂರು ಮಾಡಲಾಗಿದ್ದ ಅನುದಾನದ ಪ್ರಮಾಣದಲ್ಲೇ ಹದಿನೈದರಿಂದ ಇಪ್ಪತ್ತರಷ್ಟು ಹಣವನ್ನು ಕಡಿತ ಮಾಡುವ ಅನಿವಾರ್ಯತೆ ನಮಗೆ ಎದುರಾಯಿತು.

       ರಾಜ್ಯ ಈ ಹಿಂದೆ ಕಂಡರಿಯದಂತಹ ಜಲಪ್ರಳಯ ಶುರುವಾದ ಬೆನ್ನಲ್ಲಿ ಸುಮಾರು ನಲವತ್ತು ಸಾವಿರ ಕೋಟಿ ರೂಪಾಯಿಗಳಷ್ಟು ನಷ್ಟವಾಗಿದ್ದು ವಿವಿಧ ಇಲಾಖೆಗಳಿಗೆ ನೀಡಿದ ಅನುದಾನದಲ್ಲಿ ಶೇಕಡಾ ಹದಿನೈದರಿಂದ ಇಪ್ಪತ್ತರಷ್ಟು ಕಡಿತ ಮಾಡಿದರೂ ಸಮಸ್ಯೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ.

      ಈ ಮಧ್ಯೆ ಬರುವ ಬಜೆಟ್‍ನಲ್ಲಿ ಪ್ರವಾಹಪೀಡಿತರಿಗೆ ಹೆಚ್ಚಿನ ಅನುಕೂಲ ಒದಗಿಸಿಕೊಡಲು ಹಣ ಒದಗಿಸಬೇಕಾಗಿದ್ದು ಅದೇ ಕಾಲಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಿರುವ ಹಣಕ್ಕೂ ಕಡಿತವಾಗಿದ್ದು ಇದರ ಪರಿಣಾಮವಾಗಿ ನಾವು ಗಂಭೀರ ಸ್ವರೂಪದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದೇವೆ.

        ಹದಿನೈದನೇ ಹಣಕಾಸು ಆಯೋಗ ರಾಜ್ಯಕ್ಕೆ ನೀಡಬೇಕಿರುವ ಹಣದಲ್ಲಿ ಒಂಭತ್ತು ಸಾವಿರ ಕೋಟಿ ರೂಗಳಷ್ಟು ಹಣವನ್ನು ಕಡಿತ ಮಾಡಿದ್ದು ಇದರ ಪ್ರಮಾಣ ಹನ್ನೊಂದರಿಂದ ಹನ್ನೆರಡು ಸಾವಿರ ಕೋಟಿ ರೂಗಳಿಗೂ ಏರಬಹುದು.ಅದೇ ರೀತಿ ಜಿ.ಎಸ್.ಟಿ.ಸೇರಿದಂತೆ ವಿವಿಧ ಬಾಬ್ತುಗಳಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ಹದಿನೇಳು ಸಾವಿರ ಕೋಟಿ ರೂಪಾಯಿಗಳಷ್ಟು ಹಣವೂ ಬರದೇ ಇರುವುದರಿಂದ ಪರಿಸ್ಥಿತಿಯನ್ನು ಅತ್ಯಂತ ಎಚ್ಚರಿಕೆಯಿಂದ ನಿಭಾಯಿಸಬೇಕಾಗಿದೆ.ಹೀಗಾಗಿ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗಿರುವ ಯೋಜನೆಗಳಿಗೆ ಕಡಿತ ಮಾಡಿ ಜನರ ಕಣ್ಣಿಗೆ ಹಿತವಾಗುವಂತಹ ಕೆಲ ಯೋಜನೆಗಳನ್ನು ರೂಪಿಸಿ ಬಜೆಟ್ ಮಂಡಿಸಬೇಕಾದ ಸ್ಥಿತಿ ಇದೆ.

     ಆದ್ದರಿಂದ ರಾಜ್ಯ ಸರ್ಕಾರದ ಆರ್ಥಿಕ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಯೋಜನೆಗಳನ್ನು ರೂಪಿಸಿ.ಆದರೆ ಯಾವ ಕಾರಣಕ್ಕೂ ಅದು ಹೊರೆಯಾಗದಂತೆ ನೋಡಿಕೊಳ್ಳಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳಿಗೆ ಹೇಳತೊಡಗಿದ್ದಾರೆ.ಹೀಗಾಗಿ ಬಜೆಟ್‍ನಲ್ಲಿ ಹೊಸ ಹೊಸ ಯೋಜನೆಗಳನ್ನು ಸೇರ್ಪಡೆಗೊಳಿಸುವ ಮೂಲಕ ಇಲಾಖೆಗೆ ಶಕ್ತಿ ನೀಡಬೇಕು ಎಂದು ಬಯಸಿದವರೀಗ ಅಸಹಾಯಕತೆಯಿಂದ ಸಿಗುವ ಹಣದಲ್ಲೇ ಕಡಿತವಾದರೆ ಮುಂದೇನು ಮಾಡಬೇಕು?ಎಂದು ಯೋಚಿಸತೊಡಗಿದ್ದಾರೆ.

 

Recent Articles

spot_img

Related Stories

Share via
Copy link
Powered by Social Snap