ಬೆಂಗಳೂರು
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯಗಳು ಹಾಗೂ ಜನವಿರೋಧಿ ನೀತಿ, ಪೆಟ್ರೋಲ್, ಡೀಸೆಲ್ ದರ ಏರಿಕೆ, ಗ್ರಾಮಪಂಚಾಯತ್ ಗಳಿಗೆ ಆಡಳಿತಾಧಿಕಾರಿ ನೇಮಕ ಮಾಡುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ಇದೇ 29ರಂದು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದೆ.ಪ್ರತಿಭಟನೆ ರೂಪುರೇಷೆ ಸ್ವರೂಪ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ರಾಜ್ಯ ಸರ್ಕಾರದಿಂದ ಕೋವಿಡ್ ಪರಿಸ್ಥಿತಿ ನಿರ್ವಹಣೆ ಹಾಗೂ ವೈಫಲ್ಯಗಳ ಬಗ್ಗೆ, ಭೂ ಸುಧಾರಣಾ ಕಾಯ್ದೆಯಿಂದ ಆಗಿರುವ ಅನಾನುಕೂಲಗಳ ಬಗ್ಗೆ ಪಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯಿಂದ ಜನ ಸಾಮಾನ್ಯರಿಗೆ ಆಗಿರುವ ತೊಂದರೆಗಳು, ಪಂಚಾಯತ್ ರಾಜ್ ಚುನಾವಣೆ ಮುಂದೂಡಿ ಜನ ವಿರೋಧಿ ನೀತಿ ಅನುಸರಿಸುತ್ತಿರುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ, ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಈಶ್ವರ್‍ಖಂಡ್ರೆ, ಹಿರಿಯ ನಾಯಕರಾದರ ವೀರಪ್ಪ ಮೊಯ್ಲಿ, ರೆಹಮಾನ್ ಖಾನ್, ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿ ಅನೇಕ ಹಿರಿಯ ನಾಯಕರು ಭಾಗವಹಿಸಿದ್ದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ದಪ್ಪ ಚರ್ಮದ ಕೇಂದ್ರ, ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಪಕ್ಷದಿಂದ ತೀವ್ರ ಸ್ವರೂಪದ ಹೋರಾಟ ಕೈಗೆತ್ತಿಕೊಳ್ಳುವುದು ಅನಿವಾರ್ಯ ಎಂದರು.
ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ತೀವ್ರವಾಗಿರಲಿದ್ದು, ಸೋಂಕು ನಿಯಂತ್ರಣ ಕ್ರಮಗಳ ಮೂಲಕ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.ಸಿದ್ದರಾಮಯ್ಯ ಮಾತನಾಡಿ, ಪೆಟ್ರೋಲ್, ಡೀಸೆಲ್ ಅತ್ಯಂತ ದುಬಾರಿಯಾಗಿದೆ. ಬೆಲೆ ಏರಿಕೆಯನ್ನು ಖಂಡಿಸುವ ಜೊತೆಗೆ ಜನಪರ ಹೋರಾಟ ಕೈಗೆತ್ತಿಕೊಳ್ಳಬೇಕು.
ಕಳೆದ ಆರು ವರ್ಷಗಳಲ್ಲಿ ಎಲ್ಲಾ ವಸ್ತುಗಳ ದರ ಹೆಚ್ಚಳವಾಗಿದೆ. ಡೀಸೆಲ್, ಪೆಟ್ರೋಲ್ ಮೇಲಿನ ತೆರಿಗೆ ಹೆಚ್ಚಾಗಿದೆ. ಕೇಂದ್ರ ಸರ್ಕಾರ ಈ ಮೂಲಕ ಸುಮಾರು 18 ಲಕ್ಷ ಕೋಟಿ ರೂ ಸಂಗ್ರಹ ಮಾಡಿರುವ ಮಾಹಿತಿ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿದಿರುವುದರಿಂದ ಪೆಟ್ರೋಲ್, ಡೀಸೆಲ್ 25 ರೂ. ಆಸುಪಾಸಿನಲ್ಲಿ ಮಾರಾಟವಾಗಬೇಕಿತ್ತು ಎಂದರು.
ಕೊರೋನಾ ನಿರ್ವಹಣೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪರಿಸ್ಥಿತಿ ನಿರ್ವಹಣೆಗೆ ಸಮರ್ಪಕವಾಗಿ ಅನುದಾನ ಬಿಡುಗಡೆ ಮಾಡದೆ ಜನರಿಗೆ ಎರಡೂ ಸರ್ಕಾರಗಳು ದ್ರೋಹ ಮಾಡಿವೆ. ದೇಶದ ಹಣಕಾಸು ಪರಿಸ್ಥಿತಿ ಮೊದಲೇ ಚೆನ್ನಾಗಿರಲಿಲ್ಲ. ಇದೀಗ ಸರ್ಕಾರದ ವೈಫಲ್ಯದ ಪರಿಣಾಮ ಆರ್ಥಿಕ ಸ್ಥಿತಿಗೆ ಪಾರ್ಶ್ವವಾಯು ಬಡಿದಿದೆ ಎಂದು ಸಿದ್ದರಾಮಯ್ಯ ಅವರು ಟೀಕಿಸಿದರು.
ಲಾಕ್ ಡೌನ್ ತೆಗೆದ ಬಳಿಕ ಕೊರೋನಾ ಸೋಂಕು ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಆದರೆ, ಸೋಂಕಿನ ವಿರುದ್ಧ ಹೋರಾಡುತ್ತಿರುವ ವೈದ್ಯರು, ಸಿಬ್ಬಂದಿಗೆ ಸೌಲಭ್ಯಗಳೇ ಇಲ್ಲ. ರೈತರು ಮತ್ತಿತರ ಸಮುದಾಯಗಳಿಗೆ ಸರ್ಕಾರ ಘೋಷಣೆ ಮಾಡಿರುವ ಪ್ಯಾಕೇಜ್ ಈ ವರೆಗೆ ತಲುಪಿಲ್ಲ. ಲಾಕ್ ಡೌನ್ ಸಮಯದಲ್ಲೇ ಜನರ ಕೈಗೆ ಹಣ ಕೊಟ್ಟಿದ್ದರೆ ಅವರಿಗೆ ಈಗ ಕಷ್ಟ ಬರುತ್ತಿರಲಿಲ್ಲ. ಕೊರೊನಾ ವಿಚಾರದಲ್ಲಿ ದೇಶದ ಸ್ಥಿತಿ ಕೆಟ್ಟದಾಗಿದೆ. ಮುಂದೆ ನಾವು ಅಮೆರಿಕ ಮೀರಿಸುವ ಪರಿಸ್ಥಿತಿ ಇದೆ. ಜಿಡಿಪಿಯಲ್ಲಿ ಶೇ.1ರಷ್ಟನ್ನೂ ಸರ್ಕಾರ ಸೋಂಕು ನಿಯಂತ್ರಣಕ್ಕೆ ಖರ್ಚು ಮಾಡಿಲ್ಲ. ಎಪಿಎಂಸಿ ರಾಜ್ಯದ ಪಟ್ಟಿಯಲ್ಲಿ ಬರುವ ವಿಷಯ. ಆದರೂ ಕೇಂದ್ರ ಸರ್ಕಾರ ಮೂಗು ತೂರಿಸುತ್ತಿದೆ. ರಾಜ್ಯ ಸರ್ಕಾರ ಕೇಂದ್ರದ ಗುಲಾಮನಂತೆ ವರ್ತಿಸುತ್ತಿದೆ. ತಿದ್ದುಪಡಿ ಆರಂಭದಲ್ಲಿ ಚೆನ್ನಾಗಿ ಕಂಡರೂ ಮುಂದಿನ ದಿನಗಳಲ್ಲಿ ರೈತರು ಬೀದಿ ಪಾಲಾಗುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಭೂ ಸುಧಾರಣೆ ಕಾಯಿದೆಗೂ ತಿದ್ದುಪಡಿ ತರಲಾಗುತ್ತಿದೆ. ಉಳುವವನಿಗೆ ಭೂಮಿ ಕೊಡಬೇಕು. ಬಡವರಿಗೆ ಭೂಮಿ ಹಂಚಬೇಕು ಎಂಬುದು ಕಾಂಗ್ರೆಸ್ ಪಕ್ಷದ ನಿಲುವು. ಇದನ್ನೇ ಡಾ. ಬಿ.ಆರ್. ಅಂಬೇಡ್ಕರ್ ಸಹ ಪ್ರತಿಪಾದಿಸಿದ್ದರು. ಉದ್ದೇಶಿತ ತಿದ್ದುಪಡಿ ಪ್ರಕಾರ ಯಾರು ಬೇಕಾದರೂ ಕೃಷಿ ಭೂಮಿ ಖರೀದಿಸಬಹುದು. ನಾವು ಊಳುವವನಿಗೆ ಭೂಮಿ ಕೊಟ್ಟರೆ, ಸರ್ಕಾರ ಉಳ್ಳವರಿಗೆ ಕೃಷಿ ಭೂಮಿ ಧಾರೆ ಎರೆಯಲು ಮುಂದಾಗಿದೆ. ಇದರ ವಿರುದ್ಧವೂ ತೀವ್ರ ಸ್ವರೂಪದ ಹೋರಾಟ ಅನಿವಾರ್ಯ. ಕೇಂದ್ರ, ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಗಳ ವಿರುದ್ಧ ಜೈಲ್ ಭರೋ ಸೇರಿದಂತೆ ನಾನಾ ರೀತಿಯ ಹೋರಾಟಗಳನ್ನು ರೂಪಿಸಲು ಸಿದ್ದರಾಮಯ್ಯ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








