ಬೆಂಗಳೂರು
ಮಾರಕ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ದಿಢೀರ್ ರಾಜ್ಯದಲ್ಲೆಡೆ ಬೀದಿಬದಿ ವ್ಯಾಪಾರ ನಿಷೇಧಿಸಿರುವ ಪರಿಣಾಮ ಲಕ್ಷಾಂತರ ಬೀದಿ ವ್ಯಾಪಾರಿಗಳು ದುಡಿಮೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಆರು ದಿನಗಳಿಂದ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಬೀದಿ ವ್ಯಾಪಾರ ಬಂದ್ ಆಗಿದ್ದು ರಾಜಧಾನಿ ಬೆಂಗಳೂರಿನ ಎಂಟು ವಲಯಗಳಲ್ಲಿ ಬೀದಿಬದಿ ವ್ಯಾಪಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಸಾವಿರಾರು ಕುಟುಂಬಗಳು ಪರದಾಡುವಂತಾಗಿವೆ.
ಈ ನಡುವೆ ಕೊರೊನಾ ವೈರಸ್ ನಿಂದ ಮೆಕ್ಕೆಜೋಳ ಕ್ಕೆ ಭಾರೀ ಪೆಟ್ಟು ಬಿದ್ದಿದ್ದು, ಕೋಳಿ ಫಾರಂಗಳಿಗೆ ಸಾಗಾಟ ಆಗುತ್ತೀದ್ದ ಶೇಕಡ 75ರಷ್ಟು ಮೆಕ್ಕೆಜೋಳ ಕ್ಕೆ ಬೇಡಿಕೆ ತಗ್ಗಿದೆ. ಅದೇ ರೀತಿ ರಾಜಧಾನಿ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ರೈತರ ಬೆಳೆಗೆ ಸೂಕ್ತ ಮಾರುಕಟ್ಟೆ ಬೆಲೆ ಇಲ್ಲದಂತೆ ಆಗಿದೆ.
ಶುಚಿತ್ವವಿಲ್ಲದ ಆಹಾರಗಳು ಹಾಗೂ ಈ ಆಹಾರ ಮಾರಾಟ ಮಾಡುವ ವೇಳೆ ಹೆಚ್ಚು ಜನರು ಜಮಾಯಿಸುವುದರಿಂದ ಕೊರೊನಾ, ಕಾಲರಾ ಹರಡಬಹುದು ಎಂಬ ನೆಪವೊಡ್ಡಿರುವ ಅಧಿಕಾರಿಗಳು ಬೀದಿಬದಿ, ರಸ್ತೆ ಇಕ್ಕೆಲ, ಪಾದಚಾರಿ ಮಾರ್ಗ, ಮಾರುಕಟ್ಟೆ, ಬಸ್ ನಿಲ್ದಾಣಗಳ ಬಳಿ ವ್ಯಾಪಾರ ಮಾಡುತ್ತಿದ್ದ ತಿಂಡಿ-ತಿನಿಸು, ಟೀ ಅಂಗಡಿ, ಗೋಬಿ, ಪಾನಿಪುರಿ, ಚಾಟ್ಸ್, ಫೂಟ್ ಸಲಾಡ್, ಬಿಡಿ ಹಣ್ಣು ಮಾರಾಟ ಸೇರಿದಂತೆ ಮತ್ತಿತರ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ.
ದಿನಗೂಲಿ ಕಾರ್ಮಿಕರು:
ರಾಜ್ಯದ ಬಹುತೇಕ ಕಡೆ ಬೀದಿ ಬದಿ ವ್ಯಾಪಾರ ಮಾಡುವಂತಹವರ ಬಳಿಯೇ ಆಟೋ ಚಾಲಕರು, ಕೂಲಿ ಕಾರ್ಮಿಕರು, ಸಣ್ಣ ಅಂಗಡಿ ವ್ಯಾಪಾರಿಗಳು, ಸೇಲ್ಸ್ಮನ್ಗಳು, ಗಾರ್ಮೆಂಟ್ಸ್ ಹಾಗೂ ಇತರ ಕಾರ್ಮಿಕರು ದಿನನಿತ್ಯ ಮಧ್ಯಾಹ್ನ, ರಾತ್ರಿಯ ಊಟವನ್ನು ಮಾಡುತ್ತಾರೆ. ಇಲ್ಲಿ ಕಡಿಮೆ ಹಣಕ್ಕೆ ಆಹಾರ ಸಿಗುತ್ತದೆ ಎಂದು ಎಲ್ಲರೂ ಇಲ್ಲಿಗೆ ಬರುತ್ತಾರೆ. ಆದರೆ, ಈಗ ಎಲ್ಲವೂ ಬಂದ್ ಆಗಿರುವುದರಿಂದ ಹೆಚ್ಚು ಹಣ ನೀಡಿ, ದೊಡ್ಡ ಹೊಟೇಲ್ ಗಳಿಗೆ ಹೋಗಲು ಸಾಧ್ಯವಾಗದೇ ಕಾರ್ಮಿಕರು ಹಸಿವಿನಿಂದ ಬಳಲುವಂತಾಗಿದೆ
ನಷ್ಟ:
ಬೆಂಗಳೂರು ವ್ಯಾಪ್ತಿಯಲ್ಲಿಯೇ ಸುಮಾರು 1 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಬೀದಿಬದಿ ವ್ಯಾಪಾರಿಗಳಿದ್ದಾರೆ. ಪ್ರತಿನಿತ್ಯ ನಗರದಲ್ಲಿ ಅಂದಾಜು 2 ಕೋಟಿ ರೂ.ಗೂ ಅಧಿಕ ವಹಿವಾಟು ನಡೆಯುತ್ತದೆ. ಪ್ರತಿ ವ್ಯಾಪಾರಿಯೂ ದಿನನಿತ್ಯ ಕನಿಷ್ಠ 500 ರೂ.ಯಿಂದ ಎರಡು ಸಾವಿರದವರೆಗೂ ಸಂಪಾದನೆ ಮಾಡುತ್ತಾರೆ.
ಆದರೆ, ಸರ್ಕಾರ ನಿರ್ಬಂಧ ಹೇರಿದ್ದರಿಂದ ಇದೀಗ ಯಾವುದೇ ಸಂಪಾದನೆ ಇಲ್ಲದೆ ಪರಿತಪಿಸುವಂತಾಗಿದ್ದು, ಸುಮಾರು 15 ಕೋಟಿ ರೂ.ಗೂ ಹೆಚ್ಚು ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ.ಇನ್ನೂ ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಸೂಚನೆಯಂತೆ ರಾಜ್ಯದ ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಕಟ್ಟುನಿಟ್ಟಿನ ಆದೇಶ ಹೊರಡಿಸಿ ಶಾಲಾ-ಕಾಲೇಜು, ಸಿನಿಮಾ ಮಂದಿರ, ಮಾಲ್ ಮುಚ್ಚಿಸಿದ್ದು, ಆರು ಅಘೋಷಿತ ಬಂದ್ ವಾತಾವರಣ ಮುಂದುವರೆದಿದೆ.
ರೈಲ್ವೇ ನಿಲ್ದಾಣದಲ್ಲಿ, ಬಸ್ಗಳಲ್ಲಿ, ಆಟೋಗಳಲ್ಲಿ ಪ್ರಯಾಣಿಕರ ಸಂಚಾರ ಇಳಿಮುಖವಾಗಿದೆ. ಅಲ್ಲದೇ ಜನ ಗಿಜಿಗುಡುತ್ತಿದ್ದ ರಸ್ತೆಗಳಲ್ಲಿ ಜನಸಂಚಾರ ಕಡಿಮೆಯಾಗಿದೆ. ನಗರದಲ್ಲಿ ಸಸ್ಯಹಾರಿ, ಮಾಂಸಹಾರಿ ಹೋಟೆಲ್ಗಳು, ಪ್ರಾವ್ಹಿಜನ್ ಸ್ಟೋರ್, ಮಧ್ಯದ ಅಂಗಡಿಗಳು ತೆರೆದಿದ್ದರೂ ವ್ಯಾಪಾರ-ವಹಿವಾಟಿಲ್ಲದೇ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ