ಉಪಚುನಾವಣಾ ಕಣದಲ್ಲಿ ಜೋರಾದ ಕಾಂಚಾಣದ ಸದ್ದು…!

ಬೆಂಗಳೂರು

     ಉಪಚುನಾವಣೆಯ ಕಣದಲ್ಲಿ ಈಗ ಕನಕದ ಸುರಿಮಳೆಯಾಗುತ್ತಿದೆ.ಹಾಗಂತ ಡಿಸೆಂಬರ್ ಐದರಂದು ಉಪಚುನಾವಣೆ ನಡೆಯಲಿರುವ ಬಹುತೇಕ ರಾಜಕೀಯ ಪಕ್ಷಗಳ ಕಾರ್ಯಕರ್ತರೇ ಗುಸು ಗುಸು ಮಾತನಾಡಿಕೊಳ್ಳುತ್ತಿರುವ ರೋಚಕ ಅಂಶ ಬೆಳಕಿಗೆ ಬಂದಿದೆ .ವಿಜಯ ನಗರ,ಹೊಸಕೋಟೆ ಸೇರಿದಂತೆ ಹದಿನೈದು ಕ್ಷೇತ್ರಗಳ ಪೈಕಿ ಬಹುತೇಕ ಕ್ಷೇತ್ರಗಳಲ್ಲಿ ಗೆಲ್ಲುವ ಸಲುವಾಗಿ ಪ್ರಮುಖ ರಾಜಕೀಯ ಪಕ್ಷಗಳ ಕ್ಯಾಂಡಿಡೇಟುಗಳು ಮತದಾರರಿಗೆ ಚಿನ್ನದ ಆಮಿಷವೊಡ್ಡುತ್ತಿದ್ದಾರೆ.

     ಹೊಸಕೋಟೆಯಲ್ಲಿ ಬಿ.ಜೆ.ಪಿ ಯ ಎಂಟಿಬಿ ನಾಗರಾಜ್,ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಹಾಗೂ ಕಾಂಗ್ರೆಸ್‍ನ ಪದ್ಮಾವತಿ ಸುರೇಶ್ ಸ್ಪರ್ಧೆ ಮಾಡಿದ್ದು ಇದೊಂದೇ ಕ್ಷೇತ್ರದಲ್ಲಿ ತಲಾ ನಾಲ್ಕು ಗ್ರಾಂಗಳ ಅರವತ್ತು ಸಾವಿರ ಚಿನ್ನದ ಉಂಗುರಗಳು ಹಂಚಿಕೆಯಾಗುತ್ತಿವೆ ಎಂಬುದು ಈ ಗುಸು ಗುಸು ಮಾತಿನ ಮುಖ್ಯ ಅಂಶ.

     ಅಂದರೆ ಸುಮಾರು ಇನ್ನೂರಾ ನಲವತ್ತು ಕೆಜಿ ಬಂಗಾರ ಉಂಗುರಗಳ ರೂಪದಲ್ಲಿ ಮತದಾರರ ಕೈ ಸೇರುತ್ತಿದ್ದು ಇಬ್ಬರು ಪ್ರಮುಖ ನಾಯಕರು ಇದರ ಹಿಂದಿದ್ದಾರೆ ಎಂಬುದು ಕಾರ್ಯಕರ್ತರ ಮಾತು.ಸಧ್ಯದ ಸ್ಥಿತಿಯಲ್ಲಿ ಒಂದು ಗ್ರಾಂ ಚಿನ್ನದ ಬೆಲೆ ಏನಿಲ್ಲವೆಂದರೂ ಮುನ್ನೂರಾ ಐವತ್ತು ರೂಪಾಯಿಗಳಷ್ಟಿದ್ದು,ಇನ್ನೂರಾ ನಲವತ್ತು ಕೆಜಿ ಬಂಗಾರ ಎಂದರೆ ಎಂಭತ್ತು ಲಕ್ಷ ರೂಪಾಯಿಗಳಿಗಿಂತ ಅಧಿಕ ಹಣ ಚೆಲ್ಲಲಾಗುತ್ತಿದೆ.

      ಕೇವಲ ಚಿನ್ನದ ಉಡುಗೊರೆಯೇ ಈ ಪ್ರಮಾಣದಲ್ಲಿದ್ದರೆ ಇತರ ವೆಚ್ಚಗಳು ಸೇರಿ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ವೆಚ್ಚವಾಗಬಹುದಾದ ಹಣ ಎಷ್ಟು?ಅನ್ನುವ ಮಾತು ರಾಜಕೀಯ ಪಕ್ಷಗಳ ಕಾರ್ಯಕರ್ತರಿಂದಲೇ ಕೇಳಿ ಬರುತ್ತಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ.

     ಈ ಮಧ್ಯೆ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕ್ಯಾಂಡಿಡೇಟ್ ಆನಂದ್‍ಸಿಂಗ್ ಅವರು ಮತದಾರರಿಗೆ ಎಂಟು ಗ್ರಾಂ ನಂತೆ ಚಿನ್ನ ಒದಗಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಬಸವರಾಜ ರಾಯರೆಡ್ಡಿ ಆರೋಪಿಸಿರುವುದು ಕುತೂಹಲ ಕೆರಳಿಸಿದೆ.ಮುಂದಿನ ತಿಂಗಳು ಒಂದನೇ ತಾರೀಖು ಆನಂದ್‍ಸಿಂಗ್ ಕುಟುಂಬದ ಒಂದು ಮದುವೆ ಇದ್ದು ಇದರ ಹೆಸರಿನಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ತಯಾರಿ ಮಾಡಿಕೊಳ್ಳಲಾಗಿದೆ.ನಿರ್ದಿಷ್ಟ ಪ್ರಮಾಣದ ಮತದಾರರಿಗೆ ತಲಾ ಎಂಟು ಗ್ರಾಂ ಬಂಗಾರ ನೀಡಲಾಗುತ್ತಿದೆ ಎಂದು ಬಸವರಾಜ ರಾಯರೆಡ್ಡಿ ಆರೋಪ ಮಾಡಿದ್ದಾರೆ.

     ಈ ಹಿನ್ನೆಲೆಯಲ್ಲಿ ತಕ್ಷಣವೇ ಆನಂದ್‍ಸಿಂಗ್ ಅವರ ನಿವಾಸದ ಮೇಲೆ,ಮದುವೆ ನಡೆಯುತ್ತಿರುವ ಜಾಗದ ಮೇಲೆ ಸಿಸಿ ಟಿವಿ ಕಣ್ಗಾವಲನ್ನಿಡಬೇಕು ಎಂದು ಚುನಾವಣಾ ಆಯೋಗವನ್ನು ಒತ್ತಾಯಿಸಿರುವ ಅವರು,ಚುನಾವಣೆಯ ನೀತಿ,ನಿರ್ಭಂಧಗಳನ್ನು ಪಾಲಿಸುವವರೇ ಇಲ್ಲ ಎಂದರೆ ಅರ್ಥವೇನು?ಅಂತ ಪ್ರಶ್ನಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap