ಆರ್ಥಿಕ ಬಿಕ್ಕಟ್ಟು: ನೆಲಕಚ್ಚಿದ ದಸರಾ ವಹಿವಾಟು..!!

ತುಮಕೂರು

    ನೋಟ್ ಬ್ಯಾನ್‍ನಿಂದ ಆರಂಭವಾದ ಆರ್ಥಿಕ ಸಂಕಷ್ಟ ಈವರೆಗೂ ಚೇತರಿಕೆಯಾಗಿಲ್ಲ. ಜೊತೆಗೆ ಜಿಎಸ್‍ಟಿ ಹೊರೆ, ದಿನ ಬಳಕೆ ಪದಾರ್ಥಗಳ ಬೆಲೆ ಏರಿಕೆ ಬರೆ, ಉದ್ಯೋಗ ಕಡಿತ, ವೇತನ ಕಡಿತ, ಸಾಲದಕ್ಕೆ ಸಾಲುಗಟ್ಟಿ ಬರುವ ಹಬ್ಬಗಳ ಖರ್ಚಿನಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಜೀವನ ನಿರ್ವಹಣೆಯೇ ದುಬಾರಿ ಎನ್ನುವಂತಾಗಿ ಕಂಗೆಟ್ಟಿದ್ದಾರೆ.

    ಹಿಂದಿನ ವರ್ಷಗಳಿಗೆ ಹೋಲಿಸಿದರೆ ತುಮಕೂರಿನಲ್ಲಿ ಈ ಬಾರಿಯ ದಸರಾ ಖರೀದಿ ವಹಿವಾಟು ನಿರಾಶದಾಯಕ. ಆರ್ಥಿಕ ಬಿಕ್ಕಟ್ಟಿನಿಂದ ಜನ ಕೊಳ್ಳುವ ಶಕ್ತಿ ಕಳೆದುಕೊಂಡಿದ್ದಾರೆ. ಒಡವೆ, ವಾಹನಗಳ ಖರೀದಿ ಇರಲಿ, ಹಬ್ಬದ ಜವಳಿ ಕೊಳ್ಳಲೂ ಜನ ಹಿಂಜರಿಯುವಂತಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

    ಈ ಬಾರಿಯ ದಸರಾ ಹಬ್ಬದಲ್ಲಿ ಸ್ಪೆಷಲ್ ಆಫರ್, ವಿಶೇಷ ರಿಯಾಯಿತಿ ಪ್ರಕಟಿಸಿದ್ದರೂ ವ್ಯಾಪಾರಿಗಳು ಗ್ರಾಹಕರನ್ನು ಅಂಗಡಿಗೆ ಸೆಳೆಯುವಲ್ಲಿ ಸಫಲರಾಗಲಿಲ್ಲ. ಬೇಕಾದ್ದನ್ನೆಲ್ಲಾ ಖರೀದಿಸಿ ಆಡಂಬರವಾಗಿ ಹಬ್ಬ ಆಚರಿಸುವ ಪರಿಸ್ಥಿತಿಯಲ್ಲಿ ಜನ ಇಲ್ಲ, ಹೇಗೋ ಹಬ್ಬ ಮಾಡಿ ಮುಗಿಸಿದರೆ ಸಾಕು ಎನ್ನುವ ಸ್ಥಿತಿ.

     ಕಳೆದ ವರ್ಷಗಳಿಗೆ ಹೋಲಿಸಿದರೆ ತುಮಕೂರಿನಲ್ಲಿ ಈ ದಸರಾ ಹಬ್ಬದಲ್ಲಿ ಬಟ್ಟೆ ಅಂಗಡಿಗಳು ವಹಿವಾಟು ನಡೆಸಿದ್ದು ಕಮ್ಮಿ. ಸಕಾಲದಲ್ಲಿ ಮಳೆ ಬೀಳದೆ ಬೆಳೆ ಇಲ್ಲ, ಹಳ್ಳಿ ಜನರ ಕೈಯ್ಯಲ್ಲಿ ಹಣವಿಲ್ಲ. ಕಂಪನಿ, ಕಾರ್ಖಾನೆಗಳು ಉಳಿದರೆ ಸಾಕೆನ್ನುವ ಒದ್ದಾಟದಲ್ಲಿವೆ, ಉದ್ಯೋಗ ಕಡಿತ, ಕಾರ್ಮಿಕರ ವೇತನ ಕಡಿತದ ಚಿಂತನೆಯಲ್ಲಿವೆ. ಹಿಂದೆ ದಸರಾ, ಆಯುಧ ಪೂಜೆ ಸಂದರ್ಭಗಳಲ್ಲಿ ಕಂಪನಿ, ಕಾರ್ಖಾನೆಗಳು ಆಯುಧ ಪೂಜೆ ವೇಳೆ ತಮ್ಮ ಕಾರ್ಮಿಕರಿಗೆ ಬಟ್ಟೆ ಕೊಡುಗೆ ನೀಡುವ ಪದ್ದತಿ ಇತ್ತು.

    ನಮ್ಮ ಅಂಗಡಿಯಲ್ಲಿ ಪ್ರತಿ ವರ್ಷ 25-30 ಕಾರ್ಖಾನೆಗಳವರು ತಮ್ಮ ಕಾರ್ಮಿಕರಿಗೆ ಬಟ್ಟೆ ಖರೀದಿಸುತ್ತಿದ್ದರು. ಈ ವರ್ಷ ನಾಲ್ಕು ಕಾರ್ಖಾನೆಗಳವರು ಖರೀದಿ ಮಾಡಿದರು ಎಂದು ನಗರದ ವಿವೇಕಾನಂದ ರಸ್ತೆಯ ಸಿಂಧೂರ್ ಟೆಕ್ಸ್ ಟೈಲ್ಸ್‍ನ ಮಾಲೀಕ ಕೆ. ಎಸ್. ನಾಗೇಶ್ ಹೇಳಿದರು.

    ಈ ಬಾರಿಯ ದಸರಾದಲ್ಲಿ ತಮ್ಮ ವ್ಯಾಪಾರದ ಹಾನಿಗೆ ಸ್ಮಾರ್ಟ್ ಸಿಟಿಯ ರಸ್ತೆ ಕಾಮಗಾರಿ ಆರಂಭವಾಗಿರುವುದು ಕಾರಣ. ರಸ್ತೆ ಅಗೆದು ಜನ ಓಡಾಡಲೂ ಆಗದಂತಹ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ, ಹಬ್ಬದ ಸಂದರ್ಭದ 20 ದಿನ ಜನ ಅಂಗಡಿಗೆ ಬರಲಿಲ್ಲ. ವ್ಯವಹಾರ ಸಂಪೂರ್ಣ ಸ್ಥಗಿತಗೊಂಡಿತ್ತು ಎಂದರು.

    ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಡಲು ನೋಟು ರದ್ದು ಮಾಡಿದ್ದೂ ಒಂದು ಕಾರಣ. ನೋಟ್ ಬ್ಯಾನ್‍ನಿಂದ ರಿಯಲ್ ಎಸ್ಟೇಟ್ ಉದ್ದಿಮೆ ನೆಲಕಚ್ಚಿತು. ರಿಯಲ್ ಎಸ್ಟೇಟ್ ನಡೆದಿದ್ದರೆ ಆರ್ಥಿಕ ವಹಿವಾಟು ಚೆನ್ನಾಗಿ ನಡೆಯುತ್ತಿತ್ತು. ಜಿಎಸ್‍ಟಿಯಿಂದ ಜನರ ಮೇಲೆ ತೆರಿಗೆ ಹೊರೆಯಾದರೂ ಸುಳ್ಳು ಲೆಕ್ಕ, ಅಕ್ರಮವಾಗಿ ನಡೆಯುತ್ತಿದ್ದ ವಹಿವಾಟುಗಳಿಗೆ ಕಡಿವಾಣ ಬಿದ್ದಿತು ಎಂದು ನಾಗೇಶ್ ಅಭಿಪ್ರಾಯಪಟ್ಟರು.

    ದಸರಾದಲ್ಲಿ ಜವಳಿ ವ್ಯಾಪಾರವೇ ಕುಸಿದಿತ್ತು ಎಂದ ಮೇಲೆ ಒಡವೆ ಖರೀದಿ ಪರಿಸ್ಥಿತಿ ಕೇಳುವಂತೆಯೇ ಇಲ್ಲ. ಈ ಹಬ್ಬಗಳಲ್ಲಿ ಚಿನ್ನ, ಬೆಳ್ಳಿ ಖರೀದಿಯಲ್ಲಿ ನಿರೀಕ್ಷಿಸಿದಷ್ಟು ವ್ಯಾಪಾರ ಆಗಿಲ್ಲ ಎಂದು ನಗರದ ಮಲಬಾರ್ ಗೋಲ್ಡ್ ಮಳಿಗೆಯ ಸಕಾಯಕ ಮಾರಾಟ ವ್ಯವಸ್ಥಾಪಕ ಯೋಗೀಶ್ ಹೇಳುತ್ತಾರೆ.

    ಕಳೆದ ವರ್ಷ ಈ ವೇಳೆಗೆ ಇದ್ದ ಚಿನ್ನದ ಬೆಲೆ ಈ ವರ್ಷ ಪ್ರತಿ ಗ್ರಾಂಗೆ ಸುಮಾರು 600 ರೂ. ಹೆಚ್ಚಾಗಿದೆ. ಜೊತೆಗೆ ಚಿನ್ನ ಖರೀದಿಯ ಮೇಲೆ ಗ್ರಾಹಕರು ಶೇಕಡ 3ರಷ್ಟು ಜಿಎಸ್‍ಟಿ ತೆರಬೇಕು. ಬೇರೆ ಬೇರೆ ಕಾರಣಗಳಿಂದ ಜನ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ವ್ಯಾಪಾರವಿಲ್ಲ. ಇತರ ಪದಾರ್ಥಗಳಿಗಿಚಿತಾ ಚಿನ್ನ, ಬೆಳ್ಳಿ ಖರೀದಿ ಸಾಮಾನ್ಯ ಜನರಿಗೆ ದೊಡ್ಡ ವಿಚಾರ. ಅದಕ್ಕಾಗಿ ಅವರು ಹಣ ಕೂಡಿಡುತ್ತಾರೆ, ಇಲ್ಲವೆ ಬರಬಹುದಾದ ಆದಾಯ ನಿರೀಕ್ಷಿಸುತ್ತಾರೆ. ಎಲ್ಲಾ ಸಿದ್ಧವಾಗಿ ಹಣ ಕೈಗೆ ಬಂದ ನಂತರ ಒಡವೆ ಕೊಳ್ಳಲು ಯೋಜನೆ ರೂಪಿಸುತ್ತಾರೆ. ಈ ಬಾರಿ ಬೆಳೆ ಇಲ್ಲದೆ ರೈತರು ಸಂಕಷ್ಟದಲ್ಲಿದ್ದು ಹಳ್ಳಿ ಜನ ಒಡವೆ ಖರೀದಿಗೆ ಬರುವುದು ಕಡಿಮೆಯಾಗಿದೆ ಎಂದು ಯೋಗೀಶ್ ಹೇಳಿದರು.

    ಈ ಹಬ್ಬದ ವ್ಯಾಪಾರ ಹೇಳಿಕೊಳ್ಳುವಷ್ಟಾಗಲಿಲ್ಲ, ಸಾಧಾರಣವಾಗಿತ್ತು, ಇದ್ದಿದ್ದರಲ್ಲೇ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಜನರ ಬಳಿ ದುಡ್ಡು ಇದ್ದರೆ ತಾನೆ ಅವರು ವ್ಯಾಪಾರಕ್ಕೆ ಅಂಗಡಿಗೆ ಬರುವುದು. ಬದುಕು ನಿರ್ವಹಣೆಯೇ ದುಸ್ತರ ಎನ್ನುವ ಕಾಲದಲ್ಲಿ ಅನಗತ್ಯ ಖರ್ಚು ಮಾಡುವ ಧೈರ್ಯ ಯಾರಿಗಿದೆ ಎಂದು ಅಶೋಕ ರಸ್ತೆಯ ಕಾವೇರಿ ಸಿಲ್ಕ್ಸ್ ಅಂಡ್ ಸ್ಯಾರೀಸ್ ಮಾಲೀಕ ರಾಜಶೇಖರ್ ಕೇಳುತ್ತಾರೆ.

     ಮಧ್ಯಮ ವರ್ಗದ ಜನರಲ್ಲಿ ದುಡ್ಡಿಲ್ಲ, ತಮ್ಮ ಮಕ್ಕಳ ವಿದ್ಯಾಭ್ಯಾಸದ ಖರ್ಚು ನಿಭಾಯಿಸಿಕೊಂಡು ಸಂಸಾರ ಮಾಡುವುದೇ ಕಷ್ಟ ಎನ್ನುವಾಗ ಸಣ್ಣಪುಟ್ಟ ಖರ್ಚು ಮಾಡಲೂ ಲೆಕ್ಕ ಹಾಕುವಂತಾಗಿದೆ. ಜೊತೆಗೆ ತಮ್ಮ ಉದ್ಯೋಗ, ವ್ಯವಹಾರವನ್ನು ಉಳಿಸಿಕೊಳ್ಳುವುದೇ ಅವರಿಗೆ ಕಷ್ಟವಾಗಿದೆ.

    ಕಾರ್ಖಾನೆಗಳಲ್ಲಿ, ಸಂಸ್ಥೆಗಳಲ್ಲಿ ಕಾರ್ಮಿಕರಿಗೆ ಸರಿಯಾದ ವೇತನ ಸಿಗುತ್ತಿಲ್ಲ, ಕೊಡುವ ಸಂಬಳಕ್ಕೆ ಕೆಲಸ ಮಾಡಬೇಕಾಗಿದೆ. ಹೀಗಾಗಿ ಜನಸಾಮಾನ್ಯರಲ್ಲಿ ಕೊಳ್ಳುವ ಸಾಮಥ್ರ್ಯ ಇಲ್ಲದಂತಾಗಿದೆ. ಮುಂದಿನ ದೀಪಾವಳಿ, ಯುಗಾದಿ ಹಬ್ಬಗಳಿಗೂ ಇದೇ ಪರಿಸ್ಥಿತಿ ಮುಂದವರೆಯುತ್ತದೆ, ಸದ್ಯಕ್ಕೆ ಸಧಾರಣೆಯಾಗುವಂತೆ ಕಾಣುತ್ತಿಲ್ಲ ಎಂದು ರಾಜಶೇಖರ್ ನಿರಾಶೆ ವ್ಯಕ್ತಪಡಿಸಿದರು.

     ಈ ದಸರಾ, ಆಯುಧ ಪೂಜಾ ಹಬ್ಬದಲ್ಲಿ ಆಟೊಮೊಬೈಲ್ ವ್ಯವಹಾರವೂ ಉತ್ತಮವಾಗಿರಲಿಲ್ಲ, ನಿರೀಕ್ಷೆ ಮಾಡಿದ್ದಕ್ಕಿಂತಾ ಶೇಕಡ 35ರಷ್ಟು ಕಡಿಮೆ ವಹಿವಾಟು ನಡೆಯಿತು. ಹೊಸ ವಾಹನ ಖರೀದಿಗೆ ಜನ ಮುಂದೆ ಬರುತ್ತಿಲ್ಲ, ಕಾರಣ ಅವರ ಆರ್ಥಿಕ ಸಂಕಷ್ಟ ಎನ್ನುತ್ತಾರೆ ಶಿರಾ ರಸ್ತೆಯ ಶಾಂತಿನಾಥ ಹೊಂಡಾ ಶೋರೂಂನ ಮೇನೇಜರ್ ಪ್ರಶಾಂತ್.
ಎಲ್ಲಾ ಕಡೆ ಉದ್ಯೋಗ ಕಡಿತ, ಉದ್ಯೋಗ ಉಳಿಸಿಕೊಳ್ಳುವ ಹೋರಾಟ ನಡುವೆ ಹಣಕಾಸಿನ ಕಷ್ಟದ ನಡುವೆ ಹೊಸ ವಾಹನ ಖರೀದಿಗೆ ಜನ ಧೈರ್ಯ ಮಾಡುತ್ತಿಲ್ಲ. ಬ್ಯಾಂಕ್, ಹಣಕಾಸು ಸಂಸ್ಥೆಗಳು ವಾಹನ ಖರೀದಿಗೆ ಸಾಲ ಕೊಡಲು ಮುಂದೆ ಬಂದಿದ್ದರೂ ಸಾಲ ಪಡೆದು ತೀರಿಸುವುದು ಹೇಗೆ ಎನ್ನುವ ಆತಂಕದಲ್ಲಿ ಆಸಕ್ತಿವಹಿಸುತ್ತಿಲ್ಲ. ಹೀಗಾಗಿ, ಈ ಬಾರಿಯ ದಸರಾ ಹಬ್ಬದಲ್ಲಿ ನಗರದಲ್ಲಿ ವಾಹನ ಖರೀದಿ ವಿವಾಟು ಸಾಧಾರಣವಾಗಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap