ಗಣಪತಿ ಹಬ್ಬಕ್ಕೆ ಯುಜಿಡಿ ನೀರಿನ ಸ್ವಾಗತ…!

ಸ್ಮಾರ್ಟ್ ಸಿಟಿ ಅವೈಜ್ಞಾನಿಕ ಕಾಮಗಾರಿಗಳಿಗೆ ತಾಜಾ ಉದಾಹರಣೆ

ತುಮಕೂರು

    ಸ್ಮಾರ್ಟ್‍ಸಿಟಿ ಕಾಮಗಾರಿಗಳು ನಗರದ ಜನತೆಯನ್ನು ಎಷ್ಟೆಲ್ಲಾ ಬಾಧಿಸುತ್ತಿವೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಇಲ್ಲಿದೆ. ಕಳೆದ 15 ದಿನಗಳಿಂದ ಯುಜಿಡಿ ನೀರು ರಸ್ತೆಯಲ್ಲಿ ಉಕ್ಕಿ ಅಲ್ಲಿ ಓಡಾಡುವುದಕ್ಕೆ ತೊಂದರೆಯಾಗಿದ್ದರೂ ಈ ಬಗ್ಗೆ ಇನ್ನೂ ಗಮನ ಹರಿಸದೆ ಇರುವುದು ಆ ಭಾಗದ ಜನತೆಯಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿದೆ.

    ನಗರದ ಎನ್‍ಇಪಿಎಸ್ ಠಾಣೆ ಪಕ್ಕದ ಪಾರ್ಕ್ ರಸ್ತೆಗೆ ಬಿ.ಎಚ್.ರಸ್ತೆಯಿಂದ ತಿರುವು ಪಡೆದು ಪ್ರವೇಶಿಸಿದಾಗ ಯುಜಿಡಿ ನೀರು ಸ್ವಾಗತಿಸುತ್ತದೆ. ರಸ್ತೆಯಲ್ಲಿಯೇ ಉಕ್ಕಿ ಹರಿಯುತ್ತಿರುವ ನೀರು ಅಲ್ಲಿಯೇ ಶೇಖರಣೆಗೊಂಡು ಚರಂಡಿ ಪಾಲಾಗುತ್ತಿದೆ. ಈ ರಸ್ತೆಯಲ್ಲಿ ಹೋಗಿಬರುವ ವಾಹನಗಳು ಹಾಗೂ ಜನರೂ ಸಹ ಈ ನೀರನ್ನು ತುಳಿದುಕೊಂಡೇ ಹೋಗಬೇಕು.

     ಇಲ್ಲಿನ ಈ ಗಲೀಜು ನೀರು ಸುತ್ತಮುತ್ತಲೂ ವ್ಯಾಪಿಸುತ್ತಿದ್ದು, ನೈರ್ಮಲ್ಯ ಹದಗೆಡುತ್ತಿದೆ. ಬಹಳಷ್ಟು ಕಡೆಗೆ ವಾಸನೆ ಬರುತ್ತಿದೆ. ಯುಜಿಡಿ ಲೀಕೇಜ್ ಆಗುತ್ತಿರುವ ಪಕ್ಕದಲ್ಲೇ ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯವಿದ್ದು, ಇಲ್ಲಿರುವ ಅನೇಕರು ಆಸ್ಪತ್ರೆಗಳಿಗೆ ನರ್ಸ್‍ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾತ್ರಿ ವೇಳೆ ಇಲ್ಲಿ ಬರುವಾಗ ತ್ಯಾಜ್ಯ ನೀರಿನೊಳಗೆ ಕಾಲಿಟ್ಟು ಗಲೀಜು ಮಾಡಿಕೊಂಡಿರುವ ಸಾಕಷ್ಟು ಉದಾಹರಣೆಗಳಿವೆ. ಅಲ್ಲದೆ, ರಾತ್ರಿ ವೇಳೆ ಇಲ್ಲಿ ಓಡಾಡುವ ಬಹಳಷ್ಟು ಜನ ನೀರಿನೊಳಗೆ ಬಿದ್ದು ಹೋಗಿದ್ದಾರೆ.

     ಈ ಭಾಗದ ನಗರ ಪಾಲಿಕೆ ಸದಸ್ಯರಿಗೆ ಸಾರ್ವಜನಿಕರು ಕರೆ ಮಾಡಿ ತಿಳಿಸಿದ್ದಾರೆ. ಅವರೂ ಸಹ ಬಂದು ನೋಡಿದ್ದಾರೆ. ಸಂಬಂಧಿಸಿದವರಿಗೆ ತಿಳಿಸಿದ್ದಾರೆ. ಆದರೂ ಪ್ರಯೋಜನವಾಗಿಲ್ಲ. ಇದರ ಮೂಲವನ್ನೇ ಹುಡುಕಲು ಸಾಧ್ಯವಾಗುತ್ತಿಲ್ಲ. ಕೆಲವರ ಪ್ರಕಾರ ಇಷ್ಟೆಲ್ಲಾ ಸಮಸ್ಯೆಗಳಿಗೆ ಡಾ.ರಾಧಾಕೃಷ್ಣ ರಸ್ತೆಯಲ್ಲಿ ನಡೆಯುತ್ತಿರುವ ಸ್ಮಾರ್ಟ್‍ಸಿಟಿ ಕಾಮಗಾರಿಯೇ ಕಾರಣ ಎಂಬುದು ಬಲವಾದ ಆರೋಪ.
ರಾಧಾಕೃಷ್ಣನ್ ರಸ್ತೆಯಲ್ಲಿ ಸ್ಮಾರ್ಟ್‍ರಸ್ತೆ ಕಾಮಗಾರಿ ನಡೆಯುತ್ತಿದೆ. ಬಹುತೇಕ ಮುಕ್ತಾಯದ ಹಂತಕ್ಕೂ ಬರುತ್ತಿದೆ.

     ಇಲ್ಲಿ ಕಾಮಗಾರಿ ಮಾಡುವಾಗ ಯುಜಿಡಿ ಸಂಪರ್ಕಗಳನ್ನು ವ್ಯವಸ್ಥಿತವಾಗಿ ಇರಲು ಬಿಡದೆ ಬೇಕಾಬಿಟ್ಟಿ ಕಾಮಗಾರಿ ಮಾಡಿರುವ ಪರಿಣಾಮ ಇಡೀ ಸಂಪರ್ಕಗಳೇ ಸ್ಥಗಿತಗೊಂಡು ಈ ದುಸ್ಥಿತಿ ಕಾಣುವಂತಾಗಿದೆ. ಅಂದರೆ 2002 ರಲ್ಲಿ ನಿರ್ಮಾಣ ಮಾಡಲಾಗಿದ್ದ ಯುಜಿಡಿ ಸಂಪರ್ಕಗಳ ಮಾಹಿತಿ ಪಡೆಯಬೇಕಾಗಿತ್ತು. ಸ್ಮಾರ್ಟ್‍ಸಿಟಿ ಕಾಮಗಾರಿಗಳನ್ನು ಮಾಡುವಾಗ ಈ ಬಗ್ಗೆ ನಿಗಾ ವಹಿಸಬೇಕಿತ್ತು. ಆದರೆ ಅತ್ತ ಗಮನ ಹರಿಸದೆ ಕಾಮಗಾರಿ ಮಾಡಿರುವ ಪರಿಣಾಮ ಯುಜಿಡಿ ಸಂಪರ್ಕಗಳು ಬ್ಲಾಕ್ ಆಗಿವೆ. ಹೀಗಾಗಿ ಮನೆಗಳ ಸಂಪರ್ಕದ ಯುಜಿಡಿ ನೀರು ಬ್ಲಾಕ್ ಆಗಿರುವ ಕಡೆಗೆ ಹೋಗಿ ಮತ್ತೆ ವಾಪಸ್ ಬರುತ್ತಿದೆ. ಹೆಚ್ಚು ಒತ್ತಡದ ಪರಿಣಾಮವಾಗಿ ಪಾರ್ಕ್ ರಸ್ತೆಯಲ್ಲಿ ಲೀಕೇಜ್ ಆಗುತ್ತಿದೆ.
ಯುಜಿಡಿ ಲೀಕೇಜ್ ಸಮಸ್ಯೆ ಈ ರಸ್ತೆಗೆ ಮಾತ್ರವೇ ಸೀಮಿತವಾಗಿಲ್ಲ.

    ಡಾ.ರಾಧಾಕೃಷ್ಣನ್ ರಸ್ತೆಗೆ ಹೊಂದಿಕೊಂಡಂತೆ ಇರುವ ಕೆಲವು ತಗ್ಗು ಪ್ರದೇಶಗಳಲ್ಲಿಯೂ ಈ ಸಮಸ್ಯೆ ಕಾಣಿಸಿಕೊಂಡಿದೆ. ಭದ್ರಮ್ಮ ವೃತ್ತದಿಂದ ವೀರಶೈವ ಬ್ಯಾಂಕ್‍ಗೆ ಹೋಗುವ ಮಾರ್ಗದ ಎಡಭಾಗದಲ್ಲಿ ಒಂದು ಹೆಣ್ಣು ಮಕ್ಕಳ ವಿದ್ಯಾರ್ಥಿನಿಲಯವಿದೆ. ಒಳ ಹೋಗುವ ಪ್ರದೇಶವೆಲ್ಲ ಯುಜಿಡಿ ನೀರಿನಿಂದ ಆವೃತಗೊಂಡಿದೆ. ಕೊರೊನಾ ಪರಿಣಾಮವಾಗಿ ಹೆಣ್ಣು ಮಕ್ಕಳು ತಮ್ಮ ಊರುಗಳಲ್ಲಿದ್ದಾರೆ. ಆದರೆ ಕೆಲವರು ಇತ್ತೀಚೆಗಷ್ಟೇ ಬಂದು ಹೋಗುತ್ತಿದ್ದಾರೆ. ಆದರೆ ಯಾರೂ ಸಹ ಈ ಗಲೀಜು ನೀರು ದಾಟಿಕೊಂಡು ಹಾಸ್ಟೆಲ್ ಒಳಗೆ ಪ್ರವೇಶ ಮಾಡಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಚಿತ್ರದುರ್ಗದಿಂದ ಶುಕ್ರವಾರ ವಿದ್ಯಾರ್ಥಿನಿಯೊಬ್ಬರು ಇಲ್ಲಿಗೆ ಆಗಮಿಸಿ ಕೆಲವು ದಾಖಲಾತಿಗಳನ್ನು ಕೊಂಡೊಯ್ಯಲು ಬಂದಿದ್ದರು. ಆದರೆ ಒಳಗೆ ಪ್ರವೇಶಿಸಲಾಗದೆ ಆಕೆ ಪರದಾಡುತ್ತಿದ್ದ ದೃಶ್ಯ ಕಂಡುಬಂದಿತು.

    ಯುಜಿಡಿ ಸಂಪರ್ಕಕ್ಕೆ ಹಾನಿಯಾಗಿರುವ ಅಥವಾ ಬ್ಲಾಕ್ ಆಗಿರುವ ಕಾರಣದಿಂದಾಗಿ ಎಸ್‍ಎಸ್‍ಪುರಂ 9ನೇ ಕ್ರಾಸ್‍ವರೆಗೂ ಇದರ ಅನುಭವ ಆಗುತ್ತಿದೆಯಂತೆ. 9ನೇ ಕ್ರಾಸ್‍ನ ಕೆಲವು ಮನೆಗಳ ಬಳಿಯೂ ಲೀಕೇಜ್ ಆಗಲಾರಂಭಿಸಿದೆ. ಡಾ.ರಾಧಾಕೃಷ್ಣನ್ ರಸ್ತೆಯಲ್ಲಿ ಕಾಮಗಾರಿ ಮಾಡುತ್ತಿದ್ದಾಗ ಯುಜಿಡಿ ಸಂಪರ್ಕದ ಪೈಪ್‍ಗಳಿಗೆ ಹಾನಿಯಾಗದಂತೆ ಕಾಮಗಾರಿ ಮಾಡಲು ತಿಳಿಸಿದ್ದರೂ ಸಹ ಗಮನ ಹರಿಸದೆ ಇರುವುದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಇರುವುದು ಇಷ್ಟಕ್ಕೆಲ್ಲಾ ಕಾರಣ ಎನ್ನುತ್ತಾರೆ ಕೆಲವರು.

    ಭದ್ರಮ್ಮ ಸರ್ಕಲ್ ಬಳಿಯಿಂದ ಅಮಾನಿಕೆರೆಗೆ ಹೋಗುವ ರಾಯಗಾಲುವೆ ಸಮಸ್ಯೆ ಈ ಹಿಂದಿನಿಂದಲು ಒಂದು ಸಮಸ್ಯೆಯಾಗಿಯೇ ಉಳಿದುಕೊಂಡಿದೆ. ಸಿದ್ಧಗಂಗಾ ಬಡಾವಣೆ ಮೂಲಕ ಹರಿದು ಬರುವ ನೀರು ಇಲ್ಲಿಂದ ಅಮಾನಿಕೆರೆ ಸೇರುತ್ತದೆ. ಆದರೆ ಇಲ್ಲಿ ಕೆಲವು ಸಮಸ್ಯೆಗಳು ಸಮಸ್ಯೆಯಾಗಿಯೇ ಉಳಿದಿವೆ. ಇದರೊಳಗೆ ಈಗ ಸ್ಮಾರ್ಟ್‍ಸಿಟಿ ಅವೈಜ್ಞಾನಿಕ ಕಾಮಗಾರಿಗಳು ಸೇರಿಕೊಂಡು ಮತ್ತಷ್ಟು ಸಮಸ್ಯೆ ಉಲ್ಬಣವಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು.

    ಯುಜಿಡಿ ನೀರು ಈ ರೀತಿ ರಸ್ತೆಯಲ್ಲಿ ಹರಿಯುತ್ತಿದ್ದು, ಕೆಲವು ಮನೆಗಳಿಗೂ ಅಪಾಯ ಉಂಟಾಗುವ ಸಾಧ್ಯತೆ ಇದೆ. ಕಾರ್ಪೋರೇಟರ್‍ಗೆ ಹೇಳಿದಾಗ ಅವರು ಕಮೀಷನರ್‍ಗೆ ಹಾಗೂ ಸಂಬಂಧಿಸಿದ ಇಂಜಿನಿಯರ್‍ಗೆ ಮಾಹಿತಿ ನೀಡಿದ್ದಾರೆ. ಕೆಲವು ಅಧಿಕಾರಿಗಳು ಬಂದು ನೋಡಿಕೊಂಡು ಹೋಗುತ್ತಿದ್ದಾರೆ. ಆದರೆ ತಕ್ಷಣಕ್ಕೆ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತಿಲ್ಲ. ಹೀಗೆಯೇ ಬಿಟ್ಟರೆ ಲೀಕೇಜ್ ಹೆಚ್ಚಾಗಿ ಅನೈರ್ಮಲ್ಯವೂ ಹೆಚ್ಚಾಗಲಿದೆ. ಮೊದಲೇ ಈಗ ಕೊರೊನಾ ಸಮಯ. ರೋಗರುಜಿನಗಳು ಹೆಚ್ಚಾದರೆ ಯಾರು ಹೊಣೆ ಎನ್ನುತ್ತಾರೆ ಸ್ಥಳೀಯರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap