100 ಅಡಿ ಮುಟ್ಟಿತು ವಿವಿ ಸಾಗರ ಜಲಾಶಯ..!

ಚಿತ್ರದುರ್ಗ

     ರಾಜ್ಯದ ಹಳೆಯ ಅಣೆಕಟ್ಟುಗಳಲ್ಲಿ ಒಂದಾದ, ಚಿತ್ರದುರ್ಗ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಹಿರಿಯೂರಿನ ವಿವಿ ಸಾಗರ ಜಲಾಶಯ ನೀರು ಸತತ ಒಂಬತ್ತು ವರ್ಷಗಳ ನಂತರ 100ರ ಗಡಿ ದಾಟಿದೆ.

     1907ರಲ್ಲಿ ನಿರ್ಮಿಸಿರುವ ಡ್ಯಾಂ ಜಿಲ್ಲೆಯ ಪ್ರಮುಖ ಜಲಮೂಲ. ಕೃಷಿ ಸಂಸ್ಕೃತಿ ಮಹಾಪೆÇೀಷಕರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬಯಲು ಸೀಮೆಗೆ ನೀಡಿದ ಕಾಣಿಕೆ. 1898ರಲ್ಲಿ ಆರಂಭಗೊಂಡ ಜಲಾಶಯದ ಕಾಮಗಾರಿ 1907ರಲ್ಲಿ ಪೂರ್ಣಗೊಂಡು 1910ರಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲಾಯಿತು. 112 ವರ್ಷಗಳ ಇತಿಹಾಸ ಇರುವ ಹಿರಿಯೂರು ತಾಲೂಕಿನ ವಾಣಿವಿಲಾಸ ಜಲಾಶಯ 56 ಬಾರಿ 100 ಅಡಿ ದಾಟಿದ್ದು, ಈಗ 57ನೇ ಬಾರಿಯಾಗಿದೆ. ವಾಣಿ ವಿಲಾಸ ಜಲಾಶಯವನ್ನು ಕಣ್ತುಂಬಿಕೊಳ್ಳಲು ತಾಲೂಕಿನ ರೈತರು, ಸಾರ್ವಜನಿಕರು ಹಾಗೂ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.

     2010ರಲ್ಲಿ 112.75 ಅಡಿ, 2011ರಲ್ಲಿ 106.05 ಅಡಿ ನೀರು ಬಂದಿದ್ದು ಬಿಟ್ಟರೆ ಯಾವುದೇ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಹರಿದು ಬಂದಿರಲಿಲ್ಲ. ಈ ವರ್ಷ 100 ಅಡಿ ನೀರು ಹರಿದು ಬಂದಿದೆ. ವಿವಿ ಸಾಗರದ ಹಿಂದಿನ ಜಲಾಶಯದ ನೀರಿನ ಮಟ್ಟ 61 ಅಡಿ ಇತ್ತು. ಚಿಕ್ಕಮಗಳೂರು ಭಾಗದಲ್ಲಿ ಮಳೆಯಾಗಿದ್ದರಿಂದ, ಸುಮಾರು 9 ಟಿಎಂಸಿ ಮತ್ತು ಭದ್ರಾ ಮೇಲ್ದಂಡೆ ಯೋಜನೆಯ 2 ಟಿಎಂಸಿ ನೀರಿನೊಂದಿಗೆ 100 ಅಡಿಯಾಗಿದ್ದು, ಸುಮಾರು 11 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ.

    1911ರಲ್ಲಿ ಮೊದಲ ಬಾರಿಗೆ 109.66 ಅಡಿ ನೀರು ಸಂಗ್ರಹವಾಗಿತ್ತು. ತದನಂತರ 1933ರಲ್ಲಿ 135.25 ಅಡಿ ನೀರು ಸಂಗ್ರಹವಾಗಿತ್ತು. ಭದ್ರಾದಿಂದ ಪ್ರತಿದಿನ 450 ರಿಂದ 550 ಕ್ಯೂಸೆಕ್ಸ್ ನೀರು ಸಂಗ್ರಹವಾಗುತ್ತದೆ. ಈ ನೀರು ಮಾರ್ಚ್ ಅಂತ್ಯದವರೆಗೂ ಭದ್ರಾ ನೀರು ವಿವಿ ಸಾಗರಕ್ಕೆ ಹರಿದು ಬರುತ್ತಿದೆ. ಚಿಕ್ಕಮಗಳೂರು ಜಿಲ್ಲೆ ಪಶ್ಚಿಮ ಘಟ್ಟ ಪರ್ವತ ಶ್ರೇಣಿಯಲ್ಲಿ ಜನ್ಮತಾಳಿ ಪೂರ್ವಾಭಿಮುಖವಾಗಿ ಹರಿವ ವೇದಾವತಿ ನದಿ ಬಯಲು ಸೀಮೆ ಜನರಿಗೆ ಪ್ರಕೃತಿ ನೀಡಿರುವ ವರ.

    ವಾಣಿ ವಿಲಾಸ ಜಲಾಶಯವನ್ನು ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ, ಅಂದರೆ 1898 ರಿಂದ 1907ರ ಅವಧಿಯಲ್ಲಿ ನಿರ್ಮಾಣ ಮಾಡಿದ್ದು, ಅಣೆಕಟ್ಟು ಈಗ ಶತಮಾನ ದಾಟಿದೆ.

      ಮೈಸೂರು ಅರಸರ ಕಾಲದಲ್ಲಿ ಈ ಜಲಾಶಯವು ಹಿರಿಯೂರು ತಾಲೂಕಿನ ವಾಣಿ ವಿಲಾಸಪುರ ಹತ್ತಿರ ಮಾರಿಕಣಿವೆ ಎಂಬ ಪ್ರದೇಶದಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ಅರಸರ ತಾಯಿ ಕೆಂಪನಂಜಮ್ಮಣ್ಣಿ ನೆನಪಿಗೆ ನಿರ್ಮಿಸಿದ್ದಾರೆ. 1897ರಲ್ಲಿ ಪ್ರಾರಂಭವಾದ ಕಾಮಗಾರಿಯನ್ನು 10 ವರ್ಷದಲ್ಲಿ ಸುಮಾರು 45 ಲಕ್ಷ ವೆಚ್ಚದಲ್ಲಿ ಮುಗಿಸಿ ಜಲಾಶಯವನ್ನು ನಿರ್ಮಿಸಲಾಯಿತು. ಚಿತ್ರದುರ್ಗ ಭಾಗದ ಜನರಿಗೆ ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗೆ ಈ ಜಲಾಶಯ ಹೆಚ್ಚು ಸಹಕಾರಿಯಾಗಿದೆ. ಜಲಾಶಯದ ಒಟ್ಟು ಎತ್ತರ 43.28 ಮೀಟರ್ (142 ಅಡಿ), ಉದ್ದ 405.50. ಮೀಟರ್, ಜಲಾವೃತ ಪ್ರದೇಶ 5374. ಚದರ ಕಿಲೋ ಮೀಟರ್ ಡ್ಯಾಂ ನೀರಿನ ಸಾಮಥ್ರ್ಯ 850.30 (30 ಟಿಎಂಸಿ) ನೀರು.

      ರಾಜ್ಯದ ಅತ್ಯಂತ ಹಳೆಯ ಅಣೆಕಟ್ಟುಗಳಲ್ಲಿ ಒಂದಾದ ಹಿರಿಯೂರಿನ ವಿವಿ ಸಾಗರ ಬರಪೀಡಿತ ಪ್ರದೇಶಗಳಿಗೆ ನೀರುಣಿಸುವ ಜಲಾಶವಾಗಿದ್ದು, ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ ಡಿಆರ್ ಡಿಒಗೆ ಕುಡಿಯವ ನೀರನ್ನು ಪೂರೈಸಲಾಗುತ್ತಿದೆ. ಈ ಹಿಂದೆ ಕೃಷಿ ಚಟುವಟಿಕೆಗಳಿಗೆ ವಿವಿ ಸಾಗರದ ನೀರಿನಿಂದ ಕಬ್ಬು, ಭತ್ತ, ರಾಗಿ, ಹತ್ತಿ, ತೆಂಗು, ಅಡಿಕೆ, ಬಾಳೆ ಮತ್ತಿತರರ ಬೆಳೆಗಳನ್ನು ಬೆಳೆಯುತ್ತಿದ್ದರಿಂದ ಹಿರಿಯೂರು ಮಲೆನಾಡಿನಂತೆ ಕಂಗೊಳಿಸುತಿತ್ತು. ನಂತರ ಹಿರಿಯೂರು ಬರದ ನಾಡಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap